ADVERTISEMENT

ಎಚ್ಚರ... ಬುದ್ಧಿಯನ್ನು ಮಂಕಾಗಿಸುವ ಜಂಕ್ ಫುಡ್!

ಡಾ.ವಿನಯಾ ಶ್ರೀನಿವಾಸ್
Published 27 ಮಾರ್ಚ್ 2023, 19:30 IST
Last Updated 27 ಮಾರ್ಚ್ 2023, 19:30 IST
   

ಬೇಸಿಗೆಯ ದಿನಗಳು ಆರಂಭವಾಗಿವೆ. ಇನ್ನು ಶಾಲೆಗಳಿಗೆ ರಜೆ. ಈ ದಿನಗಳಲ್ಲಿ ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಅವರ ಆಹಾರದ ಬಗ್ಗೆ ನಿಗಾ ಇಡುವುದು ತುಸು ಕಷ್ಟವೇ. ಮೊದಲನೆಯದು, ‘ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷದವರೆಗೆ’ ಎಂಬ ಹಿರಿಯರ ಮಾತಿನಂತೆ ಬಾಲ್ಯದಲ್ಲಿ ರೂಢಿಸಿಕೊಂಡಿದ್ದು ಮುಂದಿನ ಜೀವನದಲ್ಲಿಯೂ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ.

ಎರಡನೆಯದು ಹೆಚ್ಚು ಕ್ರಿಯಾಶೀಲರಾಗಿರಬೇಕಾದ ಈ ವಯಸ್ಸಿನಲ್ಲಿ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಒದಗಿಸಿದರೆ ಅವರ ಓದು, ಕಲಿಕೆ, ಆಟೋಟಗಳೂ ಸುಗಮ ಹಾದಿಯಲ್ಲಿ ಸಾಗುತ್ತವೆ. ಜೊತೆಯಲ್ಲಿ ಶರೀರದ ರೋಗ ನಿರೋಧಕ ವ್ಯವಸ್ಥೆಯೂ ಸಶಕ್ತವಾಗಿದ್ದು ಮಕ್ಕಳನ್ನು ರೋಗರುಜಿನಗಳಿಂದ ರಕ್ಷಿಸುತ್ತದೆ. ಆದರೆ ಅದು ಎಣಿಸಿದಷ್ಟು ಸಲಭವಲ್ಲ. ಜಂಕ್ ಆಹಾರಗಳ ಜಾಹೀರಾತುಗಳು ಎಲ್ಲೆಂದರೆಲ್ಲಿ ರಾರಾಜಿಸುವಾಗ ಮಕ್ಕಳು ಅದರೆಡೆಗೆ ಆಕರ್ಷಿತರಾಗುವುದು ಸರ್ವೇಸಾಮಾನ್ಯ. ಆದರೆ ಇವು ಎಷ್ಟರ ಮಟ್ಟಿಗೆ ಸುರಕ್ಷಿತ?? ಸುಲಭವಾಗಿ, ಎಲ್ಲೆಂದರಲ್ಲಿ ಲಭ್ಯವಿರುವ ಈ ಸಂಸ್ಕರಿಸಿದ ಆಹಾರ ಪದಾರ್ಥಗಳು ಹೆಚ್ಚು ಕ್ಯಾಲೊರಿಯ ಜೊತೆ ಅಧಿಕ ಪಿಷ್ಟ ಮತ್ತು ಲವಣಾಂಶವನ್ನೂ ಹೊಂದಿರುತ್ತವೆ. ಶರೀರಕ್ಕೆ ಅಗತ್ಯವಿರುವ ಜೀವಸತ್ವಗಳು, ಖನಿಜಾಂಶ, ನಾರಿನಾಂಶ ಮತ್ತು ಪ್ರೊಟೀನ್ ಜಂಕ್ ಆಹಾರಗಳಲ್ಲಿ ಅತ್ಯಂತ ಕಡಿಮೆ ಎಂದೇ ಹೇಳಬಹುದು.

ಎಂಥ ಸಮಸ್ಯೆ? ಏಕೆ?
ಬೊಜ್ಜು: ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿನ ಹೆಚ್ಚಾದ ಪಿಷ್ಟ/ಸಕ್ಕರೆ , ಕೊಬ್ಬಿನಾಂಶವು ಶರೀರಕ್ಕೆ ಅಧಿಕ ಕ್ಯಾಲೊರಿಯನ್ನು ಒದಗಿಸುವುದರಿಂದ ಮಕ್ಕಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು, ಅಧಿಕ ದೇಹತೂಕದಂತಹ ಸಮಸ್ಯೆಗಳು ಬರಬಹುದು. ಇದು ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತು ಸ್ಟ್ರೋಕ್‌ನಂಥ ಸಮಸ್ಯೆಗಳಿಗಳಿಗೂ ಎಡೆ ಮಾಡಿಕೊಡಬಹುದು.

ADVERTISEMENT

ಮಲಬದ್ಧತೆ: ಈ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಹೊಟ್ಟೆ ತುಂಬಿದಂತೆನಿಸುತ್ತದೆ. ಮನೆಯ ಆಹಾರ ರುಚಿಸದೇ ಬೇಳೆಕಾಳುಗಳು, ತರಕಾರಿ ಮತ್ತು ಹಣ್ಣುಗಳಲ್ಲಿ ಸಿಗುವ ನಾರಿನಾಂಶದಿಂದ ಅವರು ವಂಚಿತರಾಗುತ್ತಾರೆ. ಇದು ಮಲಬದ್ಧತೆಗೆ ಕಾರಣವಾಗುತ್ತದೆ.

ಏಕಾಗ್ರತೆಯಲ್ಲಿ ವ್ಯತ್ಯಯ: ಮೆದುಳಿನ ಕಾರ್ಯಕ್ಷಮತೆಗೆ ಜೀವಸತ್ವಗಳು ಮತ್ತು ಖನಿಜಾಂಶಗಳು ಮುಖ್ಯ. ಜಂಕ್ ಆಹಾರದಲ್ಲಿ ಇವು ಇರದ ಕಾರಣ ಮಕ್ಕಳಲ್ಲಿ ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯ ಕಡಿಮೆಯಾಗುವುದು.

ಅಲರ್ಜಿ, ಆಸ್ತಮಾ: ಆಹಾರ ಪದಾರ್ಥವು ಕೆಡದಂತೆ ಮತ್ತು ಆಕರ್ಷಕವಾಗಿ ಕಾಣಲು ಕೆಲವು ರಾಸಾಯನಿಕ ವಸ್ತುಗಳನ್ನು ಮತ್ತು ವರ್ಣಗಳನ್ನು ಇದರ ತಯಾರಿಯಲ್ಲಿ ಬಳಸಿರುತ್ತಾರೆ ಇವು ಮಕ್ಕಳಲ್ಲಿ ಅಲರ್ಜಿ ಪ್ರಕ್ರಿಯೆಗೆ ಕಾರಣವಾಗಬಹುದು. ಆಸ್ತಮಾ ಮತ್ತು ಮೂಗಿನ ಉರಿಯೂತ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

ಆತ್ಮವಿಶ್ವಾಸ ಕಡಿಮೆಯಾಗುವುದು, ಖಿನ್ನತೆ: ಮಕ್ಕಳ ದೇಹ ತೂಕ ಹೆಚ್ಚಾದಂತೆ ಆಟೋಟಗಳಲ್ಲಿ ಆಸಕ್ತಿ ಕುಂಠಿತವಾಗುತ್ತದೆ. ಶಾಲೆಯಲ್ಲಿನ ಸೃಜನಾತ್ಮಕ ಚಟುವಟಿಕೆಗಳಲ್ಲಿಯೂ ಅವರ ತೊಡಗಿಕೊಳ್ಳುವಿಕೆ ಕ್ಷೀಣಿಸುತ್ತದೆ. ಪರಿಣಾಮವಾಗಿ, ಇತರ ಸಹಪಾಠಿಗಳೊಂದಿಗೆ ಬೆರೆಯುವುದನ್ನೂ ಕಡಿಮೆ ಮಾಡುತ್ತಾರೆ. ಇದರಿಂದ ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸಿ ಖಿನ್ನತೆಗೆ ತುತ್ತಾಗಬಹುದು.

ಜೀವಸತ್ವಗಳ ಕೊರತೆಯಿಂದ ಸಮಸ್ಯೆ: ಜೀವಸತ್ವಗಳ ಮತ್ತು ಖನಿಜಾಂಶಗಳ ಕೊರತೆಯಿಂದಾಗಿ ರಕ್ತಹೀನತೆ, ಥೈರಾಯ್ಡ್ ಸಮಸ್ಯೆ, ವಸಡುಗಳಲ್ಲಿ ರಕ್ತಸ್ರಾವ, ಮೂಳೆಗಳ ಟೊಳ್ಳಾಗುವಿಕೆ, ದಂತಕ್ಷಯ ಮೊದಲಾದ ಸಮಸ್ಯೆಗಳಿಗೆ ತುತ್ತಾಗಬಹುದು.

ಕರುಳಿನ ಸೂಕ್ಷ್ಮಾಣುಗಳಲ್ಲಿ ವ್ಯತ್ಯಾಸ: ಜಂಕ್ ಆಹಾರದಲ್ಲಿರುವ ಅಂಶಗಳು ಕರುಳಿನಲ್ಲಿನ ಸ್ನೇಹಪರ ಸೂಕ್ಷ್ಮಾಣುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದು ಮಗುವಿನ ರೋಗನಿರೋಧಕ ವ್ಯವಸ್ಥೆ ದುರ್ಬಲಗೊಳಿಸಬಹುದು.

ನಿದ್ರಾಹೀನತೆ: ಕೆಫಿನ್‌ನಂತಹ ಪದಾರ್ಥಗಳಿರುವ ಸಂಸ್ಕರಿಸಿದ ಪಾನೀಯಗಳ ಸೇವನೆಯಿಂದ ನಿದ್ದೆಗೂ ಭಂಗ ತರಬಹುದು. ಶಾಲಾಚಟುವಟಿಕೆಗಳ ಮೇಲೆ ಗಮನವಿಡಲು ಅಸಮರ್ಥರಾಗಬಹುದು.

ಪೋಷಕರು ಏನು ಮಾಡಬಹುದು?
* ಮಗು ಹೊಸದನ್ನು ಕಲಿಯುವ ಮೊದಲ ಎರಡು ವರ್ಷಗಳಿಂದಲೇ ಪೋಷಕರು ಎಚ್ಚರವಹಿಸಬೇಕು. ಮಕ್ಕಳಿಗೆ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ರೂಢಿ ಮಾಡಿಸಿ.

* ಮನೆಯ ಆಹಾರದಲ್ಲಿ ವೈವಿಧ್ಯ ಇರುವಂತೆ ಗಮನ ವಹಿಸಿ.

* ವಿಧವಿಧವಾದ ಹಣ್ಣುಗಳನ್ನು ತುಂಡರಿಸಿ, ಅಂದವಾಗಿ, ಆಕರ್ಷಕವಾಗಿ ಜೋಡಿಸಿಟ್ಟು ತಿನ್ನಲು ಪ್ರೇರೇಪಿಸಿ.

* ತರಕಾರಿಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಾ, ಬಗೆಬಗೆಯ ತರಕಾರಿಗಳ ಸಲಾಡ್, ಪಲ್ಯಗಳನ್ನು ತಿನ್ನಲು ಪ್ರೋತ್ಸಾಹಿಸಿ.

* ಪ್ರಶಂಸೆಯಾಗಿ ಎಂದೂ ಜಂಕ್ ಆಹಾರದ ಆಮಿಷ ತೋರಿಸದಿರಿ.

* ಮನೆಯ ಆಹಾರವನ್ನು ತಿನ್ನುವಂತೆ ಪ್ರೋತ್ಸಾಹಿಸಿ; ಮಧ್ಯೆ ಮಧ್ಯೆ ಜಂಕ್ ಆಹಾರವನ್ನು ಕೊಡುವ ಪದ್ಧತಿ ಬೇಡವೇ ಬೇಡ. (ಉದಾ:ಅನ್ನ- ಹುಳಿಯ ಜೊತೆ ಚಿಪ್ಸ್ ಕೊಡುವುದು.)

* ತೀರ ಆಸೆ ಪಡುವ ಮಕ್ಕಳಿಗೆ ಅಪರೂಪಕೊಮ್ಮೆ ಅಂತಹ ಆಹಾರವನ್ನು ಕೊಡಿಸಿ.

* ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ. ಹಾಗಾಗಿ ಪೋಷಕರು ಒಳ್ಳೆಯ ಆಹಾರ ಕ್ರಮವನ್ನು ಪಾಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.