ADVERTISEMENT

ಕೋವಿಡ್‌: ಮಹಾರಾಷ್ಟ್ರದಲ್ಲಿ ಶೇ 40ಕ್ಕೂ ಅಧಿಕ ಹೋಟೆಲ್‌ಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 14:06 IST
Last Updated 14 ಜುಲೈ 2021, 14:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಕೋವಿಡ್‌–19 ಪಿಡುಗಿನಿಂದ ಮಹಾರಾಷ್ಟ್ರದ ಹೋಟೆಲ್‌ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ 15 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಶೇ 40ಕ್ಕಿಂತ ಅಧಿಕ ಹೋಟೆಲ್‌ಗಳು ಮುಚ್ಚಿವೆ.

‘ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಇದರಿಂದ ಹೋಟೆಲ್‌ ಉದ್ಯಮಿಗಳು ಭಾರಿ ನಷ್ಟ ಅನುಭವಿಸಿದರು. ಈ ಕಾರಣದಿಂದ ಶೇ 40ಕ್ಕೂ ಅಧಿಕ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ’ ಎಂದು ಪಶ್ಚಿಮ ಭಾರತ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘದ (ಎಚ್ಆರ್‌ಎಡಬ್ಲ್ಯೂಐ) ಅಧ್ಯಕ್ಷ ಶೆರ‍್ರಿ ಭಾಟಿಯಾ ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಯಾವಾಗ ಹೋಟೆಲ್‌ಗಳನ್ನು ತೆರೆಯಬೇಕು, ಯಾವಾಗ ಮುಚ್ಚಬೇಕು ಎಂಬ ಬಗ್ಗೆ ಸ್ಪಷ್ಟತೆ ಇರದಂತಾಗಿತ್ತು. ಎಷ್ಟು ಜನ ಸಿಬ್ಬಂದಿಯೊಂದಿಗೆ ಹೋಟೆಲ್‌ ನಡೆಸಬೇಕು, ಯಾವ ತಿಂಡಿ–ತಿನಿಸುಗಳನ್ನು ತಯಾರಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಆಗುತ್ತಿರಲಿಲ್ಲ’ ಎಂದು ಅವರು ವಿವರಿಸಿದರು.

ADVERTISEMENT

‘ಹೋಟೆಲ್‌ ಉದ್ಯಮಕ್ಕೆ ಲಾಕ್‌ಡೌನ್‌ನಿಂದ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚಾಗಿದೆ’ ಎಂದರು.

‘ಈ ಉದ್ಯಮಕ್ಕೆ ಪುನಶ್ಚೇತನ ನೀಡಬೇಕೆಂದರೆ ಬೆಳಿಗ್ಗೆ 7ರಿಂದ ರಾತ್ರಿ 12ರ ವರೆಗೆ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಬೇಕು. ಈ ಅವಧಿ ವರೆಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತೆರೆದಿರುತ್ತವೆ ಎಂಬುದು ಖಾತ್ರಿಯಾದರೆ, ಜನರು ಕ್ರಮೇಣ ಇವುಗಳತ್ತ ಹೆಜ್ಜೆ ಹಾಕುತ್ತಾರೆ’ ಎಂದು ಭಾಟಿಯಾ ಹೇಳಿದರು.

‘ನಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಗೃಹ ಸಚಿವ ದಿಲೀಪ್‌ ವಲ್ಸೆಪಾಟೀಲ್‌, ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ, ಮುಖ್ಯಕಾರ್ಯದರ್ಶಿ ಸೀತಾರಾಂ ಕುಂಟೆ ಹಾಗೂ ಪ್ರಧಾನ ಕಾರ್ಯದರ್ಶಿ ವಲ್ಸಾ ನಾಯರ್‌ ಸಿಂಗ್‌ ಅವರಿಗೆ ಸಲ್ಲಿಸಿದ್ದೇವೆ‘ ಎಂದು ಹೇಳಿದರು.

‘ಒಂದೆಡೆ ಈ ಉದ್ಯಮದ ಪುನಶ್ಚೇತನಕ್ಕೆ ಸರ್ಕಾರ ಯಾವುದೇ ಪ್ಯಾಕೇಜ್‌ ಘೋಷಿಸಿಲ್ಲ. ಮತ್ತೊಂದೆಡೆ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಕೊರೊನಾ ಸೋಂಕು ಹರಡುವ ತಾಣಗಳು ಎಂಬ ಮಿಥ್ಯೆ ಜನರಲ್ಲಿ ಮನೆ ಮಾಡಿದೆ’ ಎಂದು ಸಂಘಟನೆಯ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.