ADVERTISEMENT

ಬೇಳೆಗಳ ಕಷಾಯ, ಕಾಳುಮೆಣಸಿನ ಕಷಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 20:00 IST
Last Updated 25 ಜೂನ್ 2021, 20:00 IST
ಮಸಾಲೆ ಕಷಾಯ
ಮಸಾಲೆ ಕಷಾಯ   

ಕಷಾಯ ಎಂದರೆ ಕಾಯಿಲೆ ಬಂದಾಗ ಮಾತ್ರ ತಯಾರಿಸಿ ಕುಡಿಯುವುದಲ್ಲ. ಯಾವಾಗ ಬೇಕಾದರೂ ಇಲ್ಲಿರುವ ಕಷಾಯವನ್ನು ತಯಾರಿಸಿ ಕುಡಿಯಬಹುದು. ಇವು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಶೀತ, ಕೆಮ್ಮು, ಕಫ, ಜ್ವರ, ಅಜೀರ್ಣ, ಅಸಿಡಿಟಿ, ತಲೆ
ನೋವು, ವಾಂತಿ ಮುಂತಾದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಇದು ಮದ್ದು. ಕಾಫಿ, ಟೀ ಬದಲಿಗೆ ದಿನನಿತ್ಯವೂ ಕಷಾಯವನ್ನು ಕುಡಿಯಬಹುದು.

ಬೇಳೆಗಳ ಕಷಾಯ

ಬೇಕಾಗುವ ಸಾಮಗ್ರಿಗಳು: ಗೋಧಿ – 1 ಕಪ್‌, ರಾಗಿ – ಅರ್ಧ ಕಪ್‌, ಹೆಸರುಕಾಳು – ಕಾಲು ಕಪ್‌, ಜೀರಿಗೆ – 1 ಚಮಚ, ಕೊತ್ತಂಬರಿ ಬೀಜ – 2 ಚಮಚ, ಏಲಕ್ಕಿ – 2, ಕಾಳುಮೆಣಸು – 1 ಟೀ ಚಮಚ, ಲವಂಗ– 4

ADVERTISEMENT

ತಯಾರಿಸುವ ವಿಧಾನ: ಬಾಣಲೆಗೆ ಗೋಧಿಯನ್ನು ಹಾಕಿ ಚಟಪಟ ಸದ್ದು ಬರುವವರೆಗೆ ಹುರಿಯಿರಿ. ರಾಗಿ, ಹೆಸರುಕಾಳನ್ನು ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಕೊತ್ತಂಬರಿ, ಜೀರಿಗೆ, ಏಲಕ್ಕಿ, ಲವಂಗ, ಕಾಳುಮೆಣಸನ್ನು ಒಟ್ಟಿಗೆ ಬಾಣಲೆಗೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ಹುರಿದ ಪದಾರ್ಥಗಳನ್ನು ಆರಲು ಬಿಡಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ 6 ತಿಂಗಳ ಕಾಲ ಉಪಯೋಗಿಸಬಹುದು.

ಕಷಾಯ ತಯಾರಿಸುವ ವಿಧಾನ: ಪಾತ್ರೆಗೆ 2 ಕಪ್ ನೀರು, 2 ರಿಂದ 3 ಟೇಬಲ್ ಚಮಚ ಬೆಲ್ಲ ಹಾಗೂ 2 ಟೇಬಲ್ ಚಮಚ ಕಷಾಯದ ಪುಡಿ ಸೇರಿಸಿ. ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿ. ಕುದಿ ಬಂದ ನಂತರ 1 ಕಪ್ ಹಾಲು ಹಾಕಿ. ಒಂದು ಕುದಿ ಬರಲಿ. ನಂತರ ಕಷಾಯವನ್ನು ಸೋಸಿಕೊಳ್ಳಿ. ಆರೋಗ್ಯಕರವಾದ ಕಷಾಯವನ್ನು ತಯಾರಿಸಿ ದಿನವೂ ಸವಿಯಬಹುದು.

ಕಾಳುಮೆಣಸಿನ ಕಷಾಯ

ಬೇಕಾಗುವ ಸಾಮಗ್ರಿಗಳು: ಕಾಳುಮೆಣಸು – 30, ಬೆಳ್ಳುಳ್ಳಿ ಎಸಳುಗಳು – 5 ರಿಂದ 8, ಈರುಳ್ಳಿ – 1 ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಶುಂಠಿ – 2 ಇಂಚು, ಅರಿಸಿನಪುಡಿ – ಅರ್ಧ ಟೀ ಚಮಚ, ಲವಂಗ – 4 ರಿಂದ 6, ಜೇಷ್ಠಮಧು – 1 ಇಂಚು, ಕೊತ್ತಂಬರಿ ಬೀಜ – 2 ಟೀ ಚಮಚ, ಬೆಲ್ಲದ ಪುಡಿ – 2 ಟೇಬಲ್ ಚಮಚ, ನೀರು – 2 ಲೀಟರ್‌.

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಜೇಷ್ಠಮಧು, ಲವಂಗ, ಈರುಳ್ಳಿ, ಕಾಳುಮೆಣಸು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪಾತ್ರೆಗೆ ನೀರನ್ನು ಹಾಕಿ ಬಿಸಿ ಮಾಡಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಅರಿಸಿನ, ಬೆಲ್ಲವನ್ನು ಹಾಕಿ. ಮುಚ್ಚಳವನ್ನು ಕುದಿ ಬರುವವರೆಗೆ ಮುಚ್ಚಿ. ನಂತರ ಮುಚ್ಚಳವನ್ನು ತೆಗೆದು ಒಂದು ಲೀಟರ್‌ ಕಷಾಯ ಕಾಲು ಭಾಗ ಬಂದಾಗ ಒಲೆಯನ್ನು ಆರಿಸಿ. ಸೋಸಿಕೊಂಡು ಬಿಸಿ ಇರುವಾಗಲೇ ಕುಡಿಯಿರಿ.

ಮಸಾಲೆ ಕಷಾಯ

ಬೇಕಾಗುವ ಸಾಮಗ್ರಿಗಳು: ಬಜೆ – 1 ಇಂಚು, ಜೇಷ್ಠಮಧು – 1 ಇಂಚು, ಜಾಯಿಕಾಯಿ – ಅರ್ಧ, ಅರಿಸಿನ ಕೊಂಬು – 2 ಇಂಚು, ಒಣಶುಂಠಿ – 2 ಇಂಚು, ಜೀರಿಗೆ – ಕಾಲು ಕಪ್, ಕೊತ್ತಂಬರಿ ಬೀಜ – ಅರ್ಧ ಕಪ್, ಕಾಳುಮೆಣಸು – ಕಾಲು ಕಪ್, ಸೋಂಪು – ಕಾಲು ಕಪ್, ಮೆಂತ್ಯ – 1 ಟೇಬಲ್ ಚಮಚ, ಲವಂಗ 10 ರಿಂದ 15, ಏಲಕ್ಕಿ ಸಿಪ್ಪೆ – 20, ಏಲಕ್ಕಿ – 4

ತಯಾರಿಸುವ ವಿಧಾನ: ಕುಟ್ಟಾಣಿಯಲ್ಲಿ ಅರಿಸಿನ ಕೊಂಬು, ಶುಂಠಿ, ಬಜೆ, ಜೇಷ್ಠಮಧು, ಜಾಯಿಕಾಯಿ ಹಾಕಿ ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಸೋಂಪು, ಮೆಂತ್ಯೆ, ಏಲಕ್ಕಿ ಸಿಪ್ಪೆ, ಲವಂಗ, ಏಲಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಇದನ್ನು ಆರಲು ಹಾಕಿ. ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಮೊದಲು ಪುಡಿ ಮಾಡಿಕೊಂಡ ಪದಾರ್ಥಗಳೊಂದಿಗೆ ಸೇರಿಸಿ.

ಕಷಾಯ ತಯಾರಿಸುವ ವಿಧಾನ: 1 ಕಪ್ ನೀರನ್ನು ಬಿಸಿ ಮಾಡಿಕೊಳ್ಳಿ. 1 ಟೇಬಲ್ ಚಮಚ ಕಷಾಯ ಪುಡಿಯನ್ನು ಹಾಕಿ. ಕಾಲು ಟೀ ಚಮಚ ಅರಿಸಿನ ಪುಡಿಯನ್ನು ಹಾಕಿ. 1 ಇಂಚು ಹಸಿಶುಂಠಿಯನ್ನು ಜಜ್ಜಿ ಹಾಕಿ. ಬೆಲ್ಲ ನಿಮ್ಮ ಸಿಹಿಗೆ ಅನುಗುಣವಾಗಿ ಹಾಕಿ. ಸಣ್ಣ ಉರಿಯಲ್ಲಿ ಅರ್ಧ ಕಪ್ ಬರುವವರೆಗೆ ಕುದಿಸಿ. ಮುಕ್ಕಾಲು ಕಪ್ ಹಾಲು ಹಾಕಿ. ಒಂದು ಕುದಿ ಬರುವವರೆಗೆ ಕುದಿಸಿ ಒಲೆಯಿಂದ ಇಳಿಸಿ ಸೋಸಿಕೊಳ್ಳಿ. ಆರೋಗ್ಯಕರವಾದ ಕಷಾಯವನ್ನು ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.