ADVERTISEMENT

ರೋಗನಿರೋಧಕ ಶಕ್ತಿ ಎಂದರೆ...

ಡಾ.ವಿನಯ ಶ್ರೀನಿವಾಸ್
Published 28 ಜೂನ್ 2021, 19:30 IST
Last Updated 28 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತ್ತೀಚಿನ ದಿನಗಳಲ್ಲಿ ಕೊರೊನಾ ಜೊತೆಯಲ್ಲಿಯೇ ಹೆಚ್ಚು ಬಳಕೆಯಾದ ಮತ್ತೊಂದು ಪದ ‘ರೋಗನಿರೋಧಕ ಶಕ್ತಿ’ ಅಥವಾ ‘ಇಮ್ಯುನಿಟಿ’. ಈ ಶಕ್ತಿಯ ವರ್ಧನೆಗೆ ಜನರು ಇನ್ನಿಲ್ಲದ ವಿಧಾನಗಳಿಗೆ ಮೊರೆಹೋದರು.

ಏನಿದು ರೋಗ ನಿರೋಧಕ ಶಕ್ತಿ?

ಪ್ರತಿಯೊಂದು ಜೀವಿಯೂ ತನ್ನನ್ನು ಮುತ್ತಿಗೆ ಹಾಕಲು ಬರುವ ರೋಗಾಣುಗಳ ವಿರುದ್ಧ ನಿರ್ದಿಷ್ಟ ಪ್ರತಿರೋಧತೆಯನ್ನು ತೋರಲು ಒಂದು ವ್ಯವಸ್ಥೆಯನ್ನು ಹೊಂದಿರುತ್ತದೆ. ಜೀವಿಯೊಂದರ ರೋಗನಿರೋಧಕ ವ್ಯವಸ್ಥೆಯು ಮುಖ್ಯವಾಗಿ ಎರಡು ಬಗೆಯದ್ದಾಗಿರುತ್ತದೆ. ಮೊದಲನೆಯದು ದೇಹ ಪ್ರಕೃತಿಯಿಂದ ಬಂದ ಸ್ವಾಭಾವಿಕ ರೋಗನಿರೋಧಕ ಶಕ್ತಿಯಾದರೆ ಮತ್ತೊಂದು ಹೊರಗಿನ ಅಂಶಗಳಿಂದ ಪ್ರಚೋದಿತವಾದ ಕೃತಕ ರೋಗನಿರೋಧಕ ಶಕ್ತಿ.

ADVERTISEMENT

ಸ್ವಾಭಾವಿಕ ರೋಗಪ್ರತಿರೋಧಕ ಶಕ್ತಿಯನ್ನು ನಿರ್ಧರಿಸುವ ಮುಖ್ಯ ಅಂಶಗಳು:

ಅನುವಂಶಿಕ ಧಾತುಗಳು (ಜೆನೆಟಿಕ್): ಅನುವಂಶಿಕ ಧಾತುಗಳು ವ್ಯವಸ್ಥೆಯ ಸದೃಢತೆಯಲ್ಲಿ ಮುಖ್ಯಪಾತ್ರ ವಹಿಸುವುದರಿಂದಲೇ ಪ್ರತಿರೋಧಕಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ವಯಸ್ಸು: ಹತ್ತು ವರ್ಷದೊಳಗಿನ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯು ಇನ್ನೂ ಪೂರ್ಣ ಪ್ರಮಾಣದಲ್ಲಿ ಪಕ್ವವಾಗಿರುವುದಿಲ್ಲ. ಅಂತೆಯೇ ಅರವತ್ತು ವಯಸ್ಸು ದಾಟಿದವರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಾ ಹೋಗುವುದು ಸಹಜ. ಹಾಗಾಗಿ ಮಕ್ಕಳು ಮತ್ತು ವಯೋವೃದ್ಧರೆಡೆಗೆ ಹೆಚ್ಚಿನ ಕಾಳಜಿ ಅಗತ್ಯ.

ಶರೀರದ ರಸದೂತಗಳು ಏರುಪೇರಾದಾಗ ವ್ಯಕ್ತಿಯ ಪ್ರತಿರೋಧಕ ಶಕ್ತಿಯೂ ವ್ಯತ್ಯಯವಾಗುತ್ತದೆ. ಉದಾಹರಣೆಗೆ ಇನ್‍ಸುಲಿನ್ ವ್ಯತ್ಯಾಸದಿಂದ ಉಂಟಾಗುವ ಮಧುಮೇಹದಿಂದ ಬಳಲುವವರು ಬಹಳ ಬೇಗನೇ ಸೋಂಕಿಗೆ ಶರೀರದಲ್ಲಿ ಸ್ರವಿಸುವ ರಸದೂತಗಳು: ತುತ್ತಾಗುತ್ತಾರೆ. ಅವರ ರಕ್ತದಲ್ಲಿನ ಹೆಚ್ಚಾದ ಸಕ್ಕರೆ ಅಂಶವು ರೋಗಾಣುಗಳ ಬೆಳವಣಿಗೆಗೆ ಪೂರಕವಾಗಿರುವುದರಿಂದ ಸೋಂಕು ನಿಯಂತ್ರಣವೂ ಕ್ಲಿಷ್ಟಕರವೆನಿಸುತ್ತದೆ.

ಆಹಾರ ಸೇವನೆ: ಪ್ರತಿರೋಧಕ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮವಾದ ಆಹಾರ ಬಹಳ ಮುಖ್ಯ. ಆಹಾರದಲ್ಲಿನ ಪ್ರೊಟೀನ್ ಪ್ರತಿಕಾಯಗಳ ತಯಾರಿಕೆಗೆ ಮತ್ತು ಅಂಗಾಂಶ ದುರಸ್ಥಿಗೆ ಅತ್ಯಗತ್ಯ. ಅಂತೆಯೇ ಆಹಾರದಲ್ಲಿನ ಜೀವಸತ್ವಗಳು (ಎ, ಸಿ, ಬಿ-6 ಮತ್ತು ಇ) ಖನಿಜಾಂಶಗಳೂ (ಜಿಂಕ್, ಮೆಗ್ನೀಸಿಯಂ, ಕಬ್ಬಿಣಾಂಶ ಮೊದಲಾದವು) ದೇಹದ ವಿವಿಧ ಅಂಗಾಂಶಗಳನ್ನು ಸದೃಢಗೊಳಿಸುವುದರ ಮೂಲಕ ಪ್ರತಿರೋಧ ವ್ಯವಸ್ಥೆಯ ಉತ್ತಮ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ. ಹಾಗಾಗಿಯೇ ಅಪೌಷ್ಟಿಕತೆಯಿಂದ ಬಳಲುವವರಲ್ಲಿ ಸೋಂಕು ತೀವ್ರ ಸ್ವರೂಪ ತಾಳಬಲ್ಲದು.

ರೋಗಾಣುವಿನ ಸಂಪರ್ಕಕ್ಕೆ ಬಂದಾಗ ಆಗುವುದೇನು?

ವ್ಯಕ್ತಿಯು ರೋಗಾಣುಗಳ ಸೋಂಕಿಗೆ ತುತ್ತಾದಾಗ ಆತನಲ್ಲಿ ಸ್ವಾಭಾವಿಕವಾಗಿ ಆ ರೋಗಾಣುವಿನ ವಿರುದ್ಧ ಪ್ರತಿರೋಧಕ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪ್ರಕ್ರಿಯೆಯು ಕ್ರಿಯಾಶೀಲಗೊಂಡ ಜೀವಕೋಶಗಳ (ಬಿಳಿ ರಕ್ತಕಣಗಳು) ಅಥವಾ ಪ್ರತಿಕಾಯಗಳ ಮೂಲಕ ರೋಗಾಣುವನ್ನು ಹೊಡೆದೋಡಿಸುತ್ತದೆ. ಇವುಗಳಲ್ಲಿ ಕೆಲವು ಸ್ವಲ್ಪ ಕಾಲದವರೆಗೆ ಇನ್ನು ಕೆಲವು ಆತನ ಜೀವಿತಾವಧಿಯವರೆಗೂ ಆ ನಿರ್ದಿಷ್ಟ ರೋಗಾಣುವಿನ ವಿರುದ್ಧ ಪ್ರತಿರೋಧತೆಯನ್ನು ಒದಗಿಸಬಲ್ಲವು. ಉದಾಹರಣೆಗೆ, ಮಕ್ಕಳು ಸಣ್ಣ ದಡಾರದಿಂದ (ಚಿಕನ್ ಪಾಕ್ಸ್) ಬಳಲಿದಾಗ ಉಂಟಾದ ಪ್ರತಿರೋಧತೆಯು ಜೀವನಪರ್ಯಂತ ಅವರನ್ನು ಆ ಸೋಂಕಿನ ವಿರುದ್ಧ ರಕ್ಷಿಸಬಲ್ಲದು.
ಬಾಲ್ಯದಲ್ಲಿ ಹೊರಾಂಗಣದ ಗಿಡಮರ, ಮಣ್ಣಿನೊಡನೆ ಆಟವಾಡುವ ಮಕ್ಕಳು ಅಲ್ಪ ಪ್ರಮಾಣದ ರೋಗಾಣುವಿನೊಂದಿಗೆ ಸಂಪರ್ಕ ಬಂದು ಒಂದಿಷ್ಟು ಪ್ರತಿರೋಧತೆಯನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಮುಂದೆ ಎಂದೋ ಬರುವ ಈ ಬಗೆಯ ರೋಗಾಣುಗಳ ಸಂಪರ್ಕ ಅವರನ್ನು ಹೆಚ್ಚು ಬಾಧಿಸಲಾರದು. ಈ ಕಾರಣಕ್ಕಾಗಿಯೇ ಹೊರದೇಶಗಳ ಸ್ವಚ್ಛ ವಾತಾವರಣದಲ್ಲಿ ಬೆಳೆದು ನಮ್ಮಲ್ಲಿಗೆ ಬರುವ ಮಕ್ಕಳು ಬಹುಬೇಗ ಸೋಂಕಿಗೆ ತುತ್ತಾಗುತ್ತಾರೆ.

ಉತ್ತಮ ರೋಗನಿರೋಧಕ ಶಕ್ತಿಗಾಗಿ ಹೀಗೆ ಮಾಡಿ:

ಮಕ್ಕಳಿಗೆ ಮೊದಲ ಆರು ತಿಂಗಳು ತಪ್ಪದೇ ಎದೆ ಹಾಲುಣಿಸಿ. ಎಳವೆಯಲ್ಲಿ ಪೌಷ್ಟಿಕ ಆಹಾರಸೇವನೆಗೆ ಮಹತ್ವ ಕೊಡಿ. ಹೊರಾಂಗಣದಲ್ಲಿ ಆಟವಾಡಲು ಪ್ರೋತ್ಸಾಹಿಸಿ.

ಸಮತೋಲಿತ ಆಹಾರಸೇವನೆಯನ್ನು ರೂಢಿಸಿಕೊಳ್ಳಿ.

ದಿನದಲ್ಲಿ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಿರಿ.

ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿ.

ನಿಯಮಿತವಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ.

ದುಶ್ಚಟಗಳನ್ನು ವರ್ಜಿಸಿ.

ಸಮರ್ಪಕವಾದ ನಿದ್ದೆಯನ್ನು ರೂಢಿಸಿಕೊಳ್ಳಿ.

ಅತಿಯಾದ ಒತ್ತಡ ಸೋಂಕು ವರ್ಧಿಸಲು ಪೂರಕವಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಿ.

ನಿಯಮಿತ ಚಿಕಿತ್ಸೆಯಿಂದ ಮಧುಮೇಹ ರಕ್ತದೊತ್ತಡದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿರಿಸಿ.

ಆರೋಗ್ಯ ಇಲಾಖೆ ಸೂಚಿಸಿದ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳಿ.

ನೆನಪಿಡಿ, ರೋಗನಿರೋಧಕ ಶಕ್ತಿಯನ್ನು ಏಕಾಏಕಿ ಹೆಚ್ಚಿಸಲು ಯಾವ ವಿಧಾನವೂ ಇಲ್ಲ. ಉತ್ತಮವಾದ ಜೀವನಶೈಲಿಯಿಂದ ಮಾತ್ರವೇ ಅದು ಸಾಧ್ಯ.

ಕೃತಕ ಪ್ರತಿರೋಧತೆ

ಇದು ಲಸಿಕೆಗಳು ಹಾಗೂ ಸಿದ್ಧಪಡಿಸಿದ ಪ್ರತಿಕಾಯಗಳು ಶರೀರದಲ್ಲಿ ಕೃತಕವಾಗಿ ಉತ್ಪತ್ತಿ ಮಾಡುವ ಪ್ರತಿರೋಧತೆ. ಲಸಿಕೆಗಳಲ್ಲಿ ರೋಗಾಣುವಿನ ಹಾನಿಕಾರಕವಲ್ಲದ ಅಂಶಗಳಿದ್ದು ಅವು ರೋಗನಿರೋಧಕ ವ್ಯವಸ್ಥೆಯನ್ನು ನಿರ್ದಿಷ್ಟ ರೋಗಾಣುವಿನ ವಿರುದ್ಧ ಪ್ರಚೋದಿಸುತ್ತವೆ.

(ಲೇಖಕಿ ವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.