ADVERTISEMENT

ಡಯೋಡ್‌ನ V-I ಲಕ್ಷಣಗಳು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 19:30 IST
Last Updated 8 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೌತಶಾಸ್ತ್ರ

ನೇರ ಪಕ್ಷಪಾತದಲ್ಲಿ

ಇಲ್ಲಿ ಪ್ರವಾಹವು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಇದನ್ನು ಅಳೆಯಲು ಮಿಲಿ ಅಮ್ಮೀಟರ್ ಬಳಸಲಾಗುತ್ತದೆ. ನೇರಪಕ್ಷಪಾತದಲ್ಲಿ ಪ್ರಾರಂಭದಲ್ಲಿ ಪ್ರವಾಹವು ಉದಾಸೀನ ಮಟ್ಟದಲ್ಲಿದ್ದು ಯಾವಾಗ ಅನ್ವಯಿತ ವೋಲ್ಟೇಜ್‌ ಸೀಮಾ ವಿಭವನ್ನು ಮೀರಿಸುತ್ತದೆಯೋ ಪ್ರವಾಹವು ಗುರುತರ ಪ್ರಮಾಣದಲ್ಲಿ ಹೆಚ್ಚುವುದು. ಈ ವೋಲ್ಟೇಜ್‌ ಅನ್ನು ಹೊಸ್ತಿಲು ವೋಲ್ಟೇಜ್‌ ಎನ್ನುವರು. ಇದು ಜರ್ಮೇನಿಯಂ ಡಯೋಡ್‌ಗೆ 0.2V ಮತ್ತು ಸಿಲಿಕಾನ್ ಡಯೋಡ್‌ಗೆ 0.7 V ಆಗಿರುತ್ತದೆ.

ADVERTISEMENT

ವಿಪರ್ಯಾಯ ಪಕ್ಷಪಾತದಲ್ಲಿ

ಇಲ್ಲಿ ಪ್ರವಾಹದ ಪ್ರಮಾಣವು ತುಂಬಾ ಕಡಿಮೆ ಇರುವುದರಿಂದ ಇದನ್ನು ಅಳೆಯಲು ಮೈಕ್ರೋ ಅಮ್ಮೀಟರ್ ಬಳಸಲಾಗುತ್ತದೆ. ಈ ಪಕ್ಷಪಾತದಲ್ಲಿ ಡಯೋಡ್‌ನ ಪ್ರವಾಹವು ತುಂಬಾ ಕಡಿಮೆ ಮತ್ತು ಪಕ್ಷಪಾತ ವೋಲ್ಟೇಜ್‌ ಅನ್ನು ಬದಲಾಯಿಸಿದರೂ ಸಹ ಪ್ರವಾಹವು ಸ್ಥಿರವಾಗಿ ಉಳಿಯುತ್ತದೆ. ಇದನ್ನು ವಿರ್ಯಾಯ ಪರ್ಯಾಪ್ತ ಪ್ರವಾಹ ಎನ್ನುತ್ತಾರೆ.

ದಿಷ್ಪೀಕಾರಕ

ಸಂಧಿ ಡಯೋಡ್‌ನ ಕೇವಲ ನೇರ ಪಕ್ಷಪಾತದಲ್ಲಿ ಮಾತ್ರ ಪ್ರವಾಹವನ್ನು ತನ್ನ ಮೂಲಕ ಹರಿಯಲು ಅವಕಾಶ ಕಲ್ಪಿಸುತ್ತಿದ್ದು, ಇದನ್ನು ದ್ವಿಮುಖ ದಿವೋಲ್ಟೇಜ್ ಅನ್ನು ದಿಷ್ಪೀಕರಿಸಲು ಬಳಸುತ್ತಾರೆ. ಬಳಸುವ ಮಂಡಲವನ್ನು ದಿಷ್ಪೀಕಾರಕ ಎನ್ನುವರು.

ಅರ್ಧ ಅಲೆ ದಿಷ್ಪೀಕಾರಕ

ಅರ್ಧ ಅಲೆ ದಿಷ್ಪೀಕಾರಕಗಳಲ್ಲಿ ಹೊರ ರೋಧದೊಂದಿಗೆ ಶ್ರೇಣಿಯಲ್ಲಿ ಡಯೋಡ್‌ ಅನ್ನು ಜೋಡಿಸಲಾಗುತ್ತದೆ ಮತ್ತು ಅದಕ್ಕೆ ದ್ವಿಮುಖ ವೋಲ್ಟೇಜ್‌ ಅನ್ನು ಅನ್ವಯಿಸಲಾಗುತ್ತದೆ. ಈ ಸಂದರ್ಭದಲ್ಲಿ ಅನ್ವಯಿಸಿದ ದ್ವಿಮುಖ ವೋಲ್ಟೇಜ್‌ನಲ್ಲಿನ ಅರ್ಧ ಆವರ್ತದಲ್ಲಿ ಡಯೋಡ್‌ ನೇರ ಪಕ್ಷಪಾತದಲ್ಲಿಯೂ ಇನ್ನರ್ಧ ಆವರ್ತದಲ್ಲಿ ವಿಪರ್ಯಾಯ ಪಕ್ಷಪಾತದಲ್ಲಿಯೂ ಇರುತ್ತದೆ. ಆದ್ದರಿಂದ ಇದನ್ನು ಅರ್ಧದಿಷ್ಪೀಕಾರಕ ಎನ್ನುವರು. A ತುದಿಗೆ ಧನ ವೋಲ್ಟೇಜ್‌ ಬಂದಾಗ ಡಯೋಡ್‌ ನೇರ ಪಕ್ಷಪಾತಕ್ಕೆ ಜಾರಿ ವಾಹಕತ್ವವನ್ನು ಪಡೆದುಕೊಳ್ಳುತ್ತದೆ. ಮತ್ತು A ತುದಿಗೆ ಋಣ ವೋಲ್ಟತೆ ಬಂದಾಗ ಡಯೋಡ್‌ ವಿಪರ್ಯಾಯ ಪಕ್ಷಪಾತಕ್ಕೆ ಜಾರಿ ವಾಹಕತ್ವವನ್ನು ಕಳೆದುಕೊಳ್ಳುತ್ತದೆ.

ಇದರಿಂದಾಗಿ ಧನ ಅರ್ಧ ಆವರ್ತ ಮಾತ್ರ ಹೊರೆ ರೋಧನ ಮೂಲಕ ಪ್ರವಹಿಸುತ್ತದೆ. ಇಲ್ಲಿ ಋಣ ಆವರ್ತ ಬಂದಾಗ ನಿರ್ಗತ ವೋಲ್ಟೇಜ್‌ ಉಂಟಾಗುವುದಿಲ್ಲ. ಹೀಗಾಗಿ ಭುಕ್ತ ದ್ವಿಮುಖ ಪ್ರವಾಹ ಅಲೆಯ ಅರ್ಧದಷ್ಟು ಅಲೆ ಮಾತ್ರ ನಿರ್ಗತ ವೋಲ್ಟೇಜ್‌ ಆಗಿ ಪರಿವರ್ತನೆಯಾಗುವುದರಿಂದ ಇದನ್ನು ಅರ್ಧ ಅಲೆ ದಿಷ್ಪೀಕಾರಕವೆಂತಲೂ ಈ ಅಲೆಯನ್ನು ದಿಷ್ಪೀಕರಿಸಿದ ಅಲೆ ಎಂತಲೂ ಕರೆಯುತ್ತಾರೆ.

ಪೂರ್ಣ ಅಲೆ ದಿಷ್ಪೀಕಾರಕ

ಪೂರ್ಣ ಅಲೆ ದಿಷ್ಪೀಕಾರಕಗಳಲ್ಲಿ ಎರಡು ಡಯೋಡ್‌ಗಳ p- ಬದಿಯನ್ನು ಪರಿವರ್ತಕದ ದ್ವಿತೀಯಕ ತುದಿಗಳಿಗೆ ಮತ್ತು ಬದಿಗಳೆರಡನ್ನು ಹೊರ ರೋಧನ (RL) X- ತುದಿಗೆ ಜೋಡಿಸಲಾಗುತ್ತದೆ. ದ್ವಿತೀಯಕ ಮಧ್ಯೆ ಮೋರೆಯನ್ನು ಹೊರೆ ರೋಧಕದ y- ತುದಿಗೆ ಜೋಡಿಸಲಾಗಿದ್ದು ನಿರ್ಗತವನ್ನು x ಮತ್ತು y ತುದಿಗಳ ನಡುವೆ ತೆಗೆದುಕೊಳ್ಳಲಾಗುವುದು. ಇಲ್ಲಿ ತುದಿಯನ್ನು ಹೊರೆ ರೋಧಕ y- ತುದಿಗೆ ಜೋಡಿಸಲಾಗುತ್ತದೆ.

ಒಂದು ಕ್ಷಣದಲ್ಲಿ ಕೇಂದ್ರ ಮೋರೆ ತುದಿಗನುಗುಣವಾಗಿ A ನಲ್ಲಿನ ಭುಕ್ತ ವೋಲ್ಟೇಜ್‌ ಧನವಾದರೆ B - ನಲ್ಲಿ ವೋಲ್ಟೇಜ್‌ ಋಣವಾಗುತ್ತದೆ. ಈ ಸಂದರ್ಭದಲ್ಲಿ ಡಯೋಡ್‌ D1 ನೇರಪಕ್ಷಪಾತದಲ್ಲಿ ಒಂದು ವಾಹಕತೆಯನ್ನು ಪಡೆದುಕೊಳ್ಳುತ್ತದೆ. ಮತ್ತು D2 ಡಯೋಡ್‌ ವಿಪರ್ಯಾಯ ಪಕ್ಷಪಾತದಲ್ಲಿ ಒಂದು ವಾಹಕತೆಯನ್ನು ಕಳೆದುಕೊಳ್ಳುತ್ತದೆ. ಇಲ್ಲಿ ಅರ್ಧ ಆವರ್ತವಿರುವ ಸಂದರ್ಭದಲ್ಲಿ ನಿರ್ಗತ ಪ್ರವಾಹವಿರುತ್ತದೆ. ಅದೇ ರೀತಿ ದ್ವಿಮುಖ ಆವರ್ತಗಳ ಮಾಲಿಕೆಯಲ್ಲಿ ಕೇಂದ್ರ ಮೋರೆ ತುದಿಗನುಗುಣವಾಗಿ A ನಲ್ಲಿನ ವೋಲ್ಟೇಜ್‌ ಋಣವಾದರೆ B ಯಲ್ಲಿನ ವೋಲ್ಟೇಜ್‌ ಧನವಾಗುತ್ತದೆ. ಈ ಸಂದರ್ಭದಲ್ಲಿ D1 ವಿಪರ್ಯಾಯ ಪಕ್ಷಪಾತದಲ್ಲಿ ವಾಹಕತೆಯನ್ನು ಕಳೆದುಕೊಂಡು D2 ನೇರ ಪಕ್ಷಪಾತದಲ್ಲಿ ವಾಹಕತೆಯನ್ನು ಪಡೆದುಕೊಂಡು ನಿರ್ಗತ ಪ್ರವಾಹ ಮತ್ತು ನಿರ್ಗತ ವೋಲ್ಟೇಜ್‌ಗಳನ್ನು ಕೊಡುತ್ತದೆ.

ಹೀಗಾಗಿ ನಿರ್ಗತ ವೋಲ್ಟೇಜ್‌ ಅನ್ನು ಧನ ಅರ್ಧ ಆವರ್ತ ಹಾಗೂ ಋಣ ಅರ್ಧ ಆವರ್ತಗಳೆರಡರಿಂದಲೂ ಪಡೆಯುವುದರಿಂದ ಇದನ್ನು ಪೂರ್ಣ ಅಲೆ ದಿಷ್ಪೀಕಾರಕ ಎನ್ನುವರು ಮತ್ತು ಇದು ದ್ವಿಮುಖ ಪ್ರವಾಹ ಊರ್ಮಿಕೆಯನ್ನು ಸೋಸಲ್ಪಟ್ಟು ಶುದ್ಧವಾದ ಏಕಮುಖ ಪ್ರವಾಹದ ವೋಲ್ಟೇಜ್ ಅನ್ನು ನೀಡುವುದರಿಂದ ಸೋಸುಕಗಳೆಂದೂ ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.