ADVERTISEMENT

ಪತ್ರೊಡೆ, ಹಲಸಿನ ಕಾಯಿ ಕಬಾಬ್‌

ರಶ್ಮಿ ಭಟ್ಟ
Published 12 ಜೂನ್ 2021, 5:58 IST
Last Updated 12 ಜೂನ್ 2021, 5:58 IST
 ಹಲಸಿನ ಕಾಯಿ ಕಬಾಬ್‌
 ಹಲಸಿನ ಕಾಯಿ ಕಬಾಬ್‌   

ಪತ್ರೊಡೆ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್‌, ತೊಗರಿಬೇಳೆ – ಅರ್ಧ ಕಪ್, ಕೊತ್ತಂಬರಿ ಕಾಳು – 1 ಕಪ್‌, ಉದ್ದಿನಬೇಳೆ – 1 ಚಮಚ, ಜೀರಿಗೆ – 1 ಚಮಚ, ಒಣಮೆಣಸು – 8, ಬ್ಯಾಡಗಿ ಮೆಣಸು – 6, ಎಣ್ಣೆ – 1 ಚಮಚ, ಇಂಗು – ಚಿಟಿಕೆ, ಹುಣಸೆಹಣ್ಣು – ನಿಂಬೆ ಗಾತ್ರದ್ದು, ಉಪ್ಪು – ರುಚಿಗೆ, ಬೆಲ್ಲ – 1 ತುಂಡು, ಕೆಸುವಿನ ಎಲೆ – 15.

ತಯಾರಿಸುವ ವಿಧಾನ: ಅಕ್ಕಿ ಹಾಗೂ ತೊಗರಿಬೇಳೆಯನ್ನು ತೊಳೆದು 4 ರಿಂದ 5 ಗಂಟೆಗಳ ಕಾಲ ನೆನೆ ಹಾಕಿ. ಪ್ಯಾನ್ ಬಿಸಿ ಮಾಡಿ ಅದಕ್ಕೆ ಕೊತ್ತಂಬರಿ ಕಾಳು, ಜೀರಿಗೆ, ಉದ್ದಿನಬೇಳೆ, ಮೆಣಸು, ಸ್ವಲ್ಪ ಎಣ್ಣೆ, ಚಿಟಿಕೆ ಇಂಗು ಸೇರಿಸಿ ಹುರಿಯಿರಿ. ಮಿಕ್ಸಿಯಲ್ಲಿ ಅಕ್ಕಿ, ತೊಗರಿಬೇಳೆ ತೊಳೆದು ಹಾಕಿ ಅದಕ್ಕೆ ಹುರಿದ ಸಾಮಗ್ರಿಗಳನ್ನು ಸೇರಿಸಿ. ಅದಕ್ಕೆ ಹುಣಸೆಹಣ್ಣು, ಉಪ್ಪು, ಬೆಲ್ಲ, ನೀರು ಸೇರಿಸಿ ಮಂದವಾಗಿ ರುಬ್ಬಿಕೊಳ್ಳಿ. ಕೆಸುವಿನ ಎಲೆಯನ್ನು ತೊಳೆದು ಹಿಂಬದಿ ದಂಟನ್ನು ತೆಗೆದು ಎಲೆಗೆ ರುಬ್ಬಿದ ಮಿಶ್ರಣ ತೆಳುವಾಗಿ ಹಚ್ಚಿ. ಎಲೆಯನ್ನು ಸುರುಳಿಯಾಕಾರಕ್ಕೆ ಮಡಿಸಿ ಬಾಳೆಯ ನಾರಿನಿಂದ ಕಟ್ಟಿ. ಅದನ್ನು ಹಬೆಯಲ್ಲಿ ಇಟ್ಟು 40 ನಿಮಿಷ ಬೇಯಿಸಿ. ನಂತರ ದಾರ ಬಿಚ್ಚಿ ಅದನ್ನು ಸುರುಳಿ ಸುರುಳಿಯಾಗಿ ಕತ್ತರಿಸಿ. ತವಾ ಇರಿಸಿ ಬಿಸಿಯಾದ ಮೇಲೆ ಎಣ್ಣೆ ಸವರಿ ಪತ್ರೊಡೆ ತುಂಡುಗಳನ್ನು ಇರಿಸಿ ಎರಡೂ ಬದಿ ಕಾಯಿಸಿ. ಈಗ ಬಿಸಿ ಬಿಸಿ ಪತ್ರೊಡೆ ತಿನ್ನಲು ರೆಡಿ.

ADVERTISEMENT

ಹಲಸಿನ ಕಾಯಿ ಕಬಾಬ್‌

ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ – ತೊಳೆ ಬಿಡಿಸಿದ್ದು 1 ಕಪ್‌, ಕಡಲೆಹಿಟ್ಟು – 1/4 ಕಪ್‌, ಅಕ್ಕಿಹಿಟ್ಟು – ಮುಕ್ಕಾಲು ಕಪ್‌, ಉಪ್ಪು, ಅರಿಸಿನ ಪುಡಿ – ಚಿಟಿಕೆ, ಖಾರದಪುಡಿ – 2 ಚಮಚ, ಶುಂಠಿ–ಬೆಳ್ಳುಳ್ಳಿ – 1 ಚಮಚ, ಕರಿಬೇವಿನ ಎಲೆ – 10, ನೀರು – ಅಗತ್ಯಕ್ಕೆ ತಕ್ಕಷ್ಟು, ಇಂಗು – ಚಿಟಿಕೆ, ಎಣ್ಣೆ – ಕರಿಯಲು.

ತಯಾರಿಸುವ ವಿಧಾನ: ಬಿಡಿಸಿದ ತೊಳೆಯನ್ನು ಎರಡು ತುಂಡಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಉಪ್ಪು, ಖಾರದಪುಡಿ, ಅರಿಸಿನ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕರಿಬೇವು, ನೀರು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಚಿಟಿಕೆ ಇಂಗು ಸೇರಿಸಿ. ಎಣ್ಣೆಯಲ್ಲಿ ಬಣ್ಣ ಬದಲಾಗುವವರೆಗೂ ಕಾಯಿಸಿ. ಇದು ಮಳೆಗಾಲದಲ್ಲಿ ತಿನ್ನಲು ಚೆನ್ನಾಗಿರುತ್ತದೆ.

ಉಡುಪಿ ಗುಳ್ಳ ತವಾ ಫ್ರೈ‌‌‌

ಬೇಕಾಗುವ ಸಾಮಗ್ರಿಗಳು: ಉಡುಪಿ ಗುಳ್ಳ – 1 (ದುಂಡಾಗಿ ಕತ್ತರಿಸಿದ್ದು), ಒಣಮೆಣಸು – 10 ರಿಂದ 12 (ನೀರಿನಲ್ಲಿ ನೆನೆಸಿದ್ದು), ಉಪ್ಪು– ಚಿಟಿಕೆ, ಎಣ್ಣೆ – ಸ್ವಲ್ಪ, ಅಕ್ಕಿಹಿಟ್ಟು – ಸ್ವಲ್ಪ

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಬದನೆಕಾಯಿ ತುಂಡನ್ನು ಹಾಕಿ ಅದಕ್ಕೆ ಉಪ್ಪು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೆನೆಸಿದ ಒಣಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಬದನೆಕಾಯಿ ಹೋಳಿಗೆ ಸೇರಿಸಿ. ಮಿಶ್ರಣ ಬದನೆತುಂಡಿಗೆ ಹಿಡಿಯುವಂತೆ ಚೆನ್ನಾಗಿ ಕಲೆಸಿ. ಅದನ್ನು ಅಕ್ಕಿಹಿಟ್ಟಿನಲ್ಲಿ ಅದ್ದಿ ಕಾಯಿಸಿದ ತವಾಕ್ಕೆ ಎಣ್ಣೆ ಹಚ್ಚಿ ಅದರ ಮೇಲೆ ಎಣ್ಣೆ ಹಚ್ಚಿ. ಸ್ವಲ್ಪ ಕಾದ ಮೇಲೆ ಮಗುಚಿ ಹಾಕಿ. ಇದು ಊಟದ ಜೊತೆ ಅಥವಾ ಹಾಗೇ ತಿನ್ನಲು ಚೆನ್ನಾಗಿರುತ್ತದೆ.

(ಲೇಖಕಿ: ರಶ್ಮೀಸ್ ಗೋರ್ಮೆ ಯುಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.