ADVERTISEMENT

ಬೇಸಿಗೆಯಲ್ಲಿ ದಣಿವು ತಣಿಸುವ ಬಗೆ ಬಗೆ ಪಾನೀಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:30 IST
Last Updated 24 ಮಾರ್ಚ್ 2023, 19:30 IST
   

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನೆತ್ತಿ ಸುಡುತ್ತಿದೆ. ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ದೇಹ ನಿರ್ಜಲೀಕರಣವಾಗುತ್ತದೆ. ನೀರಿನಂಶದ ಜೊತೆಗೆ ಲವಣಾಂಶವೂ ಕಡಿಮೆಯಾಗುತ್ತದೆ. ಇದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ತಲೆದೋರಲು ಕಾರಣವಾಗುತ್ತದೆ. ಇಂಥ ಸಮಯದಲ್ಲಿ ದೇಹಕ್ಕೆ ‘ಸಿ’ ವಿಟಮಿನ್‌ ಅಂಶ ಅಗತ್ಯವಾಗಿ ಬೇಕು. ಇಂಥ ಅಂಶವಿರುವ ತಿನಿಸುಗಳನ್ನು ಸೇವಿಸಬೇಕು. ಅದರಲ್ಲೂ ದ್ರವ ಪದಾರ್ಥಗಳು ದಣಿದ ದೇಹಕ್ಕೆ ಬೇಗ ಶಕ್ತಿ ತುಂಬುತ್ತವೆ. ಅಂಥ ಶಕ್ತಿಯುತ ಪೇಯಗಳ ರೆಸಿಪಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ಕೆ.ಬಿ.ಶುಭ. ಈ ಪಾನೀಯಗಳು, ದೇಹದ ಬಳಲಿಕೆ ನೀಗಿಸುವ ಜೊತೆಗೆ, ಆರೋಗ್ಯವನ್ನು ರಕ್ಷಿಸುತ್ತವೆ.

ಮೆಂತ್ಯೆ ಜ್ಯೂಸ್‌: ಮೆಂತ್ಯೆ ಕಾಳನ್ನು 3–4 ತಾಸು ಅಥವಾ ರಾತ್ರಿ ನೆನಸಿ ಬೆಳಿಗ್ಗೆ ರುಬ್ಬಿ ಅದಕ್ಕೆ ಬೆಲ್ಲ ಬೆರಸಿ ಸೇವಿಸಬಹುದು. ಒಂದು ದೊಡ್ಡ ಲೋಟ ಜ್ಯೂಸ್‌ಗೆ ಒಂದೂವರೆ ಚಮಚ ಮೆಂತ್ಯೆ ಸಾಕು.

ಹೆಸರುಕಾಳು ಜ್ಯೂಸ್‌: ಹೆಸರು ಕಾಳನ್ನು ನೆನಸಿ ರುಬ್ಬಿ ಸೋಸಿ ಅದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು. ಒಂದು ಲೋಟ ಜ್ಯೂಸ್‌ಗೆ ಒಂದು ಮುಷ್ಠಿ ಕಾಳು ನೆನಸಿ ನುಣ್ಣಗೆ ರುಬ್ಬಬೇಕು. ಇದೇ ರೀತಿ ಹೆಸರು ಬೇಳೆಯ ಜ್ಯೂಸ್‌ ಅನ್ನು ಮಾಡಿಕೊಳ್ಳಬಹುದು.

ADVERTISEMENT

ಬಾರ್ಲಿ ನೀರು: ಬಾರ್ಲಿ ಕಾಳು ಅಥವಾ ಪುಡಿ ಎರಡೂ ದೊರೆಯುತ್ತದೆ. ಬಾರ್ಲಿ ಕಾಳಾದರೆ ಕುಕ್ಕರಿನಲ್ಲಿ ಬೇಯಿಸಿಬೇಕಾಗುತ್ತದೆ. ಬಾರ್ಲಿಯ ಕಾಳನ್ನೇ ತರಿತರಿಯಾಗಿ ಪುಡಿ ಮಾಡಿಟ್ಟುಕೊಂಡು ಅದನ್ನು ಒಂದು ಲೋಟ ನೀರಿಗೆ ಒಂದೂವರೆ ಚಮಚ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ಉಪ್ಪು ಅಥವಾ ಬೆಲ್ಲ ಬೆರಿಸಿ ಬಾರ್ಲಿ ನೀರು ಸಿದ್ಧಮಾಡಿಕೊಳ್ಳಬಹುದು. ಸಂಜೆ ಕಾಫಿ/ ಟೀ ಬದಲು ಇದನ್ನು ಬಿಸಿ ಬಿಸಿ ಆಗಿ ಸೇವಿಸಬಹುದು.

ಕೊತ್ತಂಬರಿ ನೀರು: 2 ಲೋಟ ನೀರಿಗೆ ಒಂದೂವರೆ ಚಮಚ ಕೊತ್ತಂಬರಿ ಬೀಜವನ್ನು ಸೇರಿಸಿ ಸ್ವಲ್ಪ ನೀರು ಬತ್ತುವವರೆಗೆ ಚೆನ್ನಾಗಿ ಕುದಿಸಿ. ಆ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಹಿತ.

ರಾಗಿ ಜ್ಯೂಸ್‌: ರಾಗಿ ಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ರುಬ್ಬಿ, ಕಾಯಿ ಹಾಲು ತೆಗೆದಂತೆ ಸೋಸಿ ರುಚಿಗೆ ತಕ್ಕಷ್ಟು ಬೆಲ್ಲ ಬೆರೆಸಿ ಸೇವಿಸಬಹುದು. ಇದೇ ರೀತಿ ರಾಗಿ ಹಿಟ್ಟನ್ನು ನೆನಸಿ ಬೆಲ್ಲ ಬೆರಸಿ ಸವಿಯಬಹುದು. ಆದರೆ ಇದು ಹೆಚ್ಚು ರುಚಿ ನೀಡುವುದಿಲ್ಲ. ಒಂದು ಲೋಟ ಜ್ಯೂಸ್‌ಗೆ ಒಂದು ಮುಷ್ಠಿ ರಾಗಿ ನೆನಸಬೇಕಾಗುತ್ತದೆ.

ಮುರುಗಲ ಹುಳಿ/ ಪುನರ್‌ಪುಳಿ ಜ್ಯೂಸ್‌: ಮುರುಗಲ ಹುಳಿಯನ್ನು ಒಂದೆರಡು ಗಂಟೆ ನೆನಸಿ ಚೆನ್ನಾಗಿ ಹಿಂಡಿ, ಆ ನೀರಿಗೆ ಬೆಲ್ಲ ಅಥವಾ ಕಲ್ಲುಸಕ್ಕರೆ ಬೆರೆಸಿ ಸೇವಿಸಬಹುದು. ಪಿತ್ತ ಶಮನಕಾರಿ, ರಕ್ತ ಶುದ್ಧಿ, ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಮುರುಗಲ ಹುಳಿ ಸಾರನ್ನೂ ಮಾಡಿ ಸವಿಯಬಹುದು. ಮುರುಗಲ ಹುಳಿ ನೆನಸಿದ ನೀರಿಗೆ ಜೀರಿಗೆ, ಸಾಸಿವೆ, ಒಣಮೆಣಸಿನ ತುಪ್ಪದ ಒಗ್ಗರಣೆ ಜೊತೆ ಸಣ್ಣಗೆ ಕತ್ತರಿಸಿದ ಹಸಿ ಈರುಳ್ಳಿ ಹಾಕಿದರೆ ಸಾರು ಸಿದ್ಧ.

ಕಡೆದ ಮಜ್ಜಿಗೆ: ಮೊಸರಿಗಿಂತ ಮಜ್ಜಿಗೆ ದೇಹಕ್ಕೆ ಹಿತ. ಕಡೆದು ಬೆಣ್ಣೆ ತೆಗೆದ ಮಜ್ಜಿಗೆಯನ್ನು ಹಾಗೇ ಸೇವಿಸ ಬಹುದು ಅಥವಾ ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದಿಚು ಶುಂಠಿ, ಬೇಕಿದ್ದರೆ ಒಂದು ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಮಿಕ್ಸಿ ಮಾಡಿ ಮಜ್ಜಿಗೆಗೆ ಬೆರಸಿ ಸೇವಿಸಬಹುದು. ಮಜ್ಜಿಗೆಗೆ ಇಂಗನ್ನೂ ಬೆರೆಸಿ ಕುಡಿಯಬಹುದು.

ಬೇಲದ ಹಣ್ಣಿನ ಜ್ಯೂಸ್‌: ಪಿತ್ತಶಮನಕಾರಿಯಾಗಿರುವ ಬೇಲದ ಹಣ್ಣಿಗೆ ಬೆಲ್ಲವನ್ನು ಬೆರೆಸಿ ಹಾಗೇ ಸೇವಿಸಬಹುದು ಅಥವಾ ಜ್ಯೂಸ್ ಮಾಡಿಯೂ ಸೇವಿಸಬಹುದು.

ಸೌತೆಕಾಯಿ ಹಾಗೂ ಪುದೀನ ಜ್ಯೂಸ್‌: ಒಂದು ಮುಷ್ಠಿ ಪುದೀನ ಸೊಪ್ಪಿನ ಜೊತೆ ಒಂದು ಸಣ್ಣ ಗಾತ್ರದ ಸೌತೆಕಾಯಿಯನ್ನು ಕತ್ತರಿಸಿ, ಒಂದೆರಡು ಮೆಣಸಿನ ಕಾಳು, ಸಕ್ಕರೆಯನ್ನು ಮಿಕ್ಸಿಯಲ್ಲಿ ರುಬ್ಬಿ, (ಅಗತ್ಯವೆನಿಸಿದರೆ ಸೋಸಬಹುದು) ಅದಕ್ಕೆ ರುಚಿಗೆ ತಕ್ಕಷ್ಟು ನಿಂಬೆಹಣ್ಣಿನ ರಸ ಬೆರೆಸಿ, ನೀರಾದ ಜ್ಯೂಸ್‌ ಮಾಡಿ ಕುಡಿಯಬಹುದು.

ಬೆಲ್ಲ, ನೀರು: ಬಿಸಿಲಿನಿಂದ ಬಂದವರಿಗೆ ಮೊದಲೆಲ್ಲಾ ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲದ ಜೊತೆ ನೀರನ್ನು ಕೊಡಲಾಗುತ್ತಿತ್ತು. ನೀರು, ಬೆಲ್ಲ ದೇಹಕ್ಕೆ ಶೀಘ್ರವಾಗಿ ಶಕ್ತಿ ನೀಡುತ್ತವೆ. ಅಲ್ಲದೇ ನಿಶ್ಯಕ್ತಿಯನ್ನು ದೂರ ಮಾಡುತ್ತವೆ.

ಎಳನೀರು: ಬೇಸಿಗೆ ಕಾಲದಲ್ಲಿ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ. ಎಳನೀರನ್ನು ಕಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅದೇ ರೀತಿ ಎಳನೀರಿಗೆ ನಿಂಬೆಹಣ್ಣನ್ನು ಬೆರೆಸಿ ಕುಡಿಯುವುದೂ ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಆದರೆ, ಇದನ್ನು ವೈದ್ಯರ ಮಾರ್ಗದರ್ಶನ ಪಡೆದು ಅಥವಾ ನಿಖರವಾದ ಕಾಯಿಲೆಗೆ ವೈದ್ಯರು ಸೂಚಿಸಿದಾಗ ಮಾತ್ರ ಸೇವಿಸುವುದು ಸೂಕ್ತ.

ಶರಬತ್ತುಗಳು: ಸೊಗದೇಬೇರು, ನಲ್ಲಿಕಾಯಿ ಶರಬತ್ತು, ರೋಸ್‌ ಶರಬತ್ತುಗಳ ರೆಡಿಮೆಡ್ ರಸಗಳ ಜ್ಯೂಸ್ ಅನ್ನೂ ಮಾಡಿ ಕುಡಿಯಬಹುದು. ಒಂದು ಲೋಟಕ್ಕೆ 1 ರಿಂದ 2 ಚಮಚ ಶರಬತ್ತು ಬೆರೆಸಿ ಜ್ಯೂಸ್ ಮಾಡಿಕೊಳ್ಳ ಬಹುದು.

ಬೇಸಿಗೆಯಲ್ಲಿ ಸೇವಿಸಬೇಕಾದ ಹಣ್ಣು–ತರಕಾರಿಗಳು

* ಹಣ್ಣುಗಳು: ಕಲ್ಲಂಗಡಿ, ಕಿತ್ತಳೆ, ಮೂಸಂಬಿ, ಬೆಣ್ಣೆಹಣ್ಣು, ಕರ್ಬೂಜ, ಬೆರ‍್ರಿ, ಸೇಬು, ಪಿಯರ್ಸ್‌, ಅಂಜೂರ, ಸ್ಟ್ರಾಬೆರಿ, ಬಾಳೆಹಣ್ಣು

* ತರಕಾರಿಗಳು: ಸೌತೆಕಾಯಿ, ಬೀನ್ಸ್‌, ಕ್ಯಾರೆಟ್‌, ಬೀಟ್‌ರೂಟ್‌, ಹಸಿರು ಸೊಪ್ಪು, ನಿಂಬೆಹಣ್ಣು, ಜೋಳ, ಸೋರೆಕಾಯಿ, ಕುಂಬಳಕಾಯಿ

* ಇವುಗಳ ಜೊತೆಗೆ ಯೋಗರ್ಟ್‌, ಸಣ್ಣ ಟೊಮೆಟೊ ಸಲಾಡ್‌, ಸೌತೆಕಾಯಿಯನ್ನೇ ಹೋಲುವ ಬೇಬಿ ಮರ್ರೊ ತರಕಾರಿಯನ್ನೂ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.