ADVERTISEMENT

World Sleep Day: ವಿಶ್ವ ನಿದ್ರಾ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2023, 10:28 IST
Last Updated 17 ಮಾರ್ಚ್ 2023, 10:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಿದ್ರೆಯ ಕುರಿತು ಅರಿವು ಮೂಡಿಸಲು ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಾರ್ಚ್‌ ಮೂರನೇ ಶುಕ್ರವಾರ ಈ ದಿನವನ್ನು ಆಚರಿಸಲಾಗುತ್ತದೆ. ಇದರಂತೆ ಈ ವರ್ಷ ಇಂದು (ಮಾರ್ಚ್‌ 17ಕ್ಕೆ) ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತಿದೆ.

ನಿದ್ರೆಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಈ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.

‘ವರ್ಲ್ಡ್ ಸ್ಲೀಪ್ ಸೊಸೈಟಿ’ಯ ಪ್ರಕಾರ, ವಿಶ್ವ ನಿದ್ರಾ ದಿನದ ವಾರ್ಷಿಕ ಆಚರಣೆಯು ನಿದ್ರೆಯ ಪ್ರಾಮುಖ್ಯತೆ, ವ್ಯಕ್ತಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿದ್ರೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ.

ADVERTISEMENT

ವಿಶ್ವ ನಿದ್ರಾ ದಿನವು ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದು ನಿದ್ರೆಯ ಆಚರಣೆ ಮತ್ತು ನಿದ್ರೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಮೇಲೆ ಕ್ರಮಕ್ಕೆ ಕರೆ ನೀಡಲು ಉದ್ದೇಶಿಸಲಾಗಿದೆ. ಇಂದು, ನಿದ್ರೆಯನ್ನು ಸಾಮಾನ್ಯವಾಗಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ನಡವಳಿಕೆ ಎಂದು ಪರಿಗಣಿಸುತ್ತಿಲ್ಲ. ಆದರೆ, ವಿಶ್ವ ನಿದ್ರಾ ದಿನದ ಆಚರಣೆಯು ನಿದ್ರೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತದೆ.

ಇತಿಹಾಸ: ‘ವರ್ಲ್ಡ್ ಸ್ಲೀಪ್ ಸೊಸೈಟಿ’ ವತಿಯಿಂದ 2008ರಲ್ಲಿ ವಿಶ್ವ ನಿದ್ರಾ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಇದನ್ನು ಹಿಂದೆ ‘ವರ್ಲ್ಡ್ ಅಸೋಸಿಯೇಷನ್ ಆಫ್ ಸ್ಲೀಪ್ ಮೆಡಿಸಿನ್’ (WASM) ಎಂದು ಕರೆಯಲಾಗುತ್ತಿತ್ತು. ಪ್ರಪಂಚದಾದ್ಯಂತ ನಿದ್ರೆಯ ಆರೋಗ್ಯವನ್ನು ಉತ್ತೇಜಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.

ಮಹತ್ವ: ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಕಾರಣದಿಂದ ನಿದ್ರೆಯ ವ್ಯವಸ್ಥೆಯಲ್ಲಿ ಏರಿಳಿತವಾಗಬಹುದು. ಶ್ವಾಸದ ಸಮಸ್ಯೆಗಳು ಇರುವವರು ಅಂಗಾತ ಮಲಗಿದಾಗ ಉಸಿರಾಟದ ಮೇಲಿನ ಒತ್ತಡ ಹೆಚ್ಚುತ್ತದೆ. ದೀರ್ಘಕಾಲಿಕ ರಾತ್ರಿಪಾಳಿಯ ಕೆಲಸ ಇರುವವರ ನಿದ್ರೆಯ ಆವರ್ತನಚಕ್ರ ಅಸ್ತವ್ಯವಸ್ತವಾಗುತ್ತದೆ. ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಮಲಗುವ ಜನರು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು ನಿದ್ರಾಹೀನತೆಗೆ ಸಮಾನವಾದದ್ದು. ಇಂತಹ ಬಾಹ್ಯಕಾರಣಗಳ ಹೊರತಾಗಿಯೂ ನಿದ್ರಾಹೀನತೆಯಿಂದ ಬಳಲುವವರು, ಎಷ್ಟೋ ಪ್ರಯತ್ನ ಮಾಡಿದರೂ ನಿದ್ರೆ ಬಾರದವರು ಇದ್ದಾರೆ. ನಿದ್ರಾಹೀನತೆಗೆ ಔಷಧಗಳನ್ನು ಬಳಸುವ ಬದಲಿಗೆ ಇಂತಹವರು ತಮ್ಮ ಜೀವನಶೈಲಿಯಲ್ಲಿ, ಆಹಾರ ವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇಂದಿನ ಯುಗದಲ್ಲಿ ದೀರ್ಘಾವಧಿಯ ಕೆಲಸದ ಸಮಯ, ಒತ್ತಡವೂ ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತದೆ.

ಥೀಮ್‌: ಈ ವರ್ಷದ ನಿದ್ರಾ ದಿನದ ಥೀಮ್ 'ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ' ಎಂಬುದಾಗಿದೆ. ವರ್ಲ್ಡ್ ಸ್ಲೀಪ್ ಸೊಸೈಟಿಯ ಪ್ರಕಾರ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವುದು ಅವಶ್ಯಕ ಎಂದು ಥೀಮ್ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ಮನುಷ್ಯನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಉತ್ತಮ ನಿದ್ರೆಯು ಅಡಿಪಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.