ADVERTISEMENT

ದಲಿತರು ಎಚ್ಚರಿಕೆಯಿಂದ ಇರಿ: ಮಾಯಾವತಿ

ಪಿಟಿಐ
Published 20 ಸೆಪ್ಟೆಂಬರ್ 2021, 20:04 IST
Last Updated 20 ಸೆಪ್ಟೆಂಬರ್ 2021, 20:04 IST
ಮಾಯಾವತಿ
ಮಾಯಾವತಿ   

ಲಖನೌ: ದಲಿತ ಸಿಖ್‌ ಸಮುದಾಯದ ಚರಣ್‌ಜಿತ್‌ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಕಾಂಗ್ರೆಸ್‌ನ ‘ಚುನಾವಣಾ ತಂತ್ರ’ ಎಂದು ಟೀಕಿಸಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಕಾಂಗ್ರೆಸ್‌ನ ಈ ನಡೆ ಬಗ್ಗೆ ದಲಿತರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

‘ಆ ಪಕ್ಷವು, ಪಂಜಾಬ್‌ನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಚನ್ನಿ ನೇತೃತ್ವದಲ್ಲಿ ಎದುರಿಸುವುದಿಲ್ಲ. ಬದಲಾಗಿ, ದಲಿತೇತರರ ನಾಯಕತ್ವದಲ್ಲಿ ಎದುರಿಸಲಿದೆ ಎಂದು ನನಗೆ ಇಂದು ಮಾಧ್ಯಮಗಳ ಮೂಲಕ ತಿಳಿಯಿತು.‌‌ ಕಾಂಗ್ರೆಸ್‌ ಪಕ್ಷಕ್ಕೆ ಈಗಲೂ ದಲಿತ ಸಮುದಾಯವರ ಮೇಲೆ ನಂಬಿಕೆ ಇಲ್ಲ. ಹೀಗಾಗಿ, ಅದರ ದ್ವಿಮುಖ ನೀತಿಯ ಬಗ್ಗೆ ಹುಷಾರಾಗಿರಬೇಕು’ ಎಂದು ಹೇಳಿದರು.

‘ಪಂಜಾಬ್‌ ಇರಲಿ, ಉತ್ತರಪ್ರದೇಶ ಇರಲಿ ಅಥವಾ ಬೇರಾವುದೇ ರಾಜ್ಯವಿರಲಿ; ‘ಜಾತಿವಾದಿ ಪಕ್ಷಗಳು’ ದಲಿತರಿಗೆ, ಹಿಂದುಳಿದವರಿಗೆ ಏನೇ ಸ್ಥಾನ ನೀಡುತ್ತಿವೆ ಎಂದರೂ ಅದು ಸ್ವಾರ್ಥಕ್ಕಾಗಿಯೇ ಹೊರತು ದಲಿತರ ಏಳಿಗೆಗಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಯಾವತಿ, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿಂದುಳಿದವರ ಮೇಲೆ ಏಕಾಏಕಿ ಪ್ರೀತಿ ಹುಟ್ಟಿಕೊಂಡಿದೆ ಎಂದು ಟೀಕಿಸಿದರು.

‘ಆ ಪಕ್ಷಕ್ಕೆ ನಿಜವಾಗಿಯೂ ಹಿಂದುಳಿದವರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಕೇಂದ್ರದಲ್ಲಿ ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದರು. ಜಾತಿ ಆಧಾರಿತ ಜನಗಣತಿಯನ್ನೂ ಒಪ್ಪಿಕೊಳ್ಳುತ್ತಿದ್ದರು’ ಎಂದರು.

‘ದಲಿತರೆಡೆಗಿನ ಹುಸಿ ಪ್ರೀತಿ’
ನವದೆಹಲಿ: ದಲಿತ ಸಮುದಾಯದ ಮತ ಗಳಿಸುವುದಕ್ಕಾಗಿ, ಕಾಂಗ್ರೆಸ್‌ ಪಕ್ಷವು ಚರಣ್‌ಜಿತ್‌ ಸಿಂಗ್‌ ಅವರನ್ನು ಕೆಲ ತಿಂಗಳುಗಳ ಮಟ್ಟಿಗೆ ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಆ ಪಕ್ಷವು ಯಾವಾಗಲೂ ದಲಿತರಿಗೆ ಅಲ್ಪಾವಧಿಯ ಅಧಿಕಾರವನ್ನು ಮಾತ್ರ ನೀಡುತ್ತ ಬಂದಿದೆ. ಇದು ದಲಿತ ಮತಗಳಿಗಾಗಿ ನಡೆಸಿದ ಷಡ್ಯಂತ್ರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಕುಮಾರ್‌ ಗೌತಮ್‌ ಟೀಕಿಸಿದ್ದಾರೆ. ‘ಕಾಂಗ್ರೆಸ್‌ ತನ್ನ ಈ ನಡೆಯನ್ನು ನಿಜವಾಗಿಯೂ ಗಂಭೀರವಾಗಿ ಪರಿಗಣಿಸಿದ್ದಲ್ಲಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಿಸುವ ಧೈರ್ಯ ತೋರಲಿ’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.