ADVERTISEMENT

ರಾಜಧಾನಿಯಲ್ಲಿ ಕರಾವಳಿ ರುಚಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:31 IST
Last Updated 19 ಜುಲೈ 2019, 19:31 IST
ಖಾದ್ಯ
ಖಾದ್ಯ   

ಕರಾವಳಿಯ ಅಪ್ಪಟ ಸೊಗಡಿನಮೀನು, ಕುಚ್ಚಲಕ್ಕಿ ಅನ್ನ, ಕೋರಿ ರೊಟ್ಟಿ ಮತ್ತು ನೀರ್‌ದೋಸೆಯಂತಹ ಸಿಗ್ನೇಚರ್‌ ಡಿಶ್‌ಗಳನ್ನು ಆಸ್ವಾದಿಸಲು ಒಮ್ಮೆ ಶೇಷಾದ್ರಿಪುರದ ‘ಮತ್ಸ್ಯ’ ಹೋಟೆಲ್‌ ಬಾಗಿಲು ಬಡಿಯಿರಿ.

ಹೋಟೆಲ್‌ ಹೆಸರೇ ಹೇಳುವಂತೆ ಸಮುದ್ರ ಆಹಾರಕ್ಕೆ ‘ಮತ್ಸ್ಯ’ ಹೇಳಿ ಮಾಡಿಸಿದ ಸ್ಥಳ. ರಾಜಧಾನಿಯಲ್ಲಿ ಕರಾವಳಿಯ ಸಾಂಪ್ರದಾಯಿಕ ಊಟ ಬಡಿಸುವ ಸ್ಥಳ. ಹೋಟೆಲ್‌ ಒಳಗೆ ಕಾಲಿಟ್ಟರೆ ಮೀನಿನ ಮಸಾಲೆಯ ಸುವಾಸನೆ ಘಮ್ಮೆಂದು ಮೂಗಿಗೆ ಬಡಿಯುತ್ತದೆ. ಆ ಪರಿಮಳದಿಂದಲೇ ಇಲ್ಲಿ ಸಿಗುವ ಊಟದ ರುಚಿ ಹೇಗಿರಬಹುದು ಎಂದು ಊಹಿಸಬಹುದು.

ಕರಾವಳಿಯ ಪ್ರತಿಯೊಂದು ಮಾಂಸದೂಟ ವಿಭಿನ್ನ ರುಚಿ,ಪರಿಮಳ, ಸ್ವಾದವೇ ವಿಭಿನ್ನ. ಅದನ್ನು ಯಥಾವತ್ತಾಗಿ ಇಲ್ಲಿ ಸವಿಯಬಹುದು. ಬಾಳೆ ಎಲೆಗೆ ಬಿಸಿಯಾದ ಕುಚ್ಚಲಕ್ಕಿ ಅನ್ನ ಅದಕ್ಕೆ ಬಿಸಿ, ಬಿಸಿಯಾದ ಮೀನಿನ ಸಾರು, ಚಿಕನ್ ಸಾಂಬಾರ್ ಸುರಿದರು. ಅದರ ಬೆನ್ನಲ್ಲೇ ಮೀನಿನ ಫ್ರೈ ಹಾಗೂ ನೀರುದೋಸೆ,ಕೋರಿ ರೊಟ್ಟಿ ಬಂದವು. ಇಲ್ಲಿರುವ ಬಹುತೇಕ ಬಾಣಸಿಗರು ದಕ್ಷಿಣ ಕನ್ನಡದವರೇ ಆಗಿರುವುದರಿಂದ ಎಲ್ಲ ಖಾದ್ಯಗಳಿಗೂ ಮಂಗಳೂರು ಸಾಂಪ್ರದಾಯಿಕ ಸ್ವಾದದ ಸ್ಪರ್ಶ ಇರುತ್ತದೆ. ಎಳೆ ಮಾವಿನ ಉಪ್ಪಿನ ಕಾಯಿ ಮತ್ತು ಸಿಗಡಿ ಚಟ್ನಿ ಹೆಚ್ಚು ಜನಪ್ರಿಯ. ಊಟದ ಕೊನೆಗೆ ಕರಾವಳಿಯ ಕಷಾಯ, ತಂಪು ಪಾನಿಯ ಹೊಟ್ಟೆಯನ್ನು ತಣಿಸುತ್ತವೆ.

ADVERTISEMENT

ಕೃತಕತೆ ಇಲ್ಲ

ಇಲ್ಲಿನ ಆಹಾರದಲ್ಲಿ ಯಾವುದೇ ಕೃತಕ ಬಣ್ಣ, ರುಚಿ ಹೆಚ್ಚಿಸಲು ಟೇಸ್ಟಿಂಗ್ ಪೌಡರ್‌ ಬಳಸುವುದಿಲ್ಲ ಎನ್ನುತ್ತಾರೆ ಹೋಟೆಲ್‌ ಮಾಲೀಕರಾದಸಂತೋಷ್ ಸಾಲಿಯಾನ್ ಮತ್ತು ಮನೋಜ್ ಕುಮಾರ್.

ಮತ್ತೊಂದು ವಿಶೇಷ ಎಂದರೆ, ಪುದಿನಾ, ಶುಂಠಿ, ಬೆಳ್ಳುಳ್ಳಿ, ಮೆಣಸುಗಳನ್ನು ತೆಂಗಿನ ಹಾಲಿನೊಂದಿಗೆ ಹದವಾಗಿ ಬೆರೆಸಿ ತಯಾರಿಸಿದ ಪೇಸ್ಟ್. ಅದನ್ನು ಮೀನಿಗೆ ಸವರಿ ಬಾಳೆ ಎಲೆಯಲ್ಲಿಟ್ಟು, ತಂದೂರ್ ಹಬೆಯಲ್ಲಿ ಬೇಯಿಸುತ್ತಾರೆ. ಈ ಹಬೆ ಮೀನಿನ ರುಚಿಯನ್ನು ಒಮ್ಮೆ ನೋಡಿದವರು ಖಂಡಿತ ಮತ್ತೊಮ್ಮೆ ಹುಡುಕಿಕೊಂಡು ಇಲ್ಲಿಗೆ ಬಂದೇ ಬರುತ್ತಾರೆ ಎನ್ನುವುದು ಅವರ ವಿಶ್ವಾಸ. ‘ರಾಜಧಾನಿಯಲ್ಲಿ ಕರಾವಳಿಯ ವಿಶಿಷ್ಟ ರುಚಿಯನ್ನು ಉಣಬಡಿಸುವ ಉದ್ದೇಶದಿಂದ ಹೋಟೆಲ್ ಆರಂಭಿಸಿದ್ದೇವೆ. ಇದು ಕರಾವಳಿಯ ಮೀನಿನ ಹೋಟೆಲ್ ಎಂದೇ ಪ್ರಸಿದ್ಧ.ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಜನರಿಗಂತೂ ಇದು ಅಚ್ಚುಮೆಚ್ಚಿನ ಹೋಟೆಲ್’ ಎನ್ನುತ್ತಾರೆ ಮಾಲೀಕರು. ದಿನ ನಿತ್ಯ ಮಂಗಳೂರಿನಿಂದ ತರಿಸಲಾಗುವ ಬರುವ ತಾಜಾ ಮೀನುಗಳನ್ನು ಇಲ್ಲಿ ಬಳಸಲಾಗುತ್ತದೆ.ಬಂಗುಡೆ,ಭೂತಾಯಿ, ಮಾಂನ್ಜಿ ಮತ್ತು ಏಡಿಗಳಿಂದ ತಯಾರಿಸಿದ ಖಾದ್ಯಗಳನ್ನು ಚಪ್ಪರಿಸಿ ತಿನ್ನಲು ಜನರು ಬೆಂಗಳೂರಿನ ನಾನಾ ಕಡೆಗಳಿಂದ ಇಲ್ಲಿಗೆ ಬರುತ್ತಾರೆ ಎಂದು ಹೋಟೆಲ್‌ ಉದ್ಯೋಗಿ ಮಹಮ್ಮದ್ ಭಾವ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.