ADVERTISEMENT

ಕೋವಿಡ್ ದೃಢಪಟ್ಟ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೂ ಪರಿಹಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 22:38 IST
Last Updated 23 ಸೆಪ್ಟೆಂಬರ್ 2021, 22:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ ಸೋಂಕು ದೃಢವಾದ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳು ಕೂಡ ₹50,000 ಪರಿಹಾರ ಧನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಮೃತರು ಕೋವಿಡ್‌ ಬಾಧಿತರು ಎಂದು ಸಾಬೀತಾಗಿರಬೇಕು. ಆಗ ಅವರ ಕುಟುಂಬ ಕೂಡಾ ಪರಿಹಾರ ಧನ ಪಡೆಯಲು ಅರ್ಹವಾಗಿರುತ್ತದೆ ಎಂದು ಕೋರ್ಟ್ ಹೇಳಿದೆ.

ಈ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿರುವ ಗೃಹ ಸಚಿವಾಲಯ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿದೆ.

ಕೋವಿಡ್–19ನಿಂದ ಮೃತಪಟ್ಟವರ ಮರಣ ಪತ್ರದಲ್ಲಿ ‘ಕೋವಿಡ್‌ ಕಾರಣದಿಂದ ಆತ್ಮಹತ್ಯೆ’ ಎಂಬ ಅಂಶವನ್ನು ನಮೂದು ಮಾಡದೇ ಇರುವ ಕುರಿತು ಪುನರ್‌ವಿಮರ್ಶೆ ಮಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡಲು ‘ಆತ್ಮಹತ್ಯೆ’ ಎಂಬುದರ ಉಲ್ಲೇಖ ಅತಿಮುಖ್ಯ ಎಂದು ಸೆ.13ರಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿತ್ತು. ಕೋರ್ಟ್‌ ಎತ್ತಿರುವ ಕಳಕಳಿ ಕುರಿತು ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ADVERTISEMENT

ಕೋವಿಡ್‌ನಿಂದ ಬಳಲುತ್ತಿರುವ ವೇಳೆಯೇ, ವಿಷ ಪದಾರ್ಥ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಆತ್ಮಹತ್ಯೆಯಿಂದ ಸಂಭವಿಸಿದ ಸಾವುಗಳನ್ನು ಕೋವಿಡ್‌ನಿಂದ ಸಂಭವಿಸಿದ ಸಾವುಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್‌ ಇದಕ್ಕೂ ಮೊದಲು ಜಂಟಿಯಾಗಿ ಮಾರ್ಗಸೂಚಿ ಹೊರಡಿಸಿದ್ದವು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕೋವಿಡ್‌–19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಭರಿಸಬೇಕು. ಜೂನ್‌ 30ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಾರ್ಗಸೂಚಿ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.