ADVERTISEMENT

ಚಿಕಿತ್ಸೆ | ಹಾವಿನ ಕಡಿತಕ್ಕೆ ಬೇಕು ಸಂಶೋಧನೆಯ ಮಿಡಿತ

ಡಾ.ಕುಶ್ವಂತ್ ಕೋಳಿಬೈಲು
Published 26 ಸೆಪ್ಟೆಂಬರ್ 2022, 19:30 IST
Last Updated 26 ಸೆಪ್ಟೆಂಬರ್ 2022, 19:30 IST
.
.   

ಪ್ರತಿಯೊಂದು ರೋಗದ ಚಿಕಿತ್ಸೆಯನ್ನು ಉತ್ತಮಪಡಿಸಲು ಹೊಸ ಔಷಧಗಳು ಮತ್ತು ಚಿಕಿತ್ಸಾ ವಿಧಾನಗಳು ಕಾಲಾನುಕಾಲಕ್ಕೆ ಪ್ರಗತಿ ಸಾಧಿಸುವುದು ಅನಿವಾರ್ಯ. ಬಿಪಿ, ಶುಗರ್ ಮುಂತಾದ ರೋಗಗಳ ಚಿಕಿತ್ಸೆಗೆ ದೊಡ್ಡ ಆರ್ಥಿಕ ಮಾರುಕಟ್ಟೆಯಿರುವುದರಿಂದ ಫಾರ್ಮಾ ಕಂಪನಿಗಳು ಕೂಡ ಹೊಸ ಔಷಧಿಯ ಶೋಧಕ್ಕೆ ಮತ್ತು ಸಂಶೋಧನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚಮಾಡುತ್ತವೆ. ಆದರೆ ದುರಾದೃಷ್ಟವಶಾತ್ ಕೆಲವು ರೋಗಗಳು ಸಮಾಜದ ಆರ್ಥಿಕ ದುರ್ಬಲ ವರ್ಗದವರಿಗೆ ಮತ್ತು ಗ್ರಾಮೀಣ ಭಾಗದವರಿಗೆ ಅತ್ಯಧಿಕವಾಗಿ ಬಾಧಿಸುವುದರಿಂದ ಅಂತಹ ರೋಗಗಳ ಚಿಕಿತ್ಸೆಯ ವಿಧಾನದಲ್ಲಿ ಹೊಸ ಆವಿಷ್ಕಾರಗಳು ಹುಟ್ಟುವ ಸಾಧ್ಯತೆಗಳು ತೀರಾ ಕಡಿಮೆ. ಭಾರತದಲ್ಲಿ ವಾರ್ಷಿಕವಾಗಿ ಹಾವಿನ ಕಡಿತಕ್ಕೆ ತುತ್ತಾಗುವ ಸರಾಸರಿ ಹತ್ತು ಲಕ್ಷ ಜನರಲ್ಲಿ ಸುಮಾರು ಐವತ್ತು ಸಾವಿರ ಜನರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಇದರಲ್ಲಿ ಶೇ 95ರಷ್ಟು ಗ್ರಾಮೀಣ ರೈತಾಪಿ ಜನರು ಮತ್ತು ಕೂಲಿ ಕಾರ್ಮಿಕರೇ ಬಲಿಯಾಗುತ್ತಿದ್ದಾರೆ. ಹಾವಿನ ಕಡಿತವನ್ನು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಪಟ್ಟಿಗೂ ಸೇರಿಸಲಾಗಿದೆ (Neglected tropical disease).

ಭಾರತದಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು,‌ ಕರ್ನಾಟಕ ಮತ್ತು ಉತ್ತರ ಪ್ರದೇಶಗಳ ಗ್ರಾಮೀಣ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಹಾವಿನ ಕಡಿತಕ್ಕೆ ಒಳಗಾಗುತ್ತಾರೆ. ಭಾರತದಲ್ಲಿ ಕಂಡುಬರುವ ಸುಮಾರು ಮುನ್ನೂರು ಬಗೆಯ ಹಾವುಗಳಲ್ಲಿ ಸುಮಾರು ಅರವತ್ತರಷ್ಟು ವಿಷಪೂರಿತ ಹಾವುಗಳಿವೆ. ಪ್ರಮುಖವಾದ ನಾಲ್ಕು ಹಾವುಗಳ ವಿಷದ ದೋಷವನ್ನು ಮಾತ್ರ ನಿವಾರಿಸುವ ಶಕ್ತಿಯನ್ನು ಈಗ ಮಾರುಕಟ್ಟೆಯಲ್ಲಿರುವ ‘ಆ್ಯಂಟಿ ಸ್ನೇಕ್‌ ವೆನಮ್‌‘ (ASV) ಹೊಂದಿದೆ.

1. ಕೋಬ್ರಾ (ನಾಗರಹಾವು)

ADVERTISEMENT

2. ಕ್ರೈಟ್ (ಕಟ್ಟು/ಕಂದಡಿ ಹಾವು)

3. ರಸಲ್ ವೈಪರ್ (ಕೊಳಕ ಮಂಡಲ )

4. ಸ್ವಾ ಸ್ಕೇಲ್ಡ್ ವೈಪರ್ ( ಉರಿ ಮಂಡಲ ಹಾವು)

ಈ ನಾಲ್ಕು ವಿಷಯುಕ್ತ ಹಾವುಗಳು ಭಾರತದಲ್ಲಿ ಹೆಚ್ಚಾಗಿ ಜನರಿಗೆ ಕಡಿಯುತ್ತಿರುವುದು. ಹೀಗಾಗಿ’ಆ್ಯಂಟಿ ಸ್ನೇಕ್‌ ವೆನಮ್‌’ ಅನ್ನು ತಯಾರಿಸುವಾಗ ಈ ನಾಲ್ಕು ಜಾತಿಯ ಹಾವಿನ ವಿಷವನ್ನು ಮಾತ್ರ ಬಳಸಲಾಗುತ್ತದೆ. ಇದರಿಂದ ಇತರ ಪ್ರಬೇಧಗಳ ವಿಷಯುಕ್ತ ಹಾವುಗಳು ಕಚ್ಚಿದರೆ ಚಿಕಿತ್ಸೆಯಲ್ಲಿ ತೊಡಕುಂಟಾಗುತ್ತದೆ.

’ಆ್ಯಂಟಿ ಸ್ನೇಕ್‌ ವೆನಮ್‌’ ತಯಾರಿಕೆ ಬಹಳ ಸಂಕೀರ್ಣವಾದ ಪ್ರಕ್ರಿಯೆ. ಈ ನಾಲ್ಕು ಪ್ರಮುಖ ಹಾವುಗಳ ವಿಷವನ್ನು ಕುದುರೆಯ ದೇಹಕ್ಕೆ ಲಘುವಾದ ಪ್ರಮಾಣದಲ್ಲಿ ನೀಡಿದಾಗ ಕುದುರೆಯ ರಕ್ತದಲ್ಲಿ ಈ ವಿಷಗಳ ವಿರುದ್ಧ ‘ಆ್ಯಂಟಿಬಾಡಿಗಳ ಉತ್ಪಾದನೆಯಾಗುತ್ತದೆ. ಕುದುರೆಯ ರಕ್ತದಿಂದ ಈ ಆ್ಯಂಟಿಬಾಡಿಯಲ್ಲಿ ಸಂಗ್ರಹಿಸಿ ಅದರಿಂದ ’ಆ್ಯಂಟಿ ಸ್ನೇಕ್‌ ವೆನಮ್‌’ ಅನ್ನು ತಯಾರಿಸಲಾಗುತ್ತದೆ.‌ ಇದರ ಉತ್ಪಾದನೆಯು ಚೆನ್ನೈಯಲ್ಲಿ ನಡೆಯುತ್ತದೆ. ಕುದುರೆಯ ದೇಹದೊಳಗೆ ಹಾವಿನ ವಿಷವನ್ನು ಸೇರಿಸುವಾಗ ಸ್ಥಳೀಯವಾಗಿ ಸಿಗುವ ಈ ನಾಲ್ಕು ಪ್ರಮುಖ ಪ್ರಭೇದಗಳ ಹಾವುಗಳ ವಿಷವನ್ನು ಬಳಸುತ್ತಾರೆ. ಒಂದೇ ಪ್ರಭೇದದ ಹಾವುಗಳ ವಿಷವು ಕೂಡ ಭಾರತದ ವಿವಿಧ ಭಾಗಗಳಿಗೆ ಹೋದಂತೆ ಅಲ್ಪ ಸ್ವಲ್ಪ ಬದಲಾವಣೆಯಾಗುವ ಕಾರಣದಿಂದ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಇದೇ ಆ್ಯಂಟಿ ಸ್ನೇಕ್‌ ವೆನಮ್‌ ದಕ್ಷಿಣ ಭಾರತದಲ್ಲಿರುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ದಕ್ಷಿಣ ಭಾರತದ ಮತ್ತು ಕೇರಳದ ತೋಟಗಳಲ್ಲಿ ಕಾರ್ಮಿಕರಿಗೆ ಅತು ಹೆಚ್ಚು ಕಚ್ಚುವ ಹಾವಾಗಿರುವ ಮಲಾಬಾರ್ ಪಿಟ್ ವೈಪರಿನ ವಿಷವನ್ನು ಆ್ಯಂಟಿ ಸ್ನೇಕ್‌ ವೆನಮ್‌ನ ತಯಾರಿಕೆಯಲ್ಲಿ ಬಳಸಿರುವುದಿಲ್ಲ. ಪ್ರಮುಖ ನಾಲ್ಕು ವಿಷಪೂರಿತ ಹಾವುಗಳ ಸಾಲಿನಲ್ಲಿ ಬರದ ಹಾವುಗಳು ಕಚ್ಚಿದಾಗ ಕೆಲವೊಮ್ಮೆ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತದೆ; ಮತ್ತು ಅಗಾಧ ಪ್ರಮಾಣದ ಆ್ಯಂಟಿ ಸ್ನೇಕ್‌ ವೆನಮ್ ಅನ್ನು ನೀಡಬೇಕಾಗಿ ಬರಬಹುದು.

ಭಾರತದಲ್ಲಿ ಪ್ರತಿ ವರ್ಷ ಸುಮಾರು ಐವತ್ತು ಸಾವಿರದಷ್ಟು ಜನರು ಹಾವಿನ ಕಡಿತದಿಂದ ಮೃತಪಡುತ್ತಿರುವುದರ ಹಿಂದೆ ಅನೇಕ ಕಾರಣಗಳಿವೆ. ಗ್ರಾಮೀಣ ಭಾಗದ ಜನರಿಗೆ ಹಾವು ಕಡಿದಾಗ ಆಸ್ಪತ್ರೆಗೆ ಹೋಗುವ ಬದಲು ಸಾಂಪ್ರದಾಯಿಕ ಔಷಧಿಗಳತ್ತ ಮುಖ ಮಾಡುವವರೂ ಇದ್ದಾರೆ. ಆ್ಯಂಟಿ ಸ್ನೇಕ್‌ ವೆನಮ್‌ ಸುಮಾರು ಶೇ 30ರಷ್ಟು ಜನರಲ್ಲಿ ಅಲರ್ಜಿಯನ್ನು ಉಂಟುಮಾಡುತ್ತಿದೆ. ಹೀಗಾಗಿ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆ್ಯಂಟಿ ಸ್ನೇಕ್‌ ವೆನಮ್‌ ಅನ್ನು ನೀಡಲು ವೈದ್ಯರು ಹಿಂದೆ ಮುಂದೆ ನೋಡುತ್ತಾರೆ. ರೋಗಿಗೆ ಶೀಘ್ರವಾಗಿ ಆ್ಯಂಟಿ ಸ್ನೇಕ್‌ ವೆನಮ್‌ ನೀಡಿದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಮಾಡಬಹುದು. ಹಾವುಗಳು ಹೆಚ್ಚಿರುವ ಪ್ರದೇಶಗಳಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಓಡಾಡುವುದರ ಜೊತೆಗೆ ಸೂಕ್ತವಾದ ಪಾದರಕ್ಷೆಗಳನ್ನು ಧರಿಸುವುದರಿಂದಲೂ ಕಡಿತದ ಪ್ರಮಾಣವನ್ನು ಕಡಿಮೆ ಮಾಡಬಹುದು.

ಮಂಡಲ ಹಾವುಗಳು ಕಚ್ಚಿದಾಗ ಸ್ಥಳೀಯ ಭಾಗವು ಊದಿಕೊಂಡು ಹಾವು ಕಚ್ಚಿದ ಗುರುತು ಸ್ಪಷ್ಟವಾಗಿ ಕಾಣಿಸುತ್ತದೆ. ನಾಗರಹಾವುಗಳ ವಿಷವು ದೇಹದ ನರಮಂಡಲವನ್ನು ಬಾಧಿಸುವುದರ ಜೊತೆಗೆ ಅದರ ಕಡಿತವೂ ದೇಹದಲ್ಲಿ ಗುರುತನ್ನು ಮೂಡಿಸುತ್ತದೆ. ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಹರಿದಾಡುವ ಕಟ್ಟು ಹಾವಿನ ಕಡಿತದ ಗುರುತು ನಿಖರವಾಗಿ ಕಚ್ಚಿದ ಜಾಗದಲ್ಲಿ ಮೂಡುವುದಿಲ್ಲ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಂತಹ ರೋಗಿಗಳನ್ನು ಅವರ ರೋಗಲಕ್ಷಣಗಳ ಆಧಾರದ ಮೇಲೂ ಆ್ಯಂಟಿ ಸ್ನೇಕ್‌ ವೆನಮ್‌ ಅನ್ನು ನೀಡಬೇಕಾಗುತ್ತದೆ. ಹಾವುಗಳ ಕಡಿತಕ್ಕೆ ಸಮಾಜದ ಕೆಳವರ್ಗದವರೇ ತುತ್ತಾಗುವುದರಿಂದ ಬಹುಶಃಆ್ಯಂಟಿ ಸ್ನೇಕ್‌ ವೆನಮ್‌ನ ಸಂಶೋಧನೆಯಲ್ಲಿ ದಶಕಗಳಿಂದ ಹೆಚ್ಚಿನ ಬದಲಾವಣೆಗಳಾಗಲಿಲ್ಲ ಎನಿಸುತ್ತದೆ. ಜಾನ್ ಎಫ್ ಕೆನಡಿ ಅಮೆರಿಕದ ಅಧ್ಯಕ್ಷರಾಗಿದ್ದಾಗ ಅವರ ಪ್ರೀಟರ್ಮ್ ಮಗುವು ಚಿಕಿತ್ಸೆ ಫಲಕಾರಿಯಾಗದ ಶ್ವಾಸಕೋಶದ ಸಮಸ್ಯೆಯಿಂದ ಮೃತಪಟ್ಟಿತು. ತದನಂತರ ಪ್ರೀಟರ್ಮ್ ಮಕ್ಕಳ ಶ್ವಾಸಕೋಶದ ಕಾಯಿಲೆಯ ಚಿಕಿತ್ಸೆ ಬಗೆಗೆ ಮಹತ್ತರವಾದ ಅನ್ವೇಷಣೆಗಳು ನಡೆದು, ನವಜಾತ ಶಿಶುಗಳ ಚಿಕಿತ್ಸಾ ಪದ್ಧತಿಗಳು ಉತ್ತಮಗೊಂಡವು.

‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ (ICMR) ಕಳೆದ ತಿಂಗಳು ಭಾರತದಲ್ಲಿ ಹಾವಿನ ಕಡಿತದಿಂದಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ನಿರ್ದೇಶನವನ್ನು ನೀಡಿದೆ. ಹಾವಿನ ಕಡಿತಗಳು ಹೆಚ್ಚಾಗಿ ಕಂಡು ಬರುವ ಭಾರತದ ಹದಿಮೂರು ರಾಜ್ಯಗಳ ಮೂವತ್ತೊಂದು ಜಿಲ್ಲೆಗಳನ್ನು ಗುರುತು ಮಾಡಲಾಗಿದೆ. ಮುಂದಿನ ಹದಿನೆಂಟು ತಿಂಗಳುಗಳ ಕಾಲ ಈ ಜಿಲ್ಲೆಗಳಲ್ಲಿರುವ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಗ್ರಾಮದಿಂದಲೂ ಹಾವಿನ ಕಡಿತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಪ್ರಕ್ರಿಯೆಯಿಂದ ನಮಗೆ ದೇಶದ ವಿವಿಧ ಭಾಗಗಳಲ್ಲಿರುವ ವಿಷಪೂರಿತ ಹಾವುಗಳ ಕಡಿತದ ಬಗೆಗಿನ ಸ್ಪಷ್ಟ ಚಿತ್ರಣ ದೊರಕಲಿದೆ. ನಂತರದ ದಿನಗಳಲ್ಲಾದರೂ ವಿವಿಧ ಪ್ರದೇಶಗಳಲ್ಲಿ ಬಳಸುವ ಆ್ಯಂಟಿ ಸ್ನೇಕ್‌ ವೆನಮ್‌ನ ತಯಾರಿಕೆಯಲ್ಲಿ ಬಳಸ್ಪಡುವ ಹಾವಿನ ವಿಷಗಳು ಬದಲಾಗಬಹುದು. ಹಾವಿನ ಕಡಿತದ ಕುರಿತಾಗಿ ಹೊಸ ಪಾಲಿಸಿಗಳು ಜಾರಿಯಾದಲ್ಲಿ, ಹಾವಿನ ಕಡಿತದಿಂದಾಗಿ ಸಾಯುವವರ ಸಂಖ್ಯೆಯೂ ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.