ADVERTISEMENT

ಏನಾದ್ರೂ ಕೇಳ್ಬೋದು: ಇಳಿವಯಸ್ಸಿನ ಲೈಂಗಿಕ ಆಕರ್ಷಣೆ

ನಡಹಳ್ಳಿ ವಂಸತ್‌
Published 9 ಜುಲೈ 2021, 19:30 IST
Last Updated 9 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

l ತಂದೆ 75 ವರ್ಷದ ನಿವೃತ್ತ ಸರ್ಕಾರಿ ನೌಕರರು. ಅಮ್ಮನ ಜೊತೆಗೆ ವಾಸಿಸುತ್ತಾರೆ. ನಾವಿಬ್ಬರು ಹೆಣ್ಣಮಕ್ಕಳಿಗೆ ಮದುವೆಯಾಗಿದೆ. ನಾನು ನೌಕರಿಯಲ್ಲಿರುವುದರಿಂದ ಮಗಳನ್ನು ಅವರ ಬಳಿ ಬಿಟ್ಟಿದ್ದೇನೆ. ಇತ್ತೀಚೆಗೆ ಮನೆಗೆ ಹೋದಾಗ ಅವರಿಗೆ ನೀಲಿಚಿತ್ರಗಳನ್ನು ನೋಡುವ ಅಭ್ಯಾಸವಿರುವುದನ್ನು ನೋಡಿ ದಂಗಾದೆ. ನನಗೆ ಅವರ ಜೊತೆ ಇರುವುದಕ್ಕೆ ಅಸಹ್ಯವಾಗುತ್ತದೆ. ಇದು ಎಷ್ಟು ಸರಿ ಮತ್ತು ಇದನ್ನು ಬಿಡಿಸುವುದು ಹೇಗೆ? ನನ್ನ 10 ವರ್ಷದ ಮಗಳು ಅಲ್ಲಿರುವುದು ಸುರಕ್ಷಿತವೇ? ಮನೆಯಲ್ಲಿ ಆರೋಗ್ಯಕರ ವಾತಾವರಣ ಬೇಕಾಗಿದೆ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ನಿಮ್ಮ ತಂದೆಯವರ ವರ್ತನೆ ನಿಮ್ಮಲ್ಲಿ ಅಸಹ್ಯ, ಆತಂಕದ ಭಾವನೆಗಳನ್ನು ಮೂಡಿಸುವುದು ಸಹಜ. ನಿಮ್ಮ ತಾಯಿಯೇ ಅದನ್ನು ಸಹಿಸಿಕೊಂಡಿರುವಾಗ ಅವರನ್ನು ತಿದ್ದುವ ಜವಾಬ್ದಾರಿಯನ್ನು ನೀವು ಹೊರುವುದು ಹೇಗೆ ಸಾಧ್ಯ? ನೀವು ಯೋಚಿಸಬೇಕಾಗಿರುವುದು ನಿಮ್ಮ ಮತ್ತು ಪೋಷಕರ ಸಂಬಂಧದ ಕಡೆಗೆ ಮತ್ತು ನಿಮ್ಮ ಮಗಳ ಸುರಕ್ಷಿತ ಬೆಳವಣಿಗೆಯ ಕುರಿತಾಗಿ ಮಾತ್ರ. ಮೊದಲನೆಯದಾಗಿ ಅವರ ವರ್ತನೆಯ ಬಗೆಗೆ ಅವರೊಂದಿಗೆ ಮುಕ್ತವಾಗಿ ನಿಮ್ಮ ಅಸಹ್ಯ ಮತ್ತು ಆತಂಕಗಳ ಬಗೆಗೆ ಮಾತನಾಡಿ. ಅವರಿಗೆ ಪ್ರೀತಿ, ಗೌರವನ್ನು ತೋರಿಸಬೇಕೆಂದು ನಿಮ್ಮ ಆಸೆಯಾಗಿದ್ದರೂ ಇಂತಹ ವರ್ತನೆ ಅದಕ್ಕೆ ಹೇಗೆ ಅಡ್ಡಬರುತ್ತಿದೆ ಎಂದು ತಿಳಿಸಿ. ಅಗತ್ಯವಿದ್ದರೆ ಅವರು ಮನೋಚಿಕಿತ್ಸಕರ ಸಹಾಯ ಪಡೆಯಲು ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿ. ಜೊತೆಗೆ ಅವರ ಅಭ್ಯಾಸವನ್ನು ಸಂಪೂರ್ಣವಾಗಿ ಮುಚ್ಚಿದ ಕೋಣೆಗೆ ಸೀಮಿತಗೊಳಿಸಿಕೊಳ್ಳದಿದ್ದರೆ ಮನೆಗೆ ಬರುವುದು ನಿಮಗೆ ಸಾಧ್ಯವಿಲ್ಲ ಎಂದೂ ತಿಳಿಸಿ. ಎರಡನೆಯದಾಗಿ ನಿಮ್ಮ ಮಗಳ ಸುರಕ್ಷಿತ ಬೆಳವಣಿಗೆಯ ದೃಷ್ಟಿಯಿಂದ ಅವಳನ್ನು ನಿಮ್ಮ ಜೊತೆ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಒಳಿತು. ತಾತನ ವರ್ತನೆಯ ಬಗೆಗೆ ಅವಳಿಗೆ ಈಗಾಗಲೇ ತಿಳಿದಿದ್ದರೆ ಅವಳ ಮನಸ್ಸಿನಲ್ಲಿ ಮೂಡಿರಬಹುದಾದ ಗೊಂದಲ, ಕಿರಿಕಿರಿಗಳನ್ನೂ ನಿಭಾಯಿಸಲೂ ಸಹಾಯ ಮಾಡಬೇಕಾಗುತ್ತದೆ. ಅವಳ ವಯಸ್ಸಿಗೆ ಸೂಕ್ತವಾದ ಲೈಂಗಿಕ ಶಿಕ್ಷಣವನ್ನು ನೀಡುವುದೂ ನಿಮ್ಮದೇ ಜವಾಬ್ದಾರಿಯಲ್ಲವೇ? ನಮ್ಮ ಸಮಾಜ ಸಂಸ್ಕೃತಿಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತಾಗಿ ಪೋಷಕರಲ್ಲಿ ಹಿಂಜರಿಕೆ, ಅಜ್ಞಾನಗಳಿವೆ. ಹಾಗಾಗಿ ನೀವೇ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಬಹುದು.

ADVERTISEMENT

l 22ರ ವಿದ್ಯಾರ್ಥಿ. ಓದುವುದಕ್ಕೆ ಶುರಮಾಡಿದ ತಕ್ಷಣ ಲೈಂಗಿಕ ಆಸಕ್ತಿಗಳ ಕಡೆ ಗಮನ ಹರಿಯುತ್ತದೆ. ಏನು ಮಾಡಬೇಕು?

ಸುನಿಲ್‌, ಊರಿನ ಹೆಸರಿಲ್ಲ.

l ಲೈಂಗಿಕತೆಯಿಂದ ದೂರ ಇರುವುದು ಹೇಗೆ ಮತ್ತು ಅದರ ಕುರಿತು ಯೋಚನೆ ಮಾಡದಿರುವುದು ಹೇಗೆ?

l ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನೀಲಿಚಿತ್ರ ನೋಡುವ ಅಭ್ಯಾಸವಿದೆ. ಹುಡುಗಿಯರನ್ನು ನೋಡಿದರೆ ಲೈಂಗಿಕ ಆಕರ್ಷಣೆಯುಂಟಾಗುತ್ತದೆ. ತರಗತಿಯಲ್ಲಿ ಸರಿಯಾಗಿ ಪಾಠ ಕೇಳಲಾಗುತ್ತಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ದೇಹ ಲೈಂಗಿಕ ಸಂಬಂಧಕ್ಕೆ ಸಿದ್ಧವಾಗುವಷ್ಟು ಬೆಳವಣಿಗೆಯಾದ ಕೂಡಲೇ ಪ್ರಕೃತಿ ಹಾರ್ಮೋನ್‌ಗಳ ಮೂಲಕ ಮನಸ್ಸಿನಲ್ಲಿ ಆಕರ್ಷಣೆಯನ್ನು ಹುಟ್ಟಿಸುತ್ತದೆ. ಇಂತಹ ಪ್ರಕೃತಿ ನಿಯಮವನ್ನು ತಡೆಯಲು ಪ್ರಯತ್ನಿಸಿದರೆ ಜೀವಮಾನವೆಲ್ಲಾ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಲೈಂಗಿಕ ಆಕರ್ಷಣೆಯನ್ನು ಬದ್ಧ ಸಂಗಾತಿಯನ್ನು ಹುಡುಕಿಕೊಳ್ಳುವವರೆಗೆ ನಿಭಾಯಿಸಲು ಸಾಧ್ಯ. ಲೈಂಗಿಕ ಆಕರ್ಷಣೆ ನಿರಂತರವಾಗಿ ಯಾರನ್ನೂ ಕಾಡುವುದಿಲ್ಲ. ನಿಮ್ಮ ವಿದ್ಯಾಭ್ಯಾಸ, ಭವಿಷ್ಯಗಳ ಕುರಿತಾಗಿ ನಿಮ್ಮೊಳಗಿರುವ ಹಿಂಜರಿಕೆ, ಕೀಳರಿಮೆ, ಅಸ್ಪಷ್ಟತೆ ಮುಂತಾದವುಗಳಿಂದ ಮೂಡುವ ಮಾನಸಿಕ ನೋವನ್ನು ಮರೆಯಲು ಕಾಮದ ಆಕರ್ಷಣೆಯನ್ನು ಬಳಸುತ್ತಿದ್ದೀರಿ. ಲೈಂಗಿಕ ಆಕರ್ಷಣೆಯನ್ನು ಒಪ್ಪಿಕೊಳ್ಳುತ್ತಲೇ ಓದುವ ವಿಷಯಗಳನ್ನು ಆಕರ್ಷಕವಾಗಿ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. ನಿಮ್ಮ ಹಿಂಜರಿಕೆ, ಕೀಳರಿಮೆಗಳ ಮೂಲವೆಲ್ಲಿರಬಹುದು? ಅವುಗಳನ್ನು ನಿಭಾಯಿಸುವುದನ್ನು ಕಲಿತರೆ ಕಾಮದ ಆಕರ್ಷಣೆ ಪ್ರೇರಕ ಶಕ್ತಿಯಾಗಬಹುದೇ ಹೊರತು ನಿಮ್ಮ ಓದು, ವೃತ್ತಿಗಳಿಗೆ ಅಡ್ಡಬರಲಾರದು.

l 28ರ ಅವಿವಾಹಿತ. ನನಗೆ ಎಷ್ಟೇ ದಣಿವಾಗಿದ್ದರೂ ಹಗಲು ಅಥವಾ ರಾತ್ರಿ ನಿದ್ದೆಯೇ ಬರುತ್ತಿಲ್ಲ. ಇದಕ್ಕೆ ಪರಿಹಾರ ತಿಳಿಸಿ.

ದೇವೇಂದ್ರಪ್ಪ, ಊರಿನ ಹೆಸರಿಲ್ಲ.

ಯದ್ಧಭೂಮಿಯಲ್ಲಿರುವ ಸೈನಿಕರಿಗೆ ಸಹಜವಾಗಿ ನಿದ್ದೆ ಮಾಡುವುದು ಕಷ್ಟವಾಗುವುದು ಏಕೆ ಗೊತ್ತೇ? ಅವರ ಮನಸ್ಸಿನಾಳದಲ್ಲಿ ಯಾವ ಕ್ಷಣದಲ್ಲಾದರೂ ಎದುರಾಗಬಹುದಾದ ಅಪಾಯದ ನಿರೀಕ್ಷೆ ಇರುತ್ತದೆ. ಆಗ ಮೆದುಳು ಅಡ್ರಿನಾಲಿನ್‌, ಕಾರ್ಟಿಸೋಲ್‌ ಮುಂತಾದ ಹಾರ್ಮೋನ್‌ಗಳನ್ನು ಸೃಜಿಸುವ ವ್ಯವಸ್ಥೆ ಮಾಡಿ ಅಪಾಯಕ್ಕೆ ಸಿದ್ಧವಾಗಿರುವಂತೆ ಆಳದ ನಿದ್ದೆಯನ್ನು ತಪ್ಪಿಸುತ್ತದೆ. ನಿಮ್ಮ ಮನಸ್ಸಿನಾಳದಲ್ಲಿ ಇಂತದೇ ಆತಂಕ ಸೇರಿಕೊಂಡಿರಬಹುದಲ್ಲವೇ? ನಿಮ್ಮ ಬುದ್ಧಿಗೆ ಅದು ತೋಚದಿರಬಹದು. ಆತಂಕ, ಒತ್ತಡ ನಿಭಾಯಿಸುವುದನ್ನು ಕಲಿತಾಗ ಮೆದುಳಿನಿಂದ ಅಪಾಯದ ಸೂಚನೆಗಳು ಬರುವುದಿಲ್ಲ.

*ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದಿರುವುದು ನೆನಪಿನಲ್ಲಿರುವುದಿಲ್ಲ. ನೆನಪಿನ ಶಕ್ತಿಯನ್ನು ಹೆಚ್ಚು ಮಾಡುವುದು ಹೇಗೆ?

ಮಾರುತಿ, ಊರಿನ ಹೆಸರಿಲ್ಲ.

ಪ್ರಕೃತಿ ಎಲ್ಲರಿಗೂ ನೆನಪಿನ ಶಕ್ತಿಯನ್ನು ನೀಡಿರುತ್ತದೆ. ಅದನ್ನು ಎಚ್ಚರಿಸಿ ಬಳಸುವುದನ್ನು ಕಲಿಯಬೇಕು. ಓದುವ ವಿಚಾರಗಳು ನಿಮಗೆ ಆಕರ್ಷಕ ಎನ್ನಿಸದಿದ್ದಾಗ ಕೇವಲ ಪರೀಕ್ಷೆಗಾಗಿ ಓದಿ ಹೇಗೆ ನೆನಪಿಟ್ಟುಕೊಳ್ಳುವುದು ಸಾಧ್ಯ? ಜೊತೆಗೆ ನಿಮ್ಮೊಳಗಿರುವ ಮಾನಸಿಕ ಒತ್ತಡ, ಆತಂಕ, ಹಿಂಜರಿಕೆಗಳು ನೆನಪನ್ನು ದಾಖಲಿಸುವ ಮೆದುಳಿನ ಅಂಗವಾದ ಹಿಪ್ಪೊಕ್ಯಾಂಪಸ್‌ನ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ. ಈ ಎರಡು ಅಂಶಗಳತ್ತ ಗಮನಹರಿಸಿದರೆ ನೆನಪಿನ ಶಕ್ತಿಗಾಗಿ ವಿಶೇಷ ಶ್ರಮಪಡುವ ಅಗತ್ಯವಿರುವುದಿಲ್ಲ.

* ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಕಳೆದ ಬಾರಿಯ ಪೊಲೀಸ್‌ ಆಯ್ಕೆ ಪರೀಕ್ಷೆಯಲ್ಲಿ ತುಂಬಾ ನಿರೀಕ್ಷೆ ಇದ್ದರೂ ಸ್ವಲ್ಪದರಲ್ಲಿ ಸಿಗಲಿಲ್ಲ. ಆಗಿನಿಂದ ವಿಚಿತ್ರವಾಗಿ ಯೋಚಿಸುತ್ತಿದ್ದೇನೆ. ಪೊಲೀಸ್‌ ಆಗಬೇಕೆನ್ನುವ ಹಂಬಲ. ಆಗ್ತೀನೋ ಇಲ್ಲವೋ ಎನ್ನುವ ಭಯ ಒಮ್ಮೆಮ್ಮೆ ಕಾಡುತ್ತೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ನೀವು ಯೋಚಿಸುತ್ತಿರುವ ರೀತಿಯಲ್ಲಿ ವಿಚಿತ್ರವೇನಿದೆ? ಯಾವುದೇ ಪ್ರಯತ್ನ ಮಾಡುವಾಗ ಫಲಿತಾಂಶದ ಕುರಿತಾಗಿ ಅನಿಶ್ಚಿತತೆ, ಹಿಂಜರಿಕೆ, ಆತಂಕಗಳಿರುವುದು ಮನಷ್ಯ ಸಹಜ. ನಮ್ಮ ಪ್ರಯತ್ನದ ಫಲ ಸ್ವಲ್ಪದರಲ್ಲೇ ತಪ್ಪಿದಾಗ ನೋವು, ನಿರಾಸೆ, ಹತಾಶೆಗಳೂ ಅಷ್ಟೇ ಸಹಜ. ಇವೆಲ್ಲಾ ಆಗುವುದಿಲ್ಲ ಎಂದು ತೋರಿಸಿಕೊಳ್ಳುವವರು ತಮ್ಮೊಳಗಿನ ತೊಳಲಾಟವನ್ನು ಹತ್ತಿಕ್ಕಿ ಧೈರ್ಯದ ಮುಖವಾಡ ಹೊತ್ತಿರುತ್ತಾರೆ. ಇಂತಹ ನೋವು, ಬೇಸರ, ಹಿಂಜರಿಕೆಗಳು ನಿಮ್ಮ ಓದು, ದಿನಚರಿಗೆ ತೊಂದರೆಯಾಗದಂತೆ ನಿಭಾಯಿಸುವುದನ್ನು ಕಲಿಯಬೇಕು. ಪೊಲೀಸ್‌ ಆಗಬೇನ್ನುವ ಆಸೆ ಸಹಜ. ಆದರೆ ಪೊಲೀಸ್‌ ವೃತ್ತಿಯ ಹೊರತಾಗಿ ನಿಮ್ಮ ವ್ಯಕ್ತಿತ್ವಕ್ಕೆ ಬೆಲೆಯೇ ಇಲ್ಲ ಎಂದು ಹೇಗೆ ತೀರ್ಮಾನಿಸಿದಿರಿ? ನಿಮ್ಮೊಳಗೆ ಹುದುಗಿರುವ ಬೇರೆಬೇರೆ ಆಸಕ್ತಿ, ಸಾಮರ್ಥ್ಯಗಳನ್ನು ಹೊರತೆಗೆದಾಗ ಮನಸ್ಸು ನಿರಾಳವಾಗುತ್ತದೆ. ಇದು ನಿಮ್ಮ ಮುಂದಿನ ಪ್ರಯತ್ನಕ್ಕೆ ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.