ADVERTISEMENT

ಕೊರೊನಾ ಸಾಂತ್ವನ| ಯುವಕರೇ ನಿರ್ಲಕ್ಷ್ಯ ಬಿಡಿ

ಕೊರೊನಾ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:02 IST
Last Updated 23 ಏಪ್ರಿಲ್ 2021, 20:02 IST
   

‘ನಾವು ಮನೆಯಿಂದ ಹೊರಗೆ ಕಾಲಿಟ್ಟಿಲ್ಲ. ಹೀಗಿದ್ದರೂ ಕೊರೊನಾ ಸೋಂಕು ತಗುಲಿದೆಯಲ್ಲ’..

ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಹಿರಿಯ ವಯಸ್ಕರ ಪೈಕಿ ಬಹುಪಾಲು ಮಂದಿ ಕೇಳುವ ಪ್ರಶ್ನೆ ಇದು.

‘ಇದಕ್ಕೆ ಮೂಲ ಕಾರಣ ಮನೆಯಲ್ಲಿರುವ ಯುವಕರು. ಇಂದಿನ ಬಹುತೇಕ ಯುವಕರು ಹಿರಿಯರ ಮಾತಿಗೆ ಕಿವಿಗೊಡುವುದಿಲ್ಲ. ಮನೆಯಿಂದ ಹೊರಹೋಗುವಾಗ ಮುಖಗವಸು ಧರಿಸುವುದಿಲ್ಲ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುವುದಿಲ್ಲ. ಕೊರೊನಾ ಎಲ್ಲಿದೆ? ಅದು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ ಎಂಬ ಮನೋಧೋರಣೆ ಅವರಲ್ಲಿ ಗಾಢವಾಗಿ ಬೇರೂರಿದೆ. ಅವರಿಂದಾಗಿ ಮನೆಯ ಇತರ ಸದಸ್ಯರಿಗೆ ಸೋಂಕು ಹರಡುತ್ತಿದೆ. ಜೊತೆಗೆ ಅವರೇ ಅಪಾಯಕ್ಕೆ ಗುರಿಯಾಗುತ್ತಿದ್ದಾರೆ. 35 ವರ್ಷದೊಳಗಿನವರೂ ಕೋವಿಡ್‌ನಿಂದ ಮೃತಪಟ್ಟಿರುವುದು ಇದಕ್ಕೆ ನಿದರ್ಶನ. ಇದರ ಅರಿವಿದ್ದರೂ ಕೆಲವರು ಈಗಲೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ನಿರ್ಲಕ್ಷ ಸರಿಯಲ್ಲ. ಈ ಮನಸ್ಥಿತಿ ಬದಲಾಗಲೇಬೇಕು’.

ADVERTISEMENT

‘ವಯಸ್ಸಾದವರು ಈಗಾಗಲೇ ಹಲವು ಔಷಧಗಳನ್ನು ಸೇವಿಸುತ್ತಿರುತ್ತಾರೆ. ಅವರಿಗೆ ಸೋಂಕು ತಗುಲಿದಾಗ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಹೀಗಾಗಿ ಅವರಿಗೆ ಅಪಾಯ ಹೆಚ್ಚು. 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಆರೋಗ್ಯ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈಗ 18 ವರ್ಷ ಮೇಲ್ಪಟ್ಟವರೂ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿದೆ. ಅವರು ಕೂಡ ಯಾವ ಹಿಂಜರಿಕೆಯೂ ಇಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕು. ಮದುವೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು’.

‘ಒಟ್ಟಿಗೆ ಕೂತು ಊಟ ಮಾಡುವುದರಿಂದ, ಗಟ್ಟಿಯಾಗಿ ಮಾತನಾಡುವುದರಿಂದ, ಕೆಮ್ಮು ಹಾಗೂ ಸೀನುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಮೆಲುದನಿಯಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು’.

‘ಪ್ರತಿದಿನ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ. ತುಂಬಾ ಖಾರವಾದ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆಗೂ ಕಡಿವಾಣ ಹಾಕಬೇಕು. ಮದ್ಯಪಾನದಿಂದಲೂ ದೂರ ಇರಬೇಕು. ಎಣ್ಣೆಯಿಂದ ಕರಿದ ಪದಾರ್ಥಗಳನ್ನೂ ತ್ಯಜಿಸಬೇಕು. ಆದಷ್ಟು ಹೆಚ್ಚು ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೊಪ್ಪು, ತರಕಾರಿ, ಹಣ್ಣು ಹೀಗೆ ಸಾತ್ವಿಕ ಆಹಾರ ಸೇವಿಸುವುದಕ್ಕೆ ಆದ್ಯತೆ ಕೊಡಬೇಕು’.

ಡಾ.ಲಕ್ಷ್ಮಿಪತಿ, ನೋಡಲ್‌ ಅಧಿಕಾರಿ, ಕೆ.ಸಿ.ಜನರಲ್‌ ಆಸ್ಪತ್ರೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.