ADVERTISEMENT

ನಿಮ್ಮ ಹೃದಯವನ್ನು ಆಲಿಸಿರಿ

ಕಮಲೇಶ್ ಡಿ ಪಟೇಲ್
Published 30 ಜೂನ್ 2021, 9:34 IST
Last Updated 30 ಜೂನ್ 2021, 9:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಮ್ಮ ಎಲ್ಲ ಅನುಭೂತಿಗಳಿಗೂ ಹೃದಯವೊಂದು ಮಾಪಕದಂತೆ. ಅದರಲ್ಲಿ ನಮ್ಮ ವಿಚಾರ ಮತ್ತು ಭಾವನೆಗಳು, ನಮ್ಮ ನಡವಳಿಕೆ ಹಾಗು ಜೀವನದಲ್ಲಿ ನಾವು ಮಾಡುವ ಆಯ್ಕೆಗಳ ಬಗೆಗೆ ನಮ್ಮ ಅನಿಸಿಕೆ ಏನೆಂಬುದೂ ಸೇರಿದೆ. ನಾವು ಸಂತೋಷದಲ್ಲಿದ್ದಾಗ, ಹೃದಯದಿಂದ ಆಲಿಸುವುದಿಲ್ಲ. ನಾವು ಒಳಿತನ್ನು ಆಯ್ಕೆ ಮಾಡಿಕೊಳ್ಳುವಾಗ ಹೃದಯವು ನಾವು ಅವಲೋಕನ ಮಾಡುತ್ತಿರುವ ನಿರ್ಧಾರಕ್ಕೆ ಮೂಕಸಾಕ್ಷಿಯಂತಿದ್ದು, ಸುಮ್ಮನಿರುತ್ತದೆ. ಅಲ್ಲಿ ಸಹಜ ತೃಪ್ತಿಯಿದೆ. ನಮ್ಮೊಳಗೆ ಸಂತೋಷವಿಲ್ಲದಿರುವಾಗ, ಹೃದಯ ತಳಮಳದಿಂದ ಕೂಡಿರುತ್ತದೆ. ಎಲ್ಲೋ ಏನೋ ಬದಲಾಗಬೇಕೆಂದು ಅದು ನಮಗೆ ಹೇಳುತ್ತದೆ.

ದಯದ ಸಂಕೇತವನ್ನಾಲಿಸುವುದು ಮೊದಲ ಹೆಜ್ಜೆ. ಆ ಸಂಕೇತಗಳನ್ನು ಬಳಸಿಕೊಂಡು, ನಮಗೆ ಸ್ಪಷ್ಟ ಸೂಚನೆ ದೊರೆಯುವಂತೆ ಹೃದಯಕ್ಕೆ ಪ್ರಶ್ನೆ ಕೇಳುವುದು ಎರಡನೇ ಹೆಜ್ಜೆ. ನಿಧಾನವಾಗಿ, ನಮಗೆ ಅದು ರೂಢಿಯಾಗುತ್ತದೆ ಹಾಗೂ ನಾವು ಹೆಚ್ಚು ಆಲಿಸಿದಷ್ಟೂ ಸೂಚನೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ನಾವು ಆಲಿಸದಿದ್ದರೆ, ಹೃದಯವನ್ನು ಆಲಿಸುವ ಕಲೆ ನಮಗೆ ಮರೆತುಹೋಗುತ್ತದೆ. ನಾವು ಬಳಸದ ನರತಂತುವ್ಯೂಹ ಅಥವಾ ಪಥವನ್ನು ಕಳೆದುಕೊಳ್ಳುವ ಕ್ರಿಯೆಯೆಂದು ಇದನ್ನು ನರವಿಜ್ಞಾನಿಗಳು ವಿವರಿಸುತ್ತಾರೆ. ನಂತರ ಅದನ್ನು ಮರುಚೇತನಗೊಳಿಸಲು ಅಪಾರ ಪರಿಶ್ರಮ ಬೇಕಾಗುತ್ತದೆ. ನರವ್ಯೂಹಪಥವನ್ನು ನಾವು ಹೆಚ್ಚು ಬಳಸಿದಷ್ಟೂ ಅವು ಸಬಲಗೊಳ್ಳುತ್ತವೆ.

ಈಗ ಬರುವುದು ಮೂರನೇ ಹೆಜ್ಜೆ: ಹೃದಯದ ಕರೆಯನ್ನು ಆಲಿಸಿದ ನಂತರ, ಅದನ್ನು ಅನುಸರಿಸುವ ಧೈರ್ಯ ನಮ್ಮಲ್ಲಿದೆಯೆ?

ADVERTISEMENT

ಸುಳ್ಳು ಹೇಳಿದಾಗಲೊಮ್ಮೆ ಮೂಗು ಉದ್ದವಾಗುವ ಪಿನೋಕಿಯೊನ ಕಥೆ ನಿಮಗೆ ಗೊತ್ತಿರಬಹುದು. ಭಿನ್ನಾಭಿಪ್ರಾಯ ಅಥವಾ ಮನಸ್ತಾಪವನ್ನು ತಡೆಯಲು ಬರೀ ಸುಳ್ಳು ಹೇಳುವುದು ಸುಲಭ, ಆದರೆ ಹಾಗಾದಾಗ ನಮ್ಮ ಹೃದಯಕ್ಕೆ ಏನಾಗುತ್ತದೆ? ಅದು ಜೋರಾಗಿ ಬಡಿದುಕೊಳ್ಳಲಾರಂಭಿಸುತ್ತದೆ. ಪರಿಶುದ್ಧತೆಗೆ ಸಂಚಕಾರ ಬಂದಾಗ ಹೃದಯವು ಭಾರವಾಗುತ್ತದೆ, ಆತಂಕಗೊಳ್ಳುತ್ತದೆ. ಆಗ ಏನಾಗುತ್ತದೆ? ಕ್ಲೇಶದೊಂದಿಗೆ, ಪಾಪಪ್ರಜ್ಞೆ ಮತ್ತು ಪಶ್ಚಾತ್ತಾಪಗಳೂ ಬರುತ್ತವೆ. ‘ನಾನು ಅದು ಹೇಗೆ ಈ ರೀತಿ ಮಾಡಬಹುದು!’ ಎಂದು ನಮ್ಮನ್ನು ನಾವು ದ್ವೇಷಿಸಲಾರಂಭಿಸುತ್ತೇವೆ.

ಕೆಲವೊಮ್ಮೆ ಜನರು ತಮ್ಮ ತಂದೆತಾಯಿಯರನ್ನು ಸಂತುಷ್ಟಗೊಳಿಸಲು ಅಥವಾ ಮತ್ತೊಬ್ಬರಿಗೆ ನೋವಾಗುವುದನ್ನು ತಪ್ಪಿಸಲು ಸುಳ್ಳು ಹೇಳುತ್ತಾರೆ. ಆದರೂ ಸಹ, ಹಗುರತೆ, ಸಂತಸ ಮತ್ತು ಆತ್ಮವಿಶ್ವಾಸದ ಬದಲು ನಮ್ಮಲ್ಲಿ ಅಸಂತೋಷ ಉಂಟಾಗುತ್ತದೆ. ಆದಾಗ್ಯೂ, ಅಪಾಯ ಅಥವಾ ತೊಂದರೆಯನ್ನು ತಡೆಯಲು ಹೃದಯವು ಸತ್ಯಕ್ಕಿಂತ ಸಂಬಂಧವನ್ನು ಆಯ್ದುಕೊಳ್ಳುವ ಕೆಲವು ಸಂದರ್ಭಗಳಿರುತ್ತವೆ. ಉದಾಹರಣೆಗೆ, ನಮ್ಮ ಪ್ರೀತಿಪಾತ್ರರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಏನಾಗುತ್ತದೆ? ಇದನ್ನು ಒಂದು ಪ್ರಸಿದ್ಧ ತೈಲಚಿತ್ರದಲ್ಲಿ ತೋರಿಸಲಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನಿಕರು ಪುಟ್ಟ ಬಾಲಕನೊಬ್ಬನನ್ನು ಆತನ ತಂದೆತಾಯಿಯರ ಬಗ್ಗೆ ಕೇಳುತ್ತಿದ್ದಾರೆ. ಅವರು ನೆಲಮಾಳಿಗೆಯಲ್ಲಿ ಅಡಗಿಕೊಂಡಿದ್ದಾರೆಂದು ಆತನಿಗೆ ತಿಳಿದಿದ್ದರೂ, ಆತನೇನಾದರೂ ಅವರ ಸುಳಿವು ನೀಡಿದರೆ ಅವರು ಕೊಲ್ಲಲ್ಪಡುತ್ತಾರೆಂದೂ ಅವನಿಗೆ ತಿಳಿದಿದೆ. ಇಂತಹ ಸಂದರ್ಭದಲ್ಲಿ ನೀವೇನು ಮಾಡುತ್ತೀರಿ? ನಿಜ ಹೇಳುವುದೊ ಅಥವಾ ಪಾಲಕರನ್ನು ರಕ್ಷಿಸುವುದೊ? ಪುನಃ, ಇಲ್ಲಿ ನಿಮ್ಮ ಹೃದಯ ನಿಮಗೆ ಮಾರ್ಗದರ್ಶಿಯಾಗುತ್ತದೆ. ಹೃದಯವನ್ನಾಲಿಸುವ ಕಲೆಯು ಸಂತೃಪ್ತಿಯನ್ನು ತರುತ್ತದೆ; ತತ್ಪರಿಣಾಮವಾಗಿ ನಾವು ಸಂಘಟಿತರಾಗಿಯೂ, ಸಂಪೂರ್ಣವಾಗಿಯೂ ಮತ್ತು ನಮ್ಮೊಳಗೆ ಶಾಂತಿಯಿಂದಲೂ ಇರುತ್ತೇವೆ.

ಹೃದಯವನ್ನಾಲಿಸುವುದು ಒಂದು ವಿಷಯ, ಆದರೆ ಈ ಪ್ರಕ್ರಿಯೆಯಲ್ಲಿ ಮತ್ತೊಂದು ಆಯಾಮವಿದೆ: ನಮ್ಮ ಹೃದಯ ನಿಶ್ಚಲವಾಗಿರುವುದಿಲ್ಲ. ನಮ್ಮ ಪ್ರಜ್ಞೆ ವಿಸ್ತರಣೆಗೊಳ್ಳುತ್ತ ಪರಿಷ್ಕೃತಗೊಳ್ಳುತ್ತಿರಬಹುದು ಅಥವಾ ಪ್ರಜ್ಞೆ ಸೀಮಿತವಾಗುತ್ತಿರಬಹುದು; ಅದೇ ಪ್ರಕಾರ ನಮ್ಮ ಆಂತರಿಕ ವಾತಾವರಣವೂ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಪ್ರಜ್ಞಾ ಕ್ಷೇತ್ರವು ದ್ರವದಂತೆ ಹಾಗಾಗಿ ಹೃದಯದ ಸೂಚೀಬಿಂದುವು ಕ್ರಿಯಾಶೀಲವಾಗಿರುತ್ತದೆ. ಅದು ನಮ್ಮ ಪ್ರಜ್ಞೆಯ ಸ್ಥಿತಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ: ನಾವು ತೆಗೆದುಕೊಳ್ಳುವ ಆಹಾರ, ತೊಡುವ ಬಟ್ಟೆ, ಹೀಗೆ ಬದಲಾಗುತ್ತಿರುವ ನಮ್ಮ ಪ್ರಗತಿಯ ಸ್ತರಕ್ಕೆ ನಿಧಾನವಾಗಿ ಅಭ್ಯಾಸಗಳು ಹೊಂದಿಕೊಳ್ಳುತ್ತವೆ. ಪ್ರಗತಿಯಲ್ಲಿರುವ ಕಾರ್ಯದಂತೆ ನಾವು ಯಾವಾಗಲೂ ನಿರಂತರ ಸುಧಾರಣೆಯ ಸ್ಥಿತಿಯಲ್ಲಿರುತ್ತೇವೆ.

ಆದರೆ ಕೆಲವೊಮ್ಮೆ ನಾವು ನಮ್ಮ ಮನಸ್ಸಾಕ್ಷಿಗೆ ವಿರುದ್ಧವಾದ ಆಯ್ಕೆ ಮಾಡಿಕೊಳ್ಳುತ್ತೇವೆ. ಏಕೆಂದರೆ ನಮ್ಮ ಆಸೆಗಳು ಹಾಗು ಮಾನಸಿಕ ಸಮರ್ಥನೆಗಳು ನಮ್ಮನ್ನು ಬೇರೆಯದೇ ಆಯ್ಕೆಗಾಗಿ ಒತ್ತಾಯಿಸುತ್ತವೆ. ನಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳುವವರೆಗೂ, ನಾವು ಆ ಅನುಭವಗಳು ಹಾಗು ಅಭ್ಯಾಸಗಳನ್ನು ಪುನರಾವೃತ್ತಿಗೊಳಿಸುತ್ತಲೇ ಇರುತ್ತೇವೆ. ಹಾಗಾದರೆ ನಾವು ಮಾಡಬೇಕಾದುದೇನು? ಆಯ್ಕೆ ಯಾವಾಗಲೂ ಇರುತ್ತದೆ. ನಾವು ಏನನ್ನೂ ಮಾಡದಿರಬಹುದು ಅಥವಾ ಸಂದರ್ಭವನ್ನು ಸುಧಾರಿಸಲು ಪ್ರಯತ್ನಿಸಬಹುದು. ಹಾರ್ಟ್‌ಫುಲ್‌ನೆಸ್‌ನಲ್ಲಿ ನಾವು ಮಾಡಬಹುದಾದ ಒಂದು ಪರಿಣಾಮಕಾರಿ ವಿಧಾನವಿದೆ: ಮಲಗುವ ಮುನ್ನ, ನಿಮ್ಮ ಹೃದಯದಲ್ಲಿ ದೈವೀ ಉಪಸ್ಥಿತಿಯನ್ನು ಅನುಭವಿಸಿರಿ ಮತ್ತು ಅರಿವಿಲ್ಲದೆಯೂ ನೀವು ಮಾಡಿರಬಹುದಾದ ಯಾವುದೇ ತಪ್ಪುಗಳಿಗಾಗಿ ಕ್ಷಮೆಯನ್ನು ಯಾಚಿಸಿರಿ. ಈ ಪ್ರಕ್ರಿಯೆಯಲ್ಲಿ ಯಾವುದೇ ಬಗೆಯ ಆರೋಪವಿರುವುದಿಲ್ಲ. ನಿಮ್ಮ ಹೃದಯಾಂತರಾಳದಿಂದ, ಪ್ರಾರ್ಥನಾತ್ಮಕವಾಗಿ ಮತ್ತೆಂದೂ ಅದೇ ತಪ್ಪನ್ನು ಪುನರಾವರ್ತಿಸುವುದಿಲ್ಲವೆಂದು ಪ್ರಮಾಣ ಮಾಡಿರಿ. ನೀವು ದೊಡ್ಡ ಹೊರೆಯನ್ನಿಳಿಸಿದಷ್ಟು ನಿರಾಳರಾಗುವಿರಿ.

ಪ್ರಾರ್ಥನೆ ಸಲ್ಲಿಸಿದ ನಂತರ ಯಾವುದೇ ಪ್ರಶ್ನೆ ಮತ್ತು ಸಂದೇಹಗಳನ್ನೂ ಮುಂದಿಡಬಹುದು. ಅದರ ಪರಿಹಾರವನ್ನು ಕೂಡಲೇ ನಿರೀಕ್ಷಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ನೀವು ಏಳುವ ಹೊತ್ತಿಗೆ, ಉತ್ತರ ನಿಮಗೆ ತಿಳಿದಿರುತ್ತದೆ. ಉತ್ತರವು ಶಬ್ದರೂಪದಲ್ಲಲ್ಲದೆ ಮತ್ತೊಂದು ರೂಪದಲ್ಲಿ ಬಂದರೂ, ನಿಮಗೆ ಖಂಡಿತವಾಗಲೂ ಪರಿಹಾರ ದೊರೆಯುತ್ತದೆ.

ಲೇಖಕರುಹಾರ್ಟ್‌ಫುಲ್‌ನೆಸ್ ಧ್ಯಾನದ (www.heartfulness.org) ಮಾರ್ಗದರ್ಶಿ

ಸಂಪರ್ಕಕ್ಕೆ –daaji@heartfulness.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.