ADVERTISEMENT

ನಳಪಾಕ | ಮಲೆನಾಡಿನ ರಸಗವಳ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 2:34 IST
Last Updated 3 ಸೆಪ್ಟೆಂಬರ್ 2022, 2:34 IST
ಬಾಳೆಕಾಯಿ ಚಕ್ಕೆ ಪಳದ್ಯ
ಬಾಳೆಕಾಯಿ ಚಕ್ಕೆ ಪಳದ್ಯ   

ನಿಂಬು ಚಟ್ನಿ
ಬೇಕಾಗುವ ಸಾಮಗ್ರಿಗಳು
- ನಿಂಬೆ ಹಣ್ಣು- 4
ಹಸಿಮೆಣಸಿನಕಾಯಿ- 4, ಇಂಗು- 1 ಚಿಟಿಕೆ , ಸಾಸಿವೆ- 1/4 ಚಮಚ ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1 ಎಸಳು.
ತೆಂಗಿನ ತುರಿ- 1 ಕಪ್ಎ ಣ್ಣೆ- 2 ಚಮಚ

ತಯಾರಿಸುವ ವಿಧಾನ- ತೆಂಗಿನಕಾಯಿ ತುರಿ, ಉಪ್ಪು, ಹಸಿಮೆಣಸಿನಕಾಯಿಯ ಚೂರುಗಳನ್ನು ನಿಂಬೆರಸ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. (5 ನಿಮಿಷ ಕಲಸಿಟ್ಟು ನಂತರ ರುಬ್ಬಿದರೆ ಮಿಶ್ರಣವು ಚೆನ್ನಾಗಿ ನೀರು ಬಿಟ್ಟುಕೊಳ್ಳುತ್ತದೆ.) ಬೇರೆ ನೀರು ಹಾಕ ಕೂಡದು. ಅನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಚೆನ್ನಾಗಿ ಬೆರೆಸಿದರೆ ಹುಳಿಖಾರದ ಚಟ್ನಿ ನಿಂಬೆಹಣ್ಣಿನ ಪರಿಮಳದೊಂದಿಗೆ ಬಾಯಲ್ಲಿ ನೀರೂರಿಸುತ್ತದೆ.

ಹಾಗಲಕಾಯಿ ಮುದ್ದೆ ಸಾಸಿವೆ
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ ಚೂರುಗಳು- 5 ಚಮಚ, ಈರುಳ್ಳಿ- 3 ಚಮಚ, ಒಣ ಮೆಣಸು- 5 ಎಳ್ಳು- ಅರ್ಧ ಚಮಚ, ಜೀರಿಗೆ- ಕಾಲು ಚಮಚ ಸಾಸಿವೆ- ಅರ್ಧ ಚಮಚ, ಕಾಯಿ ತುರಿ- 4 ಚಮಚ ಹುಣಸೆಹಣ್ಣು- ಗೋಲಿ ಗಾತ್ರ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 2 ಚಮಚ ಬೆಲ್ಲ- 1 ಚಮಚ

ADVERTISEMENT

ತಯಾರಿಸುವ ವಿಧಾನ: ಹಾಗಲಕಾಯಿಗಳನ್ನು ಸಣ್ಣಗೆ ಹೆಚ್ಚಿ ಉಪ್ಪು ಬೆರೆಸಿ ಇಡಿ. ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಒಣಮೆಣಸಿನಕಾಯಿ, ಎಳ್ಳು ಜೀರಿಗೆ, ಈರುಳ್ಳಿಗಳನ್ನು ಹಸಿಯಾಗಿ ಹಾಕಿ ರುಬ್ಬಿ ಮಸಾಲೆ ತಯಾರಿಸಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಚಟಪಟಾಯಿಸಿ ಹಾಗಲಕಾಯಿಯ ಚೂರುಗಳನ್ನು ಗಟ್ಟಿಯಾಗಿ ಹಿಂಡಿ ಹಾಕಿ ತುಸು ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ರುಬ್ಬಿದ ಮಸಾಲೆ ಮತ್ತು ಬೆಲ್ಲ ಹುಣಸೇರಸ ಹಾಕಿ ಚೆನ್ನಾಗಿ ಕುದಿಸಿದರೆ ಹಾಗಲ ಕಾಯಿಯ ಮುದ್ದೆ ಸಾಸಿವೆ ಸವಿಯಲು ಸಿದ್ಧ.

ಆಲೂಗಡ್ಡೆ ಜಂಪು
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ- 3 ರಿಂದ 4 (ಮದ್ಯಮ ಗಾತ್ರದ್ದು) ಸಾಸಿವೆ- ಕಾಲು ಚಮಚ, ಜೀರಿಗೆ- ಕಾಲು ಚಮಚ, ಬೆಳ್ಳುಳ್ಳಿ- 10 ಎಸಳು, ಹುಣಸೆಹಣ್ಣು- ಅಡಿಕೆ ಗಾತ್ರ, ಎಣ್ಣೆ _ 1 ಕಪ್ (150 ಎಮ್. ಎಲ್.), ಸಕ್ಕರೆ- ಅರ್ಧ ಚಮಚ, ಒಣಮೆಣಸಿನ ಕಾಯಿ- 10, ಉಪ್ಪು- ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಆಲೂಗಡ್ದೆಗಳನ್ನು ಹೋಳು ಮಾಡಿ ಕೊಳ್ಳಿ. ಹೋಳುಗಳಿಗೆ ಉಪ್ಪು, ಸಕ್ಕರೆ, ಸಾಸಿವೆ ಜೀರಿಗೆಗಳನ್ನು ಹಾಕಿ ಹೋಳುಗಳು ಮುಳುವಷ್ಟು ನೀರು ಹಾಕಿ ಬೇಯಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸಿನಕಾಯಿ, ಸಾಸಿವೆ, ಬೆಳ್ಳುಳ್ಳಿ ಹುರಿದುಕೊಳ್ಳಿ. ಹುರಿದ ಮಸಾಲೆಗೆ ಹುಣಸೆಹಣ್ಣು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಆಲೂ ಹೋಳುಗಳಿಗೆ ಬೆರೆಸಿ ಕುದಿಸಿ. ಗ್ರೇವಿ ಸಾಂಬಾರಿಗಿಂತ ಸ್ವಲ್ಪ ದಪ್ಪವಿರಲಿ. ಇದು ಅನ್ನ, ರೊಟ್ಟಿ, ದೋಸೆಗಳಿಗೆ ಒಳ್ಳೆಯ ಕಾಂಬಿನೇಷನ್.

ಟೊಮೆಟೊ ಅಪ್ಪೆಹುಳಿ
ಬೇಕಾಗುವ ಸಾಮಗ್ರಿಗಳು:
ಟೊಮೆಟೊ- 4 ಬೆಳ್ಳುಳ್ಳಿ- 5 ಹಿಲಕು ಜೀರಿಗೆ- 1/4 ಚಮಚ,ಸಾಸಿವೆ- 1/4 ಚಮಚ ಹಸಿಮೆಣಸಿನಕಾಯಿ- 4 ತೆಂಗಿನ ತುರಿ- 2 ಚಮಚ ಬೆಲ್ಲ ಅಥವಾ ಸಕ್ಕರೆ- 1 ಚಮಚ ಎಣ್ಣೆ- 2 ಚಮಚ,ನಿಂಬೆರಸ- 2 ಚಮಚ

ತಯಾರಿಸುವ ವಿಧಾನ- ಟೊಮೆಟೊಗಳನ್ನು ಕತ್ತರಿಸಿ ಹೋಳು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದರ ಜೊತೆಗೆ ಹಸಿಮೆಣಸಿನ ಕಾಯಿ ಕಾಯಿತುರಿಯನ್ನು ಹಾಕಿ ಒಟ್ಟಿಗೆ ಬೇಯಿಸಿಕೊಳ್ಳಿ. ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಬೆಲ್ಲ ನಿಂಬೆರಸ ಹಾಕಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಬೆಳ್ಳುಳ್ಳಿ ಒಗ್ಗರಣೆ ಮಾಡಿದರೆ ವಿಭಿನ್ನ ರುಚಿಯ ಟೊಮೆಟೊ ಅಪ್ಪೇಹುಳಿ ಅನ್ನದ ಜೊತೆ ಸವಿಯಲು ಸಿದ್ಧ.

ಬಾಳೆಕಾಯಿ ಚಕ್ಕೆ ಪಳದ್ಯ
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ- 2, ಹಸಿಮೆಣಸು- 4 ಒಣಮೆಣಸು- 2, ತೆಂಗಿನ ತುರಿ- 2 ಚಮಚ ಬೆಳ್ಳುಳ್ಳಿ- 4 ಎಸಳು, ನಿಂಬೆಹಣ್ಣು- 1 ಜೀರಿಗೆ- 1/4 ಚಮಚ ಸಾಸಿವೆ- 1/4 ಚಮಚ, ಕಾಳುಮೆಣಸು 1/4 ಚಮಚ

ತಯಾರಿಸುವ ವಿಧಾನ- ಪಾತ್ರೆಗೆ ಬಾಳೆಕಾಯಿ ಹೋಳುಗಳು, ಹಸಿಮೆಣಸಿನಕಾಯಿ, ಉಪ್ಪು ಹಾಕಿ ಹೋಳುಗಳು ಮುಳುಗುವಷ್ಟು ನೀರು ಹಾಕಿ ಬೇಯಿಸಿಕೊಳ್ಳಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, ಕಾಳುಮೆಣಸು, ಜೀರಿಗೆ ಮತ್ತು ನಾಲ್ಕು ಬೇಯಿಸಿದ ಬಾಳೆಕಾಯಿ ಹೋಳುಗಳನ್ನು ಹಾಕಿ ನುಣ್ಣಗೆ ರುಬ್ಬಿ ಮಸಾಲೆ ತಯಾರಿಸಿ ಬೇಯಿಸಿದ ಬಾಳೆಕಾಯಿ ಮಿಶ್ರಣಕ್ಕೆ ಸೇರಿಸಿ ಕುದಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ, ಜೀರಿಗೆ, ಸಾಸಿವೆ, ಒಣಮೆಣಸಿನ ಚೂರುಗಳನ್ನು ಒಗ್ಗರಣೆ ಹಾಕಿದರೆ ಬಾಳೆಕಾಯಿ ಚಕ್ಕೆ ಪಳದ್ಯ ಸಿದ್ಧ. ಬಡಿಸುವಾಗ ನಿಂಬೆರಸ ಸೇರಿಸಿ. ಇದು ಬಿಸಿ ಬಿಸಿಯಾಗಿ ಅನ್ನದ ಜೊತೆಗೆ ಊಟಕ್ಕೆ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.