ADVERTISEMENT

ನಾನ್‌ಸ್ಟಿಕ್‌ ಪಾತ್ರೆಗಳ ಬಳಕೆ ಎಷ್ಟು ಸುರಕ್ಷಿತ?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಿನ ಉಪಾಹಾರಕ್ಕೆ ಮಾಡುವ ದೋಸೆ, ಚಪಾತಿ, ಉಪ್ಪಿಟ್ಟು, ಇಡ್ಲಿಗೆ ಮಾಡುವ ಸಾಂಬಾರ್‌... ಹೀಗೆ ಎಲ್ಲದಕ್ಕೂ ಈಗ ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವುದು ಬಹುತೇಕರಿಗೆ ರೂಢಿಯಾಗಿಬಿಟ್ಟಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸ್ಟೀಲ್‌ ಮತ್ತಿತರ ಪಾತ್ರೆಗಳಿಗೆ ಆಹಾರ ಕಣಗಳು ಅಂಟಿಕೊಂಡರೆ ಅದರಲ್ಲೂ ಕೆಲವು ಸಲ ಒಣಗಿಕೊಂಡು ತೊಳೆಯುವಾಗ ಹರ ಸಾಹಸ ಪಡಬೇಕು. ದಿನಗಟ್ಟಲೆ ನೀರಿನಲ್ಲಿ ನೆನೆ ಹಾಕಿ, ನಂತರ ಸ್ಕ್ರಬ್‌ನಿಂದ ಶಕ್ತಿ ಹಾಕಿ ಉಜ್ಜಬೇಕು.

ಹೀಗಾಗಿ ತೊಳೆಯುವುದು ಸುಲಭ ಎಂದು ನಾನ್‌ಸ್ಟಿಕ್‌ ಪಾತ್ರೆಗೆ ಬಹುತೇಕರು ಮೊರೆ ಹೋಗಿದ್ದಾರೆ. ಇನ್ನೊಂದು ಕಾರಣ ಕಡಿಮೆ ಎಣ್ಣೆ ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು. ಆದರೆ ಈಗೀಗ ಈ ಪಾತ್ರೆಗಳನ್ನು ದೀರ್ಘಕಾಲದವರೆಗೆ ಬಳಸಿದರೆ ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಹೆದರಿಕೆ ಹಲವರಲ್ಲಿ ಕಾಡುತ್ತಿದೆ.

ನಾನ್‌ಸ್ಟಿಕ್‌ ಅಡುಗೆ ಪಾತ್ರೆಗಳ ಒಳಭಾಗದಲ್ಲಿ ಹೆಚ್ಚಾಗಿ ಟೆಫ್ಲಾನ್‌ ಲೇಪಿಸುವುದರಿಂದ ಆಹಾರ ಕಣಗಳು ಅಂಟಿಕೊಳ್ಳುವುದಿಲ್ಲ. ಇದಕ್ಕೆ ಈ ಹಿಂದೆ ಬಳಸುತ್ತಿದ್ದ ರಾಸಾಯನಿಕ ಪಿಎಫ್‌ಒಎ ಹಾನಿಕಾರಕವಾಗಿತ್ತು. ಸ್ತನ ಕ್ಯಾನ್ಸರ್‌, ಥೈರಾಯ್ಡ್‌ ಹಾಗೂ ಕಿಡ್ನಿ ಸಮಸ್ಯೆ, ಸಂತಾನಹೀನತೆಯಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಹೀಗಾಗಿ ಇದರ ಬಳಕೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದ್ದರೂ ಸ್ಥಳೀಯವಾಗಿ ತಯಾರಾಗುವ, ಕಡಿಮೆ ಗುಣಮಟ್ಟದ ಕೆಲವು ನಾನ್‌ಸ್ಟಿಕ್‌ ಪಾತ್ರೆಗಳಿಗೆ ಇದನ್ನು ಬಳಸುತ್ತಿದ್ದಾರೆ.

ADVERTISEMENT

ಹೀಗಾಗಿ ಉತ್ತಮ ದರ್ಜೆಯ ನಾನ್‌ಸ್ಟಿಕ್‌ ಪಾತ್ರೆಗಳನ್ನು ಖರೀದಿಸುವುದು ಸೂಕ್ತ. ಇದರ ಮೇಲಿರುವ ಲೇಪ ಪುಡಿಪುಡಿಯಾಗಿ ಎದ್ದು ಬಂದರೆ ಬದಲಾಯಿಸಿಕೊಳ್ಳುವ ಅವಕಾಶವಿರುತ್ತದೆ.

ಟೆಫ್ಲಾನ್‌ ಹೊದಿಕೆ ಕಡಿಮೆ ಉಷ್ಣಾಂಶದಲ್ಲಿ ಬಳಕೆಗೆ ಸೂಕ್ತ. ಅತಿ ಹೆಚ್ಚು ಅಂದರೆ 300 ಡಿಗ್ರಿ ಸೆಂ.ಗಿಂತ ಹೆಚ್ಚು ಉಷ್ಣಾಂಶದಲ್ಲಿ ಬಳಸಿದರೆ ಅದು ಪುಡಿಯಾಗುವುದಲ್ಲದೇ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು. ಇದರ ಹೊಗೆಯನ್ನು ದೀರ್ಘಕಾಲ ಸೇವಿಸಿದರೂ ತಲೆನೋವು ಮತ್ತಿತರ ಅಸ್ವಸ್ಥತೆ ಉಂಟಾಗಬಹುದು ಎಂದು ಎಚ್ಚರಿಸುತ್ತಾರೆ ತಜ್ಞರು.

ಹೀಗಾಗಿ ಅಪರೂಪಕ್ಕೆ ಇಂತಹ ಪಾತ್ರೆಗಳನ್ನು ಬಳಸಬಹುದಾದರೂ ನಿತ್ಯ ಬಳಕೆಗೆ ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಹೆಚ್ಚು ಸೂಕ್ತ. ಹೆಚ್ಚು ಉಷ್ಣಾಂಶದಲ್ಲಿ ಬೇಯಿಸುವುದು, ಹುರಿಯುವುದಕ್ಕೆ ಇದನ್ನು ಬಳಸಬಹುದು. ದಪ್ಪ ತಳದ ಸ್ಟೀಲ್‌ ಪಾತ್ರೆಗಳಿಗೆ ಆಹಾರ ಕಣಗಳು ಅಂಟಿಕೊಳ್ಳುವುದು ಕಡಿಮೆ. ಉತ್ತಮ ದರ್ಜೆಯ ಸ್ಟೀಲ್‌ ಪಾತ್ರೆಗಳ ಮೇಲೆ ಗೀರು ಕೂಡ ಬೀಳುವುದಿಲ್ಲ. ಹಾಗೆಯೇ ಬೀಡು ಕಬ್ಬಿಣದ ತವಾ ಚಪಾತಿ ಮತ್ತು ದೋಸೆ ಮಾಡಲು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.