ADVERTISEMENT

ಮತ್ತೆ ಮತ್ತೆ ಹುಡುಕಿಕೊಂಡು ಬರುವಂತೆ ಮಾಡುವ ಅರಸೀಕೆರೆ ಕಾಯಿ ಮಿಠಾಯಿ

ಮಮತಾ ಅರಸಿಕೆರೆ
Published 16 ಅಕ್ಟೋಬರ್ 2020, 1:34 IST
Last Updated 16 ಅಕ್ಟೋಬರ್ 2020, 1:34 IST
   

ಅರಸೀಕೆರೆ ಅಂದಾಕ್ಷಣ ನೆನಪಾಗುವುದು ಸಾಲುಸಾಲು ತೆಂಗಿನ ಮರಗಳು. ಅದರ ಪ್ರಸಿದ್ಧಿಯಿರುವುದೇ ತೆಂಗು ಹಾಗೂ ಅದರ ಉತ್ಪನ್ನಗಳ ಮೂಲಕ. ಪಕ್ಕದ ತಿಪಟೂರು ಸಹ ತೆಂಗಿನ ಮೂಲಕವೇ ತನ್ನ ಅಸ್ತಿತ್ವ ಗುರುತಿಸಿಕೊಂಡಿದೆ. ತೆಂಗಿನ ಕಾಯಿಯನ್ನು ತಿನಿಸು ತಯಾರಿಗೆ ಬಳಸಿ ಮಾರುಕಟ್ಟೆ ಕಂಡುಕೊಂಡಿರುವ ಕುಟುಂಬವೊಂದು ಇದೇ ಊರಿನಲ್ಲಿದೆ. ತೆಂಗಿನತುರಿಯಿಂದ ‘ಕಾಯಿ ಮಿಠಾಯಿ’ ಅಥವಾ ‘ಕೊಬ್ಬರಿ ಮಿಠಾಯಿ’ ತಯಾರಿಸಿ, ಅದರ ಸವಿಗೆ ಮತ್ತೆ ಮತ್ತೆ ಆ ಅಂಗಡಿಯನ್ನು ಹುಡುಕಿಹೋಗುವಂತೆ ಮಾಡಿದ ಹೆಚ್ಚುಗಾರಿಕೆ ಆ ಅಂಗಡಿಯವರದ್ದು.

ಮೈಸೂರಿಗೆ ಹೋಗುವ ರಸ್ತೆಮಾರ್ಗದಲ್ಲಿ ಅರಸೀಕೆರೆಯಿಂದ ಮೂರು ಕಿ.ಮೀ. ದೂರದಲ್ಲಿರೋ ‘ಹಳ್ಳಿ ಮನೆ ಹೋಟೆಲ್’ ಕಾಯಿ ಮಿಠಾಯಿ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಮಾಮೂಲಿ ಹೋಟೆಲ್‌ನಂತೆಯೇ ಊಟ, ತಿಂಡಿಗೆಂದು ಆರಂಭವಾದ ಇದು ಈಗ್ಗೆ ಆರು ವರ್ಷಗಳಿಂದ ಮಿಠಾಯಿ ತಯಾರಿಸಲಾರಂಭಿಸಿದೆ. ಊಟಕ್ಕೋ ತಿಂಡಿಗೋ ಹೋಟೆಲ್ ಹೊಕ್ಕವರು ಮಿಠಾಯಿ ಸಿಹಿಯನ್ನು ಸವಿಯದೇ ಬರುವುದಿಲ್ಲ. ಆರಂಭದಲ್ಲಿ ಬೆಲೆ ಜಾಸ್ತಿಯೆಂದುಕೊಂಡವರೂ ದಿನಕಳೆದಂತೆ ಅದರ ರುಚಿಗೆ ಮಾರುಹೋಗಿ ಪೊಟ್ಟಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಮೈಸೂರಿನಿಂದ ಅರಸೀಕೆರೆಗೆ ಹಾದುಹೋಗುವ ಅಥವಾ ಅರಸೀಕೆರೆಯಿಂದ ಅದೇ ರಸ್ತೆಯಲ್ಲಿ ಕ್ರಮಿಸುವ ಮಂದಿ ಒಮ್ಮೆ ನಿಂತು ಮಿಠಾಯಿ ಕೊಂಡು ಮುಂದೆ ಸಾಗುತ್ತಾರೆ.

ರಂಗಸ್ವಾಮಿ ಹಾಗೂ ಶ್ವೇತಾ ದಂಪತಿ ಕಾಯಿ ಮಿಠಾಯಿ ತಯಾರಿಸುವ ಹಾಗೂ ಮಾರುವ ಪ್ರಕ್ರಿಯೆಯನ್ನು ಆರಂಭಿಸಿದಾಗ ಇದಕ್ಕೆ ಇಷ್ಟು ರುಚಿ ಹಾಗೂ ಮಾರುಕಟ್ಟೆ ಸಾಧ್ಯ ಎಂದು ಬಹುಶಃ ಎಣಿಸಿರಲಿಲ್ಲ. ಪ್ರಸ್ತುತ ಬೇಡಿಕೆ ಹೆಚ್ಚಾಗಿದ್ದು ಕಂಡು ಅವರಿಗೆ ಇನ್ನಿಲ್ಲದ ಖುಷಿ. ‘ದಿನಕ್ಕೆ 500 ಬಾಕ್ಸ್‌ಗಿಂತಲೂ ಹೆಚ್ಚು ಮಿಠಾಯಿ ಖರ್ಚಾಗುತ್ತದೆ’ ಎನ್ನುವ ಅವರ ಮಾತಿನಲ್ಲಿ ಹಿಗ್ಗು ಕಾಣಿಸುತ್ತದೆ.

ADVERTISEMENT

ಕೊಬ್ಬರಿ ಮಿಠಾಯಿಯ ತಯಾರಿಕೆ ಸಾಮಾನ್ಯವಾಗಿ ಎಲ್ಲ ಗೃಹಿಣಿಯರಿಗೂ ತಿಳಿದೇ ಇರುತ್ತದೆ. ಇದರ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು ಚೆನ್ನಾಗಿ ಬಲಿತ ತೆಂಗಿನಕಾಯಿ, ಸಕ್ಕರೆ, ಏಲಕ್ಕಿ, ತುಪ್ಪ ಮೊದಲಾದವು. ಮತ್ತೆ ಕೆಲವೆಡೆ ಕೊಬ್ಬರಿಯನ್ನೂ ಉಪಯೋಗಿಸಲಾಗುತ್ತದೆ. ಆಗ ಮಿಠಾಯಿ ಕೊಕ್ಕರೆ ಬಿಳುಪಿನಂತೆ ಅಚ್ಚಾಗುತ್ತದೆ. ‘ಹಳ್ಳಿ ಮನೆ’ಯ ದಂಪತಿ ಬಲಿತ ತೆಂಗಿನ(ತುರಿ) ಜೊತೆಗೆ ಹಾಲು, ಸಾಕಷ್ಟು ತುಪ್ಪ, ಕಪ್ಪು ಉಂಡೆ ಬೆಲ್ಲ, ಏಲಕ್ಕಿ, ಗೋಡಂಬಿಯ ಪುಡಿ ಸೇರಿಸಿ ಎಲ್ಲವನ್ನೂ ಒಮ್ಮೆಲೆ ಮಿಶ್ರ ಮಾಡಿ ಮಂದ ಉರಿಯಲ್ಲಿಟ್ಟು ತಯಾರಿಸಲು ತೊಡಗುತ್ತಾರಂತೆ. ಎಡಬಿಡದೇ ಕೈಯಾಡಿಸುತ್ತ ಹದ ತಪ್ಪದಂತೆ ನೋಡಿಕೊಳ್ಳುತ್ತಾ ಒಂದು ಹಂತಕ್ಕೆ ಮಿಶ್ರಣ ಹುರಿಗೊಳ್ಳುತ್ತಲೇ ತುಪ್ಪ ಸವರಿದ ತಟ್ಟೆಗೆ ಸುರಿದು ಬಿಸಿಯಿನ್ನೂ ತುಸು ಇರುವಾಗಲೆ ಸೂಕ್ತ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿದಾಗ, ಗಾಢ ಕಂದು ಬಣ್ಣದ ಘಮಘಮಿಸುವ ಮಿಠಾಯಿ ಸವಿಯಲು ಸಿದ್ಧವಾಗುತ್ತದೆ.

(2019ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.