ADVERTISEMENT

ಲಖಿಂಪುರ ದುರಂತವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ

ಪಿಟಿಐ
Published 6 ಅಕ್ಟೋಬರ್ 2021, 9:23 IST
Last Updated 6 ಅಕ್ಟೋಬರ್ 2021, 9:23 IST
ಸಂಬಿತ್ ಪಾತ್ರಾ (ಚಿತ್ರ ಕೃಪೆ – ಸಂಬಿತ್ ಪಾತ್ರಾ ಟ್ವಿಟರ್‌ ಖಾತೆ)
ಸಂಬಿತ್ ಪಾತ್ರಾ (ಚಿತ್ರ ಕೃಪೆ – ಸಂಬಿತ್ ಪಾತ್ರಾ ಟ್ವಿಟರ್‌ ಖಾತೆ)   

ನವದೆಹಲಿ:ಉತ್ತರ ಪ್ರದೇಶದ ಲಖಿಂಪುರ–ಖೇರಿಯ ದುರಂತವನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಬಿಜೆಪಿ ದೂರಿದೆ.

ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿತನ ಎಂಬುದು ರಾಹುಲ್ ಗಾಂಧಿ ಅವರ ಪರ್ಯಾಯ ಹೆಸರಾಗಿದೆ ಎಂದು ಪಾತ್ರಾ ಟೀಕಿಸಿದ್ದಾರೆ.

ಕಾಂಗ್ರೆಸ್ ಎಲ್ಲ ವಿಚಾರಗಳಲ್ಲಿಯೂ ಜನರನ್ನು ಹಿಂಸೆಗೆ ಪ್ರಚೋದಿಸಲು ಯತ್ನಿಸುತ್ತಿದೆ. ಶಾಂತಿ ಕಾಪಾಡುವುದಕ್ಕಾಗಿ ಪ್ರತಿಪಕ್ಷಗಳ ನಾಯಕರ ಲಖಿಂಪುರ–ಖೇರಿ ಭೇಟಿಗೆ ಸರ್ಕಾರ ಅವಕಾಶ ನೀಡಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಲಖಿಂಪುರ–ಖೇರಿಗೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದರು.

ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ. ನಿರಂಕುಶ ಪ್ರಭುತ್ವ ಇದೆ ಎಂಬ ರಾಹುಲ್ ಟೀಕೆಗೆ ಪಾತ್ರಾ ತಿರುಗೇಟು ನೀಡಿದ್ದಾರೆ. ಅವರ (ರಾಹುಲ್) ಪತ್ರಿಕಾಗೋಷ್ಠಿಗಳಿಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿಲ್ಲ. ಆದರೆ ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಪಿಲ್ ಸಿಬಲ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘ದೇಶದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣವೇ ನಿಮಗೆ (ರಾಹುಲ್) ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಸಾಧ್ಯವಾಗುತ್ತಿದೆ’ ಎಂದೂ ಪಾತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.