ADVERTISEMENT

ಡಾ.ಸಿ.ಎನ್.ಮಂಜುನಾಥ ಸಂದರ್ಶನ: ಹೃದ್ರೋಗಿಗಳ ಸಂಖ್ಯೆ ಹೆಚ್ಚಳ ಕಳವಳಕಾರಿ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಅಭಿಮತ

ಸಂತೋಷ ಈ.ಚಿನಗುಡಿ
Published 14 ಸೆಪ್ಟೆಂಬರ್ 2021, 7:53 IST
Last Updated 14 ಸೆಪ್ಟೆಂಬರ್ 2021, 7:53 IST
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ   

ಕಲಬುರ್ಗಿ: ‘ಹೃದಯಾಘಾತವಾದ ನಂತರ ರೋಗಿಯನ್ನು 3 ತಾಸಿನ ಒಳಗೆ ಆಸ್ಪತ್ರೆಗೆ ಸೇರಿಸಬೇಕು. ಇದರಿಂದ ಸಾವಿನ ಪ್ರಮಾಣ ತಗ್ಗಿಸಬಹುದು. ಇಲ್ಲದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಪ್ರತಿ 30 ನಿಮಿಷಕ್ಕೆ ಶೇ 7ರಷ್ಟು ಹೆಚ್ಚಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ನೀಗಿಸುವ ಉದ್ದೇಶದಿಂದ 350 ಬೆಡ್‌ಗಳ ಹೊಸ ಜಯದೇವ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 24 ತಿಂಗಳಲ್ಲಿ ಇದು ಜನಸೇವೆಗೆ ಲಭ್ಯವಾಗಲಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಹೇಳಿದರು.

ನಗರದಲ್ಲಿ ಸೋಮವಾರ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ ಅವರು, ‘ಹೃದಯಾಘಾತದ ನಂತರದ ಪ್ರತಿ ನಿಮಿಷವೂ ‘ಗೋಲ್ಡನ್‌ ಆವರ್‌’ ಆಗಿರುತ್ತದೆ. ಈ ಭಾಗದಲ್ಲಿ ಹೆಚ್ಚುತ್ತಿರುವ ಹೃದ್ರೋಗಿಗಳ ಸಂಖ್ಯೆ ಹಾಗೂ ‘ಸುವರ್ಣ ಸಮಯ’ದ ಅವಶ್ಯಕತೆ ನೋಡಿಕೊಂಡೇ ದೊಡ್ಡ ಆಸ್ಪತ್ರೆ ಕಟ್ಟುತ್ತಿದ್ದೇವೆ’ ಎಂದರು.‌

ಅವರೊಂದಿಗಿನ ಆಯ್ದ ಪ್ರಶ್ನೋತ್ತರ ಗಳು ಇಲ್ಲಿವೆ.

ADVERTISEMENT

l ಕಲಬುರ್ಗಿಯ ಹೊಸ ಆಸ್ಪತ್ರೆ ಸ್ವರೂಪ ಹೇಗಿರುತ್ತದೆ?

– ‌‌ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹ 153 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ನಗರದ ‘ಹೃದಯ ಭಾಗ’ದಲ್ಲೇ ಕಟ್ಟಡ ನಿರ್ಮಿಸಲಾಗುತ್ತಿದೆ. ಖಾಸಗಿ ಹೈಟೆಕ್‌ ಆಸ್ಪತ್ರೆಗಳಷ್ಟೇ ಗುಣಮಟ್ಟದ ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ.

l ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಜನರಿಗೆ ಯಾವ ರೀತಿ ಅನುಕೂಲವಾಗಿದೆ?

– ಜಯದೇವ ಆಸ್ಪತ್ರೆ ಆರಂಭ ವಾಗುವ ಮುಂಚೆಈ ಭಾಗದ ಹೃದ್ರೋಗಿಗಳು ಹೈದರಾಬಾದ್‌, ಸೊಲ್ಲಾ ಪುರಕ್ಕೆ ಹೋಗಬೇಕಿತ್ತು. ಇಲ್ಲಿಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿದ್ದಾರೆ. ಎಷ್ಟೋ ಜನ ಚಿಕಿತ್ಸೆಗಾಗಿ ಒಡವೆ, ಆಸ್ತಿ ಮಾರಿಕೊಂಡ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಜಯದೇವ ಆಸ್ಪತ್ರೆ ಆರಂಭವಾದ ಮೇಲೆ ಬಡವರ ಜೀವದ ಜತೆಗೆ ಆಸ್ತಿಯನ್ನೂ ಕಾಪಾಡಿದ ತೃಪ್ತಿ ಇದೆ. ಹಣಕ್ಕಿಂತ ಮಾನವೀಯತೆಗೆ ನಮ್ಮ ಮೊದಲ ಆದ್ಯತೆ.

l ಹೃದ್ರೋಗಿಗಳ ಸಂಖ್ಯೆ ಹೆಚ್ಚಲು ಮುಖ್ಯ ಕಾರಣಗಳೇನು?

– ವಾಯು ಮಾಲಿನ್ಯ, ಮಾದಕ ದ್ರವ್ಯಗಳ ಸೇವನೆ, ಅತಿಯಾದ ಒತ್ತಡ, ಕೆಟ್ಟ ಆಹಾರ ಮುಖ್ಯ ಕಾರಣಗಳು. ಭಾರತದಲ್ಲಿ ಶೇ 51ರಷ್ಟು ಮಂದಿ ಧೂಮಪಾನ ಮಾಡುತ್ತಾರೆ ಎಂಬ ವರದಿ ಇದೆ. ಇದು ನಿಜಕ್ಕೂ ಭಯಾನಕ. ಧೂಮಪಾನಿಗಳಲ್ಲಿ ಬಹಳಷ್ಟು ಜನ ಹೃದಯಾಘಾತದಿಂದಲೇ ಸತ್ತಿದ್ದಾರೆ. ಸದ್ಯದ ಅಧ್ಯಯನದ ಪ್ರಕಾರ, ದೇಶದಲ್ಲಿ ಶೇ 25ರಷ್ಟು ಹೃದ್ರೋಗಿಗಳ ವಯಸ್ಸು 40 ವರ್ಷಕ್ಕಿಂತ ಕಡಿಮೆ ಇದೆ.

l ಕೋವಿಡ್‌ ಸಂದರ್ಭದ ಸವಾಲು ಗಳನ್ನು ಎದುರಿಸಿದ್ದು ಹೇಗೆ?

– ಹೃದ್ರೋಗಕ್ಕೆ ತುರ್ತು ಚಿಕಿತ್ಸೆ ಅಗತ್ಯ. ಕೋವಿಡ್‌ ವರದಿ ಬರುವವರೆಗೂ ಕಾಯುವುದು ಕಷ್ಟ. ಹಾಗಾಗಿ, ನಮ್ಮ ಸಂಸ್ಥೆಯಲ್ಲೇ ಪ್ರತ್ಯೇಕ ಪ್ರಯೋಗಾಲಯ ಆರಂಭಿಸಿದೆವು. ಪಾಸಿಟಿವ್‌ ಬಂದಿದ್ದ ಹೃದ್ರೋಗಿಗಳಿಗಾಗಿ ಎಲ್ಲ ಆಸ್ಪತ್ರೆಗಳಲ್ಲೂ ಪ್ರತ್ಯೇಕ ಐಸಿಯು ಬೆಡ್‌, ಪ‍್ರತ್ಯೇಕ ಸಿಬ್ಬಂದಿ, ತಜ್ಞರನ್ನು ನಿಯೋಜಿಸಿ ಯಾವೊಬ್ಬ ಹೃದ್ರೋಗಿಯೂ ಸಾಯ ದಂತೆ ನೋಡಿಕೊಂಡಿದ್ದು ಸಾಧನೆಯೇ ಸರಿ.ಸೋಂಕಿತರ ಆರೈಕೆಯಲ್ಲಿ ತೊಡ ಗಿದ ನಮ್ಮ ಸಂಸ್ಥೆಯ 600 ಸಿಬ್ಬಂದಿಗೂ ಕೋವಿಡ್‌ ತಗಲಿತ್ತು. ಎಲ್ಲರೂ ಚೇತರಿಸಿಕೊಂಡರು.

ವಿಶ್ವದ ಗಮನ ಸೆಳೆಯುವತ್ತ ಹೆಜ್ಜೆ

lಜಯದೇವ ಸಂಸ್ಥೆಯ ಮುಂದಿನ ಯೋಜನೆಗಳೇನು?

–ಬೆಂಗಳೂರಿನಲ್ಲಿ ಈಗ 650 ಬೆಡ್‌ಗಳ ದೊಡ್ಡ ಆಸ್ಪತ್ರೆ ಇದೆ. ಆದರೆ, ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕೊರತೆ ನೀಗಿಸಲು ಇನ್ಫೊಸಿಸ್‌ ಸಂಸ್ಥೆಯು 350 ಹಾಸಿಗೆ ಸಾಮರ್ಥ್ಯ ವಿಶ್ವದರ್ಜೆಯ ಹೊಸ ಕಟ್ಟಡ ಕಟ್ಟಿಸುತ್ತಿದೆ. ಇದರೊಂದಿಗೆ 1,000 ಬೆಡ್‌ನ ಆಸ್ಪತ್ರೆಯು ಒಂದೇ ಆವರಣದಲ್ಲಿ ಇರಲಿದೆ. ಇಷ್ಟು ದೊಡ್ಡ ಸಾಮರ್ಥ್ಯದ ವಿಶ್ವದ ಏಕಮಾತ್ರ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆ ಜಯದೇವ ಸಂಸ್ಥೆಗೆ ಬರಲಿದೆ.

ಸಂಸ್ಥೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಇದರಲ್ಲಿ 5 ಲಕ್ಷ ಶಸ್ತ್ರಚಿಕಿತ್ಸೆ ಯಶಸ್ವಿ ಮಾಡಿದ್ದೇವೆ. ಇದು ಕೂಡ ವಿಶ್ವಮಟ್ಟದ ದಾಖಲೆಯೇ.

ಕೊರೊನಾ ಮೂರನೇ ಅಲೆಯ ಸಾಧ್ಯತೆ ಎಷ್ಟಿದೆ?

‘ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಮೂರನೇ ಅಲೆ ಖಂಡಿತವಾಗಿ ಬರುತ್ತದೆ. ಜನರು ಮಾಸ್ಕ್‌ ಇಲ್ಲದೇ, ಅಂತರವಿಲ್ಲದೇ ಓಡಾಡುತ್ತಿದ್ದಾರೆ. ಇದು ಅಪಾಯ ತಂದೊಡ್ಡುತ್ತದೆ. ಡಿಸೆಂಬರ್‌ವರೆಗೂ ಕೋವಿಡ್‌ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿದರೆ ಮೂರನೇ ಅಲೆಯ ಪ್ರಭಾವ ತುಸು ಕಡಿಮೆ ಆಗಬಹುದು. ಜೀವಕ್ಕಿಂತ ಜಾತ್ರೆ, ಸಂತೆ ದೊಡ್ಡದಲ್ಲ ಎಂಬುದನ್ನು ಜನ ತಿಳಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.