ADVERTISEMENT

ಮುಟ್ಟಾದಾಗ ಲೈಂಗಿಕ ಸಂಪರ್ಕ ಹೊಂದಬಹುದೇ?

ಡಾ.ವೀಣಾ ಎಸ್‌ ಭಟ್ಟ‌
Published 30 ಜುಲೈ 2021, 19:30 IST
Last Updated 30 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಟ್ಟಿನ ಅವಧಿಯಲ್ಲಿ ಲೈಂಗಿಕ ಸಂಪರ್ಕ ಹೊಂದಬಹುದೇ? ಆ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಏನಾದರೂ ಸಮಸ್ಯೆ ಇದೆಯೆ? ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು? ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸುರಕ್ಷತಾ ಕ್ರಮಗಳನ್ನು ತಿಳಿಸಿ.

-ಹೆಸರು, ಊರು ತಿಳಿಸಿಲ್ಲ

ಉತ್ತರ: ಮುಟ್ಟು ಸಂತಾನೋತ್ಪತ್ತಿ ವಯಸ್ಸಿನಲ್ಲಿ ಆರಂಭವಾಗಿ ಋತುಬಂಧದವರೆಗೆ ಪ್ರತಿತಿಂಗಳೂ ಬರುವ ಜೈವಿಕವಾದ ಹಾಗೂ ಸ್ವಾಭಾವಿಕ ಪ್ರಕ್ರಿಯೆ. ಪ್ರತಿ ತಿಂಗಳೂ 4–5 ದಿನ ಮುಟ್ಟಿನಸ್ರಾವ ಇರುತ್ತದೆ ಮತ್ತು ಆ ಸ್ರಾವ ಶುದ್ಧವಾದದ್ದು. ಗರ್ಭಧಾರಣೆಯಾಗದಿದ್ದಾಗ ಪ್ರತಿತಿಂಗಳೂ ಗರ್ಭಕೋಶದ ಹೊರಪದರ ಛಿದ್ರಛಿದ್ರವಾಗಿ ಹೊರಬರುವುದೇ ಮುಟ್ಟು. ಸ್ರಾವದ ಜೊತೆಗೆ ಕೆಂಪು ರಕ್ತಕಣಗಳು, ಬಿಳಿರಕ್ತಕಣಗಳು, ಸತ್ತ ಅಂಡಾಣು ಎಲ್ಲವೂ ಇರುತ್ತವೆ. ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದೇವೆ ಎಂದರೂ ಇಂದಿಗೂ ಮುಟ್ಟಿನ ಬಗ್ಗೆ ತಪ್ಪು ಕಲ್ಪನೆ/ಅಭಿಪ್ರಾಯಗಳು, ಅಂತೆಕಂತೆಗಳು ಇನ್ನೂ ಸಾಕಷ್ಟಿವೆ. ಹೆಣ್ಣು ಸ್ನಾನ ಮಾಡಬಾರದು, ಅಡುಗೆ ಮನೆಗೆ, ದೇವರಕೋಣೆಗೆ, ಹೊರಗಡೆಗೆ ಹೋಗಬಾರದು, ಮುಟ್ಟಿನಲ್ಲಿ ಲೈಂಗಿಕ ಸಂಪರ್ಕ ಆದರೆ ನಪುಸಂಕತ್ವ ಬರುತ್ತದೆ, ಮುಟ್ಟಿನಲ್ಲಿ ಹೊಳೆ ದಾಟಬಾರದು, ಹೂ ಮುಡಿಯಬಾರದು ಹೀಗೆ ಒಂದಲ್ಲ, ಎರಡಲ್ಲ ಹಲವು ತಪ್ಪು ಕಲ್ಪನೆಗಳು ಇನ್ನೂ ಜನಜನಿತವಾಗಿವೆ.

ADVERTISEMENT

ಮುಟ್ಟಿನ ಸಮಯದಲ್ಲಿ ಲೈಂಗಿಕ ಸಂಪರ್ಕ ಹೊಂದಲು ವೈಜ್ಞಾನಿಕವಾಗಿ ಯಾವ ಅಡ್ಡಿಯೂ ಇಲ್ಲ. ಹೆಚ್ಚಿನ ಸ್ತ್ರೀಯರಲ್ಲಿ ಮುಟ್ಟಾಗಲು ಎರಡು ಮೂರು ದಿನ ಮೊದಲು ಮತ್ತು ಕೆಲವರಲ್ಲಿ ಮುಟ್ಟಿನ ಸಮಯದಲ್ಲಿ ಲೈಂಗಿಕ ಉದ್ರೇಕ ಹೆಚ್ಚಿರಬಹುದು. ಅಂತಹ ಸಂದರ್ಭದಲ್ಲಿ ಅವರಿಗೆ ಭಾವಪ್ರಾಪ್ತಿಯೂ ಸುಲಭ. ಆದರೆ ಮುಟ್ಟಿನ ಸಮಯದಲ್ಲಿ ಮಹಿಳೆಗೆ ಅತಿರಕ್ತಸ್ರಾವವಿದ್ದರೆ, ಹೊಟ್ಟೆನೋವು, ಸುಸ್ತು ಇದ್ದರೆ ಅಥವಾ ಲೈಂಗಿಕ ಸಂಪರ್ಕದ ಇಚ್ಛೆ ಇಲ್ಲದಿದ್ದರೆ ಲೈಂಗಿಕ ಸಂಪರ್ಕ ಒಳ್ಳೆಯದಲ್ಲ. ನೆನಪಿಡಬೇಕಾದ ಮುಖ್ಯ ವಿಷಯವೆಂದರೆ ಏಡ್ಸ್‌ ಇನ್ನಿತರ ಲೈಂಗಿಕ ಕಾಯಿಲೆಗಳು ಇದ್ದಾಗ ಮುಟ್ಟಿನ ಸಮಯದಲ್ಲಿ ಪುರುಷರಿಂದ ಸ್ತ್ರೀಗೆ ಬೇಗನೆ ತಗಲುವ ಸಾಧ್ಯತೆಗಳು ಹೆಚ್ಚು. ಇದಕ್ಕಾಗಿ ಮಹಿಳೆಯರಿಗೆ ಸೋಂಕು ತಗಲದ ರೀತಿಯಲ್ಲಿ ಈ ಸಂದರ್ಭದಲ್ಲಿ ಕಾಂಡೋಮ್‌ಗಳ ಬಳಕೆಯಂತಹ ಎಚ್ಚರಿಕೆ ವಹಿಸಬೇಕು. ಜನನಾಂಗವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ.

**
ವಯಸ್ಸು 28, ಶಿಕ್ಷಕಿ. ಮೊದಲಿನಿಂದಲೂ ಮುಟ್ಟು ಏರುಪೇರು ಆಗುತ್ತಿತ್ತು. ಗರ್ಭಿಣಿಯಾದ ನಂತರ ದಿನವೂ ಬೈಕ್‌ನಲ್ಲಿ ಶಾಲೆಗೆ ಹೋಗುತ್ತಿದ್ದೆ. ಎಂಟು ತಿಂಗಳಿಗೆ ನೀರಿನ ಚೀಲ ಒಡೆದು ಒಂದು ದಿನದ ನಂತರ ಸಿಝೇರಿಯನ್ ಹೆರಿಗೆ ಆಯಿತು. ಮಗು ತೂಕ ಕಡಿಮೆ ಇದ್ದು 12 ದಿನಗಳ ಬಳಿಕ ಸಾವನ್ನಪ್ಪಿತು. ಈಗ ಮತ್ತೆ ಮಗು ಪಡೆಯಲು ಎಷ್ಟು ವರ್ಷ ಬೇಕು? ಒಂದು ಸಿಝೇರಿಯನ್ ನಂತರ ಎಷ್ಟು ಸಿಝೇರಿಯನ್ ಅವಕಾಶ ಇದೆ. ನನಗೆ ನಾರ್ಮಲ್ ಹೆರಿಗೆ ಸಾಧ್ಯವೇ? 30ರ ನಂತರ ಆರೋಗ್ಯವಂತ ಮಗು ಜನನ ಸಾಧ್ಯವಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಆತಂಕವಾಗುತ್ತದೆ. ದಯವಿಟ್ಟು ಪರಿಹಾರ ತಿಳಿಸಿ.

–ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮಗೆ ಸಿಝೇರಿಯನ್ ಆಗಿಯೂ ಮಗುವನ್ನು ಕಳೆದುಕೊಂಡಿದ್ದು ವಿಷಾದಕರ ಸಂಗತಿ. ಆದರೂ ನೀವು ಅತಿಯಾಗಿ ಚಿಂತೆ ಮಾಡದೆ ನಿಮಗೆ ಈಗಾಗಲೇ 28 ವರ್ಷವಾಗಿರುವುದರಿಂದ ಆದಷ್ಟು ಬೇಗನೆ ಮಗುವನ್ನು ಪಡೆಯಲು ಪ್ರಯತ್ನಿಸಿ. ಒಂದೆರಡು ವರ್ಷದೊಳಗೆ ಮತ್ತೆ ಮಗುವಾದರೆ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರೆ ಅಪಾಯವೇನಿಲ್ಲ. ಏನೂ ತೊಂದರೆ ಇಲ್ಲದಿದ್ದರೆ 3 ರಿಂದ 4 ಸಿಝೇರಿಯನ್ ಶಸ್ತ್ರಚಿಕಿತ್ಸೆಯನ್ನು ನಿರಾತಂಕವಾಗಿ ಮಾಡಬಹುದು. ಆದರೆ ನಿಮಗೆ ಸ್ವಲ್ಪ ವಯಸ್ಸಾಗಿರುವುದರಿಂದ ಮೊದಲನೇ ಹೆರಿಗೆ ಸಿಝೇರಿಯನ್‌ನಿಂದ ಆಗಿರುವುದರಿಂದ ನಾರ್ಮಲ್ ಹೆರಿಗೆ ಮಾಡಿಸುವುದೇ ಬೇಡವೇ ಎಂಬುದನ್ನು ವೈದ್ಯರು ಆ ಸಂದರ್ಭಕ್ಕನುಗುಣವಾಗಿ ನಿರ್ಣಯಿಸುತ್ತಾರೆ. ಈಗ ಹೆಚ್ಚಿನ ಮಹಿಳೆಯರಿಗೆ 30ರ ನಂತರವೇ ಮಗುವಾಗುತ್ತಿದೆ. ಮಗು ಆರೋಗ್ಯಪೂರ್ಣವಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆಗಳು ಲಭ್ಯವಿರುವುದರಿಂದ ನೀವು ಸೂಕ್ತ ವೈದ್ಯರ ಮೇಲ್ವಿಚಾರಣೆಯಲ್ಲಿ ಇದ್ದು ಆರೋಗ್ಯ ಪೂರ್ಣ ಮಗುವನ್ನು ಪಡೆಯಿರಿ ಹಾಗೂ ನಿಮಗೆ ಒಳ್ಳೆಯದಾಗಲಿ.

**
ತಿಂಗಳ ಮುಟ್ಟು ಸರಿಯಾಗಿ ಆಗುವುದಿಲ್ಲ. ಒಬೆಸಿಟಿ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ನಾನು ಔಷಧಿ ತಗೊಂಡರೆ ಮಾತ್ರ ಮುಟ್ಟು ಆಗುತ್ತದೆ. ಈಗ ಮತ್ತೆ ಅದೇ ಸಮಸ್ಯೆ. ಆರು ತಿಂಗಳಾದರೂ ಮುಟ್ಟಾಗುವುದಿಲ್ಲ. ನನ್ನ ವಯಸ್ಸು 36. ನನಗೆ 9 ವರ್ಷ ಮಗಳು ಇದ್ದಾಳೆ. ಮತ್ತೆ ಒಂದು ಮಗು ಬೇಕು.

–ಶ್ವೇತಾ, ಊರಿನ ಹೆಸರಿಲ್ಲ.

ಉತ್ತರ: ಶ್ವೇತಾರವರೇ ನಿಮಗೆ ಈಗಾಗಲೇ 36 ವರ್ಷವಾಗಿರುವುದರಿಂದ ಬೊಜ್ಜು ಬೇರೆ ಇರುವುದರಿಂದ ನಿಮಗೆ ಪಿಸಿಒಡಿ ಸಮಸ್ಯೆಯಿಂದ ತಿಂಗಳು ತಿಂಗಳು ಮುಟ್ಟಾಗದೇ ಇರಬಹುದು. ನೀವು ಸೂಕ್ತವಾದ ಬಂಜೆತನ ಚಿಕಿತ್ಸಾ ತಜ್ಞರ ಹತ್ತಿರ ಅಥವಾ ಸ್ತ್ರೀರೋಗತಜ್ಞರ ಹತ್ತಿರ ಆದಷ್ಟು ಬೇಗನೆ ಚಿಕಿತ್ಸೆ ತೆಗೆದುಕೊಂಡು ಇನ್ನೊಂದು ಮಗುವನ್ನು ಹೊಂದಲು ಪ್ರಯತ್ನಿಸಿ. ಎಲ್ಲಕ್ಕಿಂತ ಮೊದಲು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಂಡು ತೂಕವನ್ನು ಕಡಿಮೆ ಮಾಡಿಕೊಳ್ಳಿ. ಹೆಚ್ಚು ಹಸಿರು ಸೊಪ್ಪು, ತರಕಾರಿಗಳು, ಬೇಳೆ-ಕಾಳುಗಳು, ಪ್ರಕೃತಿದತ್ತ ಸಾತ್ವಿಕ ಆಹಾರಗಳನ್ನು ಸೇವಿಸುತ್ತ, ದಿನಕ್ಕೆ 6 ರಿಂದ 8 ಗಂಟೆ ನಿದ್ರೆ, ಒಂದು ಗಂಟೆ ದೈಹಿಕ ಪರಿಶ್ರಮ, ದಿನಾ 4 ಲೀಟರ್ ನೀರು, ಧನಾತ್ಮಕ ಚಿಂತನೆ.. ಇವೆಲ್ಲವನ್ನು ಅಳವಡಿಸಿಕೊಂಡು ಸೂಕ್ತ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಂಡರೆ ನಿಮಗೆ ಇನ್ನೊಂದು ಮಗು ಖಂಡಿತ ಬೇಗನೇ ಆಗುತ್ತದೆ.

**

ಡಾ. ವೀಣಾ ಎಸ್‌. ಭಟ್‌

ಏಪ್ರಿಲ್ 10ಕ್ಕೆ ಗಂಡು ಮಗು ನಾರ್ಮಲ್ ಡೆಲಿವರಿ ಆಗಿದೆ. ನನಗೆ ಈಗ 22 ವಯಸ್ಸು. ಮಗುವಿಗೆ ಮೊಲೆಹಾಲು ಕಡಿಮೆ ಆಗಿದೆ. ಇದಕ್ಕೆ ಕಾರಣ ಗರ್ಭಿಣಿ ಆಗಿದ್ದಾಗ ಹಾಲಿನ ಪದಾರ್ಥ ಕಡಿಮೆ ಸೇವಿಸಿದರೆ ಹಾಗಾಗುತ್ತೆ ಅಂತ ಹೇಳುತ್ತಾರೆ. ಇದಕ್ಕೆ ಕಾರಣ ಏನಿರಬಹುದು? ನನನಗೆ ಹೆರಿಗೆಯಾಗಿ 2 ತಿಂಗಳ ನಂತರ ಮತ್ತೆ ಮುಟ್ಟು ಆರಂಭವಾಗಿದೆ. ಇದರಿಂದ ಮುಂದೆ ಏನಾದರೂ ಸಮಸ್ಯೆ ಆಗುತ್ತದೆಯೇ?

ಪವಿತ್ರಾ, ಊರಿನ ಹೆಸರಿಲ್ಲ

ಉತ್ತರ: ಪವಿತ್ರಾರವರೇ, ನಿಮಗೆ ಎದೆಹಾಲು ಕಡಿಮೆಯಾಗಲು ಕಾರಣ ಗರ್ಭಿಣಿಯಿದ್ದಾಗ ಕಡಿಮೆ ಹಾಲು ಸೇವಿಸಿದ್ದೇನೂ ಇರಲಿಕ್ಕಿಲ್ಲ. ಆದರೆ ಗರ್ಭಧಾರಣೆಯಲ್ಲಿ ಹೈನುಪದಾರ್ಥಗಳು, ಮೊಳಕೆಕಾಳು, ಸೊಪ್ಪು, ತರಕಾರಿಗಳನ್ನೊಳಗೊಂಡ ಪೌಷ್ಟಿಕ ಸಮತೋಲನ ಆಹಾರ ಸೇವಿಸುವುದು ಅತ್ಯಗತ್ಯ. ಪ್ರತಿಯೊಬ್ಬ ಎದೆಹಾಲುಣಿಸುವ ತಾಯಿಗೂ ಅವರ ಮಗುವಿಗೆ ಸಾಕಾದಷ್ಟು ಹಾಲು ಬಂದೇ ಬರುತ್ತದೆ. ಅವಳಿ ಹಾಗೂ ತ್ರಿವಳಿ ಮಕ್ಕಳಿಗೆ ಸಾಕಾಗುವಷ್ಟು ಎದೆಹಾಲು ತಾಯಂದಿರಲ್ಲಿ ಉತ್ಪಾದನೆ ಆಗುತ್ತದೆ. ಯಾವುದೇ ಕಾರಣಕ್ಕಾಗಿಯೂ ನೀವು ಮಗುವಿಗೆ 6 ತಿಂಗಳು ಕಾಲ ಕೇವಲ ಎದೆಹಾಲನ್ನು ಮಾತ್ರ (ನೀರೂ ಕೂಡ ಅಗತ್ಯವಿಲ್ಲ) ಕುಡಿಸಬೇಕು. ಹೆರಿಗೆಯ ನಂತರವೂ ಬರೀ ಮನೆಣಸಿನ ಸಾರು ಅಷ್ಟೇ ತಿನ್ನದೇ ಪೌಷ್ಟಿಕ ಆಹಾರವನ್ನು ಸೇವಿಸಿ. ಮೆಂತ್ಯೆ, ಗೋಧಿ, ಒಣಹಣ್ಣುಗಳು ಇವೆಲ್ಲವನ್ನೂನು ಸೇವಿಸಿದರೆ ಎದೆ ಹಾಲು ಚೆನ್ನಾಗಿ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾದ ಎದೆಹಾಲನ್ನು ಹೆಚ್ಚು ಮಾಡುವ ಅಂಶವೆಂದರೆ ಪದೇಪದೇ ಮಗುವನ್ನು ಎದೆಗೆ ಚೀಪಿಸುವುದು. ನೀವು ಪದೇಪದೇ ಮಗುವಿಗೆ ಹಾಲು ಬರುತ್ತಿದೆಯೋ ಇಲ್ಲವೋ ಎಂದು ಚಿಂತಿಸದೇ ಎದೆಯನ್ನು ಚೀಪಿಸುತ್ತಿರಿ. ಖಂಡಿತ ನಿಮ್ಮ ಮಗುವಿಗೆ ಸಾಕಾದಷ್ಟು ಹಾಲು ಬರುತ್ತದೆ. ಎರಡು ತಿಂಗಳು ನಿಮ್ಮ ಮುಟ್ಟು ಆರಂಭವಾಗಿದ್ದಲ್ಲಿ ಏನೂ ಸಮಸ್ಯೆಯಿಲ್ಲ. ಆದರೆ ನೀವು ಮಕ್ಕಳಾಗದ ಹಾಗೇ ಸಂತಾನ ನಿಯಂತ್ರಣ ಕ್ರಮಗಳನ್ನು ಪತಿಯೊಡನೆ ಲೈಂಗಿಕ ಸಂಪರ್ಕ ಮಾಡಬೇಕಾದರೆ ಅನುಸರಿಸಬೇಕಷ್ಟೇ.

ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.