ADVERTISEMENT

ಕಾಂಗ್ರೆಸ್ ನನ್ನನ್ನು 3 ಸಲ ಮುಖ್ಯಮಂತ್ರಿ ಮಾಡಿದೆ: ಬಿಜೆಪಿಗೆ ಗೆಹಲೋತ್ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2023, 16:20 IST
Last Updated 26 ಮಾರ್ಚ್ 2023, 16:20 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ (ಪಿಟಿಐ ಚಿತ್ರ)
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ (ಪಿಟಿಐ ಚಿತ್ರ)   

ನವದೆಹಲಿ: 'ಮೋದಿ' ಉಪನಾಮದ ಕುರಿತು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹಿಂದುಳಿದ ವರ್ಗದವರನ್ನು (ಒಬಿಸಿ) ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ತಿರುಗೇಟು ನೀಡಿದ್ದಾರೆ.

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷವು ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ. ಈ ವೇಳೆ ಮಾತನಾಡಿದ ಗೆಹಲೋತ್‌, ಕಾಂಗ್ರೆಸ್‌ ನನ್ನನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜನರು ಬಿಜೆಪಿಯ ಪ್ರಚೋದನೆಯನ್ನು ನಂಬಬಾರದು ಎಂದು ಸಲಹೆ ನೀಡಿದ್ದಾರೆ.

ಜನರ ಹಣ ಲೂಟಿ ಮಾಡಿ ದೇಶ ಬಿಟ್ಟು ಹೋಗಿರುವ ನೀರವ್‌ ಮೋದಿ ಮತ್ತು ಲಲಿತ್‌ ಮೋದಿ ಒಬಿಸಿಗೆ ಸೇರಿದವರೇ ಎಂದು ಕೇಳಿರುವ ಗೆಹಲೋತ್‌, ಬಿಜೆಪಿಯು ರಾಹುಲ್‌ ಅವರು ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎನ್ನುವ ಮೂಲಕ ನೀರವ್‌ ಹಾಗೂ ಲಲಿತ್‌ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದವರು ಮತ್ತು ಬಡವರಿಗೆ ಆದ್ಯತೆ ನೀಡಿದ್ದರು ಎನ್ನುವ ಮೂಲಕ, ಕಾಂಗ್ರೆಸ್‌ ಪಕ್ಷವು ಬುಡಕಟ್ಟು ಸಮುದಾಯದವರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಸದಾ ಆದ್ಯತೆ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಸಂಸದ ರಾಹುಲ್‌ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ (ಮಾರ್ಚ್‌ 24 ರಂದು) ಅಧಿಸೂಚನೆ ಹೊರಡಿಸಿದೆ.

ಇವನ್ನೂ ಓದಿ
*

*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.