ADVERTISEMENT

PV Web Exclusive: ಚಾಟ್ಸ್‌ ರುಚಿ ಮರೆಯದೆನ್ನ ನಾಲಿಗೆ!

ಸುಧಾ ಹೆಗಡೆ
Published 22 ಸೆಪ್ಟೆಂಬರ್ 2020, 6:16 IST
Last Updated 22 ಸೆಪ್ಟೆಂಬರ್ 2020, 6:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‌ಡೌನ್‌ಗಿಂತ ಮುಂಚೆ ಬೆಂಗಳೂರಿನ ಆರ್‌ಟಿ ನಗರದ ಫುಡ್‌ ಸ್ಟ್ರೀಟ್‌ಗೆ ತಿಂಗಳಿಗೆ ಎರಡು ಬಾರಿಯಾದರೂ ಸರ್ಕಿಟ್‌ ಹೊಡೆಯುವ ಅಭ್ಯಾಸವಿತ್ತು. ಬೀದಿಯ ಆರಂಭದಲ್ಲೇ ಇದ್ದ ಬೆಂಗಾಲಿ ಭಯ್ಯಾ ಅಸುತೋಷ್‌ನ ಭೇಲ್‌ ಗಾಡಿಯಲ್ಲಿ ಅನಾನಸ್‌ ಸ್ಪೆಷಲ್‌ ಭೇಲ್‌ ತಿನ್ನದಿದ್ದರೆ ಕಾಲುಗಳು ಮುಂದೆ ಹೆಜ್ಜೆಯನ್ನೇ ಹಾಕುತ್ತಿರಲಿಲ್ಲ. ಮಾವಿನ ಕಾಯಿಯ ಸೀಸನ್‌ ಆದರೆ ‘ಮ್ಯಾಂಗೋ ಸ್ಪೆಷಲ್‌ ಚುರ್‌ಮುರ್‌’ ಗೆ ಒಂದಿಷ್ಟು ಹೆಚ್ಚೇ ಖಾರ ಸೇರಿಸಿ ತಿಂದಾಗ ಬಿಕ್ಕಳಿಕೆ ಶುರುವಾಗಬೇಕು, ‘ಮೇಡಮ್‌ಜೀ, ಮೀಠಾ ಚಟ್ನಿ’ ಎಂದು ಒಂದಿಷ್ಟು ಸಿಹಿ ಚಟ್ನಿ ಸುರಿಯಬೇಕು, ಆಗ ಸಮಾಧಾನವಾಗುತ್ತಿತ್ತು ನನ್ನ ನಾಲಿಗೆಗೆ. ಜೊತೆಗೆ ಆಲೂ ಟಿಕ್ಕಿ. ಅಲ್ಲಿಂದ ಮುಂದೆ ಪ್ರಭು ಫುಡ್ಸ್‌ನಲ್ಲಿ ಉತ್ತರ ಕರ್ನಾಟಕದ ಗಿರ್ಮಿಟ್ ರುಚಿ‌, ಮಿರ್ಚಿ ಭಜ್ಜಿಯ ಪರಿಮಳಕ್ಕೆ ಪಕ್ಕಾಗದವರು ಕಮ್ಮಿಯೇ. ಜೊತೆಗೆ ರಾಜಸ್ಥಾನದ ಭಯ್ಯಾನ ಹಾಲು ಹಾಕದ ಇಲೈಚಿ ಮಸಾಲೆ ಟೀ!

ಭಾನುವಾರ ಮನೆಗೆ ಯಾರೇ ಅತಿಥಿಗಳು ಬರಲಿ, ಮಧ್ಯಾಹ್ನ ಮನೆಯ ಆತಿಥ್ಯ ಮಗಿದ ಮೇಲೆ ಸಂಜೆ ಫುಡ್‌ ಸ್ಟ್ರೀಟ್‌ನ ಭಯ್ಯಾಗಳ ಆತಿಥ್ಯ ಮುಗಿಸಿಕೊಂಡೇ ಅವರು ಮನೆಗೆ ತೆರಳುವುದು. ದೋಸೆ ಪಾಯಿಂಟ್‌ನಲ್ಲಿ ದೋಸೆಯೂ ಅಲ್ಲದ, ಪಿಜ್ಜಾವೂ ಅಲ್ಲದ ಪಿಜ್ಜಾ ಪ್ಲಸ್‌ ದೋಸಾದ ವಿಶಿಷ್ಟ ರುಚಿಯನ್ನು ಸವಿದು, ‘ನಮ್ಮ ಮನೆಯ ಬಳಿ ಇಂಥದ್ದೆಲ್ಲ ಇಲ್ಲವಲ್ಲ..’ ಎಂದು ಹಳಹಳಿಸುತ್ತ ಪಾರ್ಸೆಲ್‌ ಒಯ್ಯುವವರಿಗೇನೂ ಕಡಿಮೆ ಇರಲಿಲ್ಲ.

ಮನೆಯ ಸಮೀಪ ಎಷ್ಟಂತ ಹೋಗುವುದು, ಬೆಂಗಳೂರಿನ ಬೇರೆ ಬೇರೆ ಕಡೆಯೂ ಆಗಾಗ ಹೋಗಿ ತಿಂದು ಬಂದರೇ ನಾಲಿಗೆಗೆ ಒಂದಿಷ್ಟು ಸಮಾಧಾನ. ಆರು ತಿಂಗಳಿಗೊಮ್ಮೆ ಮಲ್ಲೇಶ್ವರಂ 15ನೇ ಕ್ರಾಸ್‌ನಲ್ಲಿರುವ ದಂತವೈದ್ಯರ ಬಳಿ ಮಾಮೂಲಿ ಚೆಕಪ್‌ಗೆಂದು ಹೋದಾಗಲೂ ಅಷ್ಟೆ. ಅಪಾಯಿಂಟ್‌ಮೆಂಟ್‌ ಸಮಯಕ್ಕಿಂತ ಅರ್ಧ ಗಂಟೆ ಮುಂಚೆಯೇ ತೆರಳಿ ಬೇಸ್‌ಮೆಂಟ್‌ನಲ್ಲಿರುವ ಚಾಟ್‌ ಸೆಂಟರ್‌ಗೆ ಎಂಟ್ರಿ ಕೊಡುವುದು ಮಾಮೂಲಾಗಿತ್ತು. ಸಮೀಪದ ಕಾಲೇಜಿನ ಹುಡುಗರು– ಹುಡುಗಿಯರಿಂದ ಗಿಜಿಗುಡುತ್ತಿದ್ದ ಸೆಂಟರ್‌ನಲ್ಲಿ ನಮ್ಮಂತಹ ಅಪರೂಪದ ಅತಿಥಿಗಳು ನುಗ್ಗಿದಾಗ ಮ್ಯಾನೇಜರ್‌ ಕಂ ಶೆಫ್‌ ಮಂಡ್ಯದ ರಾಮುವಿನಿಂದ ವಿಶೇಷ ಆತಿಥ್ಯ. ‘ಮ್ಯಾಡಮ್‌, ಗೌಡ್ರ ಮಸಾಲೆ?’ ಎಂದು ಪ್ರಶ್ನಿಸುತ್ತಲೇ ಉತ್ತರಕ್ಕೂ ಕಾಯದೇ ತಯಾರಿಗೆ ಶುರು ಮಾಡುತ್ತಿದ್ದ. ಬೋಟಿ, ಆಲೂ ಚಿಪ್ಸ್‌ ರಾಶಿಯನ್ನು ಪ್ಲೇಟ್‌ ಮೇಲೆ ಸುರುವಿ ಮೇಲೆ ವಿಶಿಷ್ಟ ಬಗೆಯ ರುಚಿಕರ ಮಸಾಲೆ ಬಸಿದರೆ ‘ಗೌಡ್ರ ಮಸಾಲೆ’ ರೆಡಿ. ಮೆನುವಿನಲ್ಲಂತೂ 48 ಬಗೆಯ ಚಾಟ್ಸ್‌ ಪಟ್ಟಿ! ಪ್ರತಿ ಸಲ ಹೋದಾಗಲೂ ಬೇರೆ ಬೇರೆ ಚಾಟ್‌ ಸವಿಯುವ ನಿರ್ಧಾರ ರಾಮುವಿನ ‘ಗೌಡ್ರ ಮಸಾಲೆ?’ ಪ್ರಶ್ನೆಯ ಮುಂದೆ ಮರೆಗೆ ಸರಿದು ಬಿಡುತ್ತಿತ್ತು.

ADVERTISEMENT

ತಿಂದ ನಂತರ ಎಷ್ಟೇ ನೀರು ಬಳಸಿ ಬಾಯಿ ಮುಕ್ಕಳಿಸಿ ತೊಳೆದುಕೊಂಡು ಮೊದಲ ಅಂತಸ್ತಿನಲ್ಲಿರುವ ದಂತ ವೈದ್ಯರ ಬಳಿ ತೆರಳಿದರೂ ಅವರು ನನ್ನ ಕಳ್ಳತನವನ್ನು ಹೇಗೋ ಕಂಡು ಹಿಡಿದು ಬಿಡುತ್ತಿದ್ದರು. ಹಲ್ಲಿನ ಎಡೆಯಲ್ಲಿ ಎಲ್ಲೋ ಅವಿತು ಕುಳಿತ ಸಣ್ಣ ಸೇವ್‌ ಚೂರು, ಮಂಡಕ್ಕಿಯನ್ನು ಚಿಮಟದಿಂದ ಎತ್ತಿ, ರಾಮುವಿನ ಮೆನುವಿಗಿಂತ ವೇಗವಾಗಿ ಹೇಳಿಬಿಡುತ್ತಿದ್ದರು! ದಂತ ಚಿಕಿತ್ಸೆ ವಾರಕ್ಕೆ ಎರಡು ದಿನ ವಿಸ್ತರಿಸಿದರೆ ಚಾಟ್‌ ಸೇವೆಯೂ ಎರಡು ದಿನಗಳ ಕಾಲ ಮುಂದುವರಿಯುತ್ತಿತ್ತು. ವೈದ್ಯರೂ ಕೂಡ ‘ಮೊದಲೇ ಹೊಟ್ಟೆ ತುಂಬ ತಿಂದುಕೊಂಡು ಬನ್ನಿ. ಟ್ರೀಟ್‌ಮೆಂಟ್‌ ನಂತರ ಎರಡು ತಾಸುಗಳ ಕಾಲ ಏನನ್ನೂ ತಿನ್ನಬಾರದು’ ಎಂದು ನಾಲಿಗೆ ಬಯಸಿದ್ದನ್ನೇ ಹೇಳಿ ಕಳಿಸುತ್ತಿದ್ದರು.

ಕಚೇರಿಯ ಬಳಿ ಇರುವ ಚಾಟ್‌ ಸೆಂಟರ್‌ಗಳಲ್ಲಿ ಒಂದೆರಡು ಬಾರಿ ಹೋದರೂ ಅದೇಕೋ ಆ ರುಚಿ ಹಿಡಿಸದೇ ವಡಾ ಪಾವ್‌, ಪಾವ್‌ ಬಾಜಿವರೆಗೆ ನನ್ನ ಬೇಡಿಕೆ ಮುಂದುವರಿಯತಷ್ಟೇ. ರುಚಿಕರಭೇಲ್‌ ಸಿಗುತ್ತಿದ್ದ ‘ಆರ್ಯಭವನ್‌’ ಕೂಡ ಮುಚ್ಚಿದಾಗ ಅದಕ್ಕೂ ಬೈ ಹೇಳಬೇಕಾಯಿತು. ಕೆಲವೊಮ್ಮೆ ಶಾಪಿಂಗ್‌ಗೆಂದು ಕಮರ್ಷಿಯಲ್‌ಗೆ ತೆರಳಿದರೆ, ಶಾಪಿಂಗ್‌ ಪೂರ್ಣವಾಗುವುದು ‘ಆನಂದ್‌ ಸ್ವೀಟ್ಸ್‌’ನಲ್ಲಿ ಬೆಂಗಾಲಿ ಸವಿ ‘ದಬೇಲಿ’ ತಿಂದರಷ್ಟೇ!

ಆಗಾಗ ಯಜಮಾನರೊಟ್ಟಿಗೆ ಹೋಗುತ್ತಿದ್ದ ‘ಎಬೊನಿ’, ‘ಒಬೆರಾಯ್‌’, ‘1947’, ‘ಮಿಂಟ್‌ ಮಸಾಲಾ’ ಮೊದಲಾದ ಕಡೆ ಬಫೆಗಳಲ್ಲಿ ಕೂಡ ಮೇನ್‌ ಕೋರ್ಸ್‌ ಮುಗಿದ ನಂತರ ಕಣ್ಣುಗಳು, ನಾಲಿಗೆ ಹುಡುಕುತ್ತಿದ್ದದ್ದು ಚಾಟ್ಸ್‌ಗಳನ್ನೇ. ಉಳಿದ ಕಡೆ ಗಂಟಲು ಸೋಂಕಿನ ಭಯದಿಂದ ಪಾನಿಪುರಿ ಸವಿಯಲು ಹಿಂದೇಟು ಹಾಕುತ್ತಿದ್ದ ನನ್ನ ನಾಲಿಗೆ ಅಲ್ಲಿ ಆರಾಮವಾಗಿ ಗೋಲ್‌ಗಪ್ಪ ರುಚಿ ಸವಿಯುತ್ತಿತ್ತು.

ಆದರೆ ಕಳೆದ 5–6 ತಿಂಗಳಿಂದ ಈ ಕೊರೊನಾ ಕಾಟದಿಂದಾಗಿ ನಾಲಿಗೆಯ ಚಾಟ್ಸ್‌ ಮೆಲ್ಲುವ ಆಸೆಗೂ ಬ್ರೇಕ್‌ ಬಿದ್ದಿದೆ. ಪಾನಿ ಪುರಿ ತಿಂದು ಮುಗಿಸಿದ ಮೇಲಿನ ಆ ಎಕ್ಸ್ಟ್ರಾ ಪಾನಿಯ ಸವಿ, ಆಲೂ ಟಿಕ್ಕಾ ಸವಿದ ನಂತರ ಬಾಯಿಗೆಸೆದುಕೊಳ್ಳುವ ಕೊಬ್ಬರಿ ಮಿಠಾಯಿಯ ಸಿಹಿಯನ್ನು ಬಹುತೇಕರು ಕಳೆದುಕೊಂಡಿದ್ದಾರೆ. ಧೋ ಎಂದು ಸುರಿಯುವ ಮಳೆಗೆ ಚಪ್ಪರಿಸಬೇಕಾಗಿದ್ದ ಭಜ್ಜಿ, ಮಸಾಲೆ ವಡೆಯ ಬಿಸಿಯಿಲ್ಲದೇ ಬದುಕು ಎಷ್ಟು ಬೋರು ಅಲ್ಲವೇ?

ಸಾಮಾಜಿಕ ಜಾಲತಾಣದಲ್ಲಿ ಬನಾನಾ ಕೇಕ್‌, ಡೊಲ್ಗೊನಾ ಕಾಫಿ ಎಂದೆಲ್ಲ ವೈರಲ್‌ ಆದರೂ ಬೀದಿ ಬದಿ ಮಾರುವ ಎಗ್‌ ರೋಲ್‌, ಪಾಪ್ಡಿ ಚಾಟ್‌, ವೈವಿಧ್ಯಮಯ ದೋಸೆ, ಚುರುಮುರಿ (ಚರುಮುರಿಯೇ ಸರಿ ಎನ್ನುತ್ತಾರಪ್ಪ, ಆದರೆ ತಿಂದ ನಂತರ ಖಾರಕ್ಕೆ ನಾಲಿಗೆ ಚುರುಚುರು ಎನ್ನುವುದರಿಂದ ಅದಕ್ಕೆ ಚುರುಮುರಿಯೇ ಸರಿಯಾದ ನಾಮಕರಣ)ಯ ರುಚಿಯಿಲ್ಲದೇ ಹಳಹಳಿಸಿದವರೆಷ್ಟೊ. ಮನೆಯಲ್ಲಿ ಕೆಲವರಾದರೂ ಇದನ್ನೆಲ್ಲ ಮಾಡಲು ಯತ್ನಿಸಿದ್ದಂತೂ ನಿಜ. ಆದರೆ ಬೀದಿ ಬದಿಯಲ್ಲಿ ನಿಂತು ಆ ರುಚಿಯನ್ನು ಸವಿಯುವ ಮಜಾ ಸಿಗಬೇಕಲ್ಲ..!

ಬೆಂಗಳೂರಿನ ಜಯನಗರದ ನಿವಾಸಿ ಸಂಬಂಧಿ ತಾರಾ ಪ್ರತಿ ಶನಿವಾರ ಸಂಜೆ ಸಜ್ಜನ್‌ರಾವ್‌ ಸರ್ಕಲ್‌ಗೆ ಭೇಟಿ ನೀಡಿ ಮಸಾಲೆ ದೋಸೆ ತಿನ್ನದೇ ಬರುತ್ತಿರಲಿಲ್ಲ. ‘ಎಷ್ಟೋ ವರ್ಷಗಳಿಂದ ಇದನ್ನು ತಿನ್ನುತ್ತಿದ್ದರೂ ಬೇಸರ ಬಂದಿರಲಿಲ್ಲ. ಆದರೆ ಕೊರೊನಾ ಕಾರಣದಿಂದ ಹೊರಗಡೆ ತಿನ್ನುವುದಕ್ಕೇ ಹೆದರಿಕೆ’ ಎಂದು ಭಯ ಬಿಚ್ಚಿಡುತ್ತಾಳೆ.

ಲಾಕ್‌ಡೌನ್‌ ಎಂಬುದು ಬಹಳಷ್ಟು ಮಂದಿಗೆ ಟರ್ಕಿಶ್‌ ಎಗ್‌ ಪರಿಚಯ ಮಾಡಿಸಿರಬಹುದು. ಆದರೆ ಬೀದಿ ಬದಿಯ ಗಾಡಿಯಲ್ಲಿ ಸಂಜೆ ಹೊತ್ತು ಕೆನ್ನಾಲಗೆ ಸೂಸುವ ಸ್ಟವ್‌ ಮೇಲೆ ಬೇಯುವ ಎಗ್‌ ಆಮ್ಲೆಟ್‌ ಹಾಗೂ ಭುರ್ಜಿ ರುಚಿಯ ನೆನಪನ್ನು ಅಷ್ಟು ಸುಲಭಕ್ಕೆ ಬದಿಗೆ ಸರಿಸಲು ಸಾಧ್ಯವಿಲ್ಲ.

ಫ್ರೇಜರ್‌ ಟೌನ್‌ನ ಫುಡ್‌ ಸ್ಟ್ರೀಟ್‌ಗೆ ತಿಂಗಳಿಗೊಮ್ಮೆಯಾದರೂ ಭೇಟಿ ಕೊಡುತ್ತಿದ್ದ ಸ್ನೇಹಿತೆ ಸುನೀತಾ ‘ಛೇ, ಆಮ್ಲೆಟ್‌ ಜೊತೆ ಕೋಕ್‌ ಸವಿಯುವ ಮಜಾ ಈಗ ನೆನೆಸಿಕೊಂಡು ವ್ಯಥೆ ಪಡಬೇಕಷ್ಟೆ’ ಎನ್ನುತ್ತಾಳೆ.

ಬೀದಿ ಬದಿಯಲ್ಲಿ ಸಿಗುವ ಅಪರೂಪದ ತಿನಿಸೆಂದರೆ ವಿಶೇಷವಾದ ಪರೋಟ. ಮೂಲಿ ಪರೋಟ, ಆಲೂ ಪರೋಟ, ಮೇಥಿ ಪರೋಟ ಒಂದು ಕಡೆಯಾದರೆ ಬೆಂಗಳೂರಿನ ಕಮರ್ಷಿಯಲ್‌ ರಸ್ತೆಯ ತಿರುವಿನಲ್ಲಿ ಸಂಜೆ ಸಿಗುತ್ತಿದ್ದ ಶಿರಾ (ರವಾ ಕೇಸರಿಬಾಥ್‌) ಹಾಕಿ ಸುತ್ತಿಕೊಡುತ್ತಿದ್ದ ಪರೋಟ ಸವಿಯೇ ವಿಶಿಷ್ಟ.

ಬೀದಿ ಬದಿಯ ಫುಡ್‌ ವಿಷಯ ಬಂದಾಗ ನೇಪಾಳದ ಸಾಂಪ್ರದಾಯಕ ತಿನಿಸು ಮೋಮೋಸ್‌ ಮರೆಯಲಾದೀತೆ. ಬಿಸಿ ಬಿಸಿ ಮೋಮೋಸ್‌ ಟೊಮೆಟೊ ಚಟ್ನಿಯೊಂದಿಗೆ ಸವಿಯುತ್ತಿದ್ದರೆ ಲೆಕ್ಕ ತಪ್ಪುವುದು ಖಂಡಿತ. ಮಾಲ್‌ ಹೊರಗಡೆ ಬಹಳಷ್ಟು ಮಂದಿ ಈಶಾನ್ಯ ಭಾರತದವರು ಈ ಮೋಮೋಸ್‌ ಅನ್ನು ರುಚಿಕರವಾಗಿ ಮಾಡುವುದರಲ್ಲಿ ಸಿದ್ಧಹಸ್ತರು. ತರಕಾರಿ ಮಾತ್ರವಲ್ಲ, ಅಣಬೆ, ಚಿಕನ್‌, ಪನೀರ್‌.. ಹೀಗೆ ವೈವಿಧ್ಯಮಯ ಮೋಮೋಸ್‌ ನಾಲಿಗೆಯ ರುಚಿ ಮೊಗ್ಗನ್ನು ತಣಿಸುತ್ತಿತ್ತು.

ಸೇವ್‌ ಪುರಿಯ ಮೇಲೆ ಮೊಸರು ಹಾಕಿದ ದಹಿ ಸೇವ್‌ ಪುರಿ, ಖಾರ ಮಸಾಲೆಯ ಮಸಾಲೆ ಪುರಿ, ಪಾಪ್ಡಿ ಚಾಟ್‌, ಆಲೂ ಟಿಕ್ಕಾ ಚಾಟ್‌, ವಡಾ ಪಾವ್‌, ಪಾವ್‌ ಬಾಜಿ.. ಹೇಳುತ್ತ ಹೋದರೆ ನೂರರ ಗಡಿ ದಾಟುವುದು ಖಂಡಿತ.

ಚಾಟ್‌ ಪ್ರಿಯರು ಕೊರೊನಾ ಶಪಿಸುತ್ತ ಕೂತರೆ, ವಹಿವಾಟಿಲ್ಲದೇ ಕಂಗಾಲಾಗಿರುವ ಬೀದಿ ಬದಿ ಚಾಟ್‌ ವ್ಯಾಪಾರಿಗಳೂ ಕೊರೊನಾಗೆ ಹಿಡಿಶಾಪ ಹಾಕುವವರೇ. ಈಗೀಗ ನಗರದ ಬಹುತೇಕ ಕಡೆ ಈ ಚಾಟ್‌, ಇತರ ತಿನಿಸುಗಳು ಲಭ್ಯವಿದ್ದರೂ ಕೂಡ, ಹೋಗಿ ತಿನ್ನಲು ಭಯ. ಮುಖಗವಸು ಹಾಕಿಕೊಂಡರೆ ತಿನ್ನುವುದಾದರೂ ಹೇಗೆ? ಪಾರ್ಸೆಲ್‌ ತಂದುಕೊಂಡು ಮನೆಯಲ್ಲಿ ತಿಂದರೂ ಕೂಡ ಅಂತಹ ಮಜಾ ಬರುವುದಿಲ್ಲ. ಕೋವಿಡ್‌– 19 ಯಾವಾಗ ಇದಕ್ಕೆಲ್ಲ ಮುಕ್ತಿ ನೀಡುತ್ತದೆ ಎಂದು ಕಾಯಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.