ADVERTISEMENT

ಚಾರಣದಲ್ಲಿ ಆರೋಗ್ಯದ ಚರಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 21:15 IST
Last Updated 13 ಮಾರ್ಚ್ 2023, 21:15 IST
ದ
   

ಪರೀಕ್ಷೆಗಳು ಮುಗಿದು ರಜೆಯು ಪ್ರಾರಂಭವಾಗುತ್ತಿದ್ದಂತೆ ಪ್ರವಾಸ ಮತ್ತು ಚಾರಣಗಳ ಸೀಸನ್ ಆರಂಭವಾಗುತ್ತದೆ. ಅದರಲ್ಲೂ ಚಾರಣ ಈಗೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಚಾರಣಕ್ಕೂ ಪ್ರವಾಸಕ್ಕೂ ಬಹಳ ವ್ಯತ್ಯಾಸವುಂಟು. ಪ್ರವಾಸದಲ್ಲಿ ಉತ್ತಮ ಹೊಟೇಲುಗಳನ್ನು ಬುಕ್ ಮಾಡಿ, ವಾಹನವ್ಯವಸ್ಥೆಯನ್ನು ಮಾಡಿಕೊಂಡು ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಬರುತ್ತೇವೆ. ಅಲ್ಲಿ ಎಲ್ಲವೂ ಸಲೀಸು. ಆದರೆ ಚಾರಣವೆಂದರೆ ನಿಸರ್ಗದೊಡನೆ ಒಂದಾಗುವ, ನಮ್ಮ ದೇಹವನ್ನು ಕೊಂಚಮಟ್ಟಿಗೆ ದಂಡಿಸುವ ಭಾಗ್ಯ. ಚಾರಣದಲ್ಲಿ ಕೆಲವು ಅತ್ಯುತ್ತಮ ಅಂಶಗಳಿವೆ.

l ನಾವು ಪ್ರಕೃತಿಸೌಂದರ್ಯವನ್ನು ಅತ್ಯಂತ ಸನಿಹದಿಂದ ನೋಡುವ ಅವಕಾಶ ದೊರೆಯುತ್ತದೆ.

l ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಿಂದ ಬದುಕುವ ಗುಟ್ಟನ್ನು ತಿಳಿಯಬಹುದು.

ADVERTISEMENT

l ಗಿರಿ-ಬೆಟ್ಟಗಳ, ಝರಿಗಳ ಹಾಗೂ ವೃಕ್ಷಸಂಪತ್ತಿನ ಸಾನ್ನಿಧ್ಯ ನಮ್ಮನ್ನು ಧ್ಯಾನಸ್ಥಿತಿಗೆ ಕರೆದೊಯ್ಯುತ್ತದೆ.

ನಾವು ಒಬ್ಬಂಟಿಗರಾಗಿಯೂ, ಸ್ನೇಹಿತರು-ಕುಟುಂಬದ ಜೊತೆಯೂ ಅಥವಾ ಚಾರಣ ಆಯೋಜಿಸುವ ಸಂಸ್ಥೆಗಳ ಮೂಲಕ ತಂಡೋಪತಂಡವಾಗಿಯೂ ಚಾರಣವನ್ನು ಕೈಗೊಳ್ಳಬಹುದು. ಭಾರತದಾದ್ಯಂತ ಚಾರಣವನ್ನು ಮಾಡಲು ಹಲವಾರು ಸ್ಥಳಗಳಿವೆ. ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಮಧ್ಯವಯಸ್ಸಿನವರು ಚಾರಣ ಮಾಡಬಹುದಾದರೂ ಎಲ್ಲರೂ ಚಾರಣ ಮಾಡಲು ಸಾಧ್ಯವಿಲ್ಲ. ಏಕೆಂದರೆ ಚಾರಣ ಕೈಗೊಳ್ಳುವಾಗ ನಮ್ಮ ದೇಹದಾರ್ಢ್ಯತೆ ಉತ್ತಮ ಮಟ್ಟದಲ್ಲಿರುವುದು ಬಹಳ ಮುಖ್ಯ. ಆದ್ದರಿಂದ ಚಾರಣಸಮಯದಲ್ಲಿ ನಮ್ಮ ಅರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಎಂದು ತಿಳಿದುಕೊಳ್ಳುವುದು ಉತ್ತಮ.
ಚಾರಣಕ್ಕೆ ಹೊರಡಲು ನಿರ್ಧರಿಸಿದ ತಕ್ಷಣ ಚಾರಣ ಮಾಡುವ ಸ್ಥಳ, ಅಲ್ಲಿನ ಹವಾಮಾನ, ಅಲ್ಲಿ ಕಳೆಯುವ ದಿನಗಳು ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ನಮ್ಮ ಪಶ್ಚಿಮಘಟ್ಟಗಳ ಚಾರಣಕ್ಕೆ ಒಂದು ರೀತಿಯ ತಯಾರಿ ಬೇಕಾದರೆ, ಹಿಮಾಲಯ ಶಿಖರಗಳ ಚಾರಣಕ್ಕೆ ಮತ್ತೊಂದು ರೀತಿಯ ತಯಾರಿಯೇ ಬೇಕಾಗುತ್ತದೆ. ಈ ತಯಾರಿಯಲ್ಲಿ ಅನೇಕ ಅಂಶಗಳು ಅಡಕವಾಗಿರುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮ ದೇಹವನ್ನು ಆರೋಗ್ಯದಿಂದ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ನಮ್ಮ ಭುಜ, ಬೆನ್ನು, ಸೊಂಟ ಹಾಗೂ ಕಾಲುಗಳ ಧೃಡತೆಯ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಇದಕ್ಕೆ ಬೇಕಾದ ತಯಾರಿಯನ್ನು ಚಾರಣಕ್ಕೆ ಹಲವಾರು ವಾರಗಳ ಮೊದಲೇ ಪ್ರಾರಂಭಿಸಬೇಕು. ಸಾಮಾನ್ಯವಾಗಿ ಚಾರಣದ ಆಯೋಜಕರು ಸೂಕ್ತ ತಯಾರಿಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಕೊಡುತ್ತಾರೆ. ವಾಕಿಂಗ್, ರನ್ನಿಂಗ್ ಜೊತೆಗೆ ಈಜು, ಯೋಗಾಸನದಂತಹ ದೈಹಿಕ ಕಸರತ್ತುಗಳೂ ನಮ್ಮನ್ನು ಸದೃಢವಾಗಿರಿಸುತ್ತವೆ.
ನಮಗ್ಯಾವುದೇ ದೈಹಿಕ ಕಾಯಿಲೆ ಇದ್ದಲ್ಲಿ ತಜ್ಞವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮತ್ತು ಅನುಮತಿ ಪಡೆಯುವುದು ಯಾವಾಗಲೂ ಉತ್ತಮ. ಕಾಯಿಲೆ ಇದ್ದವರು ಚಾರಣ ಮಾಡಬಾರದು ಎಂದೇನಲ್ಲ. ಆದರೆ ಅವರು ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ತಮ್ಮ ಕಾಯಿಲೆಯಿಂದ ಚಾರಣದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಚಾರಣಸಮಯದಲ್ಲೂ ಅವರು ನಿತ್ಯದ ಮಾತ್ರೆಗಳನ್ನು ತಪ್ಪದೆ ಸೇವಿಸಬೇಕು.

ಚಾರಣದಲ್ಲಿ ಬಹುತೇಕ ಸಮಯ ನಡೆಯಬೇಕಾಗುವುದರಿಂದ ಹಾಗೂ ನಿರ್ಜನ ಪ್ರದೇಶದಲ್ಲಿ ರಾತ್ರಿಯನ್ನು ಕಳೆಯಬೇಕಾಗುವುದರಿಂದ ನಾವು ಚಳಿ, ಮಳೆ, ಗಾಳಿ ಮತ್ತು ಬಿಸಿಲಿನ ಪ್ರಕೋಪಕ್ಕೆ ಸಿಲುಕುತ್ತೇವೆ. ಇವು ನಮ್ಮ ಆರೋಗ್ಯದ ಮೇಲೂ ಕೆಲವೊಮ್ಮೆ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಇವುಗಳಿಂದ ರಕ್ಷಣೆ ಪಡೆಯಲು ಸೂಕ್ತ ಬಟ್ಟೆಗಳು, ಟೊಪ್ಪಿ ಮತ್ತು ಪಾದರಕ್ಷೆಗಳನ್ನು ನಾವು ಮೊದಲೇ ಹೊಂದಿಸಿಟ್ಟುಕೊಳ್ಳಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಆಯೋಜಕರೂ ಟೆಂಟುಗಳ, ಮಲಗುವ ಬ್ಯಾಗುಗಳ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅದರ ಜೊತೆಗೆ ವ್ಯಾಸೆಲಿನ್‌ನಂತಹ ಕ್ರೀಮುಗಳು, ಜ್ವರ-ನೋವುನಿವಾರಕ ಮಾತ್ರೆಗಳು ನಮ್ಮ ಜೊತೆಯಲ್ಲಿರಬೇಕು.

ಚಾರಣಸಮಯದಲ್ಲಿ ಅನೇಕ ಬಾರಿ ನಾವು ಕಡಿದಾದ ಜಾಗಗಳನ್ನು ಹತ್ತಿ ಇಳಿಯಬೇಕಾಗಿ ಬರಬಹುದು. ಕೆಲಕಡೆ ಹಳ್ಳ-ಝರಿಗಳನ್ನು ದಾಟಬೇಕಾಗಿ ಬರಬಹುದು. ಇಂಥ ಸ್ಥಳಗಳಲ್ಲಿ ಅವಸರ ತೋರದೇ ಸಂಯಮದಿಂದ ಗೈಡ್‌ಗಳ ಉಸ್ತುವಾರಿಯಲ್ಲಿ ಮುಂದೆ ಸಾಗುವುದೇ ಉತ್ತಮ. ಇಲ್ಲದಿದ್ದರೆ ಜಾರಿ ಬಿದ್ದು ಕೈ-ಕಾಲುಗಳಿಗೆ ಗಾಯಗಳಾಗಬಹುದು. ತಲೆಗೂ ಹೊಡೆತ ಬೀಳಬಹುದು. ಇಂಥವು ಚಾರಣವನ್ನು ಒಂದು ದುಃಸ್ವಪ್ನವಾಗಿಸವುದರ ಜೊತೆಗೆ ಇತರ ಚಾರಣಿಗರಿಗೂ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ತಂಡದ ಜೊತೆಯಿದ್ದಾಗ ತಂಡದ ನಾಯಕರ ಸೂಚನೆಯಂತೆ ಮುನ್ನಡೆಯುವುದು ಎಲ್ಲರಿಗೂ ಕ್ಷೇಮಕರ.

ಚಾರಣಸಮಯದಲ್ಲಿ ನಾವು ಕಾಲಕಾಲಕ್ಕೆ ನೀರು-ಆಹಾರಗಳನ್ನು ಸೇವಿಸುತ್ತಾ ಇರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಪ್ರೊಟೀನ್‌ಯುಕ್ತ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ನಿರ್ಜಲೀಕರಣ ಮತ್ತು ಸುಸ್ತಿನಿಂದ ದೇಹ ನಿಃಶಕ್ತವಾಗದಂತೆ ನೋಡಿಕೊಳ್ಳುವುದು ತುಂಬಾ ಮಹತ್ವದ್ದು. ಅಲ್ಲಿ ಪ್ರತಿದಿನ ಚಾರಣಕ್ಕೆ ಮುನ್ನ ಹಾಗೂ ನಂತರ ಲಘುವಾದ ವ್ಯಾಯಾಮಗಳನ್ನು ಮಾಡುತ್ತಾ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಚಾರಣಸಮಯದಲ್ಲಿ ಯಾವುದೇ ರೀತಿಯ ಅನಾ ರೋಗ್ಯ, ತೊಂದರೆ ಉಂಟಾದರೆ ಕೂಡಲೇ ತಂಡದ ಮುಖ್ಯಸ್ಥರಿಗೆ ತಿಳಿಸಬೇಕು. ಅವರು ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂದಿನ ವ್ಯವಸ್ಥೆ ಮಾಡುತ್ತಾರೆ.

ಒಟ್ಟಿನಲ್ಲಿ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಂಡರೆ ದೇಹಕ್ಕೂ ಮನಸ್ಸಿಗೂ ಉಲ್ಲಾಸ ಉಂಟುಮಾಡುವ ಒಂದು ಅನೂಹ್ಯವಾದ ಅನುಭವವನ್ನು ಚಾರಣದಿಂದ ಪಡೆಯಬಹುದು. ಹಾಗಾದರೆ ಇನ್ನೇಕೆ ತಡ? ನಿಮಗಿಷ್ಟವಾದ ಚಾರಣಕ್ಕೆ ಹೊರಡಲು ತಯಾರಿ ಪ್ರಾರಂಭಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.