ADVERTISEMENT

ಸ್ಪಂದನ| ಆಸ್ತಮಾದಿಂದ ಗರ್ಭಧಾರಣೆಗೆ ತೊಂದರೆಯೇ?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 6:40 IST
Last Updated 26 ಮಾರ್ಚ್ 2021, 6:40 IST
ಪ್ರಾತಿನಿಧಿಕ ಚಿತ್ರ (Getty Images)
ಪ್ರಾತಿನಿಧಿಕ ಚಿತ್ರ (Getty Images)   

ಪ್ರಶ್ನೆ: 26 ವರ್ಷ, ನಾನು ಕಳೆದ 3 ವರ್ಷಗಳಿಂದ ಆಸ್ತಮಾದಿಂದ ಬಳಲುತ್ತಿದ್ದೇನೆ. ಮೊದಲನೇ ಸಲ ಗರ್ಭ ಧರಿಸಿದಾಗ ಗರ್ಭಪಾತವಾಯಿತು. ಆಸ್ತಮಾದಿಂದ ಗರ್ಭಧಾರಣೆಗೆ ತೊಂದರೆಯಾಗದ ಹಾಗೆ ಹೇಗೆ ನಿಭಾಯಿಸುವುದು?

ರೂಪಾ, ಊರಿನ ಹೆಸರಿಲ್ಲ.

ಉತ್ತರ: ರೂಪಾರವರೇ, ನಿಮ್ಮ ಆಸ್ತಮಾ ಕಾಯಿಲೆ ನಿಯಂತ್ರಣದಲ್ಲಿದ್ದರೆ ಗರ್ಭಧಾರಣೆಗೆ ಏನೂ ಅಡೆತಡೆಯಾಗಲಾರದು. ಈ ಹಿಂದೆ ಗರ್ಭಪಾತವಾಗಿದ್ದರೂ ಅದು ಆಸ್ತಮಾ ಕಾರಣದಿಂದಿರಲಿಕ್ಕಿಲ್ಲ. ಶೇ 30ಕ್ಕೂ ಹೆಚ್ಚು ಜನರಲ್ಲಿ ಏನೂ ತೊಂದರೆಯಾಗದೇ ಇದ್ದರೆ, ಇನ್ನು ಶೇ 30ರಷ್ಟು ಜನರಲ್ಲಿಆಸ್ತಮಾ ಕಡಿಮೆಯಾಗಬಹುದು, ಮತ್ತೆ ಶೇ 30ರಷ್ಟು ಜನರಲ್ಲಿ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ನೆನಪಿಡಬೇಕಾದ ಮುಖ್ಯ ಸಂಗತಿಯೆಂದರೆ ಈಗಾಗಲೇ ತೆಗೆದುಕೊಳ್ಳುತ್ತಿರುವ ಯಾವುದೇಆಸ್ತಮಾ ಔಷಧಿಯನ್ನು ನಿಲ್ಲಿಸಬೇಡಿ. ಇನ್‌ಹೇಲರ್‌ಗಳಲ್ಲಂತೂ ಅತಿ ಕಡಿಮೆ ಪಾರ್ಶ್ವ ದುಷ್ಪರಿಣಾಮಗಳು ತಾಯಿ ಹಾಗೂ ಮಗುವಿನ ಮೇಲಾಗಬಹುದು ಅಥವಾ ಆಗದೇ ಇರಬಹುದು. ಹೆರಿಗೆಯಲ್ಲೂ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ತೊಂದರೆಯಾಗುವುದಿಲ್ಲ. 24 ರಿಂದ 32 ವಾರಗಳಲ್ಲಿ ಕೆಲವೊಮ್ಮೆಆಸ್ತಮಾ ತೀವ್ರತೆ ಹೆಚ್ಚಾಗಬಹುದು. ತಜ್ಞವೈದ್ಯರ ಮೇಲ್ವಿಚಾರಣೆ ಹಾಗೂ ಸಲಹೆಯನ್ನು ಮುಂದುವರೆಸಿದರೆ ಗರ್ಭಾವಸ್ಥೆಯನ್ನು ಸುಗಮವಾಗಿ ದಾಟುತ್ತೀರಾ. ಇನ್ನೂ ನೆನಪಿಡಬೇಕಾದ ಸಂಗತಿಯೆಂದರೆ ನಿಮ್ಮ ಮಗುವಿಗೂ ಭವಿಷ್ಯದಲ್ಲಿಆಸ್ತಮಾ ಬರುವ ಸಂಭವ ಹೆಚ್ಚಿರುವುದರಿಂದ ನೀವು ಸುರಕ್ಷಿತ ಹಾಗೂ ದೀರ್ಘಾವಧಿ ಸ್ತನ್ಯಪಾನ ನಿಮ್ಮ ಮಗುವಿಗೆ ಮಾಡಿಸಿದಾಗ ಈ ಸಂಭವ ಕಡಿಮೆಯಾಗುತ್ತದೆ.

ADVERTISEMENT

ಪ್ರಶ್ನೆ: ನನಗೆ ಮಗು ಆಗಿ ಒಂದು ವರ್ಷ, ಇನ್ನೂ ಮುಟ್ಟಾಗಿಲ್ಲ. ಮಗುವಿಗೆ ಇನ್ನೂ ಎದೆಹಾಲುಣಿಸುತ್ತಿದ್ದೀನಿ. ಹೆರಿಗೆಯಾದ ಮೇಲೆ ಸೊಂಟ, ಕಾಲು ನೋವು ಮುಟ್ಟಿನ ಸಮಯದಲ್ಲಿ ಬರುವ ಹಾಗೆ ಬರುತ್ತಿದೆ. ನನ್ನ ಪತಿ ಯಾವುದೇ ಸಂತಾನ ನಿರೋಧಕ ಬಳಸಲು ಒಪ್ಪುವುದಿಲ್ಲ. ಇಷ್ಟು ಬೇಗ ಇನ್ನೊಂದು ಮಗು ಬೇಡ. ಹೀಗಾಗಿ ನಾನು ಲೈಂಗಿಕ ಸಂಪರ್ಕವಾದ 72 ಗಂಟೆಯೊಳಗೆ ತೆಗೆದುಕೊಳ್ಳುವ ಮಾತ್ರೆ ತೆಗೆದುಕೊಳ್ಳಬಹುದೇ? ಇದರಿಂದ ಅಪಾಯವಿಲ್ಲವೇ?

ಕಾವ್ಯ, ಊರಿನ ಹೆಸರಿಲ್ಲ.

ಉತ್ತರ: ನಿಮ್ಮ ಹಾಗೇ ತಕ್ಷಣವೇ ಇನ್ನೊಂದು ಮಗು ಬೇಡವೆಂದಿದ್ದರೂ ಶೇ 60ಕ್ಕಿಂತ ಹೆಚ್ಚು ಯುವತಿಯರು ಯಾವುದೇ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ವಿಫಲರಾಗಿ ಗರ್ಭಪಾತಕ್ಕೆ ಮುಂದಾಗುತ್ತಾರೆ. ಭಾರತದಲ್ಲಿ ಶೇ 90ರಷ್ಟು ಸಂದರ್ಭಗಳಲ್ಲಿ ಕೇವಲ ಮಹಿಳೆಯರೇ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ. ಎಲ್ಲಾ ಹೆಣ್ಣು ಮಕ್ಕಳೂ ಹೆರಿಗೆಯ ನಂತರದ ಸಂತಾನ ನಿಯಂತ್ರಣದ ಬಗ್ಗೆ ಗರ್ಭಿಣಿಯಾದಾಗಲೇ ಯೋಚಿಸಬೇಕು. ನೀವು ಹೆರಿಗೆಯಾದ ತಕ್ಷಣ (ಸಿಸೇರಿಯನ್‌ನಲ್ಲೂ) ಪಿ.ಪಿ.ಐ.ಯು.ಸಿ.ಡಿ ಅಳವಡಿಸಿಕೊಳ್ಳಬಹುದಿತ್ತು. ಈಗಲೂ ಕಾಲಮಿಂಚಿಲ್ಲ, ಕಾಪರ್‌ಟಿಯನ್ನು ಕೂಡಾ ಹಾಕಿಸಿಕೊಳಬಹುದು. ನೀವು ಕೇಳಿದ 72 ಗಂಟೆಯೊಳಗೆ ತೆಗೆದುಕೊಳ್ಳುವ ಮಾತ್ರೆ ತುರ್ತು ಗರ್ಭನಿರೋಧಕವಷ್ಟೇ. ಅದನ್ನೇ ಸಂತಾನ ನಿಯಂತ್ರಣ ಕ್ರಮವಾಗಿ ಬಳಸಬಾರದು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಕಾಪರ್ಟಿ ಹಾಕಿಸಿಕೊಳ್ಳಬಹುದು ಇಲ್ಲವೇ ಸಂತಾನ ನಿಯಂತ್ರಣ ಚುಚ್ಚುಮದ್ದು 3 ತಿಂಗಳಿಗೊಮ್ಮೆ ಹಾಕಿಸಿಕೊಳ್ಳುಬಹುದು ಅಥವಾ ಸಂತಾನ ನಿಯಂತ್ರಣ ಗುಳಿಗೆಗಳನ್ನು (ಓ.ಸಿ.ಪಿಲ್ಸ್) ಉಪಯೋಗಿಸಬಹುದು. ಯಾವುದಕ್ಕೂ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.

ಪ್ರಶ್ನೆ: ನನಗೆ ಮದುವಯಾಗಿ 11 ವರ್ಷಗಳು, 2 ಮಕ್ಕಳಿವೆ. ಗರ್ಭಕೋಶ ಜಾರಿದೆ ಎಂಧು ವೈದ್ಯರು ನಾಲ್ಕು ಬಾರಿ ಸ್ಕ್ಯಾನಿಂಗ್ ಮಾಡಿಸಿದ್ದರೂ ಯಾವ ಔಷಧವನ್ನೂ ಕೊಟ್ಟಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿ ಎಂದಿದ್ದಾರೆ, ಪರಿಹಾರ ತಿಳಿಸಿ.

ಹೆಸರು, ಊರು ಇಲ್ಲ

ಉತ್ತರ: ನಿಮಗೆಷ್ಟು ವಯಸ್ಸೆಂದು ತಿಳಿಸಿಲ್ಲ. ನೀವು ಕೊಟ್ಟಿರುವ ಮಾಹಿತಿಯ ಪ್ರಕಾರ ನಿಮಗಿರುವುದು ಗರ್ಭಕೋಶ ಜಾರುವಿಕೆ (ಪ್ರೊಲಾಪ್ಸ್ ಯೂಟರಸ್). ಅದು ಯೋನಿದ್ವಾರದಿಂದ ಸಂಪೂರ್ಣ ಹೊರಗಿದ್ದರೆ (3ನೇ ಡಿಗ್ರಿ) ಅದಕ್ಕೆ ನಿಮ್ಮ ವೈದ್ಯರು ಹೇಳಿದ ಹಾಗೇ ಶಸ್ತ್ರಚಿಕಿತ್ಸೆಯೇ ಪರಿಹಾರ. ಆದರೆ ನಿಮ್ಮ ವಯಸ್ಸು ಚಿಕ್ಕದಿದ್ದು ಗರ್ಭಕೋಶ ಸ್ವಲ್ಪವೇ ಜಾರಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಎತ್ತಿ ಕಟ್ಟಬಹುದು. ಅದನ್ನು ವೈದ್ಯರೇ ನಿರ್ಣಯಿಸುತ್ತಾರೆ. ಸ್ವಲ್ಪವೇ ಜಾರಿದ್ದಾಗ, ಇಲ್ಲವೇ ಗರ್ಭಕೋಶ ಭವಿಷ್ಯದಲ್ಲಿ ಜಾರದೇ ಇರುವ ಹಾಗೆ ನೋಡಿಕೊಳ್ಳಲು ಮಹಿಳೆಯರು ಮುಂಜಾಗ್ರತೆ ವಹಿಸಬೇಕು. ಪೌಷ್ಟಿಕ ಆಹಾರಸೇವನೆಯ ಜೊತೆ ನಿಯಮಿತವಾಗಿ ಚಿಕ್ಕಂದಿನಿಂದಲೇ ಅಸ್ಥಿಕುಹರದ ಸ್ನಾಯುಗಳನ್ನು ಬಲಿಷ್ಠವಾಗಿಡಲು ಸೂಕ್ತ ವ್ಯಾಯಾಮ (ಕೆಗಲ್ಸ್ ವ್ಯಾಯಾಮ) ಮಾಡಬೇಕು. ಹೆರಿಗೆಯ ಸಂದರ್ಭದಲ್ಲಿ ಗರ್ಭಕಂಠ ಅಗಲವಾಗುವ ಮೊದಲೇ ಮುಕ್ಕಬಾರದು. ಹೆರಿಗೆಯ ನಂತರ ಸಾಕಷ್ಟು ವಿಶ್ರಾಂತಿ ಪಡೆದು ಹೊಟ್ಟೆಯ ಸ್ನಾಯುಗಳಿಗೆ ಸೂಕ್ತ ವ್ಯಾಯಾಮ ಮಾಡಬೇಕು, ಎರಡು ಮಕ್ಕಳ ನಡುವೆ ಕನಿಷ್ಠ 2-3 ವರ್ಷ ಅಂತರವಿರಬೇಕು. ಇವೆಲ್ಲದರಿಂದ ಗರ್ಭಕೋಶ ಜಾರುವುದನ್ನು ತಡೆಗಟ್ಟಬಹುದು.

ಪ್ರಶ್ನೆ: ನನಗೆ 25 ವರ್ಷ. ಮದುವೆ ಆಗಿಲ್ಲ, ಮುಟ್ಟು ಎರಡು ತಿಂಗಳು ಅಥವಾ ಮೂರು ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ, ಮುಟ್ಟಾದರೆ ನಿಲ್ಲೋದೆ ಇಲ್ಲ. ಸ್ಕ್ಯಾನಿಂಗ್ ಆಗಿದೆ. ಎಲ್ಲಾ ನಾರ್ಮಲ್ ಇದೆ ಎಂದಿರುವ ವೈದ್ಯರು ಇದಕ್ಕೆ ಚಿಕಿತ್ಸೆ ಇಲ್ಲ ಅಂದಿದ್ದಾರೆ. ಪ್ರೊಲ್ಯಾಕ್ಟಿನ್ 56.2 ಇದೆ. ಏನು ಮಾಡಲಿ?

ಅರ್ಚನಾ, ಊರಿನ ಹೆಸರಿಲ್ಲ.

ಉತ್ತರ: ರಕ್ತದಲ್ಲಿ ಪ್ರೊಲಾಕ್ಟಿನ್ ಮಟ್ಟವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಯಾವುದೇ ಒತ್ತಡವಿಲ್ಲದೆ 9 ರಿಂದ 10 ಗಂಟೆಯೊಳಗೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ. ಪ್ರೊಲಾಕ್ಟಿನ್ ಮಟ್ಟವು ಹೈಪೋಥೈರಾಯ್ಡಿಸಮ್ (ಥೈರಾಯಿಡ್ ಹಾರ್ಮೋನ್‌ ಮಟ್ಟ ರಕ್ತದಲ್ಲಿ ಕಡಿಮೆ ಇರುವುದು) ನಲ್ಲೂ ಹೆಚ್ಚಾಗಬಹುದು. ಆದ್ದರಿಂದ ಜೊತೆಗೆ ಥೈರಾಯಿಡ್ ಹಾರ್ಮೋನ್‌ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಕೆಲವು ಹೊಟ್ಟೆಹುಣ್ಣಿಗೆ ತೆಗೆದುಕೊಳ್ಳುವ ಮಾತ್ರೆಗಳಿಂದ ಹಾಗೂ ಖಿನ್ನತೆ ಇನ್ನಿತರ ಮಾನಸಿಕ ಕಾಯಿಲೆಗಳಿಗಾಗಿ ತೆಗೆದುಕೊಳ್ಳುವ ಔಷಧಗಳಿಂದಲೂ ಹೆಚ್ಚಾಗುತ್ತವೆ. ಪಿಟ್ಯೂಟರಿ ಗ್ರಂಥಿಯ ಗಡ್ಡೆಗಳಲ್ಲೂ ಪ್ರೊಲಾಕ್ಟಿನ್ ಹೆಚ್ಚಾಗಬಹುದು. ಆದರೆ ಆ ಗಡ್ಡೆಗಳಾದಾಗ ವಾಂತಿ, ತಲೆನೋವು, ಕಣ್ಣಿನ ತೊಂದರೆಗಳು ಇತ್ಯಾದಿ ಇರುತ್ತವೆ. ಕೆಲವು ಸಂದರ್ಭದಲ್ಲಿ ಪಿ.ಸಿ.ಓ.ಡಿ ಸಮಸ್ಯೆಯಲ್ಲೂ ಹೆಚ್ಚಿರುತ್ತದೆ. ಲಿವರ್ ಮತ್ತು ಕಿಡ್ನಿ ಸಮಸ್ಯೆಗಳಲ್ಲೂ ಈ ಹಾರ್ಮೋನ್‌ ಹೆಚ್ಚಿರಬಹುದು. ಯಾವುದಕ್ಕೂ ತಜ್ಞವೈದ್ಯರಿಂದ ಇನ್ನೊಮ್ಮೆ ತಪಾಸಣೆಗೊಳಗಾಗಿ.

ಪ್ರಶ್ನೆ : ಮದುವೆಯಾಗಿ ಒಂದೂವರೆ ವರ್ಷ. ಒಂದು ತಿಂಗಳ ಹಿಂದೆ ಗರ್ಭಧಾರಣೆಯಾಗಿ 36ನೇ ದಿನದಿಂದ ಹೊಟ್ಟೆನೋವು ಶುರುವಾಗಿ 47ನೇ ದಿನಕ್ಕೆ ಸ್ಕ್ಯಾನಿಂಗ್ ಮಾಡಿಸಿದಾಗ ಮಗು ಕಾಣುಸ್ತಾಯಿಲ್ಲ, ಒಂದುವಾರ ಬಿಟ್ಟು ಸ್ಕ್ಯಾನಿಂಗ್ ಮಾಡಿಸಿ ಎಂದಿದ್ದರು. ಆದರೆ 54ನೇ ದಿನಕ್ಕೆ ಹೊಟ್ಟೆನೋವು ತಡೆಯೋಕೇ ಆಗದೇ ಆಸ್ಪತ್ರೆಗೆ ಹೋದಾಗ ಎಕ್ಟೋಪಿಕ್ ಪ್ರೆಗ್ನೆನ್ಸಿ ಆಗಿದೆ, ಟ್ಯೂಬ್ ಬ್ಲಾಸ್ಟ್ ಆಗಿದೆ ಎಂದು ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿದರು. ನನಗೆ ಮುಂದೆ ಮಗು ಯಾವಾಗ ಆಗಬಹುದು. ಈ ಆಪರೇಷನ್ ಆದರೆ ಮಗು ಆಗುವುದು ತಡವೇ? ನನ್ನ ತೂಕ 41 ಕೆ.ಜಿ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಭಯ ಆಗುತ್ತಿದೆ. ಏನು ಮಾಡಲಿ?

ಹೆಸರು ಊರು ಇಲ್ಲ.

ಉತ್ತರ: ನಿಮಗೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಅಥವಾ ಎಡೆತಪ್ಪಿದ ಗರ್ಭದಿಂದಾಗಿ ಕೇವಲ ಒಂದು ಟ್ಯೂಬ್ ಅಥವಾ ಗರ್ಭನಾಳ ಗಾಸಿಯಾಗಿರುವುದಷ್ಟೇ. ನಿಮಗೆ ಇನ್ನೊಂದು ಗರ್ಭನಾಳ ಸರಿಯಾಗಿರುವುದರಿಂದ ಮಗು ಆಗಲು ಯಾವುದೇ ತೊಂದರೆಯಿಲ್ಲ. ನೀವು ಚಿಂತಿಸದೇ ಇನ್ನೊಂದು ಮಗು ಪಡೆಯಲು ಪ್ರಯತ್ನಿಸಿ. ತುಂಬಾ ಜನರಿಗೆ ಒಮ್ಮೆ ಎಕ್ಟೋಪಿಕ್ ಆದ ನಂತರ ಮತ್ತೆ ಮಕ್ಕಳಾಗಿದೆ, ಭಯ ಬೇಡ. ನಿಯಮಿತವಾಗಿ ದಿನಕ್ಕೊಂದು 5 ಮಿ.ಗ್ರಾಂ ನ ಫಾಲಿಕ್ ಆಸಿಡ್ ಮಾತ್ರೆಗಳನ್ನು ನುಂಗಿ. ಪೌಷ್ಟಿಕ ಆಹಾರವನ್ನು ಸೇವಿಸಿ, ತಿಂಗಳಿಗೊಮ್ಮೆ ಸರಿಯಾಗಿ ಮುಟ್ಟಾಗುತ್ತಿದ್ದರೆ 12 ರಿಂದ 18 ದಿನಗಳವರೆಗೆ ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಿ. ತಜ್ಞವೈದ್ಯರೊಂದಿಗೆ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಳ್ಳಿ.

ಪ್ರಶ್ನೆ: ಮೇಡಂ, ಮೆನ್‌ಸ್ಟ್ರುಯೆಲ್ ಕಪ್ ಬಳಸುವುದು ಒಳ್ಳೆಯದೋ ಅಥವಾ ಪ್ಯಾಡ್ ಬಳಕೆ ಒಳ್ಳೆಯದೋ? ಯಾವ ಬ್ರಾಂಡ್ ಉಪಯೋಗಿಸಲಿ. ನನಗೆ 6ನೇ 7ನೇ ದಿನ ಸ್ರಾವ ಆಗುತ್ತದೆ. ಬಿಳಿಮುಟ್ಟು ಯಾವಾಗಾಗುತ್ತದೆ? ಮುಟ್ಟಿಗೆ ಮೊದಲೋ ಅಥವಾನಂತರವೋ?

ಚಂದನಾ, ಊರು ಇಲ್ಲ.

ಉತ್ತರ: ಚಂದನಾರವರೇ ನೀವು ನಿಮ್ಮ ವಯಸ್ಸು ತಿಳಿಸಿಲ್ಲ. ವಿವಾಹವಾಗಿದೆಯೇ, ಮಕ್ಕಳಾಗಿದೆಯೇ ತಿಳಿಸಿಲ್ಲ. ವಿವಾಹವಾಗಿದ್ದಲ್ಲಿ ನೀವು ಮುಟ್ಟಿನ ಬಟ್ಟಲು (ಮೆನ್‌ಸ್ಟ್ರುಯೆಲ್ ಕಪ್) ಉಪಯೋಗಿಸುವುದು ಒಳ್ಳೆಯದು. ಮಿತವ್ಯಯಕಾರಿ ಹಾಗೂ ಪರಿಸರ ಸ್ನೇಹಿಯೂ ಹೌದು. ಪ್ಯಾಡ್‌ನ ಹಾಗೆ 4–5 ಗಂಟೆಗೊಮ್ಮೆ ಬದಲಾಯಿಸಬೇಕೆಂದಿಲ್ಲ. 6 ರಿಂದ 7 ದಿನದವರೆಗೆ ಬ್ಲೀಡಿಂಗ್ ಕೆಲವೊಮ್ಮೆ ಆಗಬಹುದು. ಬಿಳಿಮುಟ್ಟು ಅಲ್ಪಸ್ವಲ್ಪ ಆಗುವುದು ಸಹಜ. ನೈಸರ್ಗಿಕವಾಗಿ ಮುಟ್ಟು ಬರುವ ಮುನ್ನ ಸ್ವಲ್ಪ ಬಿಳಿಮುಟ್ಟಾಗಬಹುದು. ಅಷ್ಟೇ ಅಲ್ಲಾ ಋತುಚಕ್ರದ ಮಧ್ಯದಲ್ಲಿ ಅಂಡಾಶಯದಿಂದ ಅಂಡೋತ್ಪತ್ತಿಯಾಗುವಾಗ ಸುಮಾರು 13 ಅಥವಾ 14ನೇ ದಿನದಲ್ಲಿ ಸ್ವಲ್ಪ ಬಿಳಿಮುಟ್ಟಾಗಬಹುದು. ಲೈಂಗಿಕವಾಗಿ ಉದ್ರೇಕಗೊಂಡಾಗಲೂ ಸ್ವಲ್ಪ ಮಟ್ಟಿಗೆ ಬಿಳಿಮುಟ್ಟು ಹೆಚ್ಚಾಗಬಹುದು. ಇದಕ್ಕೆಲ್ಲಾ ಚಿಕಿತ್ಸೆ ಬೇಡ. ಋತುಸ್ರಾವದ ನಂತರವೂ ಬಿಳಿಮುಟ್ಟಾದರೆ ಅದು ಸಹಜವಲ್ಲ ಮತ್ತು ಯಾವುದೇ ಬಿಳಿಮುಟ್ಟು ವಾಸನೆಯಿಂದ ಕೂಡಿದ್ದರೆ, ಜನನಾಂಗದ ಭಾಗದಲ್ಲಿ ತುರಿಕೆಯಿದ್ದಾಗ ಹಸಿರು– ಹಳದಿ ಬಣ್ಣದಿಂದ ಕೂಡಿದ್ದರೆ ಆಗ ಅದು ಅಸಹಜ ಎನಿಸಿಕೊಳ್ಳುತ್ತದೆ. ನೀವಾಗ ತಜ್ಞವೈದ್ಯರನ್ನು ಸಂಪರ್ಕಿಸಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.