ADVERTISEMENT

ಆಹಾರ ರಕ್ಷಿಸುವ, ಪರಿಸರದಲ್ಲಿ ಕರಗುವ ‘ಫುಡ್ ರ‍್ಯಾಪರ್‘ ಸಂಶೋಧಿಸಿದ ಮದ್ರಾಸ್ ಐಐಟಿ

ಮದ್ರಾಸ್ ಐಐಟಿ ಸಂಶೋಧಕರ ಅಭಿವೃದ್ಧಿ

ಪಿಟಿಐ
Published 12 ಅಕ್ಟೋಬರ್ 2020, 11:34 IST
Last Updated 12 ಅಕ್ಟೋಬರ್ 2020, 11:34 IST
   

ನವದೆಹಲಿ: ಸುತ್ತಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗಿ ಹಾಳಾಗುವುದನ್ನು ತಪ್ಪಿಸುವ ಹಾಗೂ ಜೈವಿಕವಾಗಿ ಕರಗುವ ಹಾಳೆಯೊಂದನ್ನು (ಫುಡ್‌ ರ್‍ಯಾಪರ್) ಮದ್ರಾಸ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈ ಫುಡ್ ರ‍್ಯಾಪರ್ (ಆಹಾರ ಸುತ್ತಿಕೊಡುವ ಹಾಳೆ) ಆಹಾರ ಹಾಳಾಗದಂತೆ ರಕ್ಷಿಸುತ್ತದೆ. ಜತೆಗೆ, ಯಾವುದೇ ವಾತಾವರಣದಲ್ಲಿ ಪರಿಸರದಲ್ಲಿ ಕರಗುತ್ತದೆ. ಇದು ಪರಿಸರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿತಗೊಳಿಸುತ್ತದೆ.ಇದಕ್ಕೆ ಪೇಟೆಂಟ್‌ ಪಡೆಯಲು ಸಂಶೋಧಕರ ತಂಡ ಮುಂದಾಗಿದೆ.

‘ನಾವು ಎರಡು ಪ್ರಮುಖ ಸಮಸ್ಯೆಗಳಿಗೆ ಪರಿಹಾರವಾಗಿ ಈ ಹಾಳೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಮೊದಲನೆಯದು ಹೆಚ್ಚುತ್ತಿರುವ ಘನತ್ಯಾಜ್ಯ ಉತ್ಪಾದನೆಗೆ ಕಡಿವಾಣ ಹಾಕುವುದು ಹಾಗೂ ಸಂಗ್ರಹಿಸಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗದಂತೆ ರಕ್ಷಿಸುವುದು. ನಾವೀಗ ಅಭಿವೃದ್ಧಿಪಡಿಸಿರುವ ಈ ಹಾಳೆಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗದಂತೆ ತಡೆಯುವ ‘ಬ್ಯಾಕ್ಟೀರಿಯಾ ವಿರೋಧಿ‘ ವಸ್ತುವನ್ನು ಬಳಸಿದ್ದೇವೆ. ಇದು ಆಹಾರ ಸಂಗ್ರಹಿಸಿಟ್ಟಾಗ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆಯಾ ಗದಂತೆ ತಡೆಯುತ್ತದೆ. ಈ ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತದಿಂದ ಆಹಾರದಲ್ಲಿ ಯಾವುದೇ ರೀತಿಯ ನಂಜು ಬೆರೆಯುವುದಿಲ್ಲ. ಇದು ಸೇವಿಸಲು ಸುರಕ್ಷಿತವಾಗಿದೆ ಎಂದು ಸಂಬಂಧಿಸಿದ ಇಲಾಖೆ ಅನುಮತಿ ನೀಡಿದೆ‘ ಎಂದು ಐಐಟಿಯ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಮುಖೇಶ್ ಡೊಬ್ಲೆ ತಿಳಿಸಿದ್ದಾರೆ.

ADVERTISEMENT

‘ಆಹಾರವನ್ನು ಸುತ್ತಿಡುವ ಈ ಹಾಳೆಯು ವಿವಿಧ ಪರಿಸರದಲ್ಲಿ ಕರಗುತ್ತದೆ. ಈ ವಸ್ತು 21 ದಿನಗಳಲ್ಲಿ ಶೇ 4 ರಿಂದ ಶೇ 98ರಷ್ಟು ಕರಗುತ್ತದೆ. ಒಣ ವಲಯಕ್ಕೆ ಹೋಲಿಸಿದರೆ, ತೇವಾಂಶವಿರುವ ವಾತಾವರಣದಲ್ಲೂ ಈ ವಸ್ತು ವೇಗವಾಗಿ ಕರಗುತ್ತದೆ. ಹೀಗಾಗಿ ನಾವು ಅಭಿವೃದ್ಧಿಪಡಿಸಿರುವ ಆಹಾರ ಸುತ್ತಿಕೊಡುವ ಈ ಹಾಳೆ ಪರಿಸರ ಸ್ನೇಹಿಯಾಗಿದೆ. ಪರಿಸರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ‘ ಎಂದು ಅವರು ಹೇಳಿದ್ದಾರೆ.

ಸಂಶೋಧಕರು ಈ ಪಾಲಿಮರ್ ಹಾಳೆಯನ್ನು, ಸ್ಟಾರ್ಚ್‌, ಪಾಲಿವಿನೈಲ್ ಅಲ್ಕೊಹಾಲ್, ಸೈಕ್ಲಿಕ್ ಬೇಟಾ ಗ್ಲೈಕಾನ್ಸ್‌(ಸಿಬಿಜಿ) ಮಿಶ್ರಣಗಳಿಂದ ತಯಾರಿಸಿದ್ದಾರೆ. ಪನೀರ್‌, ಮಾಂಸ, ಚಿಕನ್‌ನಂತಹ ಆಹಾರ ಪದಾರ್ಥಗಳನ್ನುಈ ಹಾಳೆಯಲ್ಲಿ ಸುತ್ತಿಟ್ಟು ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಹೀಗೆ ಸುತ್ತಿಟ್ಟ ಆಹಾರ ಪದಾರ್ಥವನ್ನು 4 ಡಿಗ್ರಿ ಮತ್ತು 30 ಡಿಗ್ರಿ ಸೆಲ್ಷಿಯಸ್‌ ವಾತಾವರಣದಲ್ಲಿ 10 ದಿನಗಳವರೆಗೆ ಇಟ್ಟು ಪರಿಕ್ಷಿಸಲಾಗಿದೆ. ಈ ಸಮಯದಲ್ಲಿ ಆಹಾರದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಪಾಲಿಮರ್‌ ಹಾಳೆಯ ಲೇಪನದ ಪರಿಣಾಮವನ್ನು ಪರೀಕ್ಷಿಸಲಾಗಿದೆ‘ ಎಂದು ಐಐಟಿ ರೀಸರ್ಚ್‌ ಸ್ಕಾಲರ್‌ ಪೂಜಾ ಕುಮಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.