ADVERTISEMENT

ಗರ್ಭಿಣಿ ಮತ್ತು ಪ್ರಸವಾನಂತರದ ಪ್ರಕರಣಗಳಲ್ಲಿ ದ್ವಿಗುಣಗೊಂಡ ಕೋವಿಡ್‌ ಸೋಂಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2021, 3:13 IST
Last Updated 17 ಜೂನ್ 2021, 3:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌-19 ಸೋಂಕಿನ ಗುಣಲಕ್ಷಣಗಳು 2ನೇ ಅಲೆಯ ಸಂದರ್ಭ ಗರ್ಭಿಣಿ ಮತ್ತು ಪ್ರಸವಾನಂತರದ ಪ್ರಕರಣಗಳಲ್ಲಿ ಶೇಕಡಾ 28.7ರಷ್ಟು ಹೆಚ್ಚು ಕಾಣಿಸಿಕೊಂಡಿದೆ. ಮೊದಲ ಅಲೆಯಲ್ಲಿ ಈ ಪ್ರಮಾಣ ಶೇಕಡಾ 14.2ರಷ್ಟಿತ್ತು.

ಮಹಿಳೆಯರ ಸಾವಿನ ಪ್ರಮಾಣ(ಕೇಸ್‌ ಫೆಟಲಿಟಿ ರೇಟ್‌, ಸಿಎಫ್‌ಆರ್‌) ವು ಹೆಚ್ಚಾಗಿರುವುದು ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಜ್‌(ಐಸಿಎಂಆರ್‌) ನಡೆಸಿದ ದತ್ತಾಂಶಗಳ ಅಧ್ಯಯನದಲ್ಲಿ ಬಹಿರಂಗಗೊಂಡಿದೆ. ಮೊದಲ ಕೋವಿಡ್‌ ಅಲೆಯಲ್ಲಿ ಶೇಕಡಾ 0.7ರಷ್ಟಿದ್ದ ಸಾವಿನ ಪ್ರಮಾಣ 2ನೇ ಅಲೆಯಲ್ಲಿ ಶೇಕಡಾ 5.7ಕ್ಕೆ ಏರಿಕೆಯಾಗಿದೆ.

ಗರ್ಭಿಣಿ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ಲಸಿಕೆ ಹಾಕಿಸುವುದು ಅತ್ಯಂತ ಉತ್ತಮ ಎಂದಿರುವ ಐಸಿಎಂಆರ್‌, 2ನೇ ಕೋವಿಡ್‌ ಅಲೆಯಿಂದ ಮಹಿಳೆಯರ ಮೇಲೆ ಸಂಭವಿಸಿರುವ ಹೆಚ್ಚಿನ ಪ್ರಮಾಣದ ಹಾನಿಯನ್ನು ದಾಖಲಿಸಿದೆ. ಕೋವಿಡ್‌ ಆರಂಭದಿಂದ ಇಂದಿನ ವರೆಗೆ ತಾಯಂದಿರ ಸಾವಿನ ಪ್ರಮಾಣ ಶೇಕಡಾ 2ರಷ್ಟಿದೆ.

ADVERTISEMENT

ಹಾಲುಣಿಸುತ್ತಿರುವ ಎಲ್ಲ ತಾಯಂದಿರಿಗೆ ಕೋವಿಡ್‌-19 ಲಸಿಕೆಯನ್ನು ನೀಡಬೇಕು ಎಂಬ ಸಲಹೆಯ ನಡುವೆ ವೈದ್ಯಕೀಯ ಪರೀಕ್ಷೆಗಳ ಡೇಟಾಗಳ ಕೊರತೆಯಿಂದ ಗರ್ಭಿಣಿಯರಿಗೆ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿಲ್ಲ.

ನ್ಯಾಷನಲ್‌ ಟೆಕ್ನಿಕಲ್‌ ಅಡ್ವೈಸರಿ ಗ್ರೂಪ್‌ ಆಫ್‌ ಇಮ್ಯುನೈಸೇಷನ್‌(ಎನ್‌ಟಿಎಜಿಐ) ಸಭೆಯಲ್ಲಿ, ಗರ್ಭಿಣಿಯರಿಗೆ ಲಸಿಕೆ ನೀಡುವುದರಿಂದ ಅಪಾಯಕ್ಕೆ ತಂದೊಡ್ಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗಿದ್ದರೂ, ದೀರ್ಘಕಾಲದ ಪ್ರತಿಕೂಲಗಳ ಬಗ್ಗೆ, ಭ್ರೂಣದ ಸುರಕ್ಷತೆ ಬಗ್ಗೆ ಲಸಿಕೆ ನೀಡುವ ಮೊದಲು ಮಹಿಳೆಗೆ ತಿಳಿಸಿ ಹೇಳಬೇಕು ಎಂಬ ಸಲಹೆ ಕೇಳಿ ಬಂದಿದೆ.

ಕೋವಿಡ್‌-19 ವಿರುದ್ಧ ಲಸಿಕೆಯನ್ನು ಗರ್ಭಿಣಿಯರಿಗೆ ನೀಡುವ ಕುರಿತಾಗಿ ಕೇಂದ್ರ ಸರ್ಕಾರವಿನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯು ಗರ್ಭಿಣಿಯರಲ್ಲಿ ಕೋವಿಡ್‌ ಸೋಂಕು ಹೆಚ್ಚಿನ ಅಪಾಯ ತರುವಂತಿದ್ದರೆ ಲಸಿಕೆ ನೀಡಿ ಎಂದು ಸಲಹೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.