ADVERTISEMENT

ಸರ್ಕಾರದ ಹಣಕಾಸಿನ ನೆರವು ಪಡೆಯಲು ಮರಣ ಪ್ರಮಾಣಪತ್ರ ಅಗತ್ಯವಿಲ್ಲ: ಕೇಜ್ರಿವಾಲ್

ಪಿಟಿಐ
Published 1 ಅಕ್ಟೋಬರ್ 2021, 16:43 IST
Last Updated 1 ಅಕ್ಟೋಬರ್ 2021, 16:43 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ರಾಜ್ಯ ಸರ್ಕಾರದ ಯೋಜನೆಯಡಿ ಹಣಕಾಸಿನ ನೆರವನ್ನು ಪಡೆಯಲು ಕೋವಿಡ್‌-19ನಿಂದ ಮೃತಪಟ್ಟ ಜನರ ಅವಲಂಬಿತರಿಗೆ ಮರಣ ಪ್ರಮಾಣಪತ್ರ ಮತ್ತು ಉಳಿದಿರುವ ಸದಸ್ಯರ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.

ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣಗಳು ಇತ್ಯರ್ಥವಾಗದೆ ಬಾಕಿಯಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಆದಷ್ಟು ಬೇಗ ಹಣಕಾಸಿನ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

'ಸೋಮಾರಿತನದ ಮನೋಭಾವವನ್ನು ಸಹಿಸಲಾಗುವುದಿಲ್ಲ. ಈ ಯೋಜನೆಯು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಈ ಎಲ್ಲಾ ಈಗಾಗಲೇ ಸಂತ್ರಸ್ತರಾಗಿದ್ದಾರೆ ಮತ್ತು ಕಾಗದದ ಕೆಲಸಗಳಿಗಾಗಿ ಮತ್ತೆ ತೊಂದರೆಗೆ ಸಿಲುಕುವುದು ಸರಿಯಲ್ಲ' ಎಂದು ಕೇಜ್ರಿವಾಲ್ ಹೇಳಿರುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

'ಇನ್ನು ಮುಂದೆ ಅರ್ಜಿಗಳ ವಿಲೇವಾರಿಗಾಗಿ ಮರಣ ಪ್ರಮಾಣಪತ್ರಗಳು ಮತ್ತು ಉಳಿದಿರುವ ಸದಸ್ಯರ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ. 'ಅಧಿಕಾರಿಗಳು ಎಂಎಚ್‌ಎ ಪಟ್ಟಿ ಅಥವಾ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು ಅರ್ಜಿಗಳನ್ನು ಪರಿಶೀಲಿಸಬೇಕು ಮತ್ತು ತಕ್ಷಣವೇ ಹಣವನ್ನು ವಿತರಿಸಬೇಕು, ಅರ್ಜಿದಾರರು ಕಚೇರಿಗೆ ಬರುವಂತೆ ಕೇಳಬಾರದು' ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

'ನಮ್ಮ ಬಳಿಯಿರುವ ಪಟ್ಟಿಯಲ್ಲಿ ಅವರ ಹೆಸರುಗಳು ಇದ್ದರೆ, ಅಧಿಕಾರಿಗಳು ಅಂತಹ ಕುಟುಂಬಗಳ ಮನೆಗಳಿಗೆ ಹೋಗಬೇಕು ಮತ್ತು ಅದಾದ ಒಂದು ವಾರದಲ್ಲೇ ಸರಿಯಾದ ಮೊತ್ತವನ್ನು ಅವರಿಗೆ ನೀಡಬೇಕು' ಎಂದು ಅವರು ಹೇಳಿದರು.

ಯೋಜನೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಹೇಳಿಕೊಂಡು ತಮ್ಮ ಬಳಿಗೆ ಬಂದಿದ್ದ ಒಬ್ಬ ನಾಗರಿಕರನ್ನು ಕೇಜ್ರಿವಾಲ್ ಸಭೆಗೆ ಕರೆತಂದಿದ್ದರು. ವ್ಯಕ್ತಿಯ ಕುಂದುಕೊರತೆಯನ್ನು ಆಲಿಸಿದ ಸಿಎಂ, ಅರ್ಜಿದಾರರೊಂದಿಗೆ ವ್ಯವಹರಿಸುವಾಗ ಹೆಚ್ಚು ಸೂಕ್ಷ್ಮವಾಗಿರಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

'ಕ್ಷುಲ್ಲಕ ಕಾರಣಗಳಿಗಾಗಿ' ಪರಿಹಾರ ಧನವನ್ನು ವಿತರಿಸಲು ಯಾವುದೇ ವಿಳಂಬ ಮಾಡಬಾರದು ಮತ್ತು ಸಂಗಾತಿಯು ಜೀವಂತವಾಗಿದ್ದರೆ, ಅವರಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುವುದು. ಒಂದು ವೇಳೆ ಜಾಸ್ತಿ ಮಕ್ಕಳಿದ್ದರೆ ಅಧಿಕಾರಿಗಳು ಅವರಿಗೆ ಸಮಾನವಾಗಿ ಮೊತ್ತವನ್ನು ನೀಡಬೇಕು. ಕಾಗದದ ಕೆಲಸಗಳಲ್ಲಿ ಮುಳುಗಬಾರದು' ಎಂದು ಕೇಜ್ರಿವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.