ADVERTISEMENT

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನಿಂದ ‘ಕರುನಾಡ ಸವಿಯೂಟ’ ವಿಡಿಯೊ ಸರಣಿ

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2020, 13:38 IST
Last Updated 9 ಅಕ್ಟೋಬರ್ 2020, 13:38 IST
   
""
""
""

ಕರ್ನಾಟಕವೆಂದರೆ ವೈವಿಧ್ಯತೆಗಳ ತವರೂರು. ಭಾಷೆ, ಸಂಸ್ಕೃತಿ, ಸಮುದಾಯಗಳು, ಆಚಾರ– ವಿಚಾರ, ಆಹಾರ ಪದ್ಧತಿ.. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಬಹು ವಿಧಗಳು ಕಂಡು ಬರುತ್ತವೆ. ಆಹಾರ ಪದ್ಧತಿ ತೆಗೆದುಕೊಂಡರೆ ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಅಪರೂಪದ ತಿನಿಸುಗಳ ಭಂಡಾರವೇ ಇದೆ.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ.. ಹೀಗೆ ಬೇರೆ ಬೇರೆ ಪ್ರದೇಶದಲ್ಲಿ ಅವುಗಳದ್ದೇ ಆದ ವಿಶಿಷ್ಟ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಸವಿಯಬಹುದು. ಆಯಾ ಪ್ರದೇಶಗಳಲ್ಲಿ ಬೆಳೆಯುವ ಧಾನ್ಯಗಳ ಮೇಲೆ ಅಲ್ಲಿಯ ಸಾಂಪ್ರದಾಯಿಕ ತಿನಿಸುಗಳ ವೈವಿಧ್ಯ ಬೆಳೆದು ಬಂದಿದೆ. ಉತ್ತರ ಕರ್ನಾಟಕದ ಮುಖ್ಯ ಬೆಳೆಯೆಂದರೆ ಜೋಳ. ಹೀಗಾಗಿ ಆ ಪ್ರದೇಶವೆಂದರೆ ಕಣ್ಣೆದುರು ಕಟ್ಟುವುದು ಜೋಳದ ರೊಟ್ಟಿ. ಅದಕ್ಕೆ ಸರಿಯಾಗಿ ಬದನೆಕಾಯಿ ಎಣ್ಣೆಗಾಯಿ ಪಲ್ಯ, ಕೆಂಪು ಖಾರ. ಮಲೆನಾಡಿಗೆ ಬಂದರೆ ಅಲ್ಲಿಯ ಆಹಾರದಲ್ಲಿ ಅಕ್ಕಿಗೆ ಪ್ರಾಧಾನ್ಯತೆ. ಅಕ್ಕಿಯಲ್ಲಿ ವೈವಿಧ್ಯ ಸವಿಯ ತಿನಿಸು ತಯಾರಿಕೆಗೆ ಮಲೆನಾಡಿಗರು ಎತ್ತಿದ ಕೈ. ದಕ್ಷಿಣ ಕರ್ನಾಟಕ ಅಂದರೆ ಹಳೆಯ ಮೈಸೂರು ಭಾಗದಲ್ಲಿ ಅಕ್ಕಿ ಮತ್ತು ರಾಗಿಯ ತಿನಿಸುಗಳು ನಮ್ಮ ರುಚಿ ಮೊಗ್ಗನ್ನು ತಣಿಸುತ್ತವೆ.

ಇನ್ನು ಕರಾವಳಿಯಲ್ಲಿ ಮೀನಿನ ಖಾದ್ಯ ಜನಪ್ರಿಯವಾದರೆ, ಕೊಡಗು ಪಂದಿ ಕರಿಗೆ ಖ್ಯಾತಿ ಪಡೆದಿದೆ. ಮಧ್ಯ ಕರ್ನಾಟಕದ ದಾವಣಗೆರೆಗೆ ಬಂದರೆ ದೊಣ್ಣೆದೋಸೆಯನ್ನು ಸವಿಯಬಹುದು.

ADVERTISEMENT

ಕರ್ನಾಟಕದ ಈ ವೈವಿಧ್ಯಮಯ ಹಾಗೂ ಅಪರೂಪದ ರುಚಿಯನ್ನು, ರಾಜ್ಯದ ವಿವಿಧ ಪ್ರದೇಶಗಳ ವಿಭಿನ್ನ ಅಡುಗೆಗಳನ್ನು ‘ಕರುನಾಡ ಸವಿಯೂಟ’ ಯೂಟ್ಯೂಬ್‌ ವಿಡಿಯೊಗಳ ಮೂಲಕ ‘ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ’ ಫ್ರೀಡಮ್‌ ಆಯಿಲ್‌ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದೆ. ಕೋವಿಡ್‌–19ರ ಈ ಸಂದರ್ಭದಲ್ಲಿ ವೀಕ್ಷಕರು ಈ ವಿಡಿಯೊ ನೋಡಿಕೊಂಡು ಮನೆಯಲ್ಲೇ ತಿನಿಸುಗಳನ್ನು ತಯಾರಿಸಿ ಸವಿಯಬಹುದು. ಖ್ಯಾತ ಬಾಣಸಿಗರಾದ ಸಿಹಿಕಹಿ ಚಂದ್ರು, ಮುರಳಿ ಮತ್ತು ಸುಜಾತಾ ಸಾಂಪ್ರದಾಯಿಕ ರೆಸಿಪಿಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದಾರೆ. ಈ ಶುಕ್ರವಾರದಿಂದ ಬಿಡುಗಡೆಯಾಗುವ ಏಳು ವಾರಗಳ ಈ ಸರಣಿ ವಿಡಿಯೊಗಳನ್ನು youtube.com/prajavani ಹಾಗೂ youtube.com/deccanherald ನಲ್ಲಿ ಆಸಕ್ತರು ವೀಕ್ಷಿಸಬಹುದು. ಪ್ರತಿ ಶನಿವಾರ ರೆಸಿಪಿಗಳನ್ನು ‘ಪ್ರಜಾಪ್ಲಸ್‌’ನಲ್ಲೂ ಪ್ರಕಟಿಸಲಾಗುತ್ತದೆ. ಬನ್ನಿ, ಕರ್ನಾಟಕದ ಈ ಅಪೂರ್ವವಾದ ಅಡುಗೆಯ ಅನ್ವೇಷಣೆಯ ಪಯಣದಲ್ಲಿ ನಮ್ಮೊಂದಿಗೆ ಜೊತೆಗೂಡಿ.

ಸೆಲೆಬ್ರಿಟಿ ಬಾಣಸಿಗರು

ಸಿಹಿಕಹಿ ಚಂದ್ರು

ಸಿಹಿಕಹಿ ಚಂದ್ರು: ಸಿನಿಮಾ ಮತ್ತು ಕಿರುತೆರೆ ನಟ, ನಿರ್ಮಾಪಕಸಿಹಿಕಹಿ ಚಂದ್ರು ಕೆಲವು ವರ್ಷಗಳ ಹಿಂದೆ ಕನ್ನಡದ ಚಾನೆಲ್‌ ಒಂದರಲ್ಲಿ ‘ಬೊಂಬಾಟ್‌ ಭೋಜನ’ಅಡುಗೆ ಷೋ ಮೂಲಕ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅಡುಗೆ ಮಾಡುವುದು ಸುಲಭ ಎಂದು ತೋರಿಸಿಕೊಟ್ಟವರು. ಇದೀಗ ‘ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ’ಯ ಕರುನಾಡ ಸವಿಯೂಟ ಯೂಟ್ಯೂಬ್‌ ಪ್ರಸ್ತುತಿಯಲ್ಲಿ ಮಂಗಳೂರು ಬನ್ಸ್‌, ಆಂಬೊಡೆ, ಬಿಸಿಬೇಳೆ ಬಾತ್‌, ಮಸಾಲೆ ದೋಸೆ– ಆಲೂ ಪಲ್ಯ, ಕೊಬ್ಬರಿ ಸಕ್ಕರೆ ಹೋಳಿಗೆ ರೆಸಿಪಿಯನ್ನು ಸುಲಭವಾಗಿ ಆದರೆ ರುಚಿಕರವಾಗಿ ತಯಾರಿಸುವುದನ್ನು ತೋರಿಸಿಕೊಟ್ಟಿದ್ದಾರೆ.

ಮುರಳೀಧರ್‌

ಒಗ್ಗರಣೆ ಡಬ್ಬಿ ಮುರಳಿ: ಮುರಳೀಧರ್‌ ಅಥವಾ ಸಿಂಪಲ್‌ ಆಗಿ ಒಗ್ಗರಣೆ ಡಬ್ಬಿ ಮುರಳಿ ತಮ್ಮ ಒಗ್ಗರಣೆ ಡಬ್ಬಿ ಟಿವಿ ಷೋ ಮೂಲಕ ಕರ್ನಾಟಕದಲ್ಲಿ ಮನೆಮಾತಾದವರು. ಇನ್ನೊಂದು ‘ಮುರಳಿ ಮಿಲಿಟರಿ ಹೊಟೇಲ್‌’ ಷೋ ಮಾಂಸಾಹಾರಿ ಅಡುಗೆ ಷೋ. ಅವರು ಪ್ರಾನ್‌ ಫ್ರೈ, ಕಾಣೆ ರವಾ ಫ್ರೈ, ಮಟನ್‌ ಪೆಪ್ಪರ್‌ ಫ್ರೈ, ದೊಣ್ಣೆ ಬಿರಿಯಾನಿ, ‍ಪಾಲಕ್‌ ಪೂರಿ– ನಾಟಿಕೋಳಿ ಮಸಾಲೆ ಮಾಡುವುದನ್ನು ‘ಕರುನಾಡ ಸವಿಯೂಟ’ ಯೂಟ್ಯೂಬ್‌ ವಿಡಿಯೊದಲ್ಲಿ ಪ್ರಸ್ತುತಪಡಿಸಿದ್ದಾರೆ.

ಸುಜಾತಾ ಅಕ್ಷಯ

ಸುಜಾತಾ ಅಕ್ಷಯ: ಸಿನಿಮಾ– ಕಿರುತೆರೆ ನಟಿ, ರೇಡಿಯೊ ಮತ್ತು ವಿಡಿಯೊ ಜಾಕಿ ಸುಜಾತಾ ಅಕ್ಷಯ ಎಫ್‌ಎಂನಲ್ಲಿ ‘ಪಿವೋಟಲ್‌ ಬ್ರೇಕ್‌ಫಾಸ್ಟ್‌’ ಷೋ ಮೂಲಕ ಲಕ್ಷಾಂತರ ಜನರ ಮನ ಮುಟ್ಟಿದವರು. ಟಿವಿಯಲ್ಲೂ ‘ಕಿಚನ್‌ ದರ್ಬಾರ್‌’ ಮೂಲಕ ಖ್ಯಾತಿ ಪಡೆದವರು.‘ಕರುನಾಡ ಸವಿಯೂಟ’ ಯೂಟ್ಯೂಬ್‌ ವಿಡಿಯೊದಲ್ಲಿ ಮದ್ದೂರು ವಡೆ, ಐಯಂಗಾರ್‌ ಪುಳಿಯೊಗರೆ, ಎಣ್ಣೆರೊಟ್ಟಿ– ಎಣ್ಣೆಗಾಯಿ, ಶಂಕರಪೋಳಿ, ಎರೆಯಪ್ಪ ತಯಾರಿಕೆ ತೋರಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.