ADVERTISEMENT

ಕೈ ಜೋಡಿಸಿ... ತೊನ್ನು ರೋಗಕ್ಕೆ ಅಂಟಿರುವ ಕಳಂಕ ತೊಲಗಿಸಿ

ಅನಕ್ಷರತೆ, ಅಪನಂಬಿಕೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ರೋಗದ ಬಗ್ಗೆ ಅನಗತ್ಯ ಗೊಂದಲ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 2:55 IST
Last Updated 25 ಜೂನ್ 2021, 2:55 IST
ವಿಶ್ವ ತೊನ್ನು ದಿನಾಚರಣೆ
ವಿಶ್ವ ತೊನ್ನು ದಿನಾಚರಣೆ   

ತೊನ್ನು ರೋಗವನ್ನು ‘ಶ್ವೇತ ಕುಷ್ಠ’ ಎನ್ನಲಾಗಿದೆ. ಇದರಿಂದ ಬಳಲುತ್ತಿರುವವರು ಸಾಮಾಜಿಕವಾಗಿ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಅನಕ್ಷರತೆ, ಅಪನಂಬಿಕೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ಈ ರೋಗದ ಬಗ್ಗೆ ಅನಗತ್ಯ ಗೊಂದಲವಿದೆ. ರೋಗದ ಬಗೆಗಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರತಿವರ್ಷ ಜೂನ್ 25ರಂದು ‘ವಿಶ್ವ ತೊನ್ನು ದಿನ’ವನ್ನು ಆಚರಿಸಲಾಗುತ್ತಿದೆ.

ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಉತ್ಪಾದಿಸುವ ಮೆಲನೊಸೈಟ್‌ ಕೋಶಗಳ ನಷ್ಟದಿಂದಾಗಿ ಹಾಲಿನ ಬಿಳಿಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಆತ್ಮಾಘಾತಿ ಪ್ರಕ್ರಿಯೆ ಅಥವಾ ಪ್ರತಿರೋಧಕ ಶಕ್ತಿ, ಕೆಲವು ಜನರಲ್ಲಿ ಮಾತ್ರ ಅನುವಂಶೀಯತೆ ಕೂಡ ಇದಕ್ಕೆ ಕಾರಣ. ಬಿಡುವಿಲ್ಲದ ಜೀವನಶೈಲಿ, ರೋಗದ ಬಗ್ಗೆ ಜಾಸ್ತಿ ಚಿಂತೆ, ಪದೇ ಪದೇ ತ್ವಚೆಗೆ ಗಾಯ ಮಾಡಿಕೊಳ್ಳುವುದು, ಕೆಲವು ರಾಸಾಯನಿಕಗಳ ಸಂಪರ್ಕಕ್ಕೆ ಬಂದ ಸಂದರ್ಭಗಳಲ್ಲಿ ಈ ಕಾಯಿಲೆ ಹೆಚ್ಚಾಗುವ ಸಾಧ್ಯತೆಯಿದೆ.

ತೊನ್ನು ಯಾವುದೇ ವಯಸ್ಸಿನಲ್ಲೂ ಆರಂಭವಾಗಬಹುದು. 20 ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರಾಥಮಿಕ ಚಿಹ್ನೆ ಕಾಣಿಸಿಕೊಳ್ಳುತ್ತದೆ. ವಿಶ್ವದ ಶೇ 1ರಷ್ಟು ಜನರಲ್ಲಿ ಈ ಕಾಯಿಲೆ ಇದೆ. ದೇಹದ ಬಹು ಭಾಗಗಳಲ್ಲಿ ಹಾಲಿನ ಬಣ್ಣದ ಬಿಳಿ ಮಚ್ಚೆಗಳು ಇದ್ದರೆ ಅದಕ್ಕೆ ‘ಸಾರ್ವತ್ರಿಕ ತೊನ್ನು’ ಎನ್ನುವರು. ಒಂದೇ ಸ್ಥಳದಲ್ಲಿ ಹರಡಿದ ಬಿಳಿ ಮಚ್ಚೆ ಕಂಡು ಬಂದರೆ ‘ಫೋಕಲ್ ವಿಟಿಲ್‍ಗೋ’ ಎನ್ನುತ್ತಾರೆ.

ADVERTISEMENT

ಮುಖ, ಕೈಗಳು ಅಥವಾ ಪಾದದಲ್ಲಿ ಮಾತ್ರ ಬಿಳಿ ಹಾಲಿನ ಬಣ್ಣದ ಮಚ್ಚೆಗಳಿದ್ದರೆ ‘ಆಕ್ರೋಫೇಸಿಯಲ್ ವಿಟಿಲ್‍ಗೋ’ ಎಂದೂ, ತುಟಿಗಳು ಹಾಗೂ ಬೆರಳುಗಳ ತುದಿಯಲ್ಲಿ ಮಾತ್ರ ಕಂಡುಬಂದರೆ ‘ಲಿಪ್ ಟಿಪ್ ವೆರೈಟಿ’ ಮತ್ತು ಬೆನ್ನುಹುರಿಯಿಂದ ಬೆನ್ನಿನ ಆಳದೊಂದಿಗೆ ಇರುವ ಚರ್ಮದ ಪ್ರದೇಶದಲ್ಲಿ ಕಂಡುಬಂದಲ್ಲಿ ‘ಸೆಗ್‍ಮೆಂಟಲ್ ವಿಟಿಲ್‍ಗೋ’ ಎಂದೂ ಕರೆಯಲಾಗುತ್ತದೆ. ಕೆಲವು ಜನರಲ್ಲಿ ಮಚ್ಚೆಗಳು ಮೊದಲು ಚಿಕ್ಕದಾಗಿದ್ದು, ರೋಗ ಹೆಚ್ಚಾದಂತೆ ವೃದ್ಧಿಯಾಗುತ್ತವೆ.

ಚಿಕಿತ್ಸೆಯಿಂದ ತ್ವಚೆಯ ಬಣ್ಣವನ್ನು ಕಾಪಾಡಿಕೊಳ್ಳಲು ಮತ್ತು ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಬಹುದು. ಪ್ರಮುಖವಾಗಿ ಸ್ಟಿರಾಯ್ಡ್‌ಗಳು, ಟ್ಯಾಕ್ರೋಲಿಮಸ್ ಮುಲಾಮುಗಳನ್ನು ತೊನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ವಿವಿಧ ರೀತಿಯ ನೇರಳಾತೀತ ಕಿರಣಗಳ ಬೆಳಕಿನ ಚಿಕಿತ್ಸೆಗಳನ್ನೂ ಮಾಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವು – UVA, NBUVB, PUVA ಮತ್ತು PUVAsol.

PUVAsol ಚಿಕಿತ್ಸೆಯಲ್ಲಿ ರೋಗಿಗಳಿಗೆ ಸೋರಾಲೆನ್ಸ್‌ ಮಾತ್ರೆಗಳನ್ನು ತೆಗೆದುಕೊಂಡು 2 ಗಂಟೆಗಳ ನಂತರ ಹಾಲಿನ ಬಣ್ಣದ ಬಿಳಿ ಮಚ್ಚೆಗಳನ್ನು 3ರಿಂದ 5 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಬೇಕು. ಕಣ್ಣುಗಳನ್ನು ರಕ್ಷಿಸಿಕೊಂಡು ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ರೀತಿಯ ಚಿಕಿತ್ಸೆ ಪಡೆಯಬೇಕು.

ಸೆಲ್ ಗ್ರಾಫ್ಟಿಂಗ್, ಮೆಲನೋಸೈಟ್ ಕಲ್ಚರ್, ಬ್ಲಿಸ್ಟರೋಗ್ರಫಿ ಮತ್ತು ಪಂಚ್ ಗ್ರಾಫ್ಟಿಂಗ್‌ನಂತಹ ಶಸ್ತ್ರಚಿಕಿತ್ಸೆಗಳೂ ಇವೆ. ಎಕ್ಸೈಮರ್ (excimer) ಲೇಸರ್ ತ್ವಚೆಯ ಬಣ್ಣ ಬೇಗ ಮರುಕಳಿಸಲು ಸಹಾಯ ಮಾಡುತ್ತದೆ.

ರೋಗಿಗಳು ಸಕಾರಾತ್ಮಕ ಭಾವನೆ ಹೊಂದಲು ನಿತ್ಯ ಯೋಗಾಸನ, ಧ್ಯಾನ ಮಾಡಬೇಕು. ಮೀನು, ಬಾಳೆಹಣ್ಣು, ಸೋಯಾಬಿನ್, ಶೇಂಗಾ, ಕೆಂಪು ದ್ರಾಕ್ಷಿ, ಈರುಳ್ಳಿ ಮತ್ತು ಮಶ್ರೂಮ್ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆ್ಯಂಟಿ ಆಕ್ಸಿಡೆಂಟ್ ಮತ್ತು ರೋಗವರ್ಧಕ ಶಕ್ತಿ ಬರಲಿದೆ. ದೇಹದ ಮೇಲೆ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಟ್ಯಾಟೂ ಹಾಕಿಸಿಕೊಳ್ಳಬಾರದು. ಮದ್ಯಪಾನ, ಧೂಮಪಾನ ಮಾಡಬಾರದು.

ಈ ರೋಗ ಸಾಂಕ್ರಾಮಿಕವಲ್ಲ. ಎಲ್ಲಾ ಬಿಳಿ ಮಚ್ಚೆಗಳೂ ತೊನ್ನು ರೋಗದ ಸಂಕೇತವಲ್ಲ. ಚರ್ಮ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕಷ್ಟೆ.

(ಡಾ.ಸೂಗರೆಡ್ಡಿ, ಚರ್ಮರೋಗ ವಿಭಾಗದ ಮುಖ್ಯಸ್ಥರು, ಜೆ.ಜೆ.ಎಂ. ಮೆಡಿಕಲ್‌ ಕಾಲೇಜ್

ಡಾ.ಪರಮೇಶ್ವರ, ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿ, ಜೆ.ಜೆ.ಎಂ.ಎಂ.ಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.