ADVERTISEMENT

ಏನಾದ್ರೂ ಕೇಳ್ಬೋದು: ಸಲಿಂಗಪ್ರೇಮಕ್ಕೆ ಆತ್ಮಹತ್ಯೆ ಪರಿಹಾರವೇ?

ನಡಹಳ್ಳಿ ವಂಸತ್‌
Published 20 ಆಗಸ್ಟ್ 2021, 19:31 IST
Last Updated 20 ಆಗಸ್ಟ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

l 22 ವರ್ಷದ ಸರ್ಕಾರಿ ನೌಕರ. ಹುಡುಗಿಯರನ್ನು ನೋಡಿದರೆ ಭಾವನೆಗಳು ಕೆರಳುವುದಿಲ್ಲ. ನಾನು ಸಲಿಂಗಪ್ರೇಮಿ ಇರಬಹುದೇ ಎನ್ನಿಸುತ್ತಿದೆ. ಕುಟುಂಬ ಮತ್ತು ಸ್ನೇಹಿತರ ಪ್ರೀತಿಯೆಲ್ಲವೂ ಸಿಕ್ಕಿದೆ. ಆದರೆ ಮದುವೆಯಿಲ್ಲದೆ ಜೀವನ ವ್ಯರ್ಥವೆನಿಸುತ್ತದೆ. ಮದುವೆಯಾದರೆ ಹೆಂಡತಿಗೆ ಲೈಂಗಿಕ ತೃಪ್ತಿ ಕೊಡಲಾರೆ ಎಂದು ಭಯವಾಗುತ್ತಿದೆ. ಎರಡು ವರ್ಷದಿಂದ ಇದೇ ಚಿಂತೆ ಕಾಡುತ್ತಿದೆ. ಸುಮಾರು 30 ವರ್ಷಗಳವರೆಗೆ ಕಾದು ಸಲಿಂಗಪ್ರೇಮದಿಂದ ಹೊರಬರಲಾಗದಿದ್ದರೆ ಸಾಯಲು ನಿರ್ಧರಿಸಿದ್ದೇನೆ. ಹೊರಬರಲು ಸಾಧ್ಯವೇ? ಸಲಹೆನೀಡಿ.

ಹೆಸರು, ಊರು ಇಲ್ಲ.

ಸಲಿಂಗಕಾಮ ಸಾಮಾಜಿಕವಾಗಿ ಕಳಂಕವಾಗಿರುವುದಕ್ಕೆ ನಿಮಗೆ ಹಿಂಜರಿಕೆ, ನೋವು ಮತ್ತು ಬೇಸರಗಳಿರುವುದು ಸಹಜ. ಆದರೆ ಇದು ಗುಣಪಡಿಸಬೇಕಾದ ಕಾಯಿಲೆಯಲ್ಲ. ಪ್ರಕೃತಿಯು ನೀಡಿರುವ ಸಹಜವಾದ ಲೈಂಗಿಕ ಆಯ್ಕೆ. ಸಾಕಷ್ಟು ಪ್ರಾಣಿಗಳಲ್ಲಿಯೂ ಇಂತಹ ಪ್ರವೃತ್ತಿಯನ್ನು ಗುರುತಿಸಲಾಗಿದೆ. ಸಲಿಂಗಪ್ರೇಮಿ ಎನ್ನುವ ಒಂದೇ ಕಾರಣಕ್ಕಾಗಿ ನಿಮ್ಮ ವ್ಯಕ್ತಿತ್ವದ ಇತರ ಹಲವಾರು ಅದ್ಭುತವಾದ ಅಂಶಗಳು ವ್ಯರ್ಥವಾಗುವುದು ಹೇಗೆ? ಸಲಿಂಗಪ್ರೇಮಿಯಾಗಿಯೂ ನೀವೊಬ್ಬ ಉತ್ತಮ ಮಗ, ಸ್ನೇಹಿತ, ನಾಗರಿಕ ಎಲ್ಲವೂ ಆಗಿರಬಹುದಲ್ಲವೇ? ತೀವ್ರ ಹತಾಶೆ ನಿಮ್ಮನ್ನು ಆತ್ಮಹತ್ಯೆಯ ಯೋಚನೆಗಳಿಗೆ ತಳ್ಳುತ್ತಿದೆ. ಮೊದಲು ನಿಮ್ಮ ಲೈಂಗಿಕತೆಯ ಕುರಿತಾದ ಪೂರ್ಣ ಅರಿವನ್ನು ಪಡೆದುಕೊಳ್ಳಲು ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ. ನಿಮ್ಮ ಎಲ್ಲಾ ನೋವುಗಳಿಗೆ ಸಹಾಯ ಸಿಗುತ್ತದೆ. ಅನಗತ್ಯವಾದ ಔಷಧಗಳನ್ನು ಸೇವಿಸುವುದರ ಮೂಲಕ ಅಪಾಯಗಳನ್ನು ಆಹ್ವಾನಿಸಿಕೊಳ್ಳಬೇಡಿ.

ADVERTISEMENT

l ಎಂ.ಎ ಪದವೀಧರ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನಗೆ ಮೊದಲಿನಿಂದಲೂ ಮಲವನ್ನು ನೋಡಿದರೆ ಅಸಹ್ಯವುಂಟಾಗುತ್ತದೆ. ಇದರ ಕುರಿತೇ ಯೋಚಿಸುತ್ತಿರುವುದರಿಂದ ಸಾಮಾನ್ಯರಂತೆ ಎಲ್ಲರೊಡನೆ ಬೆರೆಯಲಾಗುವುದಿಲ್ಲ. ನಾನೇ ಸಮಾಧಾನ ಮಾಡಿಕೊಂಡರೂ ಅದೇ ಯೋಚನೆಗಳು ಬರುತ್ತಿರುತ್ತವೆ. ಎಲ್ಲಾ ವಿಚಾರದಲ್ಲಿಯೂ ಅತಿಯಾಗಿ ಋಣಾತ್ಮಕವಾಗಿ ಚಿಂತಿಸುತ್ತೇನೆ. ಇದರಿಂದ ಹೊರಬರುವುದು ಹೇಗೆ?

ಹೆಸರು, ಊರು ಇಲ್ಲ.

ಅಸಹ್ಯದ ಭಾವನೆಗಳು ಬರುವುದು ಒಂದು ದೊಡ್ಡ ಮಾನಸಿಕ ಕಾಯಿಲೆ ಎಂದು ನೀವು ಆಳವಾಗಿ ನಂಬಿಕೊಂಡಿರುವಂತಿದೆ. ಮಲವನ್ನು ನೋಡಿದರೆ ಅಸಹ್ಯವಾಗದವರು ಯಾರಿದ್ದಾರೆ ಹೇಳಿ? ತಕ್ಷಣಕ್ಕೆ ಎಲ್ಲರಿಗೂ ಅಸಹ್ಯದ ಭಾವನೆ ಬಂದರೂ ಅದು ಕಾಡುವುದಿಲ್ಲ. ನಿಮ್ಮ ಯಾವುದೋ ಬಾಲ್ಯದ ಅನುಭವ ಇಂತಹ ತೀವ್ರ ಅಸಹ್ಯದ ಭಾವನೆಗಳಿಗೆ ಜೋಡಿಸಿಕೊಂಡಿದೆ. ಇದನ್ನು ತಿಳಿಯಲು ಮನೋಚಿಕಿತ್ಸಕರ ಸಹಾಯದ ಅಗತ್ಯವಿದೆ. ಸದ್ಯಕ್ಕೆ ಹೀಗೆ ಮಾಡಿ. ಅಸಹ್ಯದ ಭಾವನೆ ಬಂದ ಕೂಡಲೇ ಯೋಚನೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಬೇಡಿ. ಅಸಹ್ಯದ ಭಾವನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹದ ಎಲ್ಲಾ ಭಾಗಗಳನ್ನು ಗಮನಿಸಿ. ದೇಹವನ್ನು ಶಾಂತಗೊಳಿಸುತ್ತಾ ಹೋದಂತೆ ಭಾವನೆಗಳ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚಿನ ಸಹಾಯಕ್ಕೆ ತಜ್ಞರನ್ನು ಸಂಪರ್ಕಿಸಿ.

ಪದವೀಧರ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಆರು ವರ್ಷಗಳಿಂದ ರಾತ್ರಿಯಿಡೀ ಕನಸು ಬೀಳುವುದರಿಂದ ಸರಿಯಾಗಿ ನಿದ್ದೆಯಾಗುವುದಿಲ್ಲ. ದಿನವಿಡೀ ಆಲಸ್ಯ, ಏಕಾಗ್ರತೆಯ ಕೊರತೆ ಮತ್ತು ತಲೆನೋವಿನಿಂದ ಬಳಲುತ್ತಿದ್ದೇನೆ. ಓದಿರುವುದು ಸರಿಯಾಗಿ ನೆನಪಿರುವುದಿಲ್ಲ. ಕನಸು ಏಕೆ ಬೀಳುತ್ತವೆ? ಪರಿಹಾರವೇನು?

ಹೆಸರು, ಊರು ಇಲ್ಲ.

ಕನಸುಗಳು ಏಕೆ ಬೀಳುತ್ತವೆ ಎನ್ನುವುದಕ್ಕೆ ಸ್ಪಷ್ಟವಾದ ಕಾರಣಗಳನ್ನು ಹೇಳುವುದು ಕಷ್ಟ. ಸದ್ಯದ ತಿಳಿವಳಿಕೆಯ ಪ್ರಕಾರ ನಮ್ಮ ಮಾನಸಿಕ ಹೋರಾಟಗಳನ್ನು ಅವು ಸಾಂಕೇತಿಕವಾಗಿ ನಿರೂಪಿಸುತ್ತವೆ. ಕನಸುಗಳು ಸಾಮಾನ್ಯವಾಗಿ ಎಲ್ಲರಿಗೂ ಬೀಳುತ್ತವೆ. ಆದರೆ ತೀವ್ರವಾಗಿ ಕಾಡುವ ಕೆಲವೇ ಕನಸುಗಳ ಹೊರತಾಗಿ ಉಳಿದವುಗಳು ನೆನಪಿರುವುದಿಲ್ಲ. ಕನಸು ಸಹಜ ನಿದ್ದೆಗೆ ಭಂಗ ತರುತ್ತಿದೆ ಎಂದಾದರೆ ಅದು ನಿಮ್ಮ ಮನಸ್ಸಿನ ಆತಂಕಗಳನ್ನು ಸೂಚಿಸುತ್ತಿರುತ್ತದೆ. ಇದನ್ನು ತಿಳಿಯಲು ತಜ್ಞರ ನೆರವು ಬೇಕು. ಸದ್ಯಕ್ಕೆ ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ತಕ್ಷಣ 10 ನಿಮಿಷ ಸುಮ್ಮನೆ ಕುಳಿತು ದೀರ್ಘವಾಗಿ ಉಸಿರಾಡುತ್ತಾ ತಲೆಯಿಂದ ಕಾಲಿನವರೆಗೆ ದೇಹದ ಒಂದೊಂದೇ ಅಂಗವನ್ನು ನಿಧಾನವಾಗಿ ಗಮನಿಸುತ್ತಾ ಬನ್ನಿ. ತಕ್ಷಣ ಮನಸ್ಸು ನಿರಾಳವಾಗುತ್ತದೆ. ಹಾಗೆಯೇ ನೆನಪಿರುವ ಕನಸಿನ ಅಂಶಗಳನ್ನು ಬೆಳಿಗ್ಗೆ ಎದ್ದ ಕೂಡಲೇ ಬರೆದಿಡಿ. ಒಂದು ತಿಂಗಳ ನಂತರ ನಿಮ್ಮ ಆತಂಕದ ಸ್ವರೂಪವನ್ನು ಅವುಗಳ ಮೂಲಕ ಗುರುತಿಸುವುದು ಸಾಧ್ಯ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ.


ನನಗೆ 2 ವರ್ಷಗಳಿಂದ ಮಾನಸಿಕ ಕಾಯಿಲೆಯಿದ್ದು ಏನು ಮಾಡಬೇಕೆಂದು ತಿಳಿಸಿ.

ಹೆಸರು, ಊರು ಇಲ್ಲ.

ನಿಮ್ಮ ವೈಯುಕ್ತಿಕ ವಿವರಗಳು ಮತ್ತು ಕಾಯಿಲೆ ಎಂದು ನೀವು ಹೇಳುತ್ತಿರುವುದರ ಲಕ್ಷಣಗಳ ಕುರಿತಾದ ಮಾಹಿತಿಯಿಲ್ಲದೆ ಹೇಗೆ ಉತ್ತರಿಸಲು ಸಾಧ್ಯ? ಸಾಧ್ಯವಿದ್ದರೆ ಎಲ್ಲಾ ವಿವರಗಳನ್ನು ಇನ್ನೊಮ್ಮೆ ಬರೆಯಿರಿ ಅಥವಾ ತಜ್ಞ ಮನೋಚಿಕಿತ್ಸಕರನ್ನು ಸಂಪರ್ಕಿಸಿ.

ಯುವಕ. ಹಸ್ತಮೈಥುನ ಮಾಡಿಕೊಂಡಿದ್ದೆ. ಅದರಿಂದಾಗಿ ಕಣ್ಣುಗುಡ್ಡೆಗಳು ಒಳಗೆ ಹೋಗಿವೆ. ಇದರಿಂದಾಗಿ ಪೂರ್ತಿ ಕಣ್ಣುತೆರೆಯಲು ಆಗುವುದಿಲ್ಲ. ನನ್ನ ಸೌಂದರ್ಯವು ಹಾಳಾಗಿದೆ. ಕಣ್ಣುಗುಡ್ಡೆ ಹೊರಬರುಂತೆ ಮಾಡುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಹಸ್ತಮೈಥುನದಿಂದ ಕಣ್ಣುಗುಡ್ಡೆಗಳು ಒಳಹೋಗಿವೆ ಎಂದು ನೇತ್ರತಜ್ಞರು ಹೇಳಿದ್ದಾರೆಯೇ? ಅಥವಾ ಕಣ್ಣುಗುಡ್ಡೆಗಳು ಒಳಹೋಗಿವೆ ಎಂದು ನಿಮ್ಮ ಆತಂಕ ಹೇಳುತ್ತಿರಬೇಕಲ್ಲವೇ? ಇಂತಹ ಆತಂಕ ಹಸ್ತಮೈಥುನ ಅಪಾಯಕಾರಿ ಎನ್ನುವ ತಪ್ಪುತಿಳಿವಳಿಕೆಯಿಂದ ಬಂದಿರಬಹುದೇ? ಹಸ್ತಮೈಥುನ ಸಂಪೂರ್ಣ ಸುರಕ್ಷಿತ ಎಂದು ಹಿಂದೆ ಹಲವಾರು ಬಾರಿ ಇದೇ ಅಂಕಣದಲ್ಲಿ ಹೇಳಲಾಗಿದೆ. (30ನೇ ಜನವರಿ 2021) ನಿಮಗೆ ಇನ್ನೂ ಅನುಮಾನಗಳಿದ್ದರೆ ತಜ್ಞ ಲೈಂಗಿಕ ಚಿಕಿತ್ಸಕರನ್ನು ಭೇಟಿಯಾಗಿ. ಅಂತರ್ಜಾಲದಲ್ಲಿ ಅಥವಾ ಜಾಹಿರಾತುಗಳಲ್ಲಿ ಸಿಗುವ ಮಾಹಿತಿಗಳಿಂದ ಮೋಸಹೋಗಿ ಅಪಾಯಕಾರೀ ಪ್ರಯತ್ನಗಳಿಗೆ ಕೈಹಾಕಬೇಡಿ. ಕಣ್ಣುಗುಡ್ಡೆಗಳನ್ನು ನೇತ್ರವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.

* 24ರ ಪುರುಷ. ಹಸ್ತಮೈಥುನ ಮಾಡಿಕೊಳ್ಳಬೇಕೆನಿಸುತ್ತದೆ. ಮಾಡಿದ ಮೇಲೆ ಸುಸ್ತಾಗುತ್ತದೆ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಏನಾದರೂ ತೊಂದರೆ ಇದೆಯಾ?

ಹಸ್ತಮೈಥುನದಲ್ಲಿಯೂ ಸಂಗಾತಿಯ ಜೊತೆಗಿನ ಮಿಲನದಲ್ಲಿ ಆಗುವಷ್ಟು ದೇಹದ ಶಕ್ತಿಯ ವ್ಯಯವಾಗುತ್ತದೆ. ಹಾಗಾಗಿ ಸುಸ್ತಾಗುವುದು ಸಹಜ. ಇದರಿಂದ ತೊಂದರೆಯೇನೂ ಇಲ್ಲ. ವಿಶ್ರಾಂತಿ ಪಡೆಯುವುದು ಸಾಧ್ಯವಾಗುವ ಸಮಯಕ್ಕೆ ಇದನ್ನು ಹೊಂದಿಸಿಕೊಳ್ಳಿ. ನಿಶ್ಚಿಂತರಾಗಿ ನಿಮ್ಮ ಓದು ಉದ್ಯೋಗಗಳ ಕಡೆ ಪೂರ್ಣ ಗಮನಹರಿಸಿ.

25ರ ಯುವಕ. 16ನೇ ವಯಸ್ಸಿನಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಮಾಡುತ್ತಿರುವುದು ತಪ್ಪು ಎನಿಸುತ್ತಿದೆ. ಓದಲು ಏಕಾಗ್ರತೆ ಬರುತ್ತಿಲ್ಲ. ಭವಿಷ್ಯದ ಬಗೆಗೆ ಭಯವಾಗುತ್ತಿದೆ. ಹಸ್ತಮೈಥನ ಬಿಡಲು ಸಲಹೆ ಕೊಡಿ.

ಹೆಸರು, ಊರು ಇಲ್ಲ.

21ರ ಯುವಕ. 19ನೇ ವಯಸ್ಸಿನಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಏನು ಸಮಸ್ಯೆಯಾಗುವುದಿಲ್ಲವೇ?

ಹೆಸರು, ಊರು ಇಲ್ಲ.

ಹಸ್ತಮೈಥುನ ಮಾಡುವುದು ಹಾನಿಕರ ಎನ್ನುವುದು ಸಾಮಾನ್ಯ ತಪ್ಪುತಿಳಿವಳಿಕೆ. ಇದು ನಿಮ್ಮೊಳಗೆ ಆತಂಕವನ್ನು ಮೂಡಿಸಿದೆ. 30ನೇ ಜನವರಿ 2021ರ ಇದೇ ಅಂಕಣದಲ್ಲಿ ಹಸ್ತಮೈಥುನ ಕುರಿತು ವೈಜ್ಞಾನಿಕವಾಗಿ ಬರೆಯಲಾಗಿದೆ. ಅದನ್ನು ಓದಿದ ನಂತರ ನಿಮ್ಮ ವಿದ್ಯಾಭ್ಯಾಸದ ಕಡೆ ಪೂರ್ಣ ಗಮನಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.