ADVERTISEMENT

PV Web Exclusive | ಜಿಹ್ವಾ ಚಾಪಲ್ಯ ಹೆಚ್ಚಿಸುವ ಇನ್‌ಸ್ಟಂಟ್ ಮಿಕ್ಸ್

ಸುಮಾ ಬಿ.
Published 16 ಅಕ್ಟೋಬರ್ 2020, 6:32 IST
Last Updated 16 ಅಕ್ಟೋಬರ್ 2020, 6:32 IST
ಮ್ಯಾಗಿ
ಮ್ಯಾಗಿ   

ನೆಮ್ಮದಿಯಾಗಿ ಕುಳಿತು ತಿನ್ನು, ಉಣ್ಣು ಎನ್ನುವ ಸಾಂಪ್ರದಾಯಿಕ ಮನೋಭಾವಗಳ ನಡುವೆಯೇ, ಸಮಯದ ನಿರ್ವಹಣೆ ಇತ್ಯಾದಿ ಕಾರಣಕ್ಕೆ ತಕ್ಷಣವೇ ಆಹಾರ ತಯಾರಿಸುವ ‘ರೆಡಿ ಟು ಈಟ್‌’ ಇನ್‌ಸ್ಟಂಟ್‌ ಮಿಕ್ಸ್‌ಗಳು ಮಾರುಕಟ್ಟೆಯಲ್ಲಿ ಈಗ ಪ್ರಮುಖವಾಗಿವೆ. ಇವುಗಳಿಗೆ ಅಪಾರ ಬೇಡಿಕೆ. ಬಗೆ ಬಗೆಯ ಈ ಇನ್‌ಸ್ಟಂಟ್‌ ಮಿಕ್ಸ್‌ಗಳು ಬದುಕಿನ ನಾನಾ ಬಗೆಗಳಿಗೂ, ಅಭಿರುಚಿಗಳಿಗೂ ರೂಪಕವಾಗಿವೆ. ಇಂದು (ಅ.16) ವಿಶ್ವ ಆಹಾರ ದಿನ. ಈ ನಿಮಿತ್ತ ಈ ಬರಹ.

---

ಓದುತ್ತ ಕುಳಿತ ಹರೆಯದ ಹುಡುಗಿಗೆ ಇನ್ನಿಲ್ಲದ ಹಸಿವು. ಅಡುಗೆ ಕೋಣೆಯಲ್ಲಿರುವ ಬಾಕ್ಸ್‌ಗಳನ್ನೆಲ್ಲ ತಡಕಾಡಿದರೂ ಏನೂ ಸಿಗಲಿಲ್ಲ. ನಿರಾಸೆಯಿಂದ ಮರಳುತ್ತಿರುವಾಗ ಎಂಟಿಆರ್‌ ರೆಡಿ ಟು ಈಟ್‌ ಪೋಹ (ಅವಲಕ್ಕಿ) ಪ್ಯಾಕೆಟ್‌ ಕಣ್ಣಿಗೆ ಬೀಳುತ್ತದೆ. ಮುಖದಲ್ಲಿ ಮುಗುಳ್ನಗೆ. ಬಿಸಿನೀರು ಕಾಯಿಸಿ ಅದಕ್ಕೆ ಹಾಕುವಳು. ಮೂರೇ ನಿಮಿಷದಲ್ಲಿ ತಿಂಡಿ ಸಿದ್ಧ. ಅಷ್ಟರಲ್ಲೇ ಹಾಜರಿದ್ದ ರೂಂ ಮೇಟ್‌ನೊಂದಿಗೆ ಹಂಚಿಕೊಳ್ಳುವ ಸಂಕಟ. ಮೊದಲು ಎರಡೇ ತುತ್ತು ನೀಡುವ ಆಕೆ ಬಳಿಕ ಇಡೀ ತಿಂಡಿಯನ್ನೇ ಒಟ್ಟಿಗೆ ತಿನ್ನೋಣ ಎನ್ನುವಷ್ಟು ಮುಕ್ತವಾಗುವಳು. ಇಬ್ಬರೂ ಖುಷಿಯಿಂದ ಹಂಚಿಕೊಂಡು ತಿನ್ನಲು ಶುರುಮಾಡುವರು. ಆಗ ಪರದೆ ಮೇಲೆ ‘ಹಂಚಿಕೊಳ್ಳುವ ಬಗೆ’ (way of divide) ಎನ್ನುವ ಅಡಿ ಬರಹ ಬರುತ್ತದೆ.

ADVERTISEMENT

ಮೂರು ವರ್ಷದ ಹಿಂದೆ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಲು ಎಂಟಿಆರ್‌ ಈ ಸಣ್ಣ ಕಿರುಚಿತ್ರ ಬಿಡುಗಡೆ ಮಾಡಿತ್ತು. ಒಂದೂವರೆ ನಿಮಿಷದ ಕಿರುಚಿತ್ರ ಹಲವು ಹೊಳಹುಗಳನ್ನೂ ನೀಡಿತ್ತು. ಅಡುಗೆ ತಯಾರಿಯಲ್ಲಿ ಸ್ವಾತಂತ್ರ್ಯ ಸಾಧಿಸುವ ದಾರಿಯನ್ನೂ ತೋರಿತ್ತು.

***

ಹೀಗೆ ದಿಢೀರ್‌ ಎಂದು ತಿನಿಸು ತಯಾರಿಸಬೇಕು ಎಂದರೆ ಮಾರುಕಟ್ಟೆಯಲ್ಲಿ ಸಿಗುವ ‘ರೆಡಿ ಟು ಈಟ್‌’ ಇನ್‌ಸ್ಟಂಟ್‌ ಆಹಾರಗಳು ಬಹುತೇಕರಿಗೆ ವರವಾಗಿವೆ. ವಿದ್ಯಾಭ್ಯಾಸ, ಉದ್ಯೋಗದ ನಿಮಿತ್ತ ತನ್ನೂರು ಬಿಟ್ಟು ದೂರದಲ್ಲೆಲ್ಲೋ ನೆಲೆಸುವವರಿಗೆ, ದೂರದ ಪ್ರಯಾಣ ಬೆಳೆಸುವವರಿಗೆ, ಪಿಕ್ನಿಕ್‌ ಹೋಗುವವರಿಗೆ ಇನ್‌ಸ್ಟಂಟ್‌ ಆಹಾರಗಳು ಸುಲಭದ ಅಡುಗೆಯ ಸಾಮಗ್ರಿಗಳಾಗಿ ಸಹಾಯಕ್ಕೆ ಒದಗುತ್ತಿವೆ.

ಅವಲಕ್ಕಿ ತಯಾರಿಸಲು ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಅರಿಸಿನ, ಉಪ್ಪು, ಕಡೆಗೆ ಒಂದಷ್ಟು ಶೇಂಗಾ ಎಲ್ಲವನ್ನೂ ಜೋಡಿಸಿಕೊಂಡು ಒಗ್ಗರಣೆ ಮಾಡಿ, ಅವಲಕ್ಕಿ ನೆನೆಸಿಟ್ಟು ನಿಂಬೆಹಣ್ಣು ಬೆರೆಸಿ ತಿಂಡಿ ಸವಿಯಲು ಏನೆಂದರೂ 30 ನಿಮಿಷವಾದರೂ ಬೇಕು. ರೆಡಿ ಟು ಈಟ್‌ ಆ ಪ್ರಕ್ರಿಯೆಯನ್ನು 3 ನಿಮಿಷಕ್ಕೆ ತಂದಿರಿಸಿದೆ. ಒತ್ತಡದ ಬದುಕಿನಲ್ಲಿ ಅಡುಗೆಗೆ ಎಂದು ಹೆಚ್ಚು ಸಮಯ ಮೀಸಲಿಡಲು ಬಹುತೇಕರಿಗೆ ಸಮಯ ಇರುವುದಿಲ್ಲ. ಅಂತಹವರಿಗೆಲ್ಲ ರೆಡಿ ಟು ಈಟ್‌ ಹೆಚ್ಚು ಆಪ್ತ.

ಕಚೇರಿಯಿಂದ ಸುಸ್ತಾಗಿ ಮನೆಗೆ ಬಂದಾಗ, ಬೆಳಿಗ್ಗೆ ತಡವಾಗಿ ಎದ್ದು ಕಚೇರಿಗೆ ಸಮಯವಾದಾಗ, ಸಂಬಂಧಿಕರು ಅಥವಾ ಸ್ನೇಹಿತರು ದಿಢೀರ್‌ ಮನೆಗೆ ಬಂದಾಗ, ದಿಢೀರ್‌ ಎಂದು ಪ್ರಯಾಣ ಬೆಳೆಸುವಾಗ, ಅಷ್ಟೇ ಏಕೆ ಮಕ್ಕಳು ‘ಇದೇ ಬೇಕು’ ಎಂದು ಹಟ ಹಿಡಿದಾಗ ರೆಡಿ ಟು ಈಟ್‌ ಇನ್‌ಸ್ಟಂಟ್‌ಗಳು ಆಪ್ತಮಿತ್ರನಂತೆ ಕಾಣುತ್ತವೆ.

ಜತೆಗೆ ದಿಢೀರ್‌ ಅಡುಗೆ ಮಾಡಲು ಯ್ಯೂಟೂಬ್‌ ಗೆಳತಿಯರೂ ಸಹಾಯಕ್ಕೆ ನಿಲ್ಲುತ್ತಾರೆ. ‘ದಿಢೀರ್‌ ಅಡುಗೆ’ ಎಂದು ಟೈಪಿಸಿದರೆ ಸಾಕು. ನೂರಾರು ಅಡುಗೆ ರೆಸಿಪಿಗಳು ಮೊಬೈಲ್ ಪರದೆ ಮೇಲೆ ತೆರೆದುಕೊಳ್ಳುತ್ತವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಉಂಟಾಗದೆ ಇರದು. ‘ಹತ್ತೇ ನಿಮಿಷದಲ್ಲಿ ಮಾಡಿ ದಿಢೀರ್‌ ದೋಸೆ’, ‘ರಾತ್ರಿ ಉಳಿದ ಅನ್ನದಿಂದ ಮಾಡಿ ದಿಢೀರ್‌ ಇಡ್ಲಿ’, ‘ಅಕ್ಕಿ ಹಿಟ್ಟು ಬಳಸದೆ ಹತ್ತೇ ನಿಮಿಷದಲ್ಲಿ ಮಾಡಿ ಸಾಫ್ಟ್‌ ಪಡ್ಡು’ ಈ ರೀತಿ ಒಕ್ಕಣೆ ಹೊತ್ತು ಯೂಟ್ಯೂಬ್‌ ಸ್ನೇಹಿತೆಯರೂ ಪರದೆ ಮೇಲೆ ಹಾಜರಿ.

ಬೆಳಿಗ್ಗೆ ಎದ್ದಕೂಡಲೇ ಸುಲಭಕ್ಕೆ ಒದಗಿಬರುವುದು ಬ್ರೆಡ್‌. ಮೈದಾ ಬ್ರೆಡ್‌ ಬೇಡವೆಂದರೆ ಗೋಧಿ ಬ್ರೆಡ್‌ ಎಲ್ಲೆಲ್ಲೂ ಸಿಗುತ್ತದೆ. ಗ್ಯಾಸ್‌ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ ಬ್ರೆಡ್‌ ಇಟ್ಟು ಟೋಸ್ಟ್‌ ಮಾಡಿಕೊಂಡರೆ ಆ ದಿನದ ತಿಂಡಿ ರೆಡಿ. ಇದಕ್ಕೆ ಪೌಷ್ಟಿಕಾಂಶ ಸೇರಿಸಿಕೊಳ್ಳಬೇಕೆಂದರೆ ಕ್ಯಾರೆಟ್‌, ಸೌತೆಕಾಯಿ, ಈರುಳ್ಳಿ ಹೀಗೆ ನಮಗೆ ಪ್ರಿಯವಾಗುವ ತರಕಾರಿ ಬಳಸಬಹುದು. ಬೇಕಿದ್ದರೆ ಬ್ರೆಡ್ ನಡುವೆ ಆಮ್ಲೆಟ್‌ ಅಥವಾ ಡ್ರೈ ಫ್ರೂಟ್ಸ್‌ ಇಟ್ಟು ಸವಿಯಬಹುದು. ಇದಕ್ಕೆ ರುಚಿ ಹೆಚ್ಚಿಸಲು ಟೊಮೆಟೊ ಸಾಸ್‌, ಚಿಲ್ಲಿ ಸಾಸ್‌, ಫ್ರೂಟ್‌ ಜಾಮ್‌ ಸಹ ಲಭ್ಯ. ನಮ್ಮ ರುಚಿಗೆ ತಕ್ಕಂತೆ ಬಳಸಿದರಾಯಿತು.

ಓಟ್ಸ್‌ ಕೂಡ ಆರೋಗ್ಯ ಪೂರ್ಣ ಹಾಗೂ ಡಯಟ್‌ನ ಒಂದು ಭಾಗವಾಗಿಯೇ ಹುಟ್ಟಿಕೊಂಡದ್ದು. ಇನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುವ ಚಾಕೋಸ್‌, ಸ್ಯಾಂಡ್‌ವಿಚ್‌, ರೋಲ್‌ಗಳು ಇನ್‌ಸ್ಟಂಟ್‌ ಫುಡ್‌ಗಳ ಕವಲುಗಳು. ಚಿಕ್ಕವರಿದ್ದಾಗ ರೊಟ್ಟಿಗೆ ಖಾರದ ಚಟ್ನಿ ಸುತ್ತಿಕೊಂಡು ಹೋಗುತ್ತಿದ್ದ ಜಾಗದಲ್ಲಿ ಈಗ ತರಹೇವಾರಿ ಸಾಸ್‌, ಜಾಮ್‌ಗಳು ಬಂದಿವೆ. ಶಾಲೆಗೆ ಚಪಾತಿ ರೋಲ್‌ ಒಳಗೆ ಸಾಸ್‌ ಅಥವಾ ಜಾಮ್‌ ಸವರಿ ಚಿಕ್ಕದಾಗಿ ತರಕಾರಿ ತುಂಡುಗಳನ್ನೋ, ಬೆಂದ ಮೊಟ್ಟೆಯ ತುಂಡುಗಳನ್ನೋ ಅಥವಾ ಹಣ್ಣಿನ ತುಂಡುಗಳನ್ನೋ ಇಟ್ಟು ಬಾಕ್ಸ್‌ಗೆ ಹಾಕಿ ಕಳುಹಿಸಿದರೆ ಆ ದಿನ ಬಾಕ್ಸ್‌ ಖಾಲಿಯಾಗೇ ವಾಪಸ್‌ ಬರುತ್ತದೆ. ಪೋಷಕಾಂಶಯುಕ್ತ ಆಹಾರ ತಿನ್ನಿಸಿದ ಸಮಾಧಾನ ತಾಯಿಗಾದರೆ, ಮಗುವಿಗೆ ತನಗಿಷ್ಟದ ಸಾಸ್‌ ನೆಕ್ಕುತ್ತ ಚಪಾತಿ ತಿಂದ ಖುಷಿ. ಹೀಗೇ ಮಕ್ಕಳಾದಿಯಾಗಿ ಎಲ್ಲರ ಬದುಕಿನ ಭಾಗವಾಗೇ ಇನ್‌ಸ್ಟಂಟ್‌ ಫುಡ್‌ಗಳು ಹಾಸುಹೊಕ್ಕಾಗಿವೆ.

ಇನ್ನು ದೋಸೆ, ಇಡ್ಲಿ, ಪಡ್ಡು ಮಾಡಲು ಹಿಂದಿನ ದಿನದಿಂದಲೇ ಶ್ರಮ ಪಡಬೇಕಾದ ಅಗತ್ಯವೂ ಇಲ್ಲ. ಮಾರುಕಟ್ಟೆಯಲ್ಲಿ ಸಿಗುವ ರೆಡಿ ಹಿಟ್ಟು ತಂದು ತವಾ ಮೇಲೆ ದೋಸೆ ಹೊಯ್ದರಾಯಿತು. ಇಡ್ಲಿಗಂತೂ ವೈವಿಧ್ಯಮಯ ರವೆಗಳು ತಯಾರಿರುತ್ತವೆ. ಬೆಳಿಗ್ಗೆ ಎದ್ದು ಒಂದಷ್ಟು ಮೊಸರು ಹಾಕಿ ಕಲೆಸಿ ಹಬೆಯಲ್ಲಿ ಬೇಯಿಸಿದರಾಯಿತು.

ಸಿಹಿ ಪ್ರಿಯರಿಗೂ ಇನ್‌ಸ್ಟಂಟ್‌ ಮಿಕ್ಸ್‌ಗಳು ಇದ್ದೇ ಇವೆ. ಕೇಸರಿಭಾತ್‌, ಚೌಚೌಭಾತ್‌, ಶ್ಯಾವಿಗೆ ಪಾಯಸ, ಜಿಲೇಬಿ, ಜಾಮೂನ್‌ ಹೀಗೆ ಹಲವು ಖಾದ್ಯಗಳನ್ನು ಕೆಲವೇ ನಿಮಿಷದಲ್ಲೇ ತಯಾರಿಸಿ ಸವಿಯಬಹುದು.

ಹೊರಗೆಲ್ಲೊ ಪಿಕ್ನಿಕ್‌ ಹೋದಾಗ ಮಗು ಕೇಸರಿಭಾತ್‌ ಬೇಕು ಎಂದು ರಚ್ಚೆ ಹಿಡಿಯುತ್ತದೆ. ಆಗ ಕೇಸರಿಭಾತ್‌ ಮಿಕ್ಸ್‌, ಬಿಸಿನೀರು ಜತೆಯಲ್ಲಿದ್ದರೆ ಬಿಸಿ ಬಿಸಿ ಕೇಸರಿಭಾತ್‌ ತಯಾರಿಸಿ ಮಗುವನ್ನು ಸಮಾಧಾನಪಡಿಸಬಹುದು. ಅಷ್ಟರಮಟ್ಟಿಗೆ ಇನ್‌ಸ್ಟಂಟ್‌ ಮಿಕ್ಸ್‌ಗಳು ನಮ್ಮ ಜೀವನಶೈಲಿಗೆ ಇಳಿದಿವೆ.

ಇನ್ನು ‘ಇನ್‌ಸ್ಟಂಟ್‌’ ಜನಿಸಿದ್ದಾದರೂ ಎಲ್ಲಿ ಎಂದು ಕೆದಕುತ್ತಾ ಹೋದರೆ 1950ರ ದಶಕಕ್ಕೆ ಮರಳಬೇಕು. 1958ರಲ್ಲಿ ಜಪಾನ್‌ನ ನಿಸಿನ್‌ ಫುಡ್‌ ಪ್ರಾಡಕ್ಟ್ ಕಂಪನಿ ಇನ್‌ಸ್ಟಂಟ್‌ ನೂಡಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಅದಕ್ಕೆ ಚಿಕಿನ್‌ ರಮೆನ್‌ (Chikin Ramen) ಎಂದು ಹೆಸರಿಸಿತು. ಗಗನಯಾನಿಗಳಿಗಾಗಿ ಇಂತಹದ್ದೊಂದು ಇನ್‌ಸ್ಟಂಟ್‌ ತಿನಿಸನ್ನು ಕಂಪನಿ ಸಂಶೋಧಿಸಿತ್ತು. ಬಳಿಕ ಮಾಂಸಾಹಾರಿಗಳನ್ನು ಇದು ಬಹು ಬೇಗ ಸೆಳೆಯಿತು. ವಿಶ್ವದ ಆಹಾರ ಉತ್ಪನ್ನ ಕಂಪನಿಗಳೆಲ್ಲವೂ ಹುಬ್ಬೇರಿಸುವಂತೆ ಮಾಡಿತು. ಆನಂತರ ದೇಶದ ಗಡಿ ಕಾಯುವ ಯೋಧರಿಗೂ ಪೌಷ್ಟಿಕಾಂಶಯುಕ್ತ ಇನ್‌ಸ್ಟಂಟ್‌ ಫುಡ್‌ಗಳ ಸಂಶೋಧನೆ ಆರಂಭವಾಯಿತು. ಈಗ ವಿಶ್ವದ ಎಲ್ಲೆಡೆಯೂ ಚಿಕಿನ್‌ ರಮೆನ್‌ ತನ್ನ ಅಧಿಪತ್ಯ ಸಾಧಿಸಿದೆ. ನಿಧಾನಕ್ಕೆ ‘ಸಸ್ಯಾಹಾರಿ’ ಇನ್‌ಸ್ಟಂಟ್‌ ನೂಡಲ್ಸ್‌ ಕೂಡ ಹುಟ್ಟಿಕೊಂಡವು. ಈಗ ಬೇರೆ ಬೇರೆ ಕಂಪನಿಗಳ ಹೆಸರಲ್ಲಿ ಎಲ್ಲರ ಮನೆಯ ಹೊಸ್ತಿಲು ಪ್ರವೇಶಿವೆ ನೂಡಲ್ಸ್‌.

ತಕ್ಷಣಕ್ಕೆ ಹೊಟ್ಟೆ ತುಂಬಿಸಲು ರೆಡಿ ಟು ಈಟ್‌ ಉತ್ಪನ್ನಗಳು ಸಹಾಯಕ್ಕೆ ಬರುತ್ತವೆ ನಿಜ. ಬರಿ ಹೊಟ್ಟೆ ತುಂಬಿಸಿದರೆ ಸಾಕೆ. ದೇಹಕ್ಕೆ ಪೌಷ್ಟಿಕಾಂಶ ಬೇಡವೇ, ಡಯೆಟ್‌ ಮಾಡುವವರೂ ಬಳಸಬಹುದೇ ಎಂಬ ಪ್ರಶ್ನೆಗಳೂ ಜತೆಯಲ್ಲೇ ಏಳುತ್ತವೆ. ಕೆಲವು ಇನ್‌ಸ್ಟಂಟ್‌ಗಳು ಪೌಷ್ಟಿಕಾಂಶಯುಕ್ತವಾಗಿಯೇ ಇರುತ್ತವೆ. ತೂಕ ಇಳಿಸಲು ಪೂರಕವಾಗಿಯೂ ಇರುತ್ತವೆ. ಹಾಗಂತ ಎಲ್ಲ ಇನ್‌ಸ್ಟಂಟ್‌ಗಳೂ ಪೌಷ್ಟಿಕವಾಗಿ ಇರುತ್ತವೆ ಎಂದು ಗೆರೆ ಎಳೆದಂತೆ ಹೇಳುವಂತೆಯೂ ಇಲ್ಲ. ಕೆಲ ಇನ್‌ಸ್ಟಂಟ್‌ಗಳಿಗೇ ನಾವೊಂದಿಷ್ಟು ಪ್ರೊಟೀನ್‌ಯುಕ್ತ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಉತ್ತಮ ಎನ್ನುವರು ಆಹಾರ ತಜ್ಞರು.

ಪ್ರತಿ ದಿನವೂ ಇನ್‌ಸ್ಟಂಟ್‌ ಆಹಾರ ಸೇವನೆ ಒಳ್ಳೆಯದಲ್ಲ. ಆಹಾರ ಪ್ಯಾಕೆಟ್‌ನಲ್ಲಿ ಇರುವಷ್ಟೂ ದಿನವೂ ಆರೋಗ್ಯಪೂರ್ಣವಾಗೇ ಇರಬೇಕಾದರೆ ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗಾಗಿ ನಿರಂತರ ದೇಹಕ್ಕೆ ಹೋದರೆ ಒಳಿತಲ್ಲ ಎನ್ನುವ ಸಲಹೆ ತಜ್ಞರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.