ADVERTISEMENT

ಮಸೀದಿಗಳಿಗಾಗಿ ಕೆಡವಲಾದ ದೇವಸ್ಥಾನಗಳ ಮರು ನಿರ್ಮಾಣ: ಬಿಜೆಪಿ ಶಾಸಕ ಸಂಗೀತ್ ಸೋಮ್

ಪಿಟಿಐ
Published 22 ಸೆಪ್ಟೆಂಬರ್ 2021, 3:21 IST
Last Updated 22 ಸೆಪ್ಟೆಂಬರ್ 2021, 3:21 IST
ಶಾಸಕ ಸಂಗೀತ್ ಸೋಮ್
ಶಾಸಕ ಸಂಗೀತ್ ಸೋಮ್   

ಮೀರತ್: ಮಸೀದಿಗಳನ್ನು ನಿರ್ಮಿಸಲು ಕೆಡವಲಾದ ದೇವಸ್ಥಾನಗಳನ್ನು ಬಿಜೆಪಿ ಮರುನಿರ್ಮಾಣ ಮಾಡಲಿದೆ ಎಂದು ಉತ್ತರ ಪ್ರದೇಶದ ಸರ್ಧಾನಾ ಕ್ಷೇತ್ರದ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ‘ಕಾಲೋಚಿತ ಹಿಂದೂ’ಎಂದು ಟೀಕಿಸಿದ ಸಂಗೀತ್ ಸೋಮ್ ಅವರು, ‘ಅವರ(ಅಖಿಲೇಶ್) ಆಡಳಿತಾವಧಿಯಲ್ಲಿ ದಾರ್ಶನಿಕರನ್ನು ಬೆದರಿಸಿದ ಜನರು ಈಗ ಕ್ಷಮೆ ಕೋರಲು ಹರಿದ್ವಾರಕ್ಕೆ ಭೇಟಿ ನೀಡುತ್ತಿದ್ದಾರೆ’ಎಂದರು. ಇದೇವೇಳೆ, ವಿಶ್ವಕರ್ಮ ದೇವಸ್ಥಾನವನ್ನು ನಿರ್ಮಿಸುವುದಾಗಿ ಘೋಷಿಸಿದರು,

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಾಧನೆಗಳನ್ನು ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲೇವಡಿ ಮಾಡಿದರು. ‘ಮುಂಬರುವ ಯುಪಿ ವಿಧಾನಸಭಾ ಚುನಾವಣೆಗೆ ಮುನ್ನ, ಅನೇಕ ಜನರು ಕಾಲೋಚಿತ ಹಿಂದೂಗಳಾಗುತ್ತಾರೆ. ಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದ ಜನರು ಈಗ ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ, ಸ್ವಾಮೀಜಿಗಳನ್ನು ಬೆದರಿಸಿದವರು ಈಗ ಅವರಿಗೆ ಕೈಮುಗಿದು ಕ್ಷಮೆಯಾಚಿಸುತ್ತಿದ್ದಾರೆ’ಎಂದು ಹೇಳಿದ್ದಾರೆ.

ADVERTISEMENT

‘ಮಸೀದಿಗಳನ್ನು ನಿರ್ಮಿಸಲು ಎಲ್ಲೆಲ್ಲಿ ದೇವಸ್ಥಾನವನ್ನು ಕೆಡವಲಾಗಿದೆಯೋ ಅಲ್ಲಿ ದೇಗುಲಗಳನ್ನು ಪುನರ್ ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು.

‘ಹಿಂದುಸ್ಥಾನವು ಹಿಂದೂಗಳಿಗೆ ಸೇರಿದ್ದು. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹಿಂದು. ಮುಸ್ಲಿಮರು ಕೂಡ ಹಿಂದುಗಳಾಗಿದ್ದಾರೆ’ಎಂಬ ಅವರ ಹೇಳಿಕೆಯು ವಿವಾದದ ರೂಪ ಪಡೆದಿದೆ.

2013ರ ಮುಜಾಫರ್ ನಗರ ಕೋಮು ಗಲಭೆ ಪ್ರಕರಣದ ಆರೋಪಿಯಾಗಿರುವ ಸೋಮ್, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 350 ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.