ADVERTISEMENT

PV Web Exclusive: ಎಳ್ಳು ಎಲ್ಲೆಲ್ಲು…

ಸುಮಾ ಬಿ.
Published 9 ಜನವರಿ 2021, 7:37 IST
Last Updated 9 ಜನವರಿ 2021, 7:37 IST
ಬಾಯಲ್ಲಿ ನೀರೂರಿಸುವ ಎಳ್ಳುಂಡೆ
ಬಾಯಲ್ಲಿ ನೀರೂರಿಸುವ ಎಳ್ಳುಂಡೆ   

ಸೌರ ಮಂಡಲದ ಅಧಿಪತಿ ಸೂರ್ಯ ಮಕರ ರಾಶಿ ಪ್ರವೇಶಿಸುವ ಕಾಲ ಮಕರ ಸಂಕ್ರಾಂತಿ. ಉತ್ತರಾಯಣದ ಪುಣ್ಯ ಕಾಲ ಎಂದೇ ಪರಿಗಣಿಸುವ ಈ ದಿನದಂದು ಭಾರತ ಉಪಖಂಡದಲ್ಲಿ ಹಬ್ಬದ ಸಂಭ್ರಮ. ಹಬ್ಬವೆಂದರೆ ಖಾದ್ಯಗಳ ಮೆಲ್ಲುವಿಕೆ, ಸವಿಯುವಿಕೆ ಇರಲೇಬೇಕಲ್ಲವೇ. ಸಂಕ್ರಾಂತಿ ಎಂದೊಡನೆ ದಕ್ಷಿಣ ಭಾರತದ ಮನೆಗಳಲ್ಲಿ ಎಳ್ಳಿನದ್ದೇ ದರ್ಬಾರು. ಬನ್ನಿ, ಎಳ್ಳು ತಿಂದು ಒಳ್ಳೊಳ್ಳೆ ಮಾತಾಡೋಣ...

ರೈತ ಆಸ್ಥೆಯಿಂದ ಹಾಕಿದ ಬೀಜ ಮೊಳಕೆಯೊಡೆದು ಸಮೃದ್ಧ ಪೈರನ್ನು ಕೈಯಲ್ಲಿ ಹಿಡಿಯುವ ಹೊತ್ತಿದು. ಬೆವರಿನ ಶ್ರಮದ ಫಲ ಕಾಣುವ ಖುಷಿ ರೈತನಿಗಾದರೆ, ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ಎಳ್ಳು ಬೀರುವ ಸಂಭ್ರಮ ಚಿಕ್ಕ ಮಕ್ಕಳದ್ದು. ಬಗೆ ಬಗೆಯ ಖಾದ್ಯ ತಯಾರಿಸಿ ಫಲ ನೀಡಿದ ಭೂತಾಯಿಗೆ ಕೃತಜ್ಞತೆ ಹೇಳುವ ಉಮೇದು ಮನೆಯೊಡತಿಯದ್ದು.

ದಕ್ಷಿಣ ಭಾರತದ ಮನೆಗಳಲ್ಲಿ ‘ಸುಗ್ಗಿ ಹಬ್ಬ’ವೆಂದೇ ಜನಜನಿತವಾಗಿರುವ ಮಕರ ಸಂಕ್ರಾಂತಿ ಹೀಗೆ ಒಬ್ಬೊಬ್ಬರಲ್ಲೂ ಒಂದೊಂದು ಭಾವ ಸ್ಫುರಿಸುತ್ತದೆ.

ADVERTISEMENT

ಸಂಕ್ರಾಂತಿ ಹಬ್ಬದಂದು ತಿನಿಸಿನ ವಿಷಯಕ್ಕೆ ಬಂದರೆ ಎಳ್ಳು ತನ್ನ ಅಧಿಪತ್ಯ ಸಾಧಿಸುತ್ತದೆ. ವರ್ಷದ ಇತರೆ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುವ ಎಳ್ಳು ಸಂಕ್ರಾಂತಿಯಂದು ಮಾತ್ರ ಮುನ್ನೆಲೆಗೆ ಬರುತ್ತದೆ. ಬೇರೆ ಬೇರೆ ಖಾದ್ಯ ತಯಾರಿಯಲ್ಲಿ ಅಗತ್ಯವಿದ್ದರೆ ಮಾತ್ರ ಸ್ವಲ್ಪವೇ ಬಳಕೆಯಾಗುವ ಎಳ್ಳಿನದ್ದೇ ಈ ಸಮಯದಲ್ಲಿ ಪಾರಮ್ಯ. ಅಡುಗೆಮನೆ, ಸ್ನಾನದ ಮನೆಯಲ್ಲಿ ಎಳ್ಳಿಗೆ ಅಗ್ರ ಪಟ್ಟ. ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ’ ಎಂಬ ಮಾತು ಎಳ್ಳು ಬೀರುವವರ ಬಾಯಲ್ಲಿ ನಲಿದಾಡುತ್ತದೆ.

ಕರ್ನಾಟಕದ ಬಹುತೇಕರ ಮನೆಗಳಲ್ಲಿ ಸಂಕ್ರಾಂತಿ ಹಬ್ಬದಂದು ಎಳ್ಳು, ಬೆಲ್ಲ, ಒಣಕೊಬ್ಬರಿ, ಹುರಿಗಡಲೆ, ಹುರಿದ ಶೇಂಗಾ ಮಿಶ್ರಣ ಮಾಡಿ ಸವಿಯುತ್ತಾರೆ. ಹೆಣ್ಣುಮಕ್ಕಳು ಮನೆಮನೆಗೂ ಹೋಗಿ ‘ಎಳ್ಳು’ ಬೀರಿ ಹಬ್ಬ ಆಚರಿಸುತ್ತಾರೆ. ಈ ಎಳ್ಳಿನ ಜತೆ ಸಕ್ಕರೆ ಅಚ್ಚು, ಕಬ್ಬು ಸಾಥಿಯಾಗುತ್ತವೆ.

ಎಳ್ಳು ಬೀರಲು ಕಾರಣವೆನ್ನಲಾದ ಪುರಾಣದ ಕಥೆಯೊಂದು ಸಂಕ್ರಾಂತಿ ಹಬ್ಬದ ಜತೆ ತಳುಕು ಹಾಕಿಕೊಂಡಿದೆ. ಹಿಂದೆ ಶಿಲಾಸುರಬನೆಂಬ ರಕ್ಕಸ ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಈ ವರ ರಕ್ಕಸನಲ್ಲಿ ಅಹಂಕಾರ ಹೆಚ್ಚಿಸುತ್ತದೆ. ಲೋಕಪೀಡಕನಾಗುತ್ತಾನೆ. ಆಗ ಸೂರ್ಯ ದೇವ ಮಕರ, ಕರ್ಕ ಎಂಬ ಮಹಿಳೆಯರ ಸಹಾಯ ಪಡೆದು ರಕ್ಕಸನನ್ನು ಸಂಹರಿಸುತ್ತಾನೆ. ಮಕರ ರಕ್ಕಸನ ಹೊಟ್ಟೆ ಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಮಕರನ ಸಾಹಸ ಮೆಚ್ಚಿ ಸೂರ್ಯ ದೇವ ‘ನಿನ್ನನ್ನು ಹಾಗೂ ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹರಸಿದನಂತೆ. ಈ ಕಾರಣದಿಂದ ಎಳ್ಳು ಬೀರುವ ಆಚರಣೆ ಮಕರ ಸಂಕ್ರಮಣದ ಸಮಯದಲ್ಲಿ ಬಂದಿರುವುದಾಗಿ ಕಥೆ ಹೇಳುತ್ತದೆ.

ಸಂಕ್ರಾಂತಿಯ ವಿಶೇಷ ಸಿಹಿ ತಿನಿಸುಗಳು

ಅದೇನೆ ಇರಲಿ, ಸಂಕ್ರಾಂತಿ ಸಮಯದಲ್ಲಿ ಎಳ್ಳು ಬಳಕೆಯ ಹಿಂದೆ ವೈಜ್ಞಾನಿಕ ಕಾರಣವೂ ಉಂಟು. ಚಳಿ ಹಾಗೂ ಶುಷ್ಕ ವಾತಾವರಣದ ಈ ಸಮಯದಲ್ಲಿ ಎಳ್ಳಿನ ಸಾಂಗತ್ಯ ದೇಹಕ್ಕೆ ಅಗತ್ಯವಾಗಿ ಬೇಕು. ದೇಹ ಹೆಚ್ಚು ಉಷ್ಣಾಂಶವನ್ನು ಉತ್ಪಾದಿಸಿ ದೇಹವನ್ನು ಬೆಚ್ಚಗಿರಿಸಿಕೊಳ್ಳಬೇಕಾಗುತ್ತದೆ. ಈ ಬೆಚ್ಚಗಿಡುವ ಪ್ರಕ್ರಿಯೆಗೆ ಎಳ್ಳು ಸಹಕಾರಿಯಾಗುತ್ತದೆ. ಎಳ್ಳಿನಲ್ಲಿ ಎಣ್ಣೆ ಅಂಶ ಸಮೃದ್ಧವಾಗಿದ್ದು, ಪ್ರೊಟೀನ್‌, ಕ್ಯಾಲ್ಸಿಯಂ, ಕಾರ್ಬೊಹೈಡ್ರೆಟ್‌ಗಳು ಇವೆ. ಇವೆಲ್ಲವೂ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.

ಎಳ್ಳು– ಬೆಲ್ಲ ಉತ್ತಮ ಸಂಗಾತಿಗಳು. ಬೆಲ್ಲ ದೇಹದ ಬಿಸಿಯನ್ನು ಹೆಚ್ಚಿಸುತ್ತದೆ. ಎಳ್ಳು– ಬೆಲ್ಲ ಎರಡನ್ನೂ ಬೆರೆಸಿ ತಯಾರಿಸಿದ ಉಂಡೆ, ಮಿಠಾಯಿ ಸೇವಿಸಿದರೆ ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿರುವ ಶಾಖ ಹಾಗೂ ಶಕ್ತಿ ಒದಗುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಮೂಳೆ ಸಂದುಗಳ ನೋವು ನಿವಾರಕವಾಗಿಯೂ ಎಳ್ಳು ಕೆಲಸ ಮಾಡುತ್ತದೆ. ಚರ್ಮದ ಮೃದುತ್ವ ಹೆಚ್ಚುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ. ಈ ಕಾರಣಕ್ಕಾಗೇ ನಮ್ಮ ಪೂರ್ವಜರು ಎಳ್ಳು ಬೀರುವ ಸಂಪ್ರದಾಯವನ್ನು ‘ಜಾರಿಗೆ’ ತಂದಿರಬಹುದು.

ಈಗೀಗ ಬಹುತೇಕರು ಎಳ್ಳು– ಬೆಲ್ಲದ ಮಿಶ್ರಣದ ಜತೆ ಅಂಗಡಿಯಲ್ಲಿ ಸಿಗುವ ಬಣ್ಣ ಬಣ್ಣದ ಜೀರಿಗೆ ಪೆಪ್ಪರ್‌ ಮಿಂಟ್‌ ಸೇರಿಸುವರು. ಅವನ್ನು ಮಕ್ಕಳು ಹೆಕ್ಕಿ ಹೆಕ್ಕಿ ತಿನ್ನುತ್ತವೆ. ಸಕ್ಕರೆಯಿಂದ ತಯಾರಾಗುವ ಈ ಜೀರಿಗೆ ಪೆಪ್ಪರ್‌ ಮಿಂಟ್‌ ಮಕ್ಕಳ ಆಕರ್ಷಣೆಗೆ ಒಳಗಾಗಿವೆ. ಆದರೆ ಬೆಲ್ಲದ ಜತೆ ಜೀರಿಗೆ ಅಷ್ಟು ರುಚಿಸುವುದಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಈಗ ಸಿದ್ಧ ‘ಎಳ್ಳು ತಟ್ಟೆ’ಗಳೇ ಸಿಗುತ್ತವೆ. ತುಸು ದುಬಾರಿ ಎನಿಸಿದರೂ ಒತ್ತಡದ ಬದುಕಿಗೆ ಅವರು ವರದಾನವಾಗಿವೆ. ಎಳ್ಳು ಹುರಿದು, ಬೆಲ್ಲ, ಕೊಬ್ಬರಿಯ ತುಣುಕು ಮಾಡಲು ಸಮಯವಿಲ್ಲ ಎನ್ನುವವರು ಇವನ್ನು ಖರೀದಿಸಿ ಹಬ್ಬ ಆಚರಿಸಬಹುದು. ಮಕ್ಕಳ ಆಕರ್ಷಿಸಲು ಸಂಕ್ರಾಂತಿ ಚಾಕ್ಲೆಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ.

ಸಂಕ್ರಾಂತಿ ಸ್ಪೆಷಲ್ ಚಾಕ್ಲೆಟ್

ಉತ್ತರ ಕರ್ನಾಟಕ ಹಾಗೂ ಅರೆಮಲೆನಾಡಿನ ಕೆಲವೆಡೆ ಸಂಕ್ರಾಂತಿ ಹಬ್ಬದಂದು ಎಳ್ಳು ಹಚ್ಚಿದ ಜೋಳದ ರೊಟ್ಟಿ ತಯಾರಿಸುತ್ತಾರೆ. ಇನ್ನು ಕೆಲವೆಡೆ ಎಳ್ಳು ಕುಟ್ಟಿ ಮೈಗೆ ಪೂಸಿಕೊಂಡು ಹಬ್ಬದ ಸಮಯದಲ್ಲಿ ಅಭ್ಯಂಜನ ಮಾಡುತ್ತಾರೆ.

ಸಂಕ್ರಾಂತಿ ಹಬ್ಬದ ದಿನ ಒಂದೊಂದು ಭಾಗದಲ್ಲಿ ಒಂದೊಂದು ಖಾದ್ಯ ವೈವಿಧ್ಯ ಮೇಳೈಸುತ್ತದೆ. ಹಲವರು ಈ ಹಬ್ಬದಂದು ಒಂದು ದಿನದ ಪ್ರವಾಸ ಕೈಗೊಳ್ಳುವರು. ಊರಿಗೆ ಹತ್ತಿರದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೋ, ನೀರು ಇರುವ ತಾಣಗಳಿಗೋ ಭೇಟಿ ನೀಡಿ ಮನಸನ್ನು ಆಹ್ಲಾದಗೊಳಿಸಿಕೊಳ್ಳುವರು. ಹೀಗೆ ಪ್ರವಾಸಕ್ಕೆ ಹೊರಡುವಾಗ ಊಟದ ಗಂಟು ದೊಡ್ಡದಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳು ಹಾಕಿದ ಸಜ್ಜೆ ಅಥವಾ ಜೋಳದ ರೊಟ್ಟಿ, ಎಣಗಾಯಿ ಪಲ್ಯ, ಬರ್ತಾ, ಮಡಿಕೆ ಕಾಳು, ಮಾದಲಿ, ಗುರೆಳ್ಳು ಚಟ್ನಿ, ಶೇಂಗಾ ಹೋಳಿಗೆ, ಅವರೆಕಾಳು, ಮೊಳಕೆ ಬರಿಸಿದ ಮಡಕೆಕಾಳು ಮತ್ತು ಹೆಸರುಕಾಳು, ಪುಂಡಿ ಪಲ್ಯೆ, ಕೊರೆದ ಹಿಟ್ಟಿನ ಪಲ್ಯ, ಮಿಜ್ಜಿ ಹಿಂಡಿ, ಹೆಸರ ಹಿಟ್ಟು, ಕರಿಗಾಯಿ, ವಿವಿಧ ಬಗೆಯ ಚಟ್ನಿ ಪುಡಿಗಳು, ಬಿರಂಜಿ ಅನ್ನ, ಚಿತ್ರನ್ನ, ಮೊಸರು ಬುತ್ತಿ, ಸಾಸಿವೆ ಬುತ್ತಿ, ಎಳ್ಳು– ಬೆಲ್ಲ ಸೇರಿದಂತೆ ವಿವಿಧ ಖಾದ್ಯಗಳು ಜತೆಗೂಡುತ್ತವೆ.

ಇನ್ನು ಕೆಲವೆಡೆ ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋಧಿ ಪಾಯಸ, ಕಲಬೆರಕೆ ಸೊಪ್ಪು ಸಾರು, ಹಾಗಲಕಾಯಿ ಪಲ್ಯ, ಮೊಸರು ಬಾನ, ಕುಂಬಳಕಾಯಿ ಬರ್ತ, ಕೆಂಪುಮೆಣಸಿನಕಾಯಿ ಚಟ್ನಿ ಹೀಗೆ ಬಗೆ ಬಗೆ ಅಡುಗೆಗಳು ಪ್ರವಾಸದ ಖುಷಿಯನ್ನು ಹೆಚ್ಚಿಸುತ್ತವೆ. ಬುತ್ತಿಯ ಬುಟ್ಟಿ ಹೊತ್ತುಕೊಂಡು ಕೆರೆದಡಕ್ಕೋ, ನದಿ ದಡಕ್ಕೋ ಹೋಗಿ ಉದರ ತಣಿಸಿಕೊಳ್ಳುವುದೇ ಹಬ್ಬ.

ಬೆಲ್ಲದ ಪೊಂಗಲ್‌, ಖಾರದ ಪೊಂಗಲ್‌ ಕೂಡ ಈ ದಿನದ ವಿಶೇಷ ಖಾದ್ಯಗಳು. ತಮಿಳುನಾಡಿನಲ್ಲಿ ಈ ಖಾದ್ಯಗಳು ವಿಶೇಷತೆ ಪಡೆದಿರುತ್ತವೆ.

ಸಂಕ್ರಾಂತಿಯ ವಿಶೇಷ ಎಳ್ಳುಂಡೆ ಹೀಗೆ ಮಾಡಿ

ಬೇಕಾಗುವ ಸಾಮಗ್ರಿಗಳು:ಬೆಲ್ಲ– ಒಂದು ಕಪ್‌,ಬಿಳಿ ಎಳ್ಳು– ಒಂದು ಕಪ್‌,ಏಲಕ್ಕಿ ಪುಡಿ– ಚಿಟಿಕೆ,ನೀರು– ಅರ್ಧ ಕಪ್‌.

ತಯಾರಿಸುವ ವಿಧಾನ: ಎಳ್ಳನ್ನು ಬಾಣಲೆಗೆ ಹಾಕಿ ಚಿಕ್ಕ ಉರಿಯಲ್ಲಿ ಸ್ವಲ್ಪ ಕೆಂಪಗಾಗುವಷ್ಟು ಹುರಿದುಕೊಳ್ಳಬೇಕು. ಬಳಿಕ ಒಂದು ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ. ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ ಬಿಸಿಯಾದ ಬಳಿಕ ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಬೇಕು. ಬೆಲ್ಲದ ಪಾಕಕ್ಕೆ ಹುರಿದುಕೊಂಡಿದ್ದ ಎಳ್ಳು, ಪುಡಿ ಮಾಡಿದ ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸ್ವಲ್ಪ ಬಿಸಿ ಇರುವಾಗಲೇ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಸವಿಯಿರಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಮೂರ್ನಾಲ್ಕು ತಿಂಗಳುಗಳ ಕಾಲ ಕೆಡದಂತೆ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.