ADVERTISEMENT

ಭವಾನಿಪುರ ಕ್ಷೇತ್ರದ ಉಪಚುನಾವಣೆ:ತೀರ್ಪು ಕಾಯ್ದಿರಿಸಿದ ಕೋರ್ಟ್‌

ಪಿಟಿಐ
Published 24 ಸೆಪ್ಟೆಂಬರ್ 2021, 11:40 IST
Last Updated 24 ಸೆಪ್ಟೆಂಬರ್ 2021, 11:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ (ಪಿಟಿಐ): ಭವಾನಿಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಚುನಾವಣೆ ಆಯೋಗದ ಉದ್ದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿರುವ ಕಲ್ಕತ್ತ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌, ನ್ಯಾಯಮೂರ್ತಿ ರಾಜರ್ಷಿ ಭಾರಧ್ವಾಜ್‌ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಈ ಕ್ಷೇತ್ರಕ್ಕೆ ಸೆ.30ರಂದು ಉಪಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣದಲ್ಲಿದ್ದಾರೆ.

‘ಸಾಂವಿಧಾನಿಕ ತುರ್ತು ಮತ್ತು ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ ಮನವಿ ಆಧರಿಸಿ ಉಪಚುನಾವಣೆ ನಡೆಸಲಾಗುತ್ತಿದೆ‘ ಎಂದು ಆಯೋಗ ತಿಳಿಸಿದೆ. ಕೋರ್ಟ್‌ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ADVERTISEMENT

ಆಯೋಗವು ಉಪಚುನಾವಣೆ ನಡೆಸುವ ಮೂಲಕ ಸಾಂವಿಧಾನಿಕ ತುರ್ತು ಪದದ ವ್ಯಾಖ್ಯಾನ ಬದಲಿಸಲು ಹೊರಟಿದೆ. ಚುನಾವಣೆ ನಿಗದಿಯಲ್ಲಿ ರಾಜ್ಯಗಳ ಪಾತ್ರ ಇರದು. ಇದು, ಪೂರ್ಣವಾಗಿ ಆಯೋಗದ ವಿವೇಚನೆಯಾಗಿದೆ ಎಂದೂ ಹೇಳಿದ್ದಾರೆ.

ಉಪಚುನಾವಣೆ ನಡೆಸಲು ಕೋರಿ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ಆಯೋಗ ಅದಕ್ಕೆ ಸ್ಪಂದಿಸಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೆಪ್ಟೆಂಬರ್ 13ರಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.