ADVERTISEMENT

ಮಾಂಸಾಹಾರ: ಪ್ರಾಚೀನರ ಆಯ್ಕೆ

ವಿಶ್ವನಾಥ ಭಟ್ಟ ಗೋಳಿಕೈ
Published 23 ಮೇ 2020, 19:30 IST
Last Updated 23 ಮೇ 2020, 19:30 IST
ಮುಳ್ಳುಹಂದಿ
ಮುಳ್ಳುಹಂದಿ   

ಪ್ರಾಣಿಗಳು ಜೀವಧಾರಣೆಗಾಗಿ ಆಹಾರವನ್ನು ಸೇವಿಸುತ್ತವೆ. ಆ ಆಹಾರವು ಇಷ್ಟವಾದದ್ದಾಗಿರಬೇಕು, ಹಿತಕಾರಿಯೂ ಆಗಿರಬೇಕು. ನಾಲಿಗೆಯು ನಮಗೆ ಇಷ್ಟಾನಿಷ್ಟವನ್ನು ತಿಳಿಸಿಕೊಡುತ್ತದೆ. ಹಿತವನ್ನು ಉಂಟು ಮಾಡುವುದು ಯಾವುದು? ಇದನ್ನು ತಿಳಿದುಕೊಳ್ಳಲು ವಿಜ್ಞಾನ ಮತ್ತು ಅನುಭವದ ಕಡೆಗೆ ಗಮನ ಹರಿಸಬೇಕಾಗುತ್ತದೆ.

ಇಷ್ಟವಾದದ್ದೆಲ್ಲ ಹಿತವನ್ನು ಉಂಟು ಮಾಡಲಾರದು ಎಂಬುದು ತಿಳಿದ ಸಂಗತಿಯೇ. ವಿಹಿತವಾದದ್ದು ಹಿತವನ್ನು ಉಂಟು ಮಾಡುತ್ತದೆ. ‘ಹಿತಂ ತು ವಿಹಿತಶಬ್ದೇನ ಪ್ರಾಪ್ಯತೇ’ ಎನ್ನುತ್ತದೆ ಚರಕ ಸಂಹಿತಾ. ತಜ್ಞರಿಂದ, ಅನುಭವಿಗಳಿಂದ ಯಾವ ಆಹಾರವು ಸೇವಿಸಲು ಯೋಗ್ಯವಾದದ್ದು ಎಂದು ಹೇಳಲ್ಪಡುತ್ತದೋ ಅದು ಹಿತವನ್ನು ಉಂಟು ಮಾಡುತ್ತದೆ. ಇಂತಹ ಆಹಾರ ಸೇವನೆಯಿಂದ ಇಂದ್ರಿಯ ಪಟುತ್ವ, ನೀರೋಗ, ಬುದ್ಧಿ ವಿಕಾಸ ಉಂಟಾಗುತ್ತದೆ.

ಸ್ಥೂಲವಾಗಿ ಆಹಾರವನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ವಿಭಾಗಿಸಬಹುದು. ಇಂದು ಜಗತ್ತಿನ ಪ್ರತಿಶತ ತೊಂಬತ್ತು ಜನರು ಮಾಂಸಾಹಾರಿಗಳು ಎನ್ನುತ್ತಿದೆ ಅಂಕಿಅಂಶ. ಮಾಂಸಾಹಾರದ ಬಗ್ಗೆ ನಮ್ಮ ಪೂರ್ವಜರು ಅಂದರೆ ಭಾರತೀಯ ಧರ್ಮಶಾಸ್ತ್ರಜ್ಞರ ಅಭಿಪ್ರಾಯಗಳೇನು? ಅವರ ಆಯ್ಕೆಗಳು ಯಾವುದಿದ್ದವು ಎನ್ನುವುದು ಕುತೂಹಲಕರ.

ADVERTISEMENT

ಭಾರತೀಯ ದಾರ್ಶನಿಕರು ಮಾಂಸಾಹಾರವನ್ನು ವೈಭವೀಕರಿಸಲಿಲ್ಲ. ಸಂಪೂರ್ಣವಾಗಿ ನಿಷೇಧಿಸಲೂ ಇಲ್ಲ. ಶಾಸ್ತ್ರಜ್ಞರ ನಿರ್ದೇಶನದ ಪ್ರಕಾರ ಅನಿವಾರ್ಯ ಸಂದರ್ಭದಲ್ಲಿ ಮಾಂಸವನ್ನು ಸೇವಿಸಬಹುದು. ಅಂದರೆ ಸಸ್ಯಾಹಾರದ ಆಭಾವದಲ್ಲಿ ಹಸಿವನ್ನು ಅಡಗಿಸಿಕೊಳ್ಳಲು, ರುಗ್ಣಾವಸ್ಥೆಯಲ್ಲಿ ಪ್ರಾಣ ರಕ್ಷಣೆಗಾಗಿ ಮಾಂಸವನ್ನು ಭಕ್ಷಿಸಬಹುದು. ಪ್ರಾಚೀನರಲ್ಲಿ ದೇವಪಿತೃಕಾರ್ಯದಲ್ಲಿ ಮಾಂಸದ ಬಳಕೆ ಇತ್ತು. ಅಂತಹ ವೇಳೆಯಲ್ಲಿ ಮಂತ್ರಪೂತವಾದ ಮಾಂಸವನ್ನು ಸ್ವೀಕರಿಸಬೇಕಾಗಿತ್ತು. ಮಾಂಸವು ಕೃಶರಿಗೆ ಪುಷ್ಟಿಯನ್ನು ನೀಡುತ್ತದೆ. (ರಸಃ ಮಾಂಸರಸ: | ಪ್ರೀಣಯತಿ| ಕ್ಷೀಣಾನ್ ಪುಷ್ಣಾತಿ| ಚರಕ ಸಂಹಿತೆ) ಇದು ಮಾಂಸದ ಸಾಮಾನ್ಯ ಗುಣ.

ಆದರೂ, ಮಾಂಸದ ಸಂಪಾದನೆಯಲ್ಲಿ ಹಿಂಸೆ ಅನಿವಾರ್ಯವಾದ ಕಾರಣ ಬೇರೆ ಪ್ರಾಣಿಯ ಮಾಂಸದಿಂದ ನಮ್ಮ ದೇಹದ ಮಾಂಸವನ್ನು ಹೆಚ್ಚಿಸಿಕೊಳ್ಳುವುದು ಶ್ರೇಯಸ್ಕರವಲ್ಲ ಎಂಬುದು ಧರ್ಮಶಾಸ್ತ್ರಜ್ಞರ ಅಭಿಮತ. ಇವುಗಳನ್ನು ಮೀರಿ ಪ್ರಾಚೀನ ಕಾಲದಿಂದಲೇ ಮಾಂಸ ಸೇವನೆಯನ್ನು ಅಂದರೆ ಆಹಾರವಾಗಿ ಮಾಂಸಭಕ್ಷಣೆಯನ್ನು ಸಮಾಜವು ರೂಢಿಸಿಕೊಂಡಿತ್ತು. ಮಾಂಸಾಹಾರವನ್ನು ಸಮಾಜವು ರೂಢಿಸಿಕೊಂಡ ಹಿನ್ನೆಲೆಯಲ್ಲಿ, ಮಾಂಸ ಭಕ್ಷಣೆಯಿಂದ ಉಂಟಾಗುವ ಕೇಡಿನಿಂದ ಪಾರಾಗಲು ಮಾಂಸಾಹಾರಿಗಳು ಭಕ್ಷ್ಯ, ಅಭಕ್ಷ್ಯವನ್ನು ವಿವೇಚಿಸಿ ಮಾಂಸವನ್ನು ತಿನ್ನಬೇಕೆಂದು ಶಾಸ್ತ್ರಜ್ಞರು ನಿರ್ದಿಷ್ಟಪಡಿಸಿದರು.

ತಿನ್ನಲು ಯೋಗ್ಯವಾದ ಪ್ರಾಣಿ, ಪಕ್ಷಿಗಳ ಮಾಂಸ ತಿನ್ನಬೇಕು. ಹತ್ತೆಂಟು ತಲೆಮಾರಿನಿಂದ ಸಂಕ್ರಾತವಾದ ಅನುಭವವನ್ನು ಗ್ರಹಿಸಿದ ಶಾಸ್ತ್ರಜ್ಞರಿಂದ ವಿಹಿತವಾದ ಪ್ರಾಣಿ– ಪಕ್ಷಿಗಳ ಮಾಂಸವನ್ನು ಮಾತ್ರ ತಿನ್ನಬೇಕು. ಇದನ್ನು ಮೀರಿದರೆ ರೋಗರುಜಿನಗಳು ಬರುತ್ತವೆ ಎಂದು ಮನುಸ್ಮೃತಿ (ವ್ಯಾಧಿಭಿಶ್ಚೈವ ಪೀಡ್ಯತೇ) ಹೇಳುತ್ತದೆ.

ಪ್ರಾಚೀನ ಕಾಲದಿಂದಲೂ ಚಿಕಿತ್ಸಕ ಬುದ್ಧಿಯುಳ್ಳ ಭಾರತೀಯರಿಗೆ ಆಹಾರ ವಿಷಯದಲ್ಲಿ ಅಪಾರವಾದ ಅನುಭವವಿದೆ. ಅದು ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಿತವೂ ಆಗಿದೆ. ಶಾಸ್ತ್ರಕಾರರು ವೈಜ್ಞಾನಿಕ ದೃಷ್ಟಿಯುಳ್ಳವರಾಗಿ ಭಕ್ಷ್ಯ (ತಿನ್ನಲು ಯೋಗ್ಯವಾದದ್ದು) ಮತ್ತು ಅಭಕ್ಷ್ಯ (ತಿನ್ನಬಾರದು) ಎಂಬ ವಿಭಾಗವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಭಾರತೀಯ ಶಾಸ್ತ್ರಜ್ಞರ ಪ್ರಕಾರ ಬೇಯಿಸಿದ ಮಾಂಸವು ತಿನ್ನಲು ಯೋಗ್ಯವಾದದ್ದು. ‘ಪಕ್ವಂ ಮಾಂಸಂ ಹಿತಂ ಸರ್ವಂ ಬಲವೀರ್ಯವಿವರ್ಧನಂ ಭೋಜನಕುತೂಹಲಂ ಮಾಂಸಪ್ರಕರಣ’. ಮಾಂಸವನ್ನು ಬೇಯಿಸುವುದರಿಂದ ಅದರಲ್ಲಿರುವ ರೋಗಕಾರಕ ಕ್ರಿಮಿಗಳು ನಾಶವಾಗುತ್ತವೆ ಎಂಬುದನ್ನು ವಿಜ್ಞಾನ ನಮಗೆ ತಿಳಿಸುತ್ತದೆ. ಇಂಥ ಮಾಂಸವನ್ನು ತಿನ್ನುವುದರಿಂದ ಬಲವೀರ್ಯಗಳು ವರ್ಧಿಸುತ್ತವೆ ಎನ್ನುವುದು ಶಾಸ್ತ್ರ ದೃಷ್ಟಿ.

ಶಾಸ್ತ್ರಕಾರರ ಬೇಕು– ಬೇಡಗಳ ಪಟ್ಟಿಯಲ್ಲಿ ಕೆಲವು ಕುತೂಹಲಕರ ವಿವರಗಳಿವೆ.ಶಾಸ್ತ್ರಕಾರರು ಊರಹಂದಿಯ ಮಾಂಸವನ್ನು, ಗ್ರಾಮ ಕುಕ್ಕುಟದ (ಸಾಕಿದ ಕೋಳಿಯ) ಮಾಂಸವನ್ನು ನಿಷೇಧಿಸಿದ್ದಾರೆ! ಹಾಗಂತ ಕಾಡಿನಕೋಳಿಯನ್ನು (ಕಾಕೋಳಿ), ಅರಣ್ಯ ಹಂದಿಯನ್ನು ತಿನ್ನಬಹುದು ಎಂದಿದ್ದಾರೆ. ಈ ಪ್ರಾಣಿಗಳು ಪರಸ್ಪರ ಬೇರೆ ಬೇರೆ ವರ್ಗಕ್ಕೆ ಸೇರಿದವುಗಳೇನಲ್ಲ. ಆದರೂ, ವಾಸಿಸುವ ಪ್ರದೇಶದ ಮೇಲೆ ಭಕ್ಷ್ಯ- ಅಭಕ್ಷ್ಯ ಭೇದವಿದೆ. ಗ್ರಾಮದಲ್ಲಿ ವಾಸಿಸುವ ಪ್ರಾಣಿಗಳು ಸಹಜವಾಗಿ ತಮ್ಮ ಪ್ರಕೃತಿಗೆ ಹೊಂದಿಕೊಳ್ಳುವ ಆಹಾರವನ್ನು ಮಾತ್ರ ತಿನ್ನುವುದಿಲ್ಲ. ಮಾನವರ ಹಸ್ತಕ್ಷೇಪದಿಂದ, ಪರಿಸರದ ವ್ಯತ್ಯಾಸದಿಂದ ಅವುಗಳ ಆಹಾರ ವಿಧಾನವು ಬದಲಾಗುತ್ತದೆ. ಆಗ ಮಾಂಸಗುಣವು ವ್ಯತ್ಯಾಸವಾಗುತ್ತದೆ. ಆದ್ದರಿಂದ ಅವು ಅಭಕ್ಷ್ಯವೆಂದು ಶಾಸ್ತ್ರಕಾರರು ಗುರುತಿಸಿದ್ದಾರೆ. ಪ್ರಾಚೀನರು ವೈಜ್ಞಾನಿಕ ತಳಹದಿಯ ಮೇಲೆ ಇದನ್ನು ವಿಭಾಗಿಸಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ.

ಆಡು, ಟಗರು, ಜಿಂಕೆ, ಖಡ್ಗಮೃಗ, ಬಹುಕೋಡುಳ್ಳ ಹುಲ್ಲೆ, ಮೈಮೇಲೆ ಬಿಳಿ ಚುಕ್ಕಿಯುಳ್ಳ ಚಿಗರೆ, ಮೃದುಶೃಂಗದ ಜಿಂಕೆ, ಕೋಡಿಲ್ಲದ ಹರಿಣ, ಕಾಡು ಹಂದಿ, ಮುಳ್ಳುಹಂದಿ, ಉಡ, ಆಮೆ, ದೊಡ್ಡಮುಳ್ಳುಹಂದಿ, ಮೊಲ ಇವುಗಳೆಲ್ಲವೂ ಭಕ್ಷ್ಯಪ್ರಾಣಿಗಳು. ಇವುಗಳಲ್ಲಿ ಸಾಕುಪ್ರಾಣಿಗಳೂ ಇವೆ ಹಾಗೂ ಕಾಡುಪ್ರಾಣಿಗಳೂ ಇವೆ. ‘ಗ್ರಾಮ್ಯಾರಣ್ಯಾನಾಂ ಪಶೂನಾಮಶ್ನಂತಿ ಯಥಾ ಅಜ- ಮೇಷ-ಹರಿಣ- ಖಡ್ಗ- ರುರು- ಪ್ರಷತ -ಋಷ್ಯ- ನ್ಯಂಕು- ಮಹಾರಣ್ಯವಾಸಿನಶ್ಚ ವರಾಹಾನ್’ ಎನ್ನುತ್ತಾನೆ ಹಾರೀತ. ಹಾಗೆಯೇ ಯಾಜ್ಞವಲ್ಕ್ಯನೂ ‘ಸೇಧಾ- ಗೋಧಾ- ಕಚ್ಛಪ- ಶಲ್ಲಕಾ: ಶಶಶ್ಚ ಪಂಚನಖಾಃ ಭಕ್ಷ್ಯಃ’ ಎನ್ನುತ್ತಾನೆ. ಒಂದೇ ದಂತಪಂಕ್ತಿಯುಳ್ಳ (ಏಕತೋದಿತ) ಪ್ರಾಣಿ ವಿಶೇಷವೂ ಭಕ್ಷ್ಯವರ್ಗದಲ್ಲೇ ಸೇರಿದೆ.

ಮೀನಿನಲ್ಲಿ ಪಾಠೀಣ ಜಾತಿಯ ಮೀನು ತಿನ್ನಲು ಯೋಗ್ಯವಾದದ್ದು. ಇದಕ್ಕೆ ಸಾವಿರಗಟ್ಟಲೆ ಕೋರೆ ಹಲ್ಲುಗಳು ಇರುತ್ತವೆ. ಇದರ ಮತ್ತೊಂದು ಹೆಸರು ಚಂದ್ರಕ. ರೋಹಿತ ಇದು ಕೆಂಪುಮೀನು. ಹೊಟ್ಟೆ ಮುಖ, ಕಣ್ಣು, ರೆಕ್ಕೆಗಳೂ ಕೂಡ ಕೆಂಪಾಗಿರುತ್ತವೆ. ರೆಕ್ಕೆಗಳು ತೆಳ್ಳಗಿರುತ್ತವೆ. ಇಂಥ ಮೀನನ್ನು ತಿನ್ನಬಹುದು. ರಾಜೀವ ಎನ್ನುವುದು ಮೈಮೇಲೆ ಗೆರೆಗಳುಳ್ಳ ಮೀನು. ಕಮಲದ ಬಣದಲ್ಲಿರುತ್ತದೆ. ಹಾಗೆಯೇ ಸಿಂಹತುಂಡ ಅಥವಾ ಸಿಂಹಮುಖ ಮೀನು; ಮುಖಭಾಗ ಸಿಂಹದಾಕೃತಿಯಲ್ಲಿರುವ ಇವುಗಳು ಭಕ್ಷ್ಯ ಮಾಡಲು ಯೋಗ್ಯವಾದವು. ಶಲ್ಕಲ ಪೊರೆರುವ ಮೀನು ಚಿಪ್ಪಿನ ಆಕೃತಿಯಲ್ಲಿರುವಂಥ ಮೀನು. ಇಂತಹ ಜಾತಿಗೆ ಸೇರಿದ ಎಲ್ಲಾ ಬಗೆಯ ಮೀನುಗಳು ತಿನ್ನಲು ಯೋಗ್ಯವಾಗಿದೆ ಎಂದು ಶಾಸ್ತ್ರ ತಿಳಿಸುತ್ತದೆ. (ಪಾಠೀಣರೋಹಿತಾವಾದ್ಯೌ ನಿಯುಕ್ತೌ ಹವ್ಯವ್ಯಯೋಃ| ರಾಜೀವಾನ್ ಸಿಂಹತುಂಡಾಂಶ್ಚ ಸಶಲ್ಕಾಂಶ್ಚೈವ ಸರ್ವಶಃ- ಮನು).

ಪಕ್ಷಿಗಳಲ್ಲಿ ಉಷ್ಟ್ರಪಕ್ಷಿ, ಚಾತಕ ಪಕ್ಷಿಗಳ ಮಾಂಸವು ತಿನ್ನಲು ಅರ್ಹವಾದದ್ದು. ಕಾಡಿನಕೋಳಿ (ಕಾಕೋಳಿ), ಕವುಜದ ಹಕ್ಕಿ, ಲಾವಕ್ಕಿ, ಬಿಳಿತಿತ್ತಿರಿ, ಹುಲ್ಲುನವಿಲು, ವಾಧ್ರೀಣ (ಚರ್ಮಾಕಾರ ಮೂಗಿರುವುದು) ಇವುಗಳು ತಿನ್ನಲು ಅರ್ಹವಾದವು. (ತಿತ್ತಿರಂ ಚ ಮಯೂರಂ ಚ ಲಾವಕಂ ಚ ಕಪಿಂಜಲಂ| ವಾಧ್ರೀಣಸಂ ವತ್ರ್ತಕಂಚ ಭಕ್ಷ್ಯಾನಾಹ ಯಮಃ ಸ್ವಯಂ- ಶಂಖ).

ಇಂದು ಪ್ರಾಣಿ– ಪಕ್ಷಿಗಳನ್ನು ಬೇಟೆಮಾಡಿ ಮಾಂಸ ಸಂಗ್ರಹಣೆ ಮಾಡುವುದನ್ನು ಕಾನೂನು ನಿಷೇಧಿಸಿದೆ. ಇದರಿಂದ ಕಾಡುಪ್ರಾಣಿಯ ಮಾಂಸವು ತಿನ್ನಲು ಸಿಗುವುದಿಲ್ಲ. ಅಂಥ ಗುಣವುಳ್ಳ ಮಾಂಸವನ್ನು ಪಡೆಯಬೇಕೆಂದಲ್ಲಿ ಅವುಗಳು ಸಹಜವಾಗಿ ವಾಸಿಸುವ ವಾತಾವರಣದಲ್ಲಿ ಬೆಳೆಸಬೇಕು. ಅವುಗಳಿಗೆ ಪಾರಂಪರಿಕ ಆಹಾರ ಸೇವಿಸಲು ಅವಕಾಶ ಮಾಡಿಕೊಡಬೇಕು. ಇದರಿಂದ ಒಳ್ಳೆಯ ಮಾಂಸವನ್ನು ಪಡೆಯಬಹುದು. ಒಳ್ಳೆಯ ಗುಣಗಳುಳ್ಳ ಮಾಂಸ ಭಕ್ಷ್ಯಣೆಯಿಂದ ಇರುವ ರೋಗವು ಉಲ್ಬಣವಾಗಲಾರದು. ಹೊಸದಾಗಿ ರೋಗದ ಉತ್ಪತ್ತಿಯೂ ಆಗಲಾರದು.

ಕೊರೊನೋತ್ತರ ಕಾಲದಲ್ಲಿ ಹುಟ್ಟಿರುವ ಮಾಂಸ ಭಕ್ಷಣೆಯ ವಾಗ್ವಾದದ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾಯಿತು. ಅಂತಿಮವಾಗಿ ‘ನಿಮ್ಮ ದೇಹ ಯಾವುದನ್ನು ತಕರಾರಿಲ್ಲದೆ ಸ್ವೀಕರಿಸುತ್ತದೋ ಅದನ್ನು ತಿನ್ನಿ’ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.