ADVERTISEMENT

ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ

ಸುಧಾ ಎಚ್‌.ಎಸ್.
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
ನಳಪಾಕ
ನಳಪಾಕ   

ಲಿಂಬು ಕಷಾಯ

ಬೇಕಾಗುವ ಸಾಮಗ್ರಿಗಳು: ನಿಂಬೆಹಣ್ಣು – 2,ಜೀರಿಗೆ – 3 ಚಮಚ,ಕಾಳುಮೆಣಸು – 2, ತುಳಸಿ ಎಲೆ – 3, ಉಪ್ಪು – ಚಿಟಿಕೆ
ಕಲ್ಲುಸಕ್ಕರೆ – ಸ್ವಲ್ಪ, ನೀರು –3 ಲೋಟ

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ಲಿಂಬೆಹಣ್ಣು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಕಷಾಯ ಸಿದ್ಧ.

ADVERTISEMENT

ಪ್ರಯೋಜನ: ಜ್ವರ, ನೆಗಡಿ ಇದ್ದರೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದು ಶೀಘ್ರ ವಾಸಿಯಾಗುವುದು. ಇದನ್ನು ಆರೋಗ್ಯವಂತರೂ ದಿನಕ್ಕೊಂದು ಬಾರಿ ಕುಡಿಯಬಹುದು.

**
ಹಿಪ್ಪಲಿ ಕಷಾಯ

ಬೇಕಾಗುವ ಸಾಮಗ್ರಿಗಳು:ಹಿಪ್ಪಲಿ –1,ಒಣಶುಂಠಿ –ಅರ್ಧ ಇಂಚು, ಕಾಳುಮೆಣಸು –8- 10, ತುಳಸಿ ಎಲೆ –ನಾಲ್ಕೈದು
ಬೆಲ್ಲದ ಪುಡಿ –ನಾಲ್ಕು ಚಮಚ, ನೀರು –2 ಲೋಟ

ತಯಾರಿಸುವ ವಿಧಾನ: ಮೇಲಿನ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಎರಡು ಲೋಟ ನೀರಿಗೆ ಎಲ್ಲವನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನೀರು ಅರ್ಧ ಭಾಗಕ್ಕೆ ಬರುವವರೆಗೂ ಕಾಯಿಸಿ. ಸ್ವಲ್ಪ ಬಿಸಿಯಾಗಿದ್ದಾಗಲೇ ಕುಡಿಯಿರಿ.

ಪ್ರಯೋಜನ: ಕೆಮ್ಮು ಮತ್ತು ಗಂಟಲು ನೋವಿಗೆ ಇದು ಉತ್ತಮ ಔಷಧ. ಆಹಾರದ ಮೊದಲು ದಿನಕ್ಕೆ ಮೂರು ಸಲದಂತೆ ಸೇವಿಸಿ. ಶೀತವಾಗಿದ್ದರೆ ಇದಕ್ಕೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ. ಅದಕ್ಕೆ ಚಿಟಿಕೆಯಷ್ಟು ಅರಿಸಿನ ಹಾಕಿ ಚೆನ್ನಾಗಿ ಕುದಿಸಿ. ಕುಡಿಯುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ.

**
ದೊಡ್ಡಪತ್ರೆಯ (ಸಾಂಬಾರ್‌ ಎಲೆ)ಕಷಾಯ

ಬೇಕಾಗುವ ಸಾಮಗ್ರಿಗಳು:ದೊಡ್ಡಪತ್ರೆ ಎಲೆ –10- 12,ಕಾಳುಮೆಣಸು –2 ಚಮಚ, ಜೀರಿಗೆ –2 ಚಮಚ, ಬೆಲ್ಲದ ಪುಡಿ –3 ಚಮಚ, ನೀರು –4 ಕಪ್‌

ತಯಾರಿಸುವ ವಿಧಾನ: ದೊಡ್ಡಪತ್ರೆ ಎಲೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕಾಳುಮೆಣಸು, ಬೆಲ್ಲ, ಜೀರಿಗೆ ಜಜ್ಜಿಕೊಳ್ಳಿ. ಇದನ್ನು ನೀರಿಗೆ ಹಾಕಿ ಕುದಿಸಿ. ಇದು ಕುದಿಯುತ್ತಿರುವಾಗ ದೊಡ್ಡಪತ್ರೆ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಾಗಿರುವಾಗಲೇ ಸ್ವಲ್ಪ ಸ್ವಲ್ಪವೇ ಕುಡಿಯಿರಿ. ದೊಡ್ಡಪತ್ರೆಯ ಬದಲು ಲಿಂಬೆಹುಲ್ಲನ್ನು ಹಾಕಿಯೂ ಈ ರೀತಿ ಕಷಾಯ ತಯಾರಿಸಿಕೊಳ್ಳಬಹುದು. ಅದನ್ನು ಜೇನುತುಪ್ಪದ ಜೊತೆ ಕುಡಿದರೆ ಉತ್ತಮ.

ಪ್ರಯೋಜನ: ಗಂಟಲ ಕೆರೆತ, ಕಫ, ಹೊಟ್ಟೆ ಉಬ್ಬರ, ಶೀತದಿಂದ ತಲೆನೋವಿಗೆ ಇದು ಉತ್ತಮ ಔಷಧ.

**

ಕೊತ್ತಂಬರಿ ಕಷಾಯ

ಬೇಕಾಗುವ ಸಾಮಗ್ರಿಗಳು: ಜೀರಿಗೆ –1 ಚಮಚ, ಕೊತ್ತಂಬರಿ –1 ಚಮಚ, ಜೇಷ್ಠಮಧು –1, ಮೆಂತ್ಯ–ಕಾಲು ಚಮಚ, ಕಾಳುಮೆಣಸು –10, ಓಮದ ಪುಡಿ –ಕಾಲು ಚಮಚ, ಅರಿಸಿನ –ಒಂದು ಚಮಚ, ಲವಂಗ –4, ಶುಂಠಿ ಪುಡಿ –1 ಚಮಚ
ಹಿಪ್ಪಲಿ –ಕಾಲು ಚಮಚ, ಹಾಲು –ಕಾಲು ಕಪ್‌ , ಬೆಲ್ಲದ ಪುಡಿ –1 ಚಮಚ, ನೀರು –3 ಕಪ್‌

ತಯಾರಿಸುವ ವಿಧಾನ: ಬೆಲ್ಲ ಬಿಟ್ಟು ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹುರಿದುಕೊಳ್ಳಿ. ಅದು ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಶೋಧಿಸಿ. ಇದಕ್ಕೆ ಹಾಲು ಸೇರಿಸಿ ಕುಡಿಯಿರಿ.
ಪ್ರಯೋಜನ: ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ ಸೇವಿಸಿದರೆ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ, ಶೀತ ವಾಸಿಯಾಗುತ್ತದೆ.

**
ಹಸಿ ಶುಂಠಿ ಕಷಾಯ

ಬೇಕಾಗುವ ಸಾಮಗ್ರಿಗಳು:ದೊಡ್ಡ ಶುಂಠಿ –ಒಂದು, ಬೆಲ್ಲ –ಒಂದು ಚಮಚ, ಹಾಲು –ಕಾಲು ಕಪ್‌ , ನೀರು – ಎರಡು ಕಪ್‌

ತಯಾರಿಸುವ ವಿಧಾನ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಪುನಃ ಕುದಿಸಿ ಗ್ಯಾಸ್‌ ಆರಿಸಿ. ಇದಕ್ಕೆ ಹಾಲು ಸೇರಿಸಿ. ಬಿಸಿ ಇರುವಾಗಲೇ ಸೇವಿಸಿ

ಪ್ರಯೋಜನ: ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಿನಕ್ಕೆ 2– 3 ಬಾರಿ ಸೇವಿಸಿ. ಇದಕ್ಕೆ ಒಂದು ಚಿಕ್ಕ ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.