ADVERTISEMENT

ರೆಸಿಪಿ: ಉರುಲಿ ದೋಸೆ, ಅಡೈ ದೋಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 3:30 IST
Last Updated 24 ಏಪ್ರಿಲ್ 2021, 3:30 IST
ಉರುಲಿ ದೋಸೆ, ಮೆಂತ್ಯೆ ದೋಸೆ, ಅಡೈ ದೋಸೆ
ಉರುಲಿ ದೋಸೆ, ಮೆಂತ್ಯೆ ದೋಸೆ, ಅಡೈ ದೋಸೆ   

ಉರುಲಿ ದೋಸೆ
ಬೇಕಾಗುವ ಸಾಮಗ್ರಿಗಳು: ಕುಚ್ಚಲಕ್ಕಿ – 2 ಕಪ್‌, ದೋಸೆಅಕ್ಕಿ – 2 ಕಪ್‌, ತೆಂಗಿನತುರಿ – ಒಂದೂವರೆ ಕಪ್‌, ನೀರು – ಬೇಕಾದಷ್ಟು, ಉಪ್ಪು – ರುಚಿಗೆ ತಕ್ಕಷ್ಟು, ಈರುಳ್ಳಿ – 3, ಹಸಿಮೆಣಸು – 2, ಕರಿಬೇವು – 2 ಎಸಳು, ಶುಂಠಿ – 1 ಇಂಚು, ತೆಂಗಿನೆಣ್ಣೆ – ಕಾಯಿಸಲು

ತಯಾರಿಸುವ ವಿಧಾನ: ದೋಸೆಅಕ್ಕಿ ಹಾಗೂ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಅದನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನತುರಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. ನಂತರ ಮೂರು ಈರುಳ್ಳಿ, ಹಸಿಮೆಣಸು, ಕರಿಬೇವು ಹಾಗೂ ಶುಂಠಿಯನ್ನು ಚಿಕ್ಕದಾಗಿ ಹೆಚ್ಚಿ ಹಾಕಿ ಮಿಶ್ರಣ ಮಾಡಿ. ಉರುಲಿ(ಬಾಣಲೆ)ಯನ್ನು ಬಿಸಿ ಮಾಡಿ ಬಿಸಿಯಾದ ಮೇಲೆ ತೆಂಗಿನೆಣ್ಣೆ ಹಚ್ಚಿ, ಅದರ ಮೇಲೆ ದೋಸೆಹಿಟ್ಟು ಜಾಸ್ತಿ ಹಾಕಿ. ತೆಂಗಿನೆಣ್ಣೆ ಚಿಮುಕಿಸಿ. ಮಗುಚಿ ಹಾಕಿ. ಎರಡೂ ಕಡೆ ಚೆನ್ನಾಗಿ ಬೆಂದ ಮೇಲೆ ತೆಗೆಯಿರಿ. ಇದು ತೆಂಗಿನೆಣ್ಣೆ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಅಡೈ ದೋಸೆ
ಬೇಕಾಗುವ ಸಾಮಗ್ರಿಗಳು: ದೋಸೆಅಕ್ಕಿ – ಎರಡೂವರೆ ಕಪ್‌, ತೊಗರಿಬೇಳೆ – ಅರ್ಧ ಕಪ್‌, ಕಡಲೆಬೇಳೆ – ಅರ್ಧ ಕಪ್‌, ಹೆಸರುಬೇಳೆ – ಅರ್ಧ ಕಪ್‌, ಉದ್ದಿನಬೇಳೆ – ಅರ್ಧ ಕಪ್‌, ಹಸಿಮೆಣಸು – 2, ಶುಂಠಿ – 1 ಇಂಚು, ನೀರು – ಬೇಕಾದಷ್ಟು, ಉಪ್ಪು – ರುಚಿಗೆ, ಈರುಳ್ಳಿ – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಬೇವಿನಸೊಪ್ಪು

ADVERTISEMENT

ತಯಾರಿಸುವ ವಿಧಾನ: ಅಕ್ಕಿ ಹಾಗೂ ಬೇಳೆಗಳನ್ನು ತೊಳೆದು 5 ರಿಂದ 6 ಗಂಟೆ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಹಸಿಮೆಣಸು ಹಾಗೂ ಶುಂಠಿ, ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಹಿಟ್ಟು ಮಂದವಾಗಿರಲಿ. ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸಣ್ಣಗೆ ಹೆಚ್ಚಿ. ಕಾವಲಿ ಬಿಸಿ ಮಾಡಿ ದೋಸೆ ಹಾಕಿ. ಅದರ ಮೇಲೆ ಹೆಚ್ಚಿಕೊಂಡ ಸಾಮಗ್ರಿಗಳನ್ನು ಉದುರಿಸಿ. ತುಪ್ಪ ಅಥವಾ ಎಣ್ಣೆ ಹಾಕಿ ಮುಚ್ಚಿ ಗರಿಗರಿಯಾಗಿ ಬೇಯಿಸಿ. ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮೆಂತ್ಯೆ ದೋಸೆ
ಬೇಕಾಗುವ ಸಾಮಗ್ರಿಗಳು: ದೋಸೆಅಕ್ಕಿ – 6 ಕಪ್, ಉದ್ದಿನಬೇಳೆ – ಮುಕ್ಕಾಲು ಕಪ್‌, ಮೆಂತ್ಯೆ – ಕಾಲು ಕಪ್‌, ದಪ್ಪ ಅವಲಕ್ಕಿ – ಕಾಲು ಕಪ್‌, ಎಣ್ಣೆ – ಕಾಯಿಸಲು, ತುಪ್ಪ – ಸ್ವಲ್ಪ

ತಯಾರಿಸುವ ವಿಧಾನ: ಅಕ್ಕಿ, ಉದ್ದಿನಬೇಳೆ ಹಾಗೂ ಮೆಂತ್ಯೆಯನ್ನು ತೊಳೆದು 6 ಗಂಟೆಗಳ ಕಾಲ ನೆನೆ ಹಾಕಿ. ನಂತರ ತೊಳೆದ ಉದ್ದಿನಬೇಳೆಗೆ ಬೇಕಾದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿಗೆ ಒಂದು ಕಪ್ ಅವಲಕ್ಕಿ ಸೇರಿಸಿ 15 ನಿಮಿಷ ನೆನೆಸಿ. ಅದನ್ನು ಮೆಂತ್ಯೆಯೊಂದಿಗೆ ಸೇರಿಸಿ ರುಬ್ಬಿಕೊಳ್ಳಿ. ಎಲ್ಲಾ ಹಿಟ್ಟನ್ನು ಮಿಶ್ರಣ ಮಾಡಿ ಉಪ್ಪು ಸೇರಿಸಿ ಎಂಟು ಗಂಟೆ ಕಾಲ ನೆನೆಸಿಡಿ. ಮರುದಿನ ಹಿಟ್ಟಿನಿಂದ ದೋಸೆ ಮಾಡಿ ತಿನ್ನಿ. ಇದು ಕೆಂಪುಚಟ್ನಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.