ADVERTISEMENT

ವಯಸ್ಕರು, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಳಸಲು ಝೈಡಸ್ ಕ್ಯಾಡಿಲಾ ಲಸಿಕೆಗೆ ಅಸ್ತು

ರಾಯಿಟರ್ಸ್
Published 20 ಆಗಸ್ಟ್ 2021, 20:04 IST
Last Updated 20 ಆಗಸ್ಟ್ 2021, 20:04 IST
ಡೆಕ್ಕನ್ ಹೆರಾಲ್ಡ್‌ ಸಂಗ್ರಹ ಚಿತ್ರ
ಡೆಕ್ಕನ್ ಹೆರಾಲ್ಡ್‌ ಸಂಗ್ರಹ ಚಿತ್ರ   

ನವದೆಹಲಿ: ‘ಭಾರತದ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಝೈಕೋವ್‌-ಡಿ’ಯನ್ನು ವಯಸ್ಕರು ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಕ ರು(ಡಿಜಿಸಿಐ) ಅನುಮತಿ ನೀಡಿದ್ದಾರೆ’ ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಶುಕ್ರವಾರ ಹೇಳಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಝೈಕೋವ್‌-ಡಿ ಡಿಎನ್‌ಎ ಆಧಾರಿತ ಲಸಿಕೆಯಾಗಿದೆ. ಮೂರು ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಲಾಗುವುದು. ಈ ಲಸಿಕೆಯು ಮನುಷ್ಯನ ದೇಹದಲ್ಲಿ ಸಾರ್ಸ್‌ ಕೋವ್‌-2 ವೈರಾಣುವಿನ ಸ್ಪೈಕ್ ಪ್ರೋಟೀನ್‌ ಅನ್ನು ಉತ್ಪಾದಿಸುತ್ತದೆ. ಆ ಮೂಲಕ ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಈ ಲಸಿಕೆಯು ಕೋವಿಡ್‌ನಿಂದಲೂ ರಕ್ಷಣೆ ನೀಡುತ್ತದೆ ಮತ್ತು ವೈರಾಣುಗಳನ್ನೂ ನಾಶ ಮಾಡುತ್ತದೆ ಎಂದು ಕಂಪನಿ ಹೇಳಿದೆ.

‘ಇದು ಡಿಎನ್‌ಎ ಆಧಾರಿತ ಲಸಿಕೆಯಾಗಿರುವ ಕಾರಣ, ಕೊರೊನಾವೈರಸ್‌ನ ವಿವಿಧ ರೂಪಾಂತರ ತಳಿಗಳ ವಿರುದ್ಧ ಹೋರಾಡಲು ಮಾರ್ಪಾಡು ಮಾಡಬಹುದಾಗಿದೆ. ಇದು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯು ಹೇಳಿದೆ.

ADVERTISEMENT

‘ಜೈವಿಕ ತಂತ್ರಜ್ಞಾನ ಇಲಾಖೆಯ ಕೋವಿಡ್‌ ಸುರಕ್ಷಾ ಕಾರ್ಯಕ್ರಮದ ಅಡಿ ಝೈಡಸ್ ಕ್ಯಾಡಿಲಾ ಕಂಪನಿ ಇದನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯು ಕೋವಿಡ್ ವಿರುದ್ಧ ಶೇ 66.6ರಷ್ಟು ಪರಿಣಾಮವನ್ನು ಹೊಂದಿದೆ’ ಎಂದು ಇಲಾಖೆಯು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕಂಪನಿಯು ವಾರ್ಷಿಕ 10-12 ಕೋಟಿ ಡೋಸ್‌ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಜಾನ್ಸನ್ ಅಂಡ್ ಜಾನ್ಸನ್ ಪತ್ರ:

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ತನ್ನ ಕೋವಿಡ್‌ ಲಸಿಕೆಯನ್ನು 12-17 ವರ್ಷದ ಮಕ್ಕಳಿಗೆ ನೀಡಲು ಅನುಮತಿ ಕೋರಿ, ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ ಪತ್ರ ಬರೆದಿದೆ. ಇದೇ ಸೋಮವಾರ ಪತ್ರ ಬರೆಯಲಾಗಿದೆ.

‘ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ಕೋರಿದ್ದೇವೆ. ಕೋವಿಡ್‌ ವಿರುದ್ಧ ಸಮುದಾಯ ಪ್ರತಿರೋಧ ಶಕ್ತಿಯನ್ನು ಸೃಷ್ಟಿಸಲು ಮಕ್ಕಳಿಗೂ ಲಸಿಕೆ ನೀಡುವುದು ಅನಿವಾರ್ಯ. ವಿಶ್ವದ ಬಹುತೇಕ ದೇಶಗಳಲ್ಲಿ ಮಕ್ಕಳಿಗೆ ಕೋವಿಡ್‌ ಲಸಿಕೆ ಹಾಕಲಾಗುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಲಸಿಕೆ ಹಾಕುವ ದಿಸೆಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಮಕ್ಕಳಿಗೂ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಜಾನ್ಸನ್ ಅಂಡ್ ಜಾನ್ಸನ್ ಹೇಳಿದೆ. ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಝೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆಗೆ ಶುಕ್ರವಾರವಷ್ಟೇ ಅನುಮತಿ ದೊರೆತಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಈ ಅನುಮತಿ ದೊರೆತಿಲ್ಲ.ಭಾರತ್ ಬಯೊಟೆಕ್ ಕಂಪನಿಯು ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು 2-18 ವರ್ಷದ ಮಕ್ಕಳಿಗೆ ನೀಡುವ ಸಂಬಂಧ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.