ADVERTISEMENT

ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆ ಪೋಷಕರ ಕೈಯಲ್ಲಿದೆ ಪರಿಹಾರದ ಸೂತ್ರ!

ರೇಷ್ಮಾ
Published 20 ಆಗಸ್ಟ್ 2021, 19:31 IST
Last Updated 20 ಆಗಸ್ಟ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು ವಲ್ಲರಿ ಇತ್ತೀಚೆಗೆ ಯಾಕೋ ಬಹಳ ಮಂಕಾಗಿರುತ್ತಾಳೆ. ಸದಾ ಕೋಣೆ ಬಾಗಿಲು ಹಾಕಿಕೊಂಡಿರುತ್ತಾಳೆ. ಒಮ್ಮೊಮ್ಮೆ ಒಬ್ಬಳೇ ಕುಳಿತು ಅಳುತ್ತಾಳೆ. ಕಾರಣ ಕೇಳಿದರೆ ಹೇಳುವುದಿಲ್ಲ. ಇತ್ತೀಚೆಗೆ ಅವಳ ವರ್ತನೆ ಸಂಪೂರ್ಣ ಬದಲಾಗಿದೆ. ನಮ್ಮೊಂದಿಗೂ ಸರಿಯಾಗಿ ಮಾತನಾಡುತ್ತಿಲ್ಲ. ಕೋವಿಡ್ ಬಂದ ಮೇಲೆ ಮಕ್ಕಳು ಹೀಗೇಕೆ ಆಗಿದ್ದಾರೆ ಅರ್ಥವಾಗುತ್ತಿಲ್ಲ. ನನಗಂತೂ ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎಂದು ಸಹೋದ್ಯೋಗಿ ಬಳಿ ಹೇಳಿಕೊಂಡಿದ್ದರು ವಿದ್ಯಾ ದೇಸಾಯಿ.

ಸದಾ ಉತ್ಸಾಹದ ಚಿಲುಮೆಯಾಗಿದ್ದ ಮಗಳು ಕೋವಿಡ್‌ ಬಂದ ನಂತರ ಮಂಕಾಗಿದ್ದನ್ನು ನೋಡಲು ಆಗುತ್ತಿಲ್ಲ ವಿದ್ಯಾ ದೇಸಾಯಿಗೆ. ಹಾಗಂತ ಮಗಳ ಸಮಸ್ಯೆಯ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಹಿಂಜರಿಕೆ. ಈ ಮಾನಸಿಕ ಒತ್ತಡದ ನಡುವೆ ವಿದ್ಯಾ ಅವರ ಆರೋಗ್ಯ ಕೂಡ ಹದಗೆಟ್ಟಿತ್ತು.

ಕೋವಿಡ್‌ ಶುರುವಾದ ಮೇಲೆ ವಲ್ಲರಿಯಂತೆ ಹದಿಹರೆಯದ ಹಲವಾರು ಮಕ್ಕಳು ಒತ್ತಡ, ಖಿನ್ನತೆ, ಭಯ, ದುಗುಡದಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಪೋಷಕರಿಗೆ ತಮ್ಮ ಮಕ್ಕಳ ಮಾನಸಿಕ ಸಮಸ್ಯೆಯ ಕುರಿತು ಬೇರೆಯವರ ಬಳಿ ಹೇಳಿಕೊಳ್ಳಲು ಹಿಂಜರಿಕೆ. ವೈದ್ಯರ ಬಳಿ ಹೋಗಲು ಇಷ್ಟವಿಲ್ಲದೇ ಮಕ್ಕಳ ಸಮಸ್ಯೆಯ ಬಗ್ಗೆ ಚಿಂತಿಸುತ್ತಾ ಹೈರಾಣಾಗುತ್ತಿದ್ದಾರೆ.

ADVERTISEMENT

‘ದೈಹಿಕ, ಮಾನಸಿಕ ಹಾಗೂ ಸಾಮಾಜಿಕ–ಕೌಟುಂಬಿಕ ಕಾರಣಗಳಂತಹ ‘ರಿಸ್ಕ್ ಫ್ಯಾಕ್ಟರ್‌’ಗಳಿಂದ ಹದಿಹರೆಯದ ಮಕ್ಕಳಲ್ಲಿ ಖಿನ್ನತೆ, ಆತಂಕ, ಒತ್ತಡ, ಭಯ, ಅತಿಯಾದ ಕೋಪ ಇಂತಹ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಾಮಾಜಿಕವಾಗಿ ತೆರೆದುಕೊಳ್ಳಲು ಸಾಧ್ಯವಾಗದೇ ಇರುವುದು ಇದಕ್ಕೆ ಒಂದು ಪ್ರಮುಖ ಕಾರಣ ಎನ್ನಬಹುದು’ ಎನ್ನುತ್ತಾರೆ ನಿಮ್ಹಾನ್ಸ್‌ನ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಮಾದೇಗೌಡ ಕಿರಗಸೂರು.

ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಕಾಣಿಸಿಕೊಳ್ಳಲು ಕೆಲವು ಪ್ರಮುಖ ಕಾರಣಗಳು:

ಸಾಮಾಜಿಕ ಬಂಧನ

ಕೋವಿಡ್ ಬರುವ ಮೊದಲಿನ ಜೀವನಸ್ಥಿತಿಗೂ ಇಂದಿನ ಜೀವನಸ್ಥಿತಿಗೂ ತುಂಬಾನೇ ವ್ಯತ್ಯಾಸವಿದೆ. ಕೋವಿಡ್ ಬರುವ ಮೊದಲು ಶಾಲೆ, ಕಾಲೇಜು, ಆಗಾಗ ಪಿಕ್‌ನಿಕ್‌, ಪೋಷಕರ ಜೊತೆ ಸಿನಿಮಾ, ಶಾಪಿಂಗ್ ಎಂದು ತಿರುಗಾಡಿಕೊಂಡು ಖುಷಿಯಿಂದ ಇರುತ್ತಿದ್ದ ಮಕ್ಕಳಿಗೆ ಈಗ ಗೃಹಬಂಧನ ಅನಿವಾರ್ಯವಾಗಿದೆ. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಇದ್ದೂ ಇದ್ದೂ ಮಕ್ಕಳಿಗೆ ಬೇಸರ ಬಂದಿದೆ. ಸಾಮಾಜಿಕವಾಗಿ ತಮ್ಮನ್ನು ತೆರೆದುಕೊಳ್ಳಲಾಗದೇ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ.

ಆನ್‌ಲೈನ್‌ ತರಗತಿಗಳು

ಕೋವಿಡ್‌ ಶುರುವಾದ ನಂತರ ಮಕ್ಕಳಲ್ಲಿ ಮಾನಸಿಕ ಒತ್ತಡ ಅತಿಯಾಗಿ ಹೆಚ್ಚಲು ಕಾರಣವಾಗಿದ್ದು ಆನ್‌ಲೈನ್ ತರಗತಿಗಳು. ಮೊದಲೆಲ್ಲಾ ಬೆಳಿಗ್ಗೆ ಎದ್ದು ಚೆಂದವಾಗಿ ತಯಾರಾಗಿ ಶಾಲೆ ಅಥವಾ ಕಾಲೇಜಿಗೆ ಹೋಗಿ ಸಹಪಾಠಿಗಳೊಂದಿಗೆ ಪಾಠ ಕೇಳುತ್ತಿದ್ದ ಮಕ್ಕಳಿಗೆ ಆನ್‌ಲೈನ್‌ ತರಗತಿ ಬೇಸರ ತಂದಿದೆ. ಅದರಲ್ಲೂ ನೆಟ್‌ವರ್ಕ್‌ ತೊಂದರೆ, ಅಸಮರ್ಪಕ ಸಮಯ ಪರಿಪಾಲನೆಯು ಇನ್ನಷ್ಟು ಬೇಸರ ಹೆಚ್ಚುವಂತೆ ಮಾಡಿದೆ.

ಮನೆಯ ಆರ್ಥಿಕ ಪರಿಸ್ಥಿತಿ

ಕೋವಿಡ್‌ ಸಂದರ್ಭದಲ್ಲಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರಿಗೆ ವೇತನ ಕಡಿತವಾಗಿದೆ. ಇನ್ನೂ ಕೆಲವರ ಮನೆಗಳಲ್ಲಿ ದುಡಿಯುವ ಕೈಗಳೇ ಇಲ್ಲದಂತಾಗಿವೆ. ಇದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ತುತ್ತಿನ ಚೀಲ ತುಂಬಲು ಕಷ್ಟಪಡುವಂತಹ ಪರಿಸ್ಥಿತಿ ಹಲವು ಮನೆಗಳಲ್ಲಿದೆ. ಈ ಆರ್ಥಿಕ ಅಸಮತೋಲನವು ಕೂಡ ಮಕ್ಕಳ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.

‘ಹದಿಹರೆಯದ ಮಕ್ಕಳು ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಬಗ್ಗೆ ಚಿಂತಿಸಿ ಆತಂಕ, ಖಿನ್ನತೆಗೆ ಒಳಗಾಗುತ್ತಿದ್ದಾರೆ’ ಎನ್ನುತ್ತಾರೆ ಡಾ. ರಾಜೇಂದ್ರ.

ಮಾನಸಿಕ ಸಮಸ್ಯೆ ನಿರ್ವಹಣೆಯಲ್ಲಿ ಪೋಷಕರ ಪಾತ್ರ

l ಮಕ್ಕಳ ಮಾನಸಿಕ ಸಮಸ್ಯೆ ನಿವಾರಣೆಯಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದು. ಮನೆಯಲ್ಲಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹೇರದಂತೆ ಪೋಷಕರು ಪರಿಸ್ಥಿತಿಯನ್ನು ನಿಭಾಯಿಸಬೇಕು.

l ಪೋಷಕರು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಬೇಕು. ಮಕ್ಕಳಿಗೆ ಹೊಡೆಯುವುದು, ಟೀಕಿಸುವುದು, ಗದರುವುದು ಮಾಡಬಾರದು.

l ಪೋಷಕರು ತಮ್ಮ ಮನಸ್ಸಿನ ಒತ್ತಡ, ಆತಂಕವನ್ನು ಮಕ್ಕಳ ಮೇಲೆ ಹೇರಬಾರದು. ಇದರಿಂದ ಹದಿಹರೆಯದ ಮಕ್ಕಳಿಗೆ ಇನ್ನಷ್ಟು ಬೇಸರವಾಗುತ್ತದೆ, ಜೊತೆಗೆ ಅವರಿಗೆ ಮುಂದಿನ ಜೀವನದ ಬಗ್ಗೆ ಆತಂಕ ಹೆಚ್ಚುತ್ತದೆ.

l ಹದಿಹರೆಯದ ಮಕ್ಕಳಿಗೆ ನಿಧಾನಕ್ಕೆ ತಿಳಿಸಿ ಹೇಳಿದರೆ ಅರ್ಥ ಮಾಡಿಕೊಳ್ಳುವ ಮನೋಭಾವವಿರುತ್ತದೆ. ಹಾಗಾಗಿ ಕೋವಿಡ್‌, ಆರ್ಥಿಕ ನಷ್ಟ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿ ಹೇಳಬೇಕು.

l ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕು ಎಂಬುದನ್ನು ಮಕ್ಕಳಿಗೆ ಬಿಡಿಸಿ ಹೇಳಬೇಕು. ಬದಲಾಗುವುದು ಕಷ್ಟ, ಆದರೂ ಬದಲಾವಣೆ ಅನಿವಾರ್ಯ ಎಂಬುದನ್ನು ಅರ್ಥ ಮಾಡಿಸಬೇಕು.

l ಕೋವಿಡ್‌ ಪರಿಸ್ಥಿತಿ ಎಂಬುದು ಜೀವನಕ್ಕೆ ಪಾಠವಿದ್ದಂತೆ. ಇದರಿಂದ ಎಲ್ಲರೂ ಹಲವು ರೀತಿಯ ಪಾಠ ಕಲಿತಿದ್ದಾರೆ. ಇದನ್ನು ತಂದೆ–ತಾಯಿ ಸಮರ್ಥವಾಗಿ ಎದುರಿಸಬೇಕು. ಪೋಷಕರು ನಿಭಾಯಿಸಿದ ರೀತಿಯನ್ನು ಮಕ್ಕಳುನೋಡಿ ಕಲಿಯುತ್ತಾರೆ. ಇದರಿಂದ ಮುಂದೆ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾದರೂ ಧೈರ್ಯದಿಂದ ಎದುರಿಸುವುದನ್ನು ಕಲಿಯುತ್ತಾರೆ.

l ಮುಖ್ಯವಾದದ್ದು ಯಾವುದು ಎಂದು ಗುರುತಿಸುವುದು, ದೈಹಿಕ ಆರೋಗ್ಯದ ಮೇಲೆ ಗಮನ ನೀಡುವುದು, ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಹಾಗೂ ಇದರೊಂದಿಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಕಲಿಸಬೇಕು.

l ಭಯ, ಆತಂಕ, ಕೋಪ, ಗಡಿಬಿಡಿಯಲ್ಲಿ ನಿರ್ಧಾರ ಮಾಡುವ ಗುಣ ಇರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ಗಮನ ಹರಿಸಬೇಕು. ಅಂತಹ ಮಕ್ಕಳ ಜೊತೆ ಸೂಕ್ಷ್ಮವಾಗಿ ವ್ಯವಹರಿಸಬೇಕು.

l ಹದಿಹರೆಯದ ಮಕ್ಕಳಿಗೆ ಮೊಬೈಲ್ ಬಳಕೆ, ಸಂಬಂಧ, ಭಾವನಾತ್ಮಕ ಹಾಗೂ ದೈಹಿಕ ವಿಚಾರಗಳ ಬಗ್ಗೆ ತಿಳಿಸಿ ಹೇಳಬೇಕು.

‘ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ಯೋಜನೆಗಳನ್ನು ಕೈಗೊಂಡಿದೆ. ಅದರಿಂದ ಮಕ್ಕಳಲ್ಲಿ ಸಾಕಷ್ಟು ಒತ್ತಡ ಕಡಿಮೆಯಾಗಿದೆ. ಆದರೆ ಆರ್ಥಿಕ ಸ್ಥಿತಿಗತಿ, ಮನೆಯ ಪರಿಸ್ಥಿತಿ, ಮನರಂಜನೆಯ ಕೊರತೆ ಇವುಗಳಿಂದಲೂ ಮಕ್ಕಳಲ್ಲಿ ಒತ್ತಡ ಹೆಚ್ಚಿದೆ. ಅದನ್ನು ಪೋಷಕರು ಸಮರ್ಥವಾಗಿ ನಿಭಾಯಿಸಿದರೆ ಮಕ್ಕಳನ್ನು ಮಾನಸಿಕ ಸಮಸ್ಯೆಗಳಿಂದ ದೂರ ಇಡಬಹುದು’.

- ಡಾ. ರಾಜೇಂದ್ರ ಮಾದೇಗೌಡ ಕಿರಗಸೂರು, ನಿಮ್ಹಾನ್ಸ್‌ ಪ್ರಾಧ್ಯಾಪಕ

ಅಧ್ಯಯನವೊಂದರ ಪ್ರಕಾರ ಕೋವಿಡ್–19 ಕಾಣಿಸಿಕೊಂಡ ನಂತರ ಶೇ 70 ರಷ್ಟು ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಕಾಣಿಸಿಕೊಂಡಿದೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಿದೆ ಎನ್ನುತ್ತದೆ ಅಧ್ಯಯನ. ಇದರೊಂದಿಗೆ 4 ಮಕ್ಕಳಲ್ಲಿ ಒಬ್ಬರಲ್ಲಿ ಖಿನ್ನತೆ ಹಾಗೂ 5ವರಲ್ಲಿ ಒಬ್ಬರಲ್ಲಿ ಆತಂಕದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಪಾಶ್ಚಾತ್ಯ ದೇಶಗಳ ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆಯ ಪ್ರಮಾಣ ಹೆಚ್ಚಿದ್ದು ಭಾರತದಲ್ಲೂ ಈ ಸಮಸ್ಯೆ ಸಾಕಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.