ADVERTISEMENT

ಏನಾದ್ರೂ ಕೇಳ್ಬೋದು: ದಾಂಪತ್ಯದಲ್ಲಿ ವೈವಿಧ್ಯತೆಯ ಹುಡುಕಾಟ

ನಡಹಳ್ಳಿ ವಂಸತ್‌
Published 24 ಸೆಪ್ಟೆಂಬರ್ 2021, 19:30 IST
Last Updated 24 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮದುವೆಯಾಗಿ 6 ವರ್ಷಗಳಾಗಿವೆ. ನಾವಿಬ್ಬರೂ ಲೈಂಗಿಕ ಜೀವನವನ್ನು ಆನಂದಿಸುತ್ತಿದ್ದೇವೆ. ಸಂಗಾತಿಯನ್ನು ಬದಲಾಯಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದೇವೆ. ನನ್ನ ಉತ್ತಮ ಗೆಳೆಯ ಮತ್ತು ಅವನ ಪತ್ನಿಯೂ ಸಮ್ಮತಿ ಸೂಚಿಸಿದ್ದಾರೆ. ಯಾವುದೇ ತಪ್ಪಿತಸ್ಥ ಭಾವೆನೆಗಳು ಕಾಡುತ್ತಿಲ್ಲ. ನಾವು ನಾಲ್ಕು ಜನ ಇದರಲ್ಲಿ ಮುಂದುವರೆಯಬಹುದಾ?

ಹೆಸರು, ಊರು ತಿಳಿಸಿಲ್ಲ.

ದಾಂಪತ್ಯದಂತಹ ದೀರ್ಘ ಕಾಲದ ಸಂಬಂಧದಲ್ಲಿ ಲೈಂಗಿಕ ಆಕರ್ಷಣೆ ಉಳಿಸಿಕೊಳ್ಳಲು ವೈವಿಧ್ಯತೆಯನ್ನು ನಿರೀಕ್ಷಿಸುವುದು ಸಹಜ. ನೀವು ವೈವಿಧ್ಯತೆಗಾಗಿ ಆಯ್ದುಕೊಳ್ಳುವ ಮಾರ್ಗಗಳು ನಿಮ್ಮಿಬ್ಬರ ಮನಸ್ಥಿತಿ, ಬದ್ಧತೆ, ಕೌಟುಂಬಿಕ ಸಾಮಾಜಿಕ ಸ್ಥಿತಿಗತಿಗಳಿಗೆ ಸೂಕ್ತವೇ? ನಿಮ್ಮ ಅದಲುಬದಲಿನ ಪ್ರಯತ್ನ ಗುಟ್ಟಾಗಿ ಉಳಿಯದಿದ್ದರೆ ನಂತರದ ಕೌಟುಂಬಿಕ, ಸಾಮಾಜಿಕ ಪರಿಣಾಮಗಳನ್ನು ಎದುರಿಸಲು ಸಿದ್ಧರಿದ್ದೀರಾ? ಹೊಸ ಪ್ರಯೋಗದಲ್ಲಿ ಒಬ್ಬರಿಗೆ ತೃಪ್ತಿಯಾಗದಿದ್ದರೆ ಅಥವಾ ಲೈಂಗಿಕತೆಯನ್ನು ಮೀರಿದ ಆಕರ್ಷಣೆ ಮೂಡಿದರೆ ಆಗೇನು ಮಾಡುತ್ತೀರಿ? ಲೈಂಗಿಕ ತೃಪ್ತಿಯನ್ನು ದಾಂಪತ್ಯದ ಹೊರಗೆ ಹುಡುಕಿಕೊಳ್ಳುವುದಕ್ಕೆ ಅವಕಾಶವಿದೆ ಎಂದಾದರೆ ಅದನ್ನು ಒಬ್ಬರೇ ಮತ್ತೊಬ್ಬರಿಗೆ ತಿಳಿಯದಂತೆ ಬಳಸಿದರೆ ಏನಾಗಬಹುದು? ಇಂತಹ ಅದಲುಬದಲಿನಲ್ಲೂ ಏಕತಾನತೆ ಮೂಡಿದರೆ ಮತ್ತೆ ಹೊಸಬರನ್ನು ಹುಡುಕುತ್ತೀರಾ? ವೈವಿಧ್ಯತೆಯನ್ನು ಕಂಡುಕೊಳ್ಳಲು ಇದು ಉತ್ತಮ ಮಾರ್ಗ ಎಂದು ಮೂವತ್ತು ವರ್ಷಗಳ ನಂತರ ನಿಮ್ಮ ಮಕ್ಕಳಿಗೆ ಸಲಹೆ ಕೊಡಲು ಸಿದ್ಧರಿದ್ದೀರಾ? ಲೈಂಗಿಕತೆಯ ಹೊರತಾಗಿ ನಿಮ್ಮಿಬ್ಬರ ಸಂಬಂಧದವನ್ನು ಹೇಗೆ ಅರ್ಥಮಾಡಿಕೊಂಡಿದ್ದೀರಿ? ಈ ಎಲ್ಲಾ ಪ್ರಶ್ನೆಗಳಿಗೆ ಇಬ್ಬರೂ ಚರ್ಚಿಸಿ ಉತ್ತರ ಹುಡುಕಿಕೊಳ್ಳಿ. ಒಂದೇ ಸಂಗಾತಿಯೊಡನೆ ವೈವಿಧ್ಯಮಯ ಲೈಂಗಿಕ ಸುಖವನ್ನು ಹೊಂದಬೇಕೆಂದಿದ್ದರೆ ತಜ್ಞ ದಾಂಪತ್ಯ ಚಿಕಿತ್ಸಕರ ಸಹಾಯ ಪಡೆಯಿರಿ.

ADVERTISEMENT

ಮದುವೆಯಾಗಿ 15 ವರ್ಷಗಳಾಗಿವೆ. ಏಳುಬೀಳಿನ ನಡುವೆ ಸಂಸಾರ ಸಾಗುತ್ತಿದೆ. ಇಬ್ಬರು ಮಕ್ಕಳಿದ್ದಾರೆ. ಆಗಾಗ ನಡೆಯುವ ಲೈಂಗಿಕಕ್ರಿಯೆಗೆ ಮೊದಲು ನಿರಾಕರಿಸಿದರೂ ನಂತರ ಸಹಕರಿಸುತ್ತಾಳೆ. ಇತ್ತೀಚಿನ ದಿನಗಳಲ್ಲಿ ನಾನು ವ್ಯವಹಾರದ ನಿಮಿತ್ತ ಹೊರಗೆ ಹೋದಾಗ ಪುರುಷರೊಬ್ಬರು ಮನೆಗೆ ಬರುತ್ತಾರೆ ಮತ್ತು ಕೆಲವೊಮ್ಮೆ ರಾತ್ರಿ ಉಳಿದುಕೊಂಡಿದ್ದಾರೆ ಎಂದು ಮಕ್ಕಳು ಹೇಳುತ್ತಾರೆ. ಪತ್ನಿಯನ್ನು ಅನುಮಾನದಿಂದ ಪ್ರಶ್ನಿಸಿದರೆ ಮಕ್ಕಳ ಮೇಲೆ ಪ್ರಮಾಣ ಮಾಡಿ ನಿರಾಕರಿಸುತ್ತಾಳೆ. ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮರಾ ಮೂಲಕ ಪುರಾವೆ ಹುಡುಕಬಹುದಾದರೂ ಮನೆಯೊಳಗೆ ನಡೆಯುವುದನ್ನು ತಿಳಿಯುವುದು ಹೇಗೆ? ಅವಳ ನಡತೆಯನ್ನು ಪರೀಕ್ಷಿಸುವುದು ಮತ್ತು ವೈಜ್ಞಾನಿಕ ಪುರಾವೆ ಪಡೆಯುವುದು ಹೇಗೆ? ನನ್ನ ತಲೆಯಲ್ಲಿ ತುಂಬಿರುವ ಅನುಮಾನದ ಹುತ್ತವನ್ನು ತೆಗೆದು ಹಾಕುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಪತ್ನಿಯ ವರ್ತನೆಯಿಂದ ನಿಮಗೆ ಅನುಮಾನಗಳು ಮೂಡುವುದು ಸಹಜ. ಇಂತಹ ಅನುಮಾನಗಳು ಆಣೆ, ಪ್ರಮಾಣಗಳಿಂದ ಹೇಗೆ ಪರಿಹಾರವಾಗುತ್ತವೆ? ವೈಜ್ಞಾನಿಕ ಪುರಾವೆ ಹುಡುಕುತ್ತಾ ಪತ್ತೇದಾರಿ ಕೆಲಸ ಮಾಡುವುದು ಸಂಬಂಧಗಳಿಗೆ ಹೇಗೆ ಸಹಾಯ ಮಾಡಬಲ್ಲದು? ಬದಲಾಗಿ ಇಬ್ಬರ ಬೇಸರವೂ ಹೆಚ್ಚಾಗಿ ಸಂಬಂಧ ಹದಗೆಡುವ ಸಾಧ್ಯತೆಗಳೇ ಹೆಚ್ಚು. ಪತ್ರದ ಧ್ವನಿಯನ್ನು ನೋಡಿದರೆ ಪತಿ–ಪತ್ನಿಯರಲ್ಲಿ ಪೂರ್ಣ ನಂಬಿಕೆ ಉಳಿದಂತೆ ಕಾಣುವುದಿಲ್ಲ. ನಿಮ್ಮ ಅನುಮಾನ, ನೋವು, ಮಾನಸಿಕ ಹಿಂಸೆಗಳನ್ನು ಕುರಿತು ಪತ್ನಿಗೆ ಹೇಳಿ. ಮನೆಗೆ ಬರುವವರು ಯಾರು ಮತ್ತು ಅವರು ನೀವಿಲ್ಲದಾಗ ಉಳಿದುಕೊಳ್ಳುವುದು ಏಕೆ ಮುಂತಾದ ಎಲ್ಲಾ ಪ್ರಶ್ನೆಗಳಿಗೆ ಅವಳಿಂದ ಉತ್ತರವನ್ನು ನಿರೀಕ್ಷಿಸುವುದಾಗಿ ತಿಳಿಸಿ. ಆಣೆ, ಪ್ರಮಾಣ, ಆರೋಪ, ನಿರಾಕರಣೆ, ದೂಷಣೆ, ವಾಗ್ವಾದ ಇವುಗಳಿಂದ ನಂಬಿಕೆಯನ್ನು ಮೂಡಿಸಿಕೊಳ್ಳುವುದು ಅಸಾಧ್ಯ. ಅಗತ್ಯವಿದ್ದರೆ ತಜ್ಞ ದಾಂಪತ್ಯ ಚಿಕಿತ್ಸಕರ ಸಹಾಯ ಪಡೆಯಿರಿ.

28ರ ಯುವಕ. ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದೇನೆ. ಮನೆಯಲ್ಲಿ ಹಿರಿಯರು ವಿವಾಹದ ಪ್ರಯತ್ನ ಮಾಡುತ್ತಿದ್ದರೂ ಸೂಕ್ತ ಸಂಬಂಧಗಳು ಕೂಡಿ ಬರುತ್ತಿಲ್ಲ. ಮದುವೆಯ ವಯಸ್ಸು ಮೀರುತ್ತಿದೆ ಎನ್ನುವ ಭಯ ಕಾಡುತ್ತಿದೆ. ಮುಂದೇನು ಮಾಡುವುದು ಎನ್ನುವ ಚಿಂತೆ. ಸಲಹೆ ನೀಡಿ.

ಹೆಸರು, ಊರು ಇಲ್ಲ.

ಪತ್ರದ ಧಾಟಿಯನ್ನು ನೋಡಿದರೆ ನಿಮ್ಮ ಜೀವನದ ಚುಕ್ಕಾಣಿಯನ್ನು ನೀವಿನ್ನೂ ಕೈಗೆ ತೆಗೆದುಕೊಂಡಿಲ್ಲ ಎನ್ನಿಸುತ್ತದೆ. ಸರ್ಕಾರಿ ನೌಕರಿ ಸಿಗುವವರೆಗೆ ಅಥವಾ ಸಿಗದೇ ಇದ್ದರೆ ನೀವು ಆರ್ಥಿಕವಾಗಿ ಅವಲಂಬಿತರಾಗಿಯೇ ಇರುತ್ತೀರಾ? ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆಯೇ ಇಲ್ಲದಿರುವಾಗ ಹುಡುಗಿಯರು ನಿಮ್ಮನ್ನು ಮೆಚ್ಚಬೇಕೆಂದು ಹೇಗೆ ನಿರೀಕ್ಷಿಸುತ್ತೀರಿ? ಮದುವೆಯ ವಯಸ್ಸಿಗೆ ಕನಿಷ್ಠ ಮಿತಿ ಇದೆಯೇ ಹೊರತು ಗರಿಷ್ಠ ಮಿತಿ ಏನಿಲ್ಲವಲ್ಲ? ನಿಮ್ಮ ಮನಸ್ಸು, ಸ್ಥಿತಿಗತಿಗಳು ಸಂಗಾತಿಯನ್ನು ಪಡೆಯಲು ಸಿದ್ಧವಾದರೆ ಅದೇ ಸೂಕ್ತ ವಯಸ್ಸು. ಮನೆಯವರಿಗೆ ಮದುವೆಯ ಪ್ರಯತ್ನ ನಿಲ್ಲಿಸಲು ಹೇಳಿ ನಿಮ್ಮ ಆರ್ಥಿಕ ಸ್ವಾವಲಂಬನೆಯ ಕಡೆ ಮೊದಲು ಗಮನ ಹರಿಸಿದರೆ ಉತ್ತಮವಲ್ಲವೇ? ಮುಂದೆ ನಿರಾಳವಾದ ಮನಸ್ಸಿನಿಂದ ದಾಂಪತ್ಯವನ್ನು ಸವಿಯುವುದು ಸುಲಭವಾಗುತ್ತದೆ.

25ರ ಯುವಕ. ಕಳೆದ 10 ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಕೆಲ ವರ್ಷಗಳ ಹಿಂದೆ ಎಡಗಾಲಿನ ಮಂಡಿ ಉಳುಕಿತ್ತು. ಈಗ ಸ್ಖಲನವಾದರೆ ಶಿಶ್ನದಿಂದ ಎಡಗಾಲಿನಲ್ಲಿ ಇಳಿದ ನರವೋ ರಕ್ತನಾಳವೋ ವಾರವಿಡೀ ನೋಯುತ್ತದೆ. ಶಿಶ್ನವು ಮೈಥುನದ ನಂತರ ಕೆಲವೊಮ್ಮೆ ಉರಿಯುತ್ತದೆ. ಇವೆಲ್ಲಕ್ಕೂ ಹಸ್ತಮೈಥುನವೇ ಕಾರಣವೇ? ನಾನೇನು ಮಾಡಬೇಕು?

ಹೆಸರು. ಊರು ತಿಳಿಸಿಲ್ಲ.

ಹಸ್ತಮೈಥುನದಿಂದ ಕಾಲುನೋವು ಬರುವುದು ಸಾಧ್ಯವಿಲ್ಲ. ಆ ಸಮಯದಲ್ಲಿ ನೀವು ಕಾಲಿನ ನರ ಅಥವಾ ರಕ್ತನಾಳಗಳ ಮೇಲೆ ಒತ್ತಡ ಹಾಕುವ ಸಾಧ್ಯತೆಗಳಿವೆ. ಇದನ್ನು ಗಮನಿಸಿ. ಮಂಡಿಯನ್ನು ಮೂಳೆರೋಗ ತಜ್ಞರಲ್ಲಿ ಪರೀಕ್ಷಿಸಿಕೊಳ್ಳಿ. ಹಸ್ತಮೈಥುನ ಸಮಯದ ಘರ್ಷಣೆಯಿಂದ ಶಿಶ್ನ ಉರಿಯುತ್ತಿರುವ ಸಾಧ್ಯತೆಗಳಿವೆ. ಯಾವುದಾದರೂ ಜಾರುಕ (ಲ್ಯೂಬ್ರಿಕೆಂಟ್ಸ್‌) ಬಳಸಬಹುದು. ನಿಮ್ಮದೇ ಜೊಲ್ಲು ಸುರಕ್ಷಿತವಾದ ಜಾರುಕ.

30 ವರ್ಷದ ಅವಿವಾಹಿತ. ದೇಹದಾರ್ಢ್ಯತೆಯ ಬಗ್ಗೆ ಕಾಳಜಿಯುಳ್ಳವನು. ವಾರಕ್ಕೊಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಎಷ್ಟು ದಿನಕ್ಕೊಮ್ಮೆ ಹಸ್ತಮೈಥುನ ಮಾಡಿಕೊಂಡರೆ ಒಳ್ಳೆಯದು? ಎಷ್ಟು ದಿನಗಳ ಅಂತರವಿದ್ದರೆ ಒಳ್ಳೆಯದು?

ಹೆಸರು, ಊರು ತಿಳಿಸಿಲ್ಲ.

ಮದುವೆಯಾಗಿದ್ದರೆ ಎಷ್ಟು ದಿನಕ್ಕೊಮ್ಮೆ ಪತ್ನಿಯ ಜೊತೆ ಸೇರುತ್ತಿದ್ದಿರಿ? ಉತ್ತರ ಸುಲಭ. ಇಬ್ಬರ ದೇಹ, ಮನಸ್ಸುಗಳು ಬೇಡುವಾಗಲೆಲ್ಲಾ ಸೇರುತ್ತಿದ್ದಿರಿ ಅಲ್ಲವೇ? ಹಸ್ತಮೈಥುನಕ್ಕೆ ಬೇರೆ ನಿಯಮಗಳೇಕೆ ಬೇಕು? ಇಂತಹ ಲೆಕ್ಕಾಚಾರವನ್ನು ಮರೆತು ಆದಷ್ಟು ಬೇಗ ಸೂಕ್ತ ಸಂಗಾತಿಯನ್ನು ಹುಡುಕಿಕೊಂಡರೆ ಹೇಗಿರುತ್ತದೆ?

27ರ ಯುವಕ. ಓದುವಾಗ ಕಾಮದ ವಿಚಾರಗಳೇ ಕಾಡುತ್ತವೆ. ಹಸ್ತಮೈಥುನ ಮಾಡಿಕೊಂಡರೆ ಸ್ವಲ್ಪ ನಿರಾಳವಾಗುತ್ತದೆ. ಪರಿಹಾರ ತಿಳಿಸಿ.

ಹೆಸರು. ಊರು ತಿಳಿಸಿಲ್ಲ.

ಪರಿಹಾರ ತಿಳಿಸಲು ನೀವು ಸಮಸ್ಯೆಯನ್ನೇ ಹೇಳಿಲ್ಲವಲ್ಲ! ಸುಮಾರು 17-18 ವರ್ಷಕ್ಕೆ ಪ್ರಕೃತಿ ನಿಮ್ಮ ದೇಹ, ಮನಸ್ಸುಗಳನ್ನು ಲೈಂಗಿಕತೆಗೆ ಸಿದ್ಧಪಡಿಸುತ್ತದೆ. ಆದರೆ ಸಂಗಾತಿಯನ್ನು ಪಡೆಯಲು ನಿಮ್ಮ ಪರಿಸ್ಥಿತಿಗಳು ಇನ್ನೂ ಸೂಕ್ತವಾಗಿಲ್ಲ. ಹಾಗಾಗಿ ತಾತ್ಕಾಲಿಕವಾಗಿ ಹಸ್ತಮೈಥುನದ ಮೂಲಕ ಬಯಕೆಯನ್ನು ಪೂರೈಸಿಕೊಳ್ಳುತ್ತಿದ್ದೀರಿ. ಇದು ಸಂಪೂರ್ಣ ಆರೋಗ್ಯಕರ ಪ್ರವೃತ್ತಿ. ಇದರಲ್ಲಿ ಸಮಸ್ಯೆ ಏನಿದೆ? ಕಾಮದ ಆಕರ್ಷಣೆಯನ್ನು ತಪ್ಪು ಎಂದು ನಿರಾಕರಿಸಿ ನೀವೇ ಗೊಂದಲವನ್ನು ಆಹ್ವಾನಿಸಿಕೊಳ್ಳುತ್ತಿದ್ದೀರಲ್ಲವೇ? ಆರ್ಥಿಕವಾಗಿ ಸ್ವತಂತ್ರರಾಗುವ ಕಡೆಗೆ ಹೆಚ್ಚು ಗಮನ ಹರಿಸಿದರೆ ಸಂಗಾತಿಯ ಆಯ್ಕೆಗೆ ಸಿದ್ಧತೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.