ADVERTISEMENT

ಆಮ್ಲಜನಕಮಟ್ಟ ಹೆಚ್ಚಿಸಲು ಪ್ರಾಣಾಯಾಮ

ಉಸಿರಾಟದಸಮಸ್ಯೆ ಕಾಡಿದಾಗ ಆಮ್ಲಜನಕಮಟ್ಟ ಏರಿಸಲು ಸಹಕರಿಸುವ ಪ್ರಾಣಾಯಾಮಗಳು

ಕೃಷ್ಣಿ ಶಿರೂರ
Published 10 ಮೇ 2021, 19:30 IST
Last Updated 10 ಮೇ 2021, 19:30 IST
ನಾಡಿಶೋಧನ (ಅನುಲೋಮ–ವಿಲೋಮ) ಪ್ರಾಣಾಯಾಮ
ನಾಡಿಶೋಧನ (ಅನುಲೋಮ–ವಿಲೋಮ) ಪ್ರಾಣಾಯಾಮ   

ನನ್ನಮ್ಮಂಗೆ ಅರವತ್ತ್ಮೂರು ವಯಸ್ಸು. ಮನೆಯಲ್ಲೇ ಇರುವವರು. ಇದ್ದಕ್ಕಿದ್ದಂತೆ ದೇಹಪೂರ್ತಿ ನೋವು, ವಿಪರೀತ ಕೆಮ್ಮು. ತಲೆನೋವು, ಸ್ವಲ್ಪ ಜ್ವರ, ಸುಸ್ತು, ತಲೆಭಾರ ಕಾಡಿತು. ನನಗ್ಯಾಕೊ ಸಂದೇಹವಾಯಿತು. ಲಕ್ಷಣಗಳೆಲ್ಲವೂ ಕೋವಿಡ್‌ನದೆ ಆಗಿದ್ದವು. ಏನೇ ಆಗಲಿ; ಆಸ್ಪತ್ರೆಗೆ ಹೋಗಿ ಔಷಧ ಮಾಡುವ ಮೊದಲು ಸೀದಾ ಕೋವಿಡ್‌ ಸ್ವ್ಯಾಬ್‌ ಟೆಸ್ಟ್‌ಗೆ ಕರೆದುಕೊಂಡು ಹೋದೆ. ಜೊತೆಗೆ ನನ್ನದೂ ಟೆಸ್ಟ್‌ ಕೊಟ್ಟೆ.

ಮೂರು ದಿನ ಬಿಟ್ಟು ಅಮ್ಮನದು ಪಾಸಿಟಿವ್‌ ಇದೆ ಎಂದು ಕರೆ ಬಂತು. ಅಷ್ಟು ಹೊತ್ತಿಗಾಗಲೇ ಅಮ್ಮ ನಡೆಯದಷ್ಟು ನಿತ್ರಾಣರಾಗಿದ್ದರು. ಜಾಸ್ತಿಯಾಗುತ್ತಲೇ ಸಾಗಿದ ಕೆಮ್ಮಿನಿಂದ ಅವರಿಗೆ ಉಸಿರಾಟದ ಸಮಸ್ಯೆಯೂ ಎದುರಾಯಿತು. ಆ ಹೊತ್ತಿಗೆ ಆಮ್ಲಜನಕದ ಮಟ್ಟ ನೋಡೋಣವೆಂದರೆ ನನ್ನಲ್ಲಿ ಆಕ್ಸಿಮೀಟರ್‌ ಇರಲಿಲ್ಲ. ಯಾವ ಮೆಡಿಕಲ್‌ನಲ್ಲಿ ಕೇಳಿದರೂ ಸ್ಟಾಕ್‌ ಇಲ್ಲ ಎಂಬ ಉತ್ತರ. ಅಮ್ಮನ ಪರಿಸ್ಥಿತಿ ಬಿಗಡಾಯಿಸುತ್ತಲೇ ಸಾಗಿತು. ಇನ್ನು ಆಸ್ಪತ್ರೆಗೆ ಸೇರಿಸೋದೆ ಸರಿ ಎಂಬ ಯೋಚನೆ ಜೊತೆಯಾಯಿತು. ಅಂದೇ ರಾತ್ರಿ 11ಕ್ಕೆ ಆಕ್ಸಿಮೀಟರ್‌ ಲಭ್ಯವಾಯಿತು. ತಕ್ಷಣ ಚೆಕ್‌ ಮಾಡಿದರೆ ಆಮ್ಲಜನಕದ ಪ್ರಮಾಣ 82 ಎಂದು ತೋರಿಸುತ್ತಿತ್ತು. ಇನ್ನು ಆಸ್ಪತ್ರೆಗೆ ಸೇರಿಸುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಾಗ, ತಕ್ಷಣಕ್ಕೆ ನನಗೆ ಗೊತ್ತಿರುವ ಪ್ರಾಣಾಯಾಮದ ನೆನಪಾಯಿತು.

ಉಸಿರಾಟ ಪ್ರಕ್ರಿಯೆಯನ್ನು ಪ್ರಾಣಾಯಾಮದಿಂದ ಸರಿಪಡಿಸಬಹುದು ಎಂಬ ವಿಚಾರ ಗೊತ್ತಿತ್ತು. ಉಸಿರಾಟ ಸರಾಗವಾಗಬೇಕು ಅಂದರೆ ಆಮ್ಲಜನಕ ಸಮಸ್ಯೆ ಇರದು. ಅಂದರೆ ಪ್ರಾಣಾಯಾಮದಿಂದ ಆಮ್ಲಜನಕ ಲೆವೆಲ್‌ ತಹಬದಿಗೆ ಬರಬಹುದು ಎಂದು ತಕ್ಷಣ ವ್ಯಾಘ್ರ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ–ವಿಲೋಮ (ನಾಡಿಶೋಧನ) ಜೊತೆಗೆ ದೀರ್ಘ ಉಸಿರಾಟ ಪ್ರಾಕ್ಟಿಸ್‌ ಮಾಡಿಸಿದೆ. ಕೆಲವೇ ನಿಮಿಷಗಳಲ್ಲಿ ಅವರಲ್ಲಿ ಆಮ್ಲಜನಕ ಮಟ್ಟ 92ಕ್ಕೆ ಏರಿತು. ಉಸಿರಾಟ ಸರಾಗವಾಯಿತು. ಇಷ್ಟಾದ ನಂತರ ಆಸ್ಪತ್ರೆ ಯೋಚನೆಯನ್ನೂ ಬಿಟ್ಟಾಯ್ತು. ಇವೇ ಪ್ರಾಣಾಯಾಮಗಳನ್ನು ಮೂರು ಹೊತ್ತು ಮಾಡಿಸಿದೆ. ಅವರ ಆರೋಗ್ಯ ಸುಧಾರಿಸುತ್ತ ಬಂದಿತು. ಈಗವರು ನಿತ್ಯ ಮೂರು ಹೊತ್ತು ಪ್ರಾಣ ಉಳಿಸಿದ ಪ್ರಾಣಾಯಾಮ ಮಾಡುತ್ತಿದ್ದಾರೆ. ಆಮ್ಲಜನಕ ಮಟ್ಟವೂ 97ಕ್ಕೆ ಏರಿತು. ಇಷ್ಟೆಲ್ಲ ಆದ ಮೇಲೆ ನಮಗೆಲ್ಲ ಸಮಾಧಾನ.

ADVERTISEMENT

ಇಲ್ಲಿ ಅಮ್ಮನಿಗೆ ಸಹಾಯಕ್ಕೆ ಬಂದಿದ್ದು ವ್ಯಾಘ್ರ ಪ್ರಾಣಾಯಾಮ (ಟೈಗರ್‌ ಬ್ರೀಥಿಂಗ್‌), ಕಪಾಲಭಾತಿ, ಅನುಲೋಮ–ವಿಲೋಮ (ನಾಡಿಶೋಧ)ಪ್ರಾಣಾಯಾಮ ಹಾಗೂ ದೀರ್ಘ ಉಸಿರಾಟ ಕ್ರಿಯೆ.

ಕೋವಿಡ್‌–19ರ ಎರಡನೇ ಅಲೆಯಲ್ಲಿ ಕೋವಿಡ್‌ ಬಾಧಿತರಲ್ಲಿ ಹೆಚ್ಚಿನವರಿಗೆ ಆಮ್ಲಜನಕದ ಮಟ್ಟ ಇಳಿದು ಉಸಿರಾಟದ ಸಮಸ್ಯೆಯಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್‌ ಕೂಡ ತಕ್ಷಣಕ್ಕೆ ಸಿಗುತ್ತಿಲ್ಲ. ಹೆಚ್ಚಿನ ಸಾವುಗಳು ಅದೇ ಕಾರಣದಿಂದ ಆಗುತ್ತಿವೆ. ಮನೆಯಲ್ಲೇ ಇದ್ದು ಆರೈಕೆ ಪಡೆಯುತ್ತಿರುವವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ವಿಚಲಿತರಾಗದೇ ವ್ಯಾಘ್ರ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ–ವಿಲೋಮ, ಭ್ರಾಮರಿಯನ್ನು ಮಾಡುವುದರಿಂದ ತಕ್ಷಣಕ್ಕೆ ಉಸಿರಾಟದ ಸಮಸ್ಯೆಗೆ ಮುಕ್ತಿ ಪಡೆಯಬಹುದು.

ದೇಹದಲ್ಲಿ ಆಮ್ಲಜನಕದ ಪ್ರಮಾಣ ಇಳಿದಾಗ ಅದನ್ನು ಏರಿಸಿ, ಉಸಿರಾಟವನ್ನು ಸರಾಗ ಮಾಡಬಲ್ಲ ಶಕ್ತಿ ಪ್ರಾಣಾಯಾಮಕ್ಕಿದೆ ಎನ್ನುತ್ತಾರೆ ಹುಬ್ಬಳ್ಳಿಯ ಧನ್ಯೋಸ್ಮಿ ಯೋಗ ಕೇಂದ್ರದ ಯೋಗಗುರು ವಿನಾಯಕ ತಲಗೇರಿ.

ನಂತರದಲ್ಲಿ ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆ ಜೊತೆಗೆ ಪ್ರಾಣಾಯಾಮಗಳನ್ನು ಮಾಡುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ಪ್ರಾಣಾಯಾಮವನ್ನು ನಿತ್ಯವೂ ಮಾಡುವುದರಿಂದ ಉಸಿರಾಟದ ಸಮಸ್ಯೆ ಕಾಡದು. ಆಮ್ಲಜನಕದ ಕೊರತೆ ಬಾಧಿಸದು. ಕೋವಿಡ್‌ ಬಾಧಿತರು ಭಯಭೀತರಾದರೆ ಉಸಿರಾಟ ಏರುಪೇರಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಧೈರ್ಯದಿಂದ ಇರುವುದು ಕೂಡ ಮುಖ್ಯ’ ಎಂಬ ಸಲಹೆ ಅವರದ್ದು.

ಉಸಿರಾಟ ಸರಾಗಗೊಳಿಸಲು ಯಾವ್ಯಾವ ಪ್ರಾಣಾಯಾಮಗಳನ್ನು ಮಾಡಬಹುದು ಎಂಬ ಕುರಿತು ಅವರು ನೀಡಿರುವ ಸಲಹೆಗಳು ಇಲ್ಲಿವೆ.

ಮೊದಲು ಟೈಗರ್‌ ಬ್ರೀಥಿಂಗ್‌. ಇದರಲ್ಲಿ ಚತುಷ್ಪಾದಾಸನದಲ್ಲಿ (ಹುಲಿ ನಿಂತ ಭಂಗಿಯಲ್ಲಿ) ಮೊಣಕಾಲು ಹಾಗೂ ಕೈಗಳ ಮೇಲೆ ನಿಂತು ಮುಖವನ್ನು ಕೆಳಗೆ ಹಾಕಬೇಕು. ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತ ತಲೆ ಎತ್ತಬೇಕು. ಮತ್ತೆ ನಿಧಾನವಾಗಿ ಉಸಿರನ್ನು ಬಿಡುತ್ತ ತಲೆಯನ್ನು ಕೆಳಗೆ ಹಾಕಬೇಕು. ಈ ರೀತಿ ಆರು ಬಾರಿ ಮಾಡಬೇಕು. ನಂತರ ದೀರ್ಘವಾಗಿ ಉಸಿರು ತೆಗೆದುಕೊಂಡು ಬಿಡುವಾಗ ಹೊಟ್ಟೆಯನ್ನು ಒಳಕ್ಕೆ ತೆಗೆದುಕೊಳ್ಳಬೇಕು. ಇದನ್ನು 8–10 ಬಾರಿ ಮಾಡಬೇಕು. ನಂತರ ಸಾಮಾನ್ಯ ಆಸನದಲ್ಲಿ ಕುಳಿತು ಕಪಾಲಭಾತಿಯನ್ನು ಒಂದು ನಿಮಿಷ ಮಾಡಬೇಕು. ಇದು ಉಸಿರನ್ನು ಮೂಗಿನಿಂದ ಹೊರಹಾಕುವ ಕ್ರಿಯೆ. ನಂತರ ದೀರ್ಘ ಉಸಿರಾಟ ಮೂರು ಬಾರಿ ಮಾಡಬೇಕು. ನಂತರ ಅನುಲೋಮ–ವಿಲೋಮ (ನಾಡಿಶೋಧ ಪ್ರಾಣಾಯಾಮ)ವನ್ನು 5 ನಿಮಿಷ ಮಾಡಬೇಕು. ಇದಾದ ನಂತರ 9 ಸುತ್ತು ಭ್ರಾಮರಿ ಮಾಡಬೇಕು. ಇದರ ಜೊತೆಗೆ ನೆಲದ ಮೇಲೆ ಅಂಗಾತ ಮಲಗಿ ಎದೆ ಹಿಂಭಾಗದಲ್ಲಿ ದಿಂಬನ್ನು ಇಟ್ಟು ಉಸಿರಾಟ ಸಹಜ ನಡೆಸಬೇಕು.

ಸಹಜ ಉಸಿರಾಟಕ್ಕೆ ಸಹಾಯವಾಗಬಲ್ಲ ಅಗತ್ಯ ಪ್ರಾಣಾಯಾಮದ ಹೆಚ್ಚಿನ ಮಾಹಿತಿಗಾಗಿ ವಿನಾಯಕ ತಲಗೇರಿ ಅವರನ್ನು (9480397682) ಸಂಪರ್ಕಿಸಬಹುದು. ಅಗತ್ಯ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದನ್ನು ಮರೆಯಬೇಡಿ.

***

ಪ್ರಾಣಾಯಾಮವನ್ನು ನಿತ್ಯವೂ ಮಾಡುವುದರಿಂದ ಉಸಿರಾಟದ ಸಮಸ್ಯೆ ಕಾಡದು. ಆಮ್ಲಜನಕದ ಕೊರತೆ ಬಾಧಿಸದು. ಕೋವಿಡ್‌ ಬಾಧಿತರು ಧೈರ್ಯದಿಂದ ಇರುವುದು ಕೂಡ ಮುಖ್ಯ.

– ವಿನಾಯಕ ತಲಗೇರಿ ಯೋಗ ಗುರು,ಧನ್ಯೋಸ್ಮಿ ಯೋಗ ಕೇಂದ್ರ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.