ADVERTISEMENT

ಕೋವಿಡ್‌ ಗುಣಮುಖರಾದ ಬಳಿಕ ವ್ಯಾಯಾಮ ಮಾಡಬಹುದೇ?

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 19:30 IST
Last Updated 6 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಸೋಂಕು ತಗುಲಿ, ಗುಣಮುಖರಾದ ಮೇಲೆ ಮಾಮೂಲಿ ಜೀವನ ನಡೆಸಲು ಸಾಧ್ಯವೇ ಎನ್ನುವುದು ಬಹುತೇಕರನ್ನು ಕಾಡಿರಬಹುದು. ಸೋಂಕು ತಗುಲುವುದಕ್ಕೂ ಮೊದಲು ಇದ್ದ ನಮ್ಮ ಜೀವನಶೈಲಿಗೆ ಮತ್ತೆ ನಾವು ಮರಳಬಹುದೇ ಎನ್ನುವುದು ಎಲ್ಲರ ಪ್ರಶ್ನೆ. ‘ಅದು ಸಾಧ್ಯ ಇದೆ’ ಎನ್ನುತ್ತಾರೆ ವೈದ್ಯರು.

ಆಹಾರ ಪದ್ಧತಿ, ವ್ಯಾಯಾಮ, ಯೋಗ ಮತ್ತಿತರ ನಮ್ಮ ಹಳೆಯ ಅಭ್ಯಾಸಗಳನ್ನು ಖಂಡಿತವಾಗಿ ಮುಂದುವರಿಸಿಕೊಂಡು ಹೋಗಬಹುದು. ಆದರೆ, ಈ ಸೋಂಕು ನಮ್ಮ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ, ಹಿಂದಿನಂತೆ ಸೈಕ್ಲಿಂಗ್‌, ಜಾಗಿಂಗ್‌ ಮುಂತಾದ ದೇಹಕ್ಕೆ ಹೆಚ್ಚು ಶ್ರಮ ಎನಿಸುವಂತಹ ಕಠಿಣ ವ್ಯಾಯಾಮ ಮಾಡುವುದರ ಕುರಿತು ಹಲವರಲ್ಲಿ ಅನುಮಾನಗಳಿರಬಹುದು.

ಸೋಂಕಿನಿಂದ ಬಂದ ಬಳಲಿಕೆ ಹೋಗುವುದಕ್ಕೆ ಹೆಚ್ಚು ಸಮಯವೇ ಬೇಕಾಗಬಹುದು– ಇದು ಸೋಂಕಿನ ತೀವ್ರತೆ ಮತ್ತು ಅದರಿಂದ ಉಂಟಾದ ಪರಿಣಾಮವನ್ನು ಅವಲಂಬಿಸಿದೆ. ಗುಣಮುಖವಾದ ತಕ್ಷಣ ಕಠಿಣ ವ್ಯಾಯಾಮ ಮಾಡಲು ಪ್ರಾರಂಭಿಸಿದರೆ, ಅದು ಹೆಚ್ಚು ಆಯಾಸ ಉಂಟು ಮಾಡಬಹುದು. ಹೀಗಾಗಿ ನಿಧಾನಗತಿಯಲ್ಲಿ ನಮ್ಮ ವ್ಯಾಯಾಮದ ಅಭ್ಯಾಸ ಪ್ರಾರಂಭಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ADVERTISEMENT

ಬಳಲಿಕೆ ಕಡಿಮೆಯಾದ 10– 14 ದಿನಗಳ ನಂತರ ನಿಧಾನವಾಗಿ ವ್ಯಾಯಾಮವನ್ನು ಪ್ರಾರಂಭ ಮಾಡುವುದು ಉತ್ತಮ. ಒಂದು ವೇಳೆ, ರೋಗಲಕ್ಷಣ ಇಲ್ಲದೆಯೇ ಸೋಂಕಿತರಾಗಿದ್ದರೆ ವ್ಯಾಯಾಮವನ್ನು ಬಹುಬೇಗ ಶುರು ಮಾಡಬಹುದು ಎಂದುಕೊಂಡಿದ್ದರೆ ಇದು ತಪ್ಪು ಎನ್ನುತ್ತದೆ ಸಂಶೋಧನೆ. ರೋಗಲಕ್ಷಣಗಳನ್ನು ಹೊಂದಿದವರಿಗಿಂತ, ರೋಗಲಕ್ಷಣ ತೋರಿಸದೇ ಸೋಂಕಿತರಾದವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ವ್ಯಾಯಾಮ ಪುನಃ ಪ್ರಾರಂಭಿಸುವುದು ಹೇಗೆ?

ನೀವು ಭಾರ ಎತ್ತುವ ವ್ಯಾಯಾಮ ಮಾಡುವವರು ಆಗಿದ್ದರೆ, ಸದ್ಯಕ್ಕೆ ಕಡಿಮೆ ಭಾರ ಎತ್ತುವುದು ಒಳ್ಳೆಯದು. ಗುಣಮುಖರಾಗುತ್ತಿದ್ದಂತೆ ನೀವು ಈ ಮೊದಲು ಎತ್ತುತ್ತಿದ್ದ ಭಾರವನ್ನೇ ಈಗಲೂ ಮುಂದುವರಿಸಬಾರದು.

ಈ ಹಿಂದೆ ನೀವು ಒಂದು ನಿಮಿಷದಲ್ಲಿ 50 ಬಸ್ಕಿ ಹೊಡೆಯುತ್ತಿದ್ದು, ಐದು ನಿಮಿಷ ಬಿಟ್ಟು ಮತ್ತೆ ಒಂದು ನಿಮಿಷದಲ್ಲಿ 50 ಬಸ್ಕಿ ಹೊಡೆದಿರಬಹುದು. ಆದರೆ, ಈ ಸಂದರ್ಭದಲ್ಲಿ ಅಷ್ಟು ಬಾರಿ ಬಸ್ಕಿ ಹೊಡೆಯುವುದು ಬೇಡ. ಮೊದಲಿಗೆ ಒಂದು ನಿಮಿಷದಲ್ಲಿ 20 ಮಾಡಿ ದಿನಕಳೆದಂತೆ ಈ ಪ್ರಮಾಣವನ್ನು ಏರಿಸಿಕೊಳ್ಳಿ.

ಸೋಂಕಿತರು ಸಣ್ಣ ಪ್ರಮಾಣದ ರೋಗಲಕ್ಷಣ ಹೊಂದಿದ್ದರೆ, ನೀವು ಮೊದಲು ಮಾಡುತ್ತಿದ್ದ ವ್ಯಾಯಾಮದ ಪ್ರಮಾಣದಲ್ಲಿ ಶೇ 50ರಷ್ಟು ಕಡಿತ ಮಾಡಬೇಕು. ಮೊದಲ ನಾಲ್ಕು ವಾರಗಳನ್ನು ಶೇ 50/ 30/ 20/ 10ರ ಪ್ರಮಾಣದಂತೆ ವಿಂಗಡಿಸಿಕೊಳ್ಳಿ. ಮೊದಲ ವಾರ ಶೇ 50, ಎರಡನೇ ವಾರ ಶೇ 30ರಷ್ಟು ಕಡಿಮೆ ವ್ಯಾಯಾಮ ಮಾಡಬೇಕು. ಗುಣಮುಖರಾದ ಬಳಿಕ, ನಿಮ್ಮ ಆರೋಗ್ಯದ ಮೇಲಾದ ಸೋಂಕಿನ ತೀವ್ರತೆ, ಬಳಲಿಕೆ ನೋಡಿಕೊಂಡು ನಿಧಾನವಾಗಿ ಈ ಶೇಕಡವಾರು ಪ್ರಮಾಣವನ್ನು ಏರಿಸಿಕೊಳ್ಳಬಹುದು. ಇದು ವಾರದಲ್ಲಿ ಅಥವಾ ತಿಂಗಳುಗಳ ಅಂತರದಲ್ಲೂ ಹೆಚ್ಚಿಸಿಕೊಳ್ಳಬಹುದು.

ಮೇಲೆ ಹೇಳಿದ ವಿಧಾನಗಳನ್ನು ನಿಮ್ಮ ದೇಹ ವ್ಯಾಯಾಮಕ್ಕೆ ಹೇಗೆ ಸ್ಪಂದಿಸುತ್ತಿದೆ ಎಂಬುದನ್ನು ನೋಡಿಕೊಂಡು ಮುಂದುವರಿಸಬೇಕು ಎನ್ನುತ್ತಾರೆ ತಜ್ಞರು. ಎದೆ ನೋವು, ಉಸಿರುಗಟ್ಟುವುದು, ಆಯಾಸ, ಸ್ನಾಯು ನೋವು, ಕಣ್ಣು ಮಂಜಾಗುವುದು ಅಥವಾ ಜ್ವರ ಈ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಇದು ಹೃದ್ರೋಗ ಸಮಸ್ಯೆಗೆ ಕಾರಣವಾಗಬಲ್ಲದು.

ನಿಮ್ಮ ಹಳೆಯ ಜೀವನ ಶೈಲಿಗೆ ಮರಳಲು ಸ್ವಲ್ಪ ಸಮಯ ಬೇಕಾಗುತ್ತದೆ. ತುಂಬಾ ನಿಧಾನವಾಗಿ ನಿಮ್ಮ ವ್ಯಾಯಾಮದ ಅಭ್ಯಾಸವನ್ನು, ಅದರ ಪ್ರಮಾಣವನ್ನು, ಸಮಯವನ್ನು ಹೆಚ್ಚಿಸಿಕೊಳ್ಳಿ. ಇದುವೇ ಉತ್ತಮ ಉಪಾಯ ಎನ್ನುವುದು ತಜ್ಞರ ಅಭಿಪ್ರಾಯ.

ಆರೋಗ್ಯ ನೋಡಿಕೊಳ್ಳಿ

ವ್ಯಾಯಾಮ ಮಾಡಲು ಸಾಧ್ಯವಾಗದೇ ಇದ್ದರೆ ಬೇಸರ ಬೇಡ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಕಾಳಜಿ ಬಗ್ಗೆ ಯೋಚಿಸಿ; ಕಾರ್ಯಪ್ರವೃತ್ತರಾಗಿ. ಚೆನ್ನಾಗಿ ನೀರು ಕುಡಿಯಿರಿ, ಒತ್ತಡ ನಿವಾರಣೆ ಮಾಡಿಕೊಳ್ಳುವ ದಾರಿ ಕಂಡುಕೊಳ್ಳಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಕ್ರಿಯೆಗೆ ದೇಹದ ಪ್ರತಿಕ್ರಿಯೆ ಹೇಗಿದೆ ಎನ್ನುವುದನ್ನು ಗಮನಿಸಿ. ವ್ಯಾಯಾಮ ಮಾಡುವ ಸಂದರ್ಭದಲ್ಲಿ ಕೂಡ ದೇಹ ಯಾವ ಬಗೆಯ ರೋಗಲಕ್ಷಣಗಳನ್ನು ತೋರಿಸುತ್ತಿದೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಕೆಲವೊಮ್ಮೆ ನಿಮ್ಮ ದೇಹ ಕಠಿಣ ವ್ಯಾಯಾಮಕ್ಕೆ ಸಿದ್ಧವಾಗಿರಬಹುದು. ಆದರೆ, ಮನಸ್ಸು ಸಿದ್ಧವಿಲ್ಲದೆಯೇ ಇರಬಹುದು. ಈ ಬಗ್ಗೆ ಗಮನಹರಿಸಿ. ಗೊಂದಲ ಮೂಡಿದಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.