ADVERTISEMENT

ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 4:32 IST
Last Updated 18 ಸೆಪ್ಟೆಂಬರ್ 2021, 4:32 IST
ನಾಟಿ ಸ್ಟೈಲ್ ಚಿಕನ್ ಚಾಪ್ಸ್
ನಾಟಿ ಸ್ಟೈಲ್ ಚಿಕನ್ ಚಾಪ್ಸ್   

ನಾಟಿ ಶೈಲಿ ಚಿಕನ್ ಚಾಪ್ಸ್

ಬೇಕಾಗುವ ಸಾಮಗ್ರಿಗಳು: ಚಿಕನ್ - 1 ಕೆಜಿ, ಈರುಳ್ಳಿ - 1, ಟೊಮೆಟೊ - 1, ಬೆಳ್ಳುಳ್ಳಿ - 15, ಗೋಡಂಬಿ - 20, ಹಸಿಮೆಣಸಿನಕಾಯಿ - 8, ಕಾಳುಮೆಣಸು -1 ಟೀ ಚಮಚ, ಕೊತ್ತಂಬರಿ - 1 ಟೇಬಲ್ ಚಮಚ, ಪುದಿನಾ ಹಾಗೂ ಕೊತ್ತಂಬರಿ ಸೊಪ್ಪು ಸ್ವಲ್ಪ, ಚಕ್ಕೆ – 1 ಇಂಚು, ಲವಂಗ – 6, ಏಲಕ್ಕಿ – 2, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2 ಚಮಚ, ಅರಿಸಿನ – ಅರ್ಧ ಚಮಚ, ಕರಿಬೇವು ಸ್ವಲ್ಪ.

ತಯಾರಿಸುವ ವಿಧಾನ: ಈರುಳ್ಳಿ ಹಾಗೂ ಕರಿಬೇವನ್ನು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕುಕರ್‌ಗೆ 2 ಚಮಚ ಎಣ್ಣೆ ಹಾಕಿ, ಕಾದ ನಂತರ ಈರುಳ್ಳಿ ಹಾಗೂ ಕರಿಬೇವನ್ನು ಹಾಕಿ ಹುರಿದುಕೊಳ್ಳಿ. ಅದಕ್ಕೆ ರುಬ್ಬಿದ ಮಸಾಲೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ ಹಾಕಿ. ಎಣ್ಣೆ ಬಿಡುವವರೆಗೂ ಹುರಿದುಕೊಂಡು, ನಂತರ ಚಿಕನ್ ಸೇರಿಸಿ ಐದು ನಿಮಿಷ ಬಾಡಿಸಿ. ಬೇಕಾಗುವಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ ಒಂದು ಕೂಗು ಕೂಗಿಸಿದರೆ, ನಾಟಿ ಶೈಲಿಯ ಚಿಕನ್ ಚಾಪ್ಸ್ ರೆಡಿ.

ADVERTISEMENT

ಚಿಕನ್ ಲಿವರ್ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು: ಚಿಕನ್ ಲಿವರ್ – ಅರ್ಧ ಕೆಜಿ, ಈರುಳ್ಳಿ – 1, ಟೊಮೆಟೊ – 1, ಹಸಿಮೆಣಸಿನಕಾಯಿ – 3, ಕರಿಬೇವು - ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ, ಕಾಳುಮೆಣಸಿನಪುಡಿ – 1 ಚಮಚ, ಕೆಂಪು ಮೆಣಸಿನಕಾಯಿಪುಡಿ ಅರ್ಧ ಚಮಚ, ಧನಿಯಾ ಪುಡಿ – 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅರಿಸಿನ – ಕಾಲು ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ: ಒಂದು ಬಾಣಲೆಯನ್ನು ಬಿಸಿಗಿಟ್ಟು, ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಚಿಕನ್ ಲಿವರ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಲಿವರ್‌ ಅನ್ನು ಬಾಡಿಸಿಕೊಳ್ಳಿ. ಇದಕ್ಕೆ ನೀರು ಸೇರಿಸುವ ಅವಶ್ಯಕತೆ ಇಲ್ಲ. ಲಿವರ್ ಬೆಂದ ನಂತರ ಕಾಳುಮೆಣಸಿನ ಪುಡಿ, ಗರಂಮಸಾಲೆ ಸೇರಿಸಿ ಮತ್ತೆ 2 ನಿಮಿಷ ಬಾಡಿಸಿಕೊಂಡು ಕೊನೆಯದಾಗಿ ಕೊತ್ತಂಬರಿಯನ್ನು ಸೇರಿಸಿದರೆ ಚಿಕನ್ ಲಿವರ್ ಪೆಪ್ಪರ್ ಡ್ರೈ ಸಿದ್ಧ.

ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು

ರುಬ್ಬಲು ಬೇಕಾಗುವ ಸಾಮಗ್ರಿಗಳು: ಈರುಳ್ಳಿ – 1, ಬೆಳ್ಳುಳ್ಳಿ – 20, ಶುಂಠಿ – 1 ಇಂಚು, ಕೆಂಪು ಮೆಣಸಿನಕಾಯಿ – 6, ಮೆಣಸು – 1 ಟೀ ಚಮಚ, ಹುರಿಗಡಲೆ – 1 ಟೀ ಚಮಚ, ಗಸೆಗಸೆ – 1 ಟೀ ಚಮಚ, ಚಕ್ಕೆ – 1 ಇಂಚು, ಲವಂಗ – 6, ಕೊತ್ತಂಬರಿ ಪುಡಿ – 2 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ತೆಂಗಿನತುರಿ – ಅರ್ಧ ಹೋಳು (ಈ ಎಲ್ಲಾ ಪದಾರ್ಥಗಳನ್ನು ಒಂದು ಟೀ ಚಮಚ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಿ). 1 ಟೇಬಲ್ ಚಮಚ ಹುಚ್ಚೆಳ್ಳನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ರುಬ್ಬಿದ ನಂತರ, ಸೋಸಿ ಹಾಲು ತೆಗೆದಿಟ್ಟುಕೊಳ್ಳಿ.

ತಯಾರಿಸುವ ವಿಧಾನ: ಕುಕರ್‌ಗೆ 2 ಟೇಬಲ್ ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ನಾಟಿ ಕೋಳಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅರಿಸಿನ ಪುಡಿ ಹಾಕಿ 5 ನಿಮಿಷ ಬಾಡಿಸಿಕೊಳ್ಳಿ. ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್‌ ಕೂಗಿಸಿ. ನಂತರ ಇದಕ್ಕೆ ರುಬ್ಬಿಕೊಂಡ ಹುಚ್ಚೆಳ್ಳಿನ ಹಾಲನ್ನು ಸೇರಿಸಿ ಒಂದು ಕುದಿ ಕುದಿಸಿದರೆ ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಮುದ್ದೆಯೊಂದಿಗೆ ಸವಿಯಲು ಸಿದ್ಧ.

(ಲೇಖಕಿ: ಹೇಮಾಸ್ ಕುಕಿಂಗ್‌ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.