ADVERTISEMENT

ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ; 'ಎಎಪಿ ಸಾಧನೆಯೇ ಶೋಧಕ್ಕೆ ಕಾರಣ' ಎಂದು ಟೀಕೆ

ಬಿಜೆಪಿ, ಎಎಪಿ ಮುಖಂಡರ ನಡುವೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 19:37 IST
Last Updated 19 ಆಗಸ್ಟ್ 2022, 19:37 IST
ಮನೀಷ್‌ ಸಿಸೋಡಿಯಾ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದರು ಪಿಟಿಐ ಚಿತ್ರ
ಮನೀಷ್‌ ಸಿಸೋಡಿಯಾ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದರು ಪಿಟಿಐ ಚಿತ್ರ   

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಜಾಗತಿಕ ಮಟ್ಟದಲ್ಲಿ ಹೊಗಳಿಕೆ ವ್ಯಕ್ತವಾದ ದಿನವೇ ಸಿಬಿಐ ಕೂಡ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಸಿಬಿಐನ ಕ್ರಮವು ಅನಿರೀಕ್ಷಿತ ಏನಲ್ಲ. ಗುಜರಾತ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಎಎಪಿಯ ರಾಜಕೀಯ ಮಹತ್ವಾಕಾಂಕ್ಷೆಯನ್ನು ಮೊಳಕೆಯಲ್ಲಿ ಚಿವುಟಲು ಬಿಜೆಪಿ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಎಎಪಿಯ ಮಹತ್ವಾಕಾಂಕ್ಷೆಯೂ ಬಿಜೆಪಿಗೆ ಪಥ್ಯವಾಗಿಲ್ಲ ಎನ್ನಲಾಗಿದೆ.

ಉಚಿತ ಕೊಡುಗೆಗಳ ಭರವಸೆಗೆ ಸಂಬಂಧಿಸಿದ ಹಗ್ಗಜಗ್ಗಾಟ, ಗುಜರಾತ್‌ನ ಮದ್ಯ ದುರಂತ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೆಹಲಿ ಸರ್ಕಾರದ ಸಾಧನೆಗೆ ನೀಡುತ್ತಿರುವ ಪ್ರಚಾರ,ರೋಹಿಂಗ್ಯಾ ಸಮುದಾಯದ ವರಿಗೆ ದೆಹಲಿಯಲ್ಲಿ ಆಶ್ರಯ ಮುಂತಾದ ವಿಚಾರಗಳು ಬಿಜೆಪಿ ಮತ್ತು ಎಎಪಿ ನಡುವಣ ಗುದ್ದಾಟಕ್ಕೆ ಇತ್ತೀಚಿನ ದಿನಗಳಲ್ಲಿ ಕಾರಣವಾಗಿವೆ.

ADVERTISEMENT

ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಬಂಧಿಸಿದೆ.

ದೆಹಲಿಯ ಅಬಕಾರಿ ನೀತಿಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಶಿಫಾರಸು ಮಾಡಿದ್ದರು. ಪಂಜಾಬ್‌ ವಿಧಾನಸಭೆಗೆ ಈ ವರ್ಷ ನಡೆದ ಚುನಾವಣೆಯ ಖರ್ಚಿಗೆ ಹೊಸ ಅಬಕಾರಿ ನೀತಿಯಿಂದ ದೊರೆತ ಹಣವನ್ನು ಎಎಪಿ ಬಳಸಿದೆ ಎಂದು ಆ ಪಕ್ಷದ ವಿರೋಧಿಗಳು ಆರೋಪಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುಜರಾತ್ ಮತ್ತು ಇತರೆಡೆಗಳಲ್ಲಿ ದೆಹಲಿ ಸರ್ಕಾರವು ಬಿಂಬಿಸಲು ಆರಂಭಿಸಿದೆ. ಈ ಕ್ಷೇತ್ರಗಳ ಸಾಧನೆಯ ಕುರಿತು ‘ನ್ಯೂಯಾರ್ಕ್‌ ಟೈಮ್ಸ್’ ಪತ್ರಿಕೆಯಲ್ಲಿ ಮುಖಪುಟದ ಲೇಖನ ಶುಕ್ರವಾರ ಪ್ರಕಟವಾಗಿದೆ. ಈ ಸಂದರ್ಭದಲ್ಲಿಯೇ ಸಿಬಿಐ ಶೋಧ ನಡೆದಿದೆ. ಸಿಸೋಡಿಯಾ ಅವರನ್ನು ಜಗತ್ತಿನ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಪರಿಗಣಿಸಲಾಗುತ್ತಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಎಎಪಿ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಅತ್ಯುತ್ತಮ ಕೆಲಸದಿಂದಾಗಿ ಬಿಜೆಪಿ ತತ್ತರಗೊಂಡಿದೆ. ಅದಕ್ಕಾಗಿಯೇ ಆರೋಗ್ಯ ಸಚಿವ ಜೈನ್‌ ಮತ್ತು ತಮ್ಮನ್ನು ಗುರಿ ಮಾಡಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ‘ಈ ಹಿಂದೆಯೂ ಶೋಧಗಳು, ತನಿಖೆಗಳು ನಡೆದಿವೆ. ಆಗಲೂ ಏನೂ ಸಿಕ್ಕಿಲ್ಲ, ಈಗಲೂ ಏನೂ ಸಿಗುವುದಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕೆಲವು ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಟೀಕಿಸಿದ್ದರು. ಇದರೊಂದಿಗೆ ಆರೋಪ–ಪ್ರತ್ಯಾರೋಪಗಳ ಕೆಸರೆರಚಾಟ ಆರಂಭಗೊಂಡಿತ್ತು. ಮೋದಿ ಅವರು ಎಎಪಿಯನ್ನು ಹೆಸರಿಸಿರಲಿಲ್ಲ. ಆದರೆ, ಅವರ ಗುರಿ ಎಎಪಿಯೇ ಆಗಿತ್ತು. ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್‌ ಮತ್ತು ಉಚಿತ ಶಿಕ್ಷಣ ಒದಗಿಸುವುದಾಗಿ ಎಎಪಿ ಭರವಸೆ ಕೊಡುತ್ತಿದೆ. ಗುಜರಾತ್‌ ನಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿ ಇದೆ.

ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಎಎಪಿ ಗುಟ್ಟಾಗಿಯೇನೂ ಇಟ್ಟಿಲ್ಲ. ಇನ್ನೆರಡು ರಾಜ್ಯಗಳಲ್ಲಿ ಉತ್ತಮ ಗೆಲುವು ಸಾಧ್ಯವಾದರೆ, ರಾಷ್ಟ್ರೀಯ ಪಕ್ಷ ಎಂಬ ಹಿರಿಮೆ ಸಿಗಲಿದೆ ಎಂದು ಕೇಜ್ರಿವಾಲ್‌ ಇತ್ತೀಚೆಗೆ ಹೇಳಿದ್ದರು. ಭಾರತವನ್ನು ನಂ.1 ದೇಶ ಮಾಡುವ ಅಭಿಯಾನವನ್ನು ಅವರು ಘೋಷಿಸಿದ್ದಾರೆ. ಇದು ರಾಜಕೀಯೇತರ ಅಭಿಯಾನ ಎಂದು ಅವರು ಹೇಳಿದ್ದಾರೆ. ಆದರೆ, ಅವರ ಗುರಿ 2024ರ ಲೋಕಸಭಾ ಚುನಾವಣೆ ಎಂಬುದು ಸ್ಪಷ್ಟ.

ವಿರೋಧ ಪಕ್ಷಗಳ ನಡುವಣ ಸ್ಪರ್ಧೆ ಕೂಡ ಕೇಂದ್ರದ ತನಿಖಾ ಸಂಸ್ಥೆಗಳ ಶೋಧಗಳಲ್ಲಿ ಬಯಲಾಗಿದೆ. ಸಿಸೋಡಿಯಾ ಅವರ ಪರವಾಗಿ ನಿಲ್ಲಲು ಕಾಂಗ್ರೆಸ್‌ ನಿರಾಕರಿಸಿದೆ.

ಹಾಗೆಯೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿದಾಗ ಎಎಪಿ ಕೂಡ ಕಾಂಗ್ರೆಸ್‌ ಬೆಂಬಲಕ್ಕೆ ನಿಲ್ಲಲಿಲ್ಲ.

*

2015ರಲ್ಲಿ ಕೇಜ್ರಿವಾಲ್‌ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಸಿಬಿಐಗೆ ನಾಲ್ಕು ಮಫ್ಲರ್‌ ಗಳು ಸಿಕ್ಕಿದ್ದವು. ಮನೀಷ್‌ ಮನೆಯಲ್ಲಿ ಪೆನ್ಸಿಲ್‌, ಜಿಯೊಮೆಟ್ರಿ ಬಾಕ್ಸ್‌ ಸಿಗಬಹುದು.
–ರಾಘವ್ ಛಡ್ಡಾ, ಎಎಪಿ ವಕ್ತಾರ

*

ಕೇಂದ್ರವು ತನಿಖಾ ಸಂಸ್ಥೆ ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೆ ಭ್ರಷ್ಟರೂ ದುರುಪಯೋಗದ ನೆಪವೊಡ್ಡಿ ತಪ್ಪಿಸಿ ಕೊಳ್ಳುತ್ತಿದ್ದಾರೆ.
–ಪವನ್ ಖೇರಾ, ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ

*

ಅಬಕಾರಿ ನೀತಿ ಜಾರಿಯಲ್ಲಿನ ಅಕ್ರಮವು ಕೇಜ್ರಿವಾಲ್‌ ಮತ್ತು ಮನೀಷ್‌ ಸಿಸೋಡಿಯಾ ಅವರ ನಿಜವಾದ ಮುಖಗಳನ್ನು ಬಹಿರಂಗಪಡಿಸಿದೆ.
–ಅನುರಾಗ್ ಠಾಕೂರ್‌, ಕೇಂದ್ರ ಸಚಿವ

‘ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸಹಿಸದೆ ಕ್ರಮ’
‘ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದೆಹಲಿ ಸರ್ಕಾರವು ಮಾಡಿರುವ ಅಭಿವೃದ್ಧಿ ಹಾಗೂ ಅರವಿಂದ ಕೇಜ್ರಿವಾಲ್‌ ಅವರ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಬರುತ್ತಿಲ್ಲ. ಹೀಗಾಗಿ ಅವರು ಎಎಪಿ ನಾಯಕರ ಮೇಲೆ ಸಿಬಿಐಯನ್ನು ಛೂಬಿಟ್ಟಿದ್ದಾರೆ’ ಎಂದು ಎಎಪಿ ವಕ್ತಾರ ರಾಘವ್ ಛಡ್ಡಾ ಆರೋಪಿಸಿದ್ದಾರೆ.

‘ದೆಹಲಿ ಶಾಲೆಗಳನ್ನು ಮನೀಷ್‌ ಸಿಸೋಡಿಯಾ ನೇತೃತ್ವದ ಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿರುವ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ತನ್ನ ಮುಖಪುಟದಲ್ಲಿ ವರದಿ ಪ್ರಕಟಿಸಿದೆ. ವರದಿ ಪ್ರಕಟವಾದ ಮರುದಿನವೇ ಮನೀಷ್‌ ಸಿಸೋಡಿಯಾ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಛಡ್ಡಾ ಹೇಳಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವಅನುರಾಗ್ ಠಾಕೂರ್‌, ‘ಶಾಲೆಗಳ ಅಭಿವೃದ್ಧಿಗೂ, ಅಬಕಾರಿ ಇಲಾಖೆಗೂ ಸಂಬಂಧ ವಿಲ್ಲ. ಈಗ ಸಿಬಿಐ ಪ್ರಕರಣ ದಾಖಲಿ ಸಿರುವುದು ಅಬಕಾರಿ ಇಲಾಖೆಗೆ ಸಂಬಂಧಿಸಿದ ನೀತಿಯಲ್ಲಿ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಎಎಪಿ ನಾಯಕರು ಪತ್ರಿಕಾ ವರದಿಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ಮಾಧ್ಯಮ ಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ‘ವಿಶ್ವದ ಅತ್ಯಂತ ಬಲಶಾಲಿ ದೇಶದ ಪತ್ರಿಕೆಯಾದ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಸುದ್ದಿ ಪ್ರಕಟವಾಗುವಂತೆ ಮಾಡುವುದು ಅತ್ಯಂತ ಕಷ್ಟ’ ಎಂದು ಹೇಳಿದ್ದರು. ತಕ್ಷಣವೇ ತಮ್ಮ ಮಾತನ್ನು ಸರಿಪಡಿಸಿಕೊಂಡ
ಅವರು, ‘ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಲೇಖನ ಪ್ರಕಟವಾಗುವಂತೆ ಮಾಡುವುದು ಅತ್ಯಂತ ಕಷ್ಟ’ ಎಂದರು.

ಕೇಜ್ರಿವಾಲ್‌ ಅವರ ಮಾತನ್ನು ಟೀಕಿಸಿದ ಬಿಜೆಪಿ ನಾಯಕರು, ಇದು ದುಡ್ಡುಕೊಟ್ಟು ಬರೆಸಿದ ಬರಹ. ಕೇಜ್ರಿವಾಲ್‌ ಸರ್ಕಾರವು ಜನರ ಹಣವನ್ನು ತನ್ನ ಪ್ರಚಾರಕ್ಕೆ ದುಂದುವೆಚ್ಚ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

*

ನಿಮ್ಮ ಬಳಿ ಇರುವ ಹಣ, ಅಧಿಕಾರ ಎಲ್ಲವನ್ನೂ ಬಳಸಿಕೊಂಡು ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ಲೇಖನ ಪ್ರಕಟವಾಗುವಂತೆ ಮಾಡಿ ಎಂದು ಬಿಜೆಪಿಗೆ ಸವಾಲು ಹಾಕುತ್ತಿದ್ದೇವೆ.
–ಸೌರವ್ ಭಾರದ್ವಾಜ್, ಎಎಪಿ ಮುಖಂಡ

*

ನ್ಯೂಯಾರ್ಕ್‌ ಟೈಮ್ಸ್‌ ನಲ್ಲೂ ಅದೇ ವರದಿ ಇದೆ, ಖಲೀಜ್‌ ಟೈಮ್ಸ್‌ನಲ್ಲೂ ಅದೇ ವರದಿ ಇದೆ. ಒಬ್ಬನೇ ಲೇಖಕ, ಅದೇ ಪದಗಳು ಮತ್ತು ಅವೇ ಚಿತ್ರಗಳು. ಇದು ಪೇಯ್ಡ್‌ ನ್ಯೂಸ್‌.
–ಪರ್ವೇಶ್‌ ವರ್ಮಾ, ಬಿಜೆಪಿ ಮುಖಂಡ

ಏನಿದು ಅಬಕಾರಿ ನೀತಿ
ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರೇ ಅಬಕಾರಿ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಮದ್ಯ ಮಾರಾಟದಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಯುವ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ನೀಡಿದ್ದ ಶಿಫಾರಸಿನ ಆಧಾರದಲ್ಲಿ ದೆಹಲಿ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು.2021ರ ನವೆಂಬರ್‌ 17ರಂದು ಆ ನೀತಿಯನ್ನು ಜಾರಿಗೆ ತರಲಾಗಿತ್ತು.

ಈ ನೀತಿಯ ಅನುಷ್ಠಾನದಲ್ಲಿನ ಅಕ್ರಮಗಳ ಸಂಬಂಧ ದೆಹಲಿ ಮುಖ್ಯ ಕಾರ್ಯದರ್ಶಿ ಅವರು ಈಚೆಗೆ ಲೆಫ್ಟಿನೆಂಟ್‌ ಗವರ್ನರ್ ಅವರಿಗೆ ವರದಿ ನೀಡಿದ್ದರು. ವರದಿಯಲ್ಲಿ ಅವರು ಹಲವು ಅಂಶಗಳನ್ನು ಉಲ್ಲೇಖಿಸಿದ್ದರು. ಈ ವರದಿ ಸಲ್ಲಿಕೆಯಾದ ಕೆಲವೇ ದಿನಗಳಲ್ಲಿ ದೆಹಲಿ ಸರ್ಕಾರವು ಈ ನೀತಿಯನ್ನು ವಾಪಸ್ ಪಡೆದಿತ್ತು.

ವರದಿಯ ಮುಖ್ಯಾಂಶಗಳು
* ದೆಹಲಿ ಅಬಕಾರಿ ನೀತಿಯ ಅನುಷ್ಠಾನದ ಸಂದರ್ಭದಲ್ಲಿ, ಜಿಎನ್‌ಸಿಟಿಡಿ ಕಾಯ್ದೆ–1997, ಟ್ರಾನ್ಸಾಕ್ಷನ್ ಆಫ್ ಬ್ಯುಸಿನೆಸ್‌ ರೂಲ್ಸ್‌–1993, ದೆಹಲಿ ಅಬಕಾರಿ ಕಾಯ್ದೆ–2009 ಮತ್ತು ದೆಹಲಿ ಅಬಕಾರಿ ನಿಯಮಗಳು–2010 ಅನ್ನು ಉಲ್ಲಂಘಿಸಲಾಗಿದೆ

* ಸೂಕ್ತ ಪ್ರಾಧಿಕಾರದ ಅನುಮತಿಯನ್ನು ಪಡೆಯದೆಯೇ,ದೆಹಲಿ ಅಬಕಾರಿ ನೀತಿಯನ್ನು ದೆಹಲಿ ಅಬಕಾರಿ ಇಲಾಖೆಯು ಜಾರಿಗೆ ತಂದಿದೆ

* ಸನ್ನದುದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ನೀತಿಯನ್ನು ಜಾರಿಗೆ ತರಲಾಗಿದೆ.ಈ ನೀತಿಯ ಮೂಲಕ ಕೆಲವೇ ವ್ಯಕ್ತಿಗಳಿಗೆ ದೆಹಲಿಯ 32 ವಲಯಗಳಲ್ಲಿ 849 ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಲಾಗಿದೆ

* ಸನ್ನದುದಾರರು ಪರವಾನಗಿ ಶುಲ್ಕ ಎಂದು ನೀಡಿದ್ದ ₹144 ಕೋಟಿಯನ್ನು, ಕೋವಿಡ್‌–19ರ ಲಾಕ್‌ಡೌನ್‌ನ ಕಾರಣ ನೀಡಿ ಅವರಿಗೆ ವಾಪಸ್‌ ಮಾಡಲಾಗಿದೆ. ಈ ಮೂಲಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.