ADVERTISEMENT

PV Web Exclusive | ಮನೋಮಯ: ಗರ್ಭಾವಸ್ಥೆಯ ಖಿನ್ನತೆ ಮೀರುವುದು ಹೇಗೆ?

ಎಸ್.ರಶ್ಮಿ
Published 26 ನವೆಂಬರ್ 2020, 11:47 IST
Last Updated 26 ನವೆಂಬರ್ 2020, 11:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಯಾಕೋ ಕಣ್ತುಂಬ ನೀರು.. ಒಡಲೊಳಗಿರುವ ಕಂದ ಮಿಸುಕಾಡುವಾಗ, ಹೊಟ್ಟೆ ಮೇಲೆ ಕೈ ಆಡಿಸಿದಾಗಲೂ ಗಂಟಿಕ್ಕಿದ ಹುಬ್ಬುಗಳು ಸಡಿಲಾಗವು. ಕೊರಳುಬ್ಬಿ ಬರುತ್ತದೆ. ಮತ್ತದ್ಯಾಕೆ ಬೇಜಾರು ಗೊತ್ತಾಗುವುದಿಲ್ಲ.

ಬೇಡವೆಂದರೂ ದುಃಖ ಉಮ್ಮಳಿಸಿ ಬರುತ್ತದೆ. ಬೇಡವೆಂದರೂ ರೇಗಣ ಅನಿಸ್ತದೆ. ರೇಗುವುದೂ ನಮ್ಮ ಹತ್ತಿರದವರ ಮೇಲೆ. ಅಮ್ಮ, ಅಣ್ಣಂದಿರು, ಗಂಡ ಹೀಗೆ ತೀರ ಹತ್ತಿರದ ಬಂಧುಗಳ ಮೇಲೆ ರೇಗುತ್ತಲೇ ಇರ್ತೀವಿ.

ಮೊದಲ ಮೂರು ತಿಂಗಳು ತಡೆಯಲಾಗದ ಹಸಿವು. ಏನೂ ತಿನ್ನಲಾಗದ ಅನಿವಾರ್ಯ, ಹೇವರಿಕೆಗಳು, ಆ ವಾಂತಿ, ಆ ಸುಸ್ತು.. ಇದನ್ನೆಲ್ಲ ನಾನು ಮಾತ್ರ ಅನುಭವಿಸಬೇಕಲ್ಲ ಎಂಬ ಅಸಹಾಯಕತನ ಬೇರೆ. ಇದೊಂದು ಹಂತಕ್ಕೆ ಸರಿಯಾಗುವವರೆಗೂ ಸುಸ್ತು ನಿಭಾಯಿಸುವುದರಲ್ಲಿ ಕಣ್ಣೀರೊಂದೆ ಉತ್ತರವಾಗಿರುತ್ತದೆ.

ADVERTISEMENT

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಇಂಥದ್ದೊಂದು ಖಿನ್ನತೆ ಎಲ್ಲರಿಗೂ ಕಾಡುತ್ತದೆ. ಕುಟುಂಬದವರ ಕಾಳಜಿ ಕೆಲವರಿಗೆ ಮದ್ದಾಗಬಲ್ಲದು. ಕೆಲವರಿಗೆ ಸಮಾಲೋಚಕರ ಅಗತ್ಯ ಕಂಡುಬರಬಹುದು. ಸಾಮಾನ್ಯವಾಗಿ ಗರ್ಭಾವಸ್ಥೆ ಒಂದು ಅಯೋಮಯವಾದ ಸ್ಥಿತಿ. ದೈಹಿಕವಾಗಿ ಬದಲಾವಣೆಗಳಾಗುತ್ತಿರುತ್ತವೆ. ದೇಹ ಮಗುವೊಂದನ್ನು ಹೊರಲು, ಹೆರಲು ಸಜ್ಜಾಗುತ್ತಿರುತ್ತದೆ. ಆಗಾಗ ಡಿಂಭನೋವು, ಬೆನ್ನುನೋವು ಅತಿ ಸಹಜ. ಆ ನಡುವೆ ಸಮಾಜದಲ್ಲಿ ಸ್ಥೂಲಕಾಯದ ಬಗೆಗಿರುವ ಅವಜ್ಞೆ, ಹೆರಿಗೆಯ ನಂತರ ಹೊಟ್ಟೆ ಇಳಿಸುವ ಒತ್ತಡ, ಹೆರಿಗೆಯ ಬಗ್ಗೆಯೂ ಇಲ್ಲ ಸಲ್ಲದ ಯೋಚನೆಗಳು ಮಾನಸಿಕವಾಗಿ ಒಂದಷ್ಟು ಒತ್ತಡವನ್ನು ಉಂಟು ಮಾಡಿರುತ್ತವೆ.

ಈ ನಡುವೆ ಮಾತಾಡಲೂ ಯಾರೂ ಇರದ ಪರಿಸ್ಥಿತಿಯಲ್ಲಿ ಗರ್ಭಿಣಿಯರು ಇರುತ್ತಾರೆ. ಫೋನು ಮಾಡಿದವರೇ ಒಂದಷ್ಟು ಆತಂಕಗಳನ್ನು ವರ್ಗಾವಣೆ ಮಾಡುವವರೆ. ಸ್ಕ್ಯಾನಿಂಗ್‌ ಆಯ್ತಾ?, ಮಾತ್ರೆಗಳನ್ನು ತೆಗೆದುಕೊಂಡರಾ? ಹೆಚ್ಚು ಮೆಟ್ಟಿಲು ಹತ್ತಿಳಿದರಾ?, ಹೀಗೆ ಕಾಳಜಿಯನ್ನು ತೋರುತ್ತಲೇ ಅನಾವಶ್ಯಕವಾದ ಒತ್ತಡವನ್ನೂ ಸೃಷ್ಟಿಸುತ್ತಾರೆ.

ಇವನ್ನು ನಿಭಾಯಿಸಲಾಗದೆ ಪರದಾಡುವಾಗಲೇ ಗರ್ಭಾವಸ್ಥೆಯ ಖಿನ್ನತೆ ಕಾಡುತ್ತದೆ. ಈ ಖಿನ್ನತೆಯು ಗರ್ಭಾವಸ್ಥೆ ಆರಂಭದಿಂದ ಹೆರಿಗೆಯ ನಂತರ ಒಂದು ವರ್ಷದವರೆಗೆ ಯಾವಾಗ ಬೇಕಾದರೂ ಕಾಡಬಹುದು. ಹೆರಿಗೆ ಪೂರ್ವದಲ್ಲಿ ಹೆರಿಗೆ ಹೇಗೆ ಎಂಬುದೇ ದೊಡ್ಡ ಚಿಂತೆಯಾದರೆ, ಹೆರಿಗೆಯ ನಂತರ ಹಾಲುಣಿಸುವುದು, ನಿದ್ರಾಹೀನತೆ, ಊಟದ ಸಮಯದಲ್ಲಿ ಮಗುವಿನ ಆರೈಕೆ, ಪಾಲನೆ, ಪೋಷಣೆಗೆ ಸಂಬಂಧಿಸಿದ ವಿಷಯಗಳು ಒತ್ತಡವನ್ನು ಸೃಷ್ಟಿಸುತ್ತವೆ.

ಇವು ನಿಧಾನಕ್ಕೆ ಹೆಣ್ಣುಮಗಳೊಬ್ಬಳು ಖಿನ್ನತೆಯತ್ತ ಜಾರುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ. ಸೂಕ್ಷ್ಮಗ್ರಹಿಕೆ ಇದ್ದರೆ ಇವನ್ನು ಬೇಗ ಪತ್ತೆ ಮಾಡಬಹುದಾಗಿದೆ. ಇಲ್ಲದಿದ್ದಲ್ಲಿ ಇವು ವರ್ತನಾ ಸಮಸ್ಯೆಗಳನ್ನೂ ಹುಟ್ಟುಹಾಕಬಹುದು.

ಆಗ ಆಪ್ತಸಮಾಲೋಚನೆಯೊಂದಿಗೆ ಸಂಪೂರ್ಣ ಚಿಕಿತ್ಸೆಯನ್ನೂ ನೀಡಬೇಕಾಗಬಹುದು. ಈ ಖಿನ್ನತೆಯನ್ನು ಗುರುತಿಸುವುದು ಹೇಗೆ? ಯಾಕೆ ಇದೀಗ ಮಹತ್ವದ ವಿಷಯವಾಗಿ ಚರ್ಚೆಯಾಗುತ್ತಿದೆ?

ಅಂತರರಾಷ್ಟ್ರೀಯ ಮಾನಸಿಕ ಸ್ವಾಸ್ಥ್ಯ ಸಂಸ್ಥೆಯು 2018ರಲ್ಲಿ ಒಂದು ಸಮೀಕ್ಷೆ ಮಾಡಿತ್ತು. ಆ ಸಮೀಕ್ಷೆಯ ಪ್ರಕಾರ ನಾಲ್ವರು ಗರ್ಭಿಣಿಯರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿರುತ್ತಾರೆ. ಅವರೆಲ್ಲರಲ್ಲಿ ಬಹುತೇಕರು ಹೆರಿಗೆಯ ನಂತರವೂ ಈ ಖಿನ್ನತೆ ಅನುಭವಿಸುತ್ತಾರೆ. ಶೇ 11ರಷ್ಟು ಜನರಿಗೆ ಆಪ್ತ ಸಮಾಲೋಚನೆಯಷ್ಟೇ ಸಾಲುವುದಿಲ್ಲ. ವರ್ತನಾ ಸುಧಾರಣೆಯ ಚಿಕಿತ್ಸೆಯೂ ಅಗತ್ಯವಾಗಿರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ.

ಕಾರಣಗಳು

* ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೂಡು ಕುಟುಂಬದಲ್ಲಿರದೇ ಇರುವುದರಿಂದ ಅವರಿಗೆ ಮಾನಸಿಕ ಬೆಂಬಲ ಸಿಗುವುದಿಲ್ಲ. ಎಲ್ಲವನ್ನೂ ಒಬ್ಬರೇ ನಿಭಾಯಿಸುವಾಗ ಖಿನ್ನತೆ ಒಡಮೂಡುತ್ತದೆ ಎಂದೂ ಆ ಸಮೀಕ್ಷೆ ತಿಳಿಸಿದೆ.

* ಮನೆಯಲ್ಲಿರುವ ಗರ್ಭಿಣಿ ಆಗಾಗ ಕಣ್ತುಂಬಿಕೊಳ್ಳುತ್ತಿದ್ದರೆ ಮಾತನಾಡಿಸಿ, ಪರಿಸ್ಥಿತಿ ತಿಳಿಗೊಳಿಸಿ

* ಊಟ ಸೇರದಿದ್ದಲ್ಲಿ, ಸರಿಯಾಗಿ ಊಟ ಮಾಡದಿದ್ದಲ್ಲಿ ಹಣ್ಣುಗಳನ್ನು ಹೆಚ್ಚು ಸೇವಿಸುವಂತೆ, ಒಣ ಹಣ್ಣುಗಳನ್ನು ಸೇವಿಸುವಂತೆ ಮಾಡಬೇಕು

* ಉಪವಾಸವಿದ್ದಷ್ಟೂ ನಕಾರಾತ್ಮಕ ಚಿಂತನೆಗಳು ಕಾಡುವುದು ಹೆಚ್ಚು.

* ಸಂಗೀತ ಕೇಳುವಂತೆ, ಒಳಿತನ್ನು ಓದುವಂತೆ ಪ್ರೇರೇಪಿಸಬೇಕು

* ಪ್ರತಿದಿನವೂ ಸ್ವಲ್ಪ ಹೊತ್ತಾದರೂ ಸಂಗಾತಿಯು ಗರ್ಭಿಣಿಯೊಂದಿಗೆ ಸಮಯ ಕಳೆಯುವಂತಾಗಬೇಕು

* ಹೊರುವುದು, ಹೆರುವುದು ಕೇವಲ ಹೆಂಡ್ತಿಯ ಜವಾಬ್ದಾರಿ ಎನ್ನುವಂಥ ವರ್ತನೆ ಸಲ್ಲದು

* ಔದ್ಯೋಗಿಕ ಮಹಿಳೆ ಆಗಿರುವುದರಿಂದ ಕೆಲಸದ ಹೊರೆ ಸಹಜವಾಗಿಯೇ ಹೆಚ್ಚಾಗಿರುತ್ತದೆ.

* ಗರ್ಭಿಣಿಯರು ಈ ನಿಟ್ಟಿನಲ್ಲಿ ಸ್ವಸಹಾಯ ಪದ್ಧತಿಗೆ ಮುಂದಾಗಬೇಕು. ಅವರೇ ತಮ್ಮ ಆಪ್ತ ವಲಯ ಸೃಷ್ಟಿಸಿಕೊಳ್ಳಬೇಕು.

* ನಿಗದಿತ ಸಮಯದಲ್ಲಿ ಅಮ್ಮನೊಂದಿಗೆ, ಸಹೋದರಿಯರಿದ್ದರೆ ಅವರೊಂದಿಗೆ ಚರ್ಚಿಸಬೇಕು. ಮಾತನಾಡಬೇಕು. ಸ್ನೇಹಿತೆಯರೊಂದಿಗೂ ಮಾತನಾಡಬೇಕು. ಒಟ್ಟಿನಲ್ಲಿ ನಿಮ್ಮದೇ ಆದ ಆಪ್ತವಲಯ ಸೃಷ್ಟಿಸಿಕೊಳ್ಳಬೇಕು. ನಿಯಮಿತವಾಗಿ ಮಾತನಾಡುತ್ತಿರಬೇಕು.

* ಕಚೇರಿಯಲ್ಲಿ ತಿಳಿಸಿ: ಸಾಮಾನ್ಯವಾಗಿ ಬಹುತೇಕ ಜನರು ತಮ್ಮ ಗರ್ಭಾವಸ್ಥೆಯ ಬಗ್ಗೆ ಕಚೇರಿಯಲ್ಲಿ 20 ವಾರಗಳವರೆಗೂ ತಿಳಿಸುವುದೇ ಇಲ್ಲ. ಆದರೆ 12–15 ವಾರಗಳ ಅವಧಿಯಲ್ಲಿ ತಿಳಿಸಿದರೆ ನಿಮಗೆ ಕೆಲಸದ ಹೊರೆ ತಗ್ಗಬಹುದು. ಸಹೋದ್ಯೋಗಿಗಳು ಅಂತಃಕರುಣೆಯಿಂದ ಕಾಣುವುದರಿಂದಲೂ ಒತ್ತಡ ಕಾಣಿಸದು.

* ಮಗುವಿನ ಜನನದ ನಂತರ, ರಾತ್ರಿ ನಿದ್ದೆಗೆಡುವುದು ಸಹಜವಾಗಿರುತ್ತದೆ. ಸಾಧ್ಯವಿದ್ದಾಗಲೆಲ್ಲ ವಿಶ್ರಾಂತಿ ನೀಡುವಂತೆ ಅವಕಾಶ ಕಲ್ಪಿಸುವುದು ಅತ್ಯಗತ್ಯ

ಕೆಲವೊಮ್ಮೆ ಸಿಟ್ಟು, ಸೆಡವು, ಕಿರುಚಾಟ, ಅಳು ಇಂಥ ವರ್ತನೆಗಳು ನಿಮ್ಮ ಹದ್ದುಮೀರಿ ನಡೆಯುತ್ತಿವೆ ಎನಿಸಿದಾಗ ಎಚ್ಚರಗೊಳ್ಳಿ. ಸ್ವಮರುಕದ ಕೂಪದಲ್ಲಿ ಬೀಳಬೇಡಿ. ಇನ್ಯಾರ ಸಹಾಯಕ್ಕಿಂತಲೂ ನಿಮಗೆ ನಿಮ್ಮದೇ ಆದ ಸಹಾಯದ ಅಗತ್ಯವಿರುತ್ತದೆ. ನಾನು ಸರಿಯಾಗಿರುವೆ. ನನ್ನನ್ನು ಯಾರೂ ನೋಡಿಕೊಳ್ಳುತ್ತಿಲ್ಲ ಅನ್ನುವಂಥ ಭಾವನೆಯಿಂದಾಚೆ ಬಂದು, ವೈದ್ಯರ ಬಳಿ ಸಮಾಲೋಚಿಸಿ. ಸಮಸ್ಯೆ ಇದೆ ಎಂದೆನಿಸಿದರೆ ಆಪ್ತಸಮಾಲೋಚಕರ ಸಹಾಯವನ್ನೂ ಪಡೆಯಿರಿ.

ಇಷ್ಟಕ್ಕೂ ಗರ್ಭಾವಸ್ಥೆಯನ್ನು ಆನಂದಿಸಬೇಕು. ಸೃಷ್ಟಿಕ್ರಿಯೆಯ ಅದ್ಭುತ ಸುಖವನ್ನು ಹೀಗೆ ಬೇಡದ ಭಾವನೆಗಳಿಗೆ ಬಲಿಯಾಗಲು ಬಿಡಬಾರದು. ಈ ಪ್ರಕ್ರಿಯೆಯನ್ನು ಆನಂದಿಸತೊಡಗಿದರೆ ಸುರಕ್ಷಿತ ತಾಯ್ತನ, ಸದೃಢ ಮಗು ನಿಮ್ಮದಾಗಲಿದೆ ಎಂದೂ ಆ ಸಮೀಕ್ಷೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.