ADVERTISEMENT

PV Web Exclusive: ಆಹಾ! ನಳಪಾಕ ದಿನ ದಿನ ನೂತನ

ಲಾಕ್‌ಡೌನ್‌ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ರೆಸಿಪಿಗೆ ಗರಿಷ್ಠ ಹುಡುಕಾಟ

ಸುಮಾ ಬಿ.
Published 5 ಸೆಪ್ಟೆಂಬರ್ 2020, 4:01 IST
Last Updated 5 ಸೆಪ್ಟೆಂಬರ್ 2020, 4:01 IST
ತಿಂಡಿ ತಯಾರಿ
ತಿಂಡಿ ತಯಾರಿ   

ಲಾಕ್‌ಡೌನ್‌ ಬಹುತೇಕರ ಜೀವನಶೈಲಿಯನ್ನು ಬದಲಿಸಿದೆ. ಸ್ವಚ್ಛತೆಯ ಅರಿವು ಮೂಡಿಸಿದೆ. ಅಡುಗೆಯ ಪಾಠವನ್ನೂ ಕಲಿಸಿದೆ. ಈ ಪಾಠ ಕಲಿಕೆಗೆ ಸಾಮಾಜಿಕ ಜಾಲತಾಣ ಹೆಗಲು ಕೊಟ್ಟಿದೆ. ಆನ್‌ಲೈನ್‌ ಬಳಕೆದಾರರ ಸಂಖ್ಯೆಯನ್ನೂ ಹೆಚ್ಚಿಸಿದೆ. 45 ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ ಪಾಕ ತಯಾರಿಗೆಂದೇ ಯೂಟ್ಯೂಬ್‌ ವೀಕ್ಷಿಸಿದವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

***

ಧುತ್ತನೆ ಎದುರಾದ ಲಾಕ್‌ಡೌನ್‌ ಆಹಾರಪ್ರಿಯರನ್ನು ನಿರಾಸೆಗೊಳಿಸಿತ್ತು. ರಸ್ತೆ ಬದಿಯಲ್ಲಿ ಬಾಬಣ್ಣ ಕೊಡುತ್ತಿದ್ದ ಪಾನಿಪೂರಿ, ಅದೇ ರಸ್ತೆ ಅಂಚಲ್ಲಿ ಸಾಬಣ್ಣ ಸಿದ್ಧಗೊಳಿಸುತ್ತಿದ್ದ ಚುರುಮುರಿ, ಬಾಣಲೆಯಿಂದ ಮೇಲಕ್ಕೆ ಹಾರಿಸಿ ಪ್ಲೇಟಿಗಿಡುತ್ತಿದ್ದ ಬಿಸಿಬಿಸಿ ಗೋಬಿ, ಅಲ್ಲೇ ಮೂಲೆಯಲ್ಲಿ ಕೈಬೀಸುತ್ತಿದ್ದ ಸಮೋಸ, ಮನೆಯಲ್ಲೇ ಕುಳಿತು ಆರ್ಡರ್‌ ಮಾಡಿದ ಕ್ಷಣಾರ್ಧದಲ್ಲೇ ಬೆಲ್‌ ಬಾರಿಸುತ್ತಿದ್ದ ಪಿಜ್ಜಾ ಬಾಯ್‌... ಎಲ್ಲವೂ ಒಮ್ಮೆಲೆ ಸ್ತಬ್ಧಗೊಂಡಿದ್ದವು.

ADVERTISEMENT

ಬಾಯಿ ಚಪಲ ಕೇಳಬೇಕಲ್ಲ. ಆಗ ಕಣ್ಣು ಹೊರಳಿದ್ದು ಯೂಟ್ಯೂಬ್‌ನತ್ತ. ‘ನಮಸ್ಕಾರ ಫ್ರೆಂಡ್ಸ್‌, ಪಾಕಶಾಲೆಗೆ ಸ್ವಾಗತ... ಬಾಯಲ್ಲಿ ನೀರೂರಿಸುವ, ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಇದು’ ಎನ್ನುತ್ತಲೇ ಯೂಟ್ಯೂಬ್‌ ‘ಗೆಳತಿ’ಯರು ಎಲ್ಲರ ಫೋನ್‌ಗಳಲ್ಲೂ ದಾಂಗುಡಿ ಇಟ್ಟಿದ್ದು ಆಗಲೇ.

ಬೇಕರಿ, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಸಿಗುತ್ತಿದ್ದ ತರಹೇವಾರಿ ತಿನಿಸು ಅಡುಗೆಮನೆಯಲ್ಲಿ ಸಿದ್ಧಗೊಳ್ಳತೊಡಗಿದವು. ಮನೆಯೊಡತಿಯರು ತಮ್ಮ ಕೈರುಚಿ ತೋರಿಸಿ ಮನೆಯವರನ್ನೆಲ್ಲ ತೃಪ್ತಿಪಡಿಸಿ ಭೇಷ್‌ ಎನಿಸಿಕೊಂಡರು. ಎಂದೂ ಅಡುಗೆ ಮನೆಯತ್ತ ಮುಖಮಾಡದ ಹೆಣ್ಣಮಕ್ಕಳು ತಾಸುಗಟ್ಟಲೆ ಇಷ್ಟದ ಪಾಕ ತಯಾರಿಯಲ್ಲಿ ನಿರತರಾದರು. ವಾಟ್ಸ್‌ಆ್ಯಪ್‌ ಸ್ಟೇಟಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ತಾವೇ ಸಿದ್ಧಪಡಿಸಿದ ತಿನಿಸುಗಳ ಫೋಟೊ ಹಾಕಿ ಬೀಗಿದರು. ಲೈಕ್‌, ಕಾಮೆಂಟ್‌ ಪಡೆದು ಖುಷಿಪಟ್ಟರು. ಇಷ್ಟುದಿನ ಬೇರೆಯವರ ಕೈರುಚಿ ಸವಿಯುತ್ತಿದ್ದ ಬಹುತೇಕರು ತಮ್ಮದೇ ಕೈರುಚಿಗೆ ಪುಳಕಗೊಂಡರು.

ಇದೆಲ್ಲ ಸಾಧ್ಯವಾಗಿದ್ದು ಯೂಟ್ಯೂಬ್‌ ‘ಗೆಳತಿ’ಯಿಂದ! ಬೆರಳತುದಿಯಲ್ಲೇ ಬೇಕೆನಿಸಿದ ತಿನಿಸಿನ ರೆಸಿಪಿ ಸಿಕ್ಕಮೇಲೆ ಹೆಣ್ಣುಮಕ್ಕಳನ್ನು ಕೇಳಬೇಕೆ. ಇದರ ಪರಿಣಾಮ ಮಾರ್ಚ್‌, ಏಪ್ರಿಲ್‌, ಮೇ ತಿಂಗಳ 45 ದಿನದ ಲಾಕ್‌ಡೌನ್‌ ಅವಧಿಯಲ್ಲಿ ಯೂಟ್ಯೂಬ್‌ ಬಳಕೆದಾರ ಸಂಖ್ಯೆ ಗಣನೀಯವಾಗಿ ಏರಿತು. ಈ ಅವಧಿಯಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಳಕೆದಾರರ ಸಂಖ್ಯೆ ಶೇ 20.5ರಷ್ಟು ಏರಿಕೆ ಕಂಡಿದೆ ಎಂದು ಮಿಂಡ್‌ಶೇರ್‌ ಇಂಡಿಯಾ ಹಾಗೂ ವಿಡೊಲಿ ವರದಿ ಮಾಡಿವೆ. ಹಾಗೆಯೇ ‘ರೆಸಿಪಿ’ಗಾಗಿ ಯೂಟ್ಯೂಬ್‌ ತಡಕಾಡಿದವರ ಸಂಖ್ಯೆ ಶೇ 52ರಷ್ಟು ಹೆಚ್ಚಾಗಿದೆ. ಗೇಮ್ಸ್‌ಗಳಿಗೆ ಶೇ 23ರಷ್ಟು, ಇತರ ಮಾಹಿತಿ ಕಲೆಹಾಕಲು ಶೇ 42ರಷ್ಟು ಆನ್‌ಲೈನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.

ಲಾಕ್‌ಡೌನ್‌ ವೇಳೆ ಆನ್‌ಲೈನ್‌ ಬಳಕೆಯ ಅವಧಿಯೂ ಅಧಿಕಗೊಂಡಿದೆ. ಸಮೀಕ್ಷೆ ಪ್ರಕಾರ ಲಾಕ್‌ಡೌನ್‌ಗೂ ಮುನ್ನ ವ್ಯಕ್ತಿಯೊಬ್ಬರು ದಿನಕ್ಕೆ ಸರಾಸರಿ ಒಂದೂವರೆ ಗಂಟೆ ಆನ್‌ಲೈನ್‌ ಬಳಕೆ ಮಾಡುತ್ತಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ಅದು ನಾಲ್ಕು ಗಂಟೆಗೆ ಹೆಚ್ಚಿದೆ. 2020ರ ಮೂರು ತಿಂಗಳ ಅವಧಿಯಲ್ಲಿ ಯೂಟ್ಯೂಬ್‌ ಒಂದೇ 300 ಬಿಲಿಯನ್‌ ವೀಕ್ಷಣೆ ಪಡೆದಿದೆ. ಇದು 2019ರ ಕೊನೆಯ ಮೂರು ತಿಂಗಳಿಗಿಂತ ಶೇ 13ರಷ್ಟು ಹೆಚ್ಚು ಎಂಬುದನ್ನು ಅಧ್ಯಯನ ವರದಿಗಳು ತಿಳಿಸುತ್ತವೆ. ಲಾಕ್‌ಡೌನ್‌ ವೇಳೆ 18ರಿಂದ 34 ವಯೋಮಾನದವರಿಂದಲೇ ಶೇ 70ರಷ್ಟು ವೀಕ್ಷಣೆಯನ್ನು ಯೂಟ್ಯೂಬ್‌ ಪಡೆದಿದೆ.

ಕಚೇರಿಯಿಂದ ಅಡುಗೆ ಮನೆಗೆ

ಕೆಲಸದ ಒತ್ತಡ, ಆಧುನಿಕ ಜೀವನಶೈಲಿಯಿಂದ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಸೇರುವ ಅವಕಾಶ ಒದಗಿ ಬಂದದ್ದು ಅಪರೂಪ. ಆದರೆ, ಲಾಕ್‌ಡೌನ್‌ ಒಮ್ಮೆಲೆ ಎಲ್ಲರನ್ನೂ ಒಟ್ಟುಗೂಡಿಸಿತು. ಕಚೇರಿ ಕೆಲಸದಲ್ಲೇ ಮುಳುಗಿರುತ್ತಿದ್ದ, ಅಡುಗೆ ಮನೆಯೆಂದರೆ ಓರೆಗಣ್ಣಿನಿಂದ ನೋಡುತ್ತಿದ್ದ ಗಂಡುಮಕ್ಕಳೂ ಯೂಟ್ಯೂಬ್‌ ನೋಡಿ ರೆಸಿಪಿ ತಯಾರಿಸಿ ಮಡದಿಯ ಮನ ಗೆಲ್ಲುವಂತೆ ಮಾಡಿತು ಲಾಕ್‌ಡೌನ್‌.

ಹಾಸ್ಯ ಕಲಾವಿದ ಅನಿರ್ಬನ್‌ ದಾಸ್‌ಗುಪ್ತ ‘ನೀನು‌ ಒಂದೋ ಹೀರೊ ಥರ‌ ಸಾಯುತ್ತಿಯ; ಇಲ್ಲವೆ ಕ್ವಾರಂಟೈನ್ ಅವಧಿಯಲ್ಲಿ ದೀರ್ಘ ಕಾಲ ಬದುಕಿ ಅಡುಗೆ ಮಾಡುವುದನ್ನು‌ ಕಲಿಯುತ್ತೀಯ’ ಎಂದು ಟ್ವೀಟ್‌ ಮಾಡಿದ್ದರು. ಅವರ ಮಾತು ಪಾಕ ತಯಾರಿಯಲ್ಲಿ ತೊಡಗಿದ್ದ ಗಂಡು ಹೈಕಳಿಗೆ ಸ್ಫೂರ್ತಿ ನೀಡಿತ್ತು. ಅಡುಗೆ ಕೇವಲ ಒಬ್ಬರ ಕೆಲಸವಲ್ಲ. ಮನೆಮಂದಿಯೆಲ್ಲ ಕಲಿಯಬೇಕಾದ್ದು, ಮಾಡಬೇಕಾದ್ದು ಎಂಬ ಪಾಠವನ್ನೂ ಲಾಕ್‌ಡೌನ್‌ ಕಲಿಸಿತು.

ಖಾನಾವಳಿ, ಹೋಟೆಲ್‌ಗಳನ್ನು ಅವಲಂಬಿಸಿದ್ದ ಯುವಕರು, ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ಅಡುಗೆಮನೆಯತ್ತ ಎಳೆದೊಯ್ಯಿತು. ಯೂಟ್ಯೂಬ್‌ ನೋಡಿ ಇಷ್ಟದ ಅಡುಗೆ ಮಾಡಿ ಸವಿದಾದ ಮೇಲೆ ಸಿಂಕ್‌ನಲ್ಲಿ ಬಿದ್ದ ಪಾತ್ರೆಗಳನ್ನು ತಿಕ್ಕುವಾಗಲೇ ಅಮ್ಮನ ಕಷ್ಟವೂ ಅರಿವಿಗೆ ಬಂದಿತ್ತು.

ಅಡುಗೆ ಸುಲಭಗೊಳಿಸಿದ ಯೂಟ್ಯೂಬ್‌

ಮೊದಲೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣುಮಕ್ಕಳು ತಾಯಿಗೆ ಫೋನಾಯಿಸಿ ರೆಸಿಪಿ ಕೇಳಿ ಅಡುಗೆಗಳನ್ನು ತಯಾರಿಸುತ್ತಿದ್ದರು. ಆ ಸ್ಥಾನವನ್ನು ಈಗ ಯೂಟ್ಯೂಬ್‌ ಅಲಂಕರಿಸಿದೆ. ಎಂತಹ ಕಷ್ಟದ ಅಡುಗೆಯನ್ನೂ ಯೂಟ್ಯೂಬ್‌ ‘ಗೆಳತಿ’ ಸುಲಭವಾಗಿಸಿ ಕಲಿಸುತ್ತಾಳೆ. ಮಗಳೇ ತಾಯಿಗೆ ಅಡುಗೆಯಲ್ಲಿ ಅನುಸರಿಸಬೇಕಾದ ಸರಳ ವಿಧಾನಗಳನ್ನು ಹೇಳಿಕೊಡುವ ಮಟ್ಟಿಗೆ ಆಕೆಯನ್ನು ಯೂಟ್ಯೂಬ್‌ ಬೆಳೆಸಿದೆ. ಸಾಂಬಾರ್‌ಪುಡಿ, ಚಟ್ನಿಪುಡಿಯಿಂದ ಹಿಡಿದು ಪೀಝಾ, ಬರ್ಗರ್‌ಗಳನ್ನೂ ಆಕೆ ಸುಲಭದಲ್ಲಿ ಮಾಡಲು ಕಲಿತಿದ್ದಾಳೆ.

ಹೆಚ್ಚು ಹುಡುಕಿಸಿಕೊಂಡ ರೆಸಿಪಿಗಳು

ಇತರ ಸಮಯಕ್ಕಿಂತ ಕೊರೊನಾ ಆತಂಕದ ಸಮಯದಲ್ಲಿ ಅತಿ ಹೆಚ್ಚು ರೆಸಿಪಿಗಳನ್ನು ಜನರು ವಿಕ್ಷಿಸಿದ್ದಾರೆ ಎಂದು ಗೂಗಲ್‌ ಟ್ರೆಂಡ್ಸ್‌ ವರದಿ ಮಾಡಿದೆ. ಲಾಕ್‌ಡೌನ್‌ ಅವಧಿಯ 90 ದಿನಗಳಲ್ಲಿ ಅತಿಹೆಚ್ಚು ಗೂಗಲ್‌ ಆದ ಪದ ‘ರೆಸಿಪಿ’. ನಂತರದ ಸ್ಥಾನವನ್ನು ‘ಆರೋಗ್ಯ’, ‘ಲುಡೊ’, ‘ಸೆಕ್ಸ್‌ ಟಿಪ್ಸ್‌’ ‘ನೆಟ್‌ಫ್ಲಿಕ್ಸ್‌’ ಪಡೆದುಕೊಂಡಿವೆ ಎಂದು ಗೂಗಲ್‌ ಟ್ರೆಂಡ್ಸ್‌ ವರದಿಗಳು ಹೇಳುತ್ತವೆ.

ಹಾಗೆಯೇ ಹೆಚ್ಚು ಹುಡುಕಿಸಿಕೊಂಡ ತಿನಿಸುಗಳನ್ನೂ ಅದು ಪಟ್ಟಿ ಮಾಡಿದೆ. ದಹಿವಡಾ, ಡಲ್ಗೋನಾ ಕಾಫಿ, ಪಾನಿಪೂರಿ, ಚಾಕೊಲೆಟ್‌ ಕೇಕ್‌, ಸಮೋಸಾ, ಜಿಲೇಬಿ, ಪನೀರ್‌, ದೋಕ್ಲಾ, ಬನಾನ ಬೇಕ್‌, ದೋಸಾ, ಪೀಝಾ, ಚಿಕನ್‌ ಮಾಮ್ಸ್‌, ಮ್ಯಾಂಗೊ ಐಸ್‌ಕ್ರೀಮ್‌ ಹೀಗೆ ಮೊದಲ ಹತ್ತು ಸ್ಥಾನದಲ್ಲಿ ಈ ತಿನಿಸುಗಳು ಗೂಗಲ್‌ ಆಗಿವೆ. ಪ್ರಾದೇಶಿಕಕ್ಕೆ ಅನುಗುಣವಾಗಿ ಗೂಗಲ್‌ ಟ್ರೆಂಡ್‌ ಪಡೆದುಕೊಂಡಿವೆ.

ಅಲ್ಲದೇ ಆರೋಗ್ಯ ಟಿಪ್ಸ್‌ ಹುಡುಕಾಟವೂ ಗೂಗಲ್‌ ಟ್ರೆಂಡ್‌ ಪಡೆದಿದೆ. ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಇರಾದೆಯೂ ಹೆಚ್ಚು ಗೂಗಲ್‌ ಆಗಿದೆ.

ವೀಕ್ಷಕ ವಲಯ ಹೆಚ್ಚಾದಂತೆ ಯೂಟ್ಯೂಬ್‌ ಅಡುಗೆ ಚಾನಲ್‌ಗಳೂ ಹುಟ್ಟಿಕೊಂಡವು. ಲಾಕ್‌ಡೌನ್‌ ಅವಧಿಯಲ್ಲೇ ಹಲವಾರು ಯೂಟ್ಯೂಬ್‌ ಚಾನಲ್‌ಗಳು ಹುಟ್ಟಿಕೊಂಡಿವೆ. ಅಡುಗೆ, ಸಂಗೀತ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಚಾನಲ್‌ಗಳು ಪ್ರವರ್ಧಮಾನಕ್ಕೆ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.