ADVERTISEMENT

ಮುಟ್ಟಿನ ಶೂಲೆಗೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 28 ಮೇ 2021, 19:30 IST
Last Updated 28 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಟ್ಟಾದಾಗ ಹೊಟ್ಟೆನೋವು ಅಥವಾ ಸೆಳೆತದ ಸಮಸ್ಯೆಯನ್ನು ಬಹುತೇಕ ಮಹಿಳೆಯರು ಅನುಭವಿಸಿರಬಹುದು. ಆರಂಭದಲ್ಲಿ ಅಂದರೆ ಪ್ರೌಢಾವಸ್ಥೆ ತಲುಪಿದ ಹುಡುಗಿಯರಲ್ಲಿ ಋತುಸ್ರಾವ ಶುರುವಾದಾಗಲಂತೂ ಈ ಸಮಸ್ಯೆ ಜಾಸ್ತಿಯೇ ಇರುತ್ತದೆ. ಶಾಲಾ– ಕಾಲೇಜಿಗೆ ಹೋಗುವಾಗ, ಪರೀಕ್ಷೆ ಸಂದರ್ಭದಲ್ಲಿ ಈ ಸೆಳೆತದ ನೋವು ತಡೆಯಲಾರದೆ ಹಲವರು ನೋವಿನ ಮಾತ್ರೆಯನ್ನು ಸೇವಿಸುವ ಅಭ್ಯಾಸಕ್ಕೆ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಜ್ಜಿ, ಅಮ್ಮಂದಿರು ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಒಟ್ಟಾರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ, ಆದರೆ ಸಮಸ್ಯೆಗೆ ರಾಮಬಾಣದಂತಿರುವ ಕೆಲವು ಮನೆಮದ್ದುಗಳು ಇಲ್ಲಿವೆ.

ಓಂ ಕಾಳು: ಅಜ್ವಾನ್‌ ಎಂದೇ ಪರಿಚಿತವಾಗಿರುವ ಈ ಮಸಾಲೆ ಪದಾರ್ಥ ಎಲ್ಲರ ಅಡುಗೆ ಮನೆಯ ಡಬ್ಬಿಯಲ್ಲೂ ಸ್ಥಾನ ಪಡೆದಿರುತ್ತದೆ. ಸಾಮಾನ್ಯ ಹೊಟ್ಟೆನೋವು, ಅಜೀರ್ಣ, ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂತಹ ಓಂಕಾಳು ಮುಟ್ಟಿನ ಶೂಲೆಗೂ ಪರಿಹಾರ ಒದಗಿಸಬಲ್ಲದು.

ಎರಡು ಕಪ್‌ ನೀರಿಗೆ ಅರ್ಧ ಟೀ ಚಮಚ ಓಂಕಾಳು ಸೇರಿಸಿ ಕುದಿಸಿ. ಇದು ಒಂದು ಕಪ್‌ಗೆ ಇಳಿದ ನಂತರ ಶೋಧಿಸಿ ಕುಡಿಯಿರಿ. ಬೇಕಿದ್ದರೆ ಈ ಕಷಾಯಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬಹುದು. ಹಾಗೆಯೇ ಓಂಕಾಳನ್ನು ನಿತ್ಯದ ಅಡುಗೆಯಲ್ಲಿ ಕೂಡ ಬಳಸುವುದು ಆರೋಗ್ಯಕರ. ವಾಯು ಸಮಸ್ಯೆಗೆ ಕಾರಣವಾಗುವಂತಹ ಆಲೂಗೆಡ್ಡೆ, ಗೆಣಸು, ಬಾಳೆಕಾಯಿ, ಹಲಸಿನಕಾಯಿ, ತೊಗರಿಬೇಳೆ ಮೊದಲಾದವುಗಳನ್ನು ಬಳಸಿ ಮಾಡುವ ಅಡುಗೆಗೆ ಓಂಕಾಳು ಹಾಕಿದರೆ ಹೊಟ್ಟೆಯುಬ್ಬರ ಸಮಸ್ಯೆಯಿಂದ ಪಾರಾಗಬಹುದು.

ADVERTISEMENT

ಇದೇ ರೀತಿ ಜೀರಿಗೆ ನೀರನ್ನೂ ಕುಡಿಯಬಹುದು. ಆದರೆ ಯಾವುದೇ ಕಷಾಯವಿರಲಿ, ಬಿಸಿ ಇರುವಾಗ ಸೇವಿಸುವುದನ್ನು ಮರೆಯಬೇಡಿ.

ಎಳ್ಳು: ಮೊದಲ ಮುಟ್ಟು ಕಾಣಿಸಿದಾಗ ಹುಡುಗಿಯರಿಗೆ ಎಳ್ಳಿನ ಚಿಗಳಿ ಉಂಡೆ ತಿನ್ನಿಸುವ ರೂಢಿ ಈಗಲೂ ಹಳ್ಳಿಗಳಲ್ಲಿದೆ. ಇಂತಹ ಎಳ್ಳಿನ ಎಣ್ಣೆ ಮುಟ್ಟಿನ ಸೆಳೆತಕ್ಕೆ ದಿವ್ಯ ಔಷಧ. ಸ್ವಲ್ಪ ಎಳ್ಳೆಣ್ಣೆ ಬಿಸಿ ಮಾಡಿಕೊಂಡು ಕಿಬ್ಬೊಟ್ಟೆಯ ಭಾಗಕ್ಕೆ ನೀವಿಕೊಳ್ಳಿ. ಅರ್ಧ ತಾಸು ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಿ. ಕಿಬ್ಬೊಟ್ಟೆಗೆ ಬಿಸಿ ನೀರಿನ ಶಾಖವನ್ನೂ ಕೊಡಬಹುದು.

ಇಂಗು: ಸಾಮಾನ್ಯ ಹೊಟ್ಟೆಯುಬ್ಬರಕ್ಕೂ ಇದನ್ನು ಮನೆಮದ್ದಾಗಿ ಬಳಸುವ ರೂಢಿಯಿದೆ. ಮಜ್ಜಿಗೆಗೆ ಚಿಟಿಕೆ ಇಂಗು, ಸೈಂಧವ ಲವಣ ಸೇರಿಸಿ ಕುಡಿದರೆ ವಾಯು ಪ್ರಕೋಪ ಶಮನವಾಗುತ್ತದೆ. ಇದರಲ್ಲಿರುವ ಉರಿಯೂತ ಶಮನ ಮಾಡುವ ಗುಣ ಮುಟ್ಟಿನ ಸೆಳೆತಕ್ಕೂ ಪರಿಹಾರ ಒದಗಿಸುತ್ತದೆ. ದಿನಕ್ಕೆ 1–2 ಸಲ ಇಂಗನ್ನು ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯಬಹುದು. ಇದರಿಂದ ಅನಿಯಮಿತ ಮುಟ್ಟಿಗೂ ಪರಿಹಾರ ಕಂಡುಕೊಳ್ಳಬಹುದು. ನಿತ್ಯದ ಅಡುಗೆ ಪದಾರ್ಥಗಳಲ್ಲೂ ಇದನ್ನು ಬಳಸಿದರೆ ಸಾಮಾನ್ಯ ಅಜೀರ್ಣ ಸಮಸ್ಯೆಗೂ ಒಳ್ಳೆಯದು.

ಮೆಂತ್ಯೆ: ಕೆಲವರಾದರೂ ಗಮನಿಸಿರಬಹುದು, ಮನೆಯಲ್ಲಿ ಅಮ್ಮಂದಿರು ಕೆಲವೊಮ್ಮೆ ರಾತ್ರಿ ಒಂದು ಲೋಟಕ್ಕೆ ಚಮಚ ಮೆಂತ್ಯೆ ನೆನೆಹಾಕಿ, ಮರುದಿನ ಆ ನೀರನ್ನು ಕುಡಿಯುವುದನ್ನು. ಇದು ಮುಟ್ಟಿನ ನೋವಿಗೆ ಒಳ್ಳೆಯ ಔಷಧ.

ಲೋಳೆಸರ: ಕೂದಲು, ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಈ ಸಸ್ಯ ಮುಟ್ಟಿನ ಶೂಲೆಗೂ ಒಳ್ಳೆಯ ಮದ್ದು. ಮನೆಯಲ್ಲೇ ಕುಂಡದಲ್ಲಿ ಕೂಡ ಇದನ್ನು ಬೆಳೆಸಬಹುದು. ತಾಜಾ ಎಲೆಯನ್ನು ಮುರಿದಾಗ ಬರುವ ಜೆಲ್‌ ಬಳಸಬೇಕು. ಒಂದು ಚಮಚ ಜೆಲ್‌ ಅನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕದಡಿ. ಇದನ್ನು ನಿತ್ಯ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.