ADVERTISEMENT

‘ನ್ಯಾಯ್‌: ದಿ ಜಸ್ಟೀಸ್‌’ ಚಿತ್ರಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಣೆ

ಪಿಟಿಐ
Published 10 ಜೂನ್ 2021, 8:59 IST
Last Updated 10 ಜೂನ್ 2021, 8:59 IST
ಸುಶಾಂತ್‌ ಸಿಂಗ್‌ ರಜ‍ಪೂತ್‌
ಸುಶಾಂತ್‌ ಸಿಂಗ್‌ ರಜ‍ಪೂತ್‌   

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜ‍ಪೂತ್‌ ಅವರ ಜೀವನ ಆಧಾರಿತ ಸಿನಿಮಾ ಎನ್ನಲಾದ ‘ನ್ಯಾಯ್‌: ದಿ ಜಸ್ಟೀಸ್‌’ ಬಿಡುಗಡೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

‘ನ್ಯಾಯ್‌: ದಿ ಜಸ್ಟೀಸ್‌’ ಸಿನಿಮಾವು ಶುಕ್ರವಾರ ಬಿಡುಗಡೆಗೊಳ್ಳಲಿದೆ. ಈ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸುಶಾಂತ್‌ ತಂದೆ ಕೃಷ್ಣ ಕಿಶೋರ್‌ ಸಿಂಗ್‌ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್‌ ನರೂಲಾ ಅವರು ತಿರಸ್ಕರಿಸಿದ್ದಾರೆ.

‘ನ್ಯಾಯ್‌–ದಿ ಜಸ್ಟೀಸ್‌’, ‘ಸೂಸೈಡ್‌ ಆರ್‌ ಮರ್ಡರ್‌: ಎ ಸ್ಟಾರ್‌ ವಾಸ್‌ ಲಾಸ್ಟ್‌’ ಮತ್ತು ‘ಶಶಾಂಕ್’ ಎಂಬ ಹೆಸರಿನ ಸಿನಿಮಾಗಳು ಸುಶಾಂತ್‌ ಸಿಂಗ್ ರಜಪೂತ್‌ ಜೀವನ ಆಧಾರಿತವಾಗಿದೆ. ನನ್ನ ಮಗನ ಹೆಸರು ಅಥವಾ ಅದಕ್ಕೆ ಹೋಲುವಂತಹ ಹೆಸರನ್ನು ಸಿನಿಮಾದಲ್ಲಿ ಬಳಸಬಾರದು. ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು’ ಎಂದು ಕೃಷ್ಣ ಕಿಶೋರ್‌ ಅರ್ಜಿಯಲ್ಲಿ ಮನವಿ ಮಾಡಿದ್ದರು.

ADVERTISEMENT

‘ಚಿತ್ರ ನಿರ್ಮಾಪಕರು ವಾಣಿಜ್ಯ ಲಾಭಕ್ಕಾಗಿ ಈ ಪರಿಸ್ಥಿತಿಯನ್ನು ಬಳಸುತ್ತಿದ್ದಾರೆ. ಹಾಗಾಗಿ ಅವರಿಗೆ ಅಭಿವ್ಯಕ್ತಿ ಮತ್ತು ವಾಕ್‌ಸ್ವಾತಂತ್ರ್ಯದ ಹಕ್ಕು ಅನ್ವಯಿಸುವುದಿಲ್ಲ’ ಎಂದು ಕೃಷ್ಣ ಕಿಶೋರ್‌ ಪರ ವಕೀಲ ವಿಕಾಸ್‌ ಸಿಂಗ್‌ ವಾದಿಸಿದ್ದಾರೆ.

‘ಸುಶಾಂತ್‌ ಬಗ್ಗೆ ಹಲವು ನಾಟಕಗಳು, ಚಿತ್ರಗಳು, ವೆಬ್‌ ಸರಣಿಗಳು, ಪುಸ್ತಕ ಸೇರಿದಂತೆ ಹಲವು ವಿಷಯಗಳು ಪ್ರಕಟವಾಗಬಹುದು. ಇದರಿಂದ ಸುಶಾಂತ್‌ ಮತ್ತು ಅವರ ಕುಟುಂಬದ ಘನತೆಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ರಜ‍‍ಪೂತ್‌ ಕುಟುಂಬದ ಹೆಸರಿಗೆ ಹಾನಿ ಉಂಟು ಮಾಡಿದ್ದಕ್ಕೆ ಸಿನಿಮಾ ನಿರ್ದೇಶಕರು ₹2ಕೋಟಿ ಪರಿಹಾರ ನೀಡಬೇಕು’ ಎಂದು ಅವರು ವಾದಿಸಿದರು.

ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾಯ್‌ ಸಿನಿಮಾ ನಿರ್ದೇಶಕರ ಪರ ವಕೀಲ ಚಂದೇರ್‌ ಲಾಲ್‌ ಅವರು,‘ಈಗಾಗಲೇ ಸಿನಿಮಾದ ಬಿಡುಗಡೆ ಬಗ್ಗೆ ಪ್ರಕಟಿಸಲಾಗಿದೆ. ಹಾಗಾಗಿ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಚಿತ್ರದಲ್ಲಿ ಸುಶಾಂತ್‌ ಸಿಂಗ್‌ಗೆ ಹೋಲುವಂತಹ ವ್ಯಕ್ತಿ, ಅಥವಾ ಹೆಸರನ್ನು ಬಳಸಲಾಗಿಲ್ಲ. ರಜಪೂತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬರು ಸಿನಿಮಾ ಮಾಡಬಾರದಂತೆ ತಡೆಹಿಡಿಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.