ADVERTISEMENT

ರಾಹುಲ್‌ ಅನರ್ಹತೆ| ‘ಕೈ’ ಕಾರ್ಯಕರ್ತರ ವ್ಯಾಪಕ ಆಕ್ರೋಶ: ಬಿಜೆಪಿಯಿಂದಲೂ ಪ್ರತಿಭಟನೆ

ಪಿಟಿಐ
Published 25 ಮಾರ್ಚ್ 2023, 19:17 IST
Last Updated 25 ಮಾರ್ಚ್ 2023, 19:17 IST
ರಾಹುಲ್ ಅನರ್ಹತೆ ಖಂಡಿಸಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ರಾಹುಲ್ ಅನರ್ಹತೆ ಖಂಡಿಸಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ವಯನಾಡ್/ನಾಸಿಕ್/ಪುಣೆ/ಮುಂಬೈ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್‌ನಿಂದ ಅನರ್ಹಗೊಳಿಸಿರುವುದಕ್ಕೆ ದೇಶದ ಹಲವು ಕಡೆಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯ ಕರ್ತರು ಬೀದಿಗಿಳಿದು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಕಾರ್ಯಕರ್ತರು ‘ಒಬಿಸಿ’ ಸಮುದಾಯಕ್ಕೆ (ಇತರೆ ಹಿಂದುಳಿದ ವರ್ಗ) ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ರಾಹುಲ್ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡ್‌ನ ಕಾಂಗ್ರೆಸ್‌ ಪಕ್ಷದ ಯುವ ಹಾಗೂ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇರಳ ರಾಜಭವನಕ್ಕೆ ಸೋಮವಾರ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ.

ಮಹಾರಾಷ್ಟ್ರದ ಮುಂಬೈ, ನಾಸಿಕ್‌, ಪುಣೆ, ಠಾಣೆ ನಗರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು. ನಾಸಿಕ್‌ನ ಶಿವಾಜಿ ರಸ್ತೆಯ ಅಂಬೇಡ್ಕರ್ ಪ್ರತಿಮೆಯ ಎದುರು ಘೋಷಣೆಗಳನ್ನು ಕೂಗಲಾಯಿತು. ಪುಣೆಯ ಕಾಂಗ್ರೆಸ್ ಘಟಕದಿಂದ ಸಹಿ ಸಂಗ್ರಹ ನಡೆಯಿತು. ಒಬಿಸಿ ಸಮುದಾಯಗಳಿಗೆ ನೋವಾಗುವ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮುಂಬೈನ ಬಿಜೆಪಿ ಘಟಕ ಪ್ರತಿಭಟನೆ ನಡೆಸಿತು.

ADVERTISEMENT

ಅನರ್ಹತೆ ತಕ್ಷಣ ಜಾರಿ ಪ್ರಶ್ನಿಸಿ ಅರ್ಜಿ

ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ತಪ್ಪಿತಸ್ಥನಾದ ಜನಪ್ರತಿನಿಧಿಯು ತಕ್ಷಣ ಅನರ್ಹತೆಗೆ ಒಳಗಾಗುವುದನ್ನು ಪ್ರಶ್ನಿಸಿ ಕೇರಳದ ಸಾಮಾಜಿಕ ಕಾರ್ಯಕರ್ತೆ ಅಭಾ ಮುರಳೀಧರನ್ ಅವರು ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕಟವಾದ ತೀರ್ಪು ಹಾಗೂ ತಕ್ಷಣ ಅವರ ಸಂಸತ್ ಸದಸ್ಯತ್ವ ರದ್ದು ಮಾಡಿದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋರ್ಟ್‌ಗೆ ತುರ್ತಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ತಕ್ಷಣ ಅನರ್ಹಕ್ಕೆ ಕಾರಣವಾಗುವ 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 8 (3) ಅಕ್ರಮ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ತಕ್ಷಣಕ್ಕೆ ಅನರ್ಹಗೊಳಿಸುವುದರಿಂದ ಮತ ಹಾಕಿದ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುವುದಕ್ಕೆ ಅಡ್ಡಿ ಆಗುತ್ತದೆ. ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾದುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರ: ಕಾಂಗ್ರೆಸ್ ಸಭಾತ್ಯಾಗ

ರಾಹುಲ್ ಗಾಂಧಿ ವಿಚಾರ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ವಿಧಾನಸಭೆ ಆವರಣದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಶನಿವಾರ ಸಭಾತ್ಯಾಗ ಮಾಡಿದರು.

ರಾಹುಲ್ ಅವರು ಸಾರ್ವಕರ್‌ ಅವರನ್ನು ಪದೇ ಪದೇ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಶಿಂದೆ ಬಣದ ಶಿವಸೇನಾ ಕಾರ್ಯಕರ್ತರು ವಿಧಾನಸಭೆ ಆವರಣದಲ್ಲಿ ಗುರುವಾರ ರಾಹುಲ್ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದರು. ಬಿಜೆಪಿ ಶಾಸಕರಾದ ಯೋಗೇಶ್ ಸಾಗರ್, ರಾಮ್ ಸತ್ಪುತೆ, ಶಿವಸೇನಾದ ಭರತ್ ಗೋಗವಾಲೆ, ಬಿಜೆಪಿ ಪರಿಷತ್ ಸದಸ್ಯ ಪ್ರಸಾದ್ ಲಾಡ್ ಅವರನ್ನು ಸದನದಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

***

ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಸಮುದಾಯಕ್ಕೆ ಸೇರಿದವರು. ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಕಿತ್ತುಹಾಕಿದ್ದು ಗಾಂಧೀಜಿ ಸಿದ್ಧಾಂತಗಳು ಹಾಗೂ ಭಾರತದ ಮೌಲ್ಯಗಳಿಗೆ ಮಾಡಿದ ದೊಡ್ಡ ವಂಚನೆ

– ರೋ ಖನ್ನಾ, ಭಾರತ ಮೂಲದ, ಅಮೆರಿಕದ ಸಂಸತ್ ಸದಸ್ಯ

ರಾಹುಲ್ ಅವರನ್ನು ಅನರ್ಹಗೊಳಿಸುವ ಮೂಲಕ ಭಾರತೀಯರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೋದಿ ಸರ್ಕಾರ ಮರಣಶಾಸನ ಬರೆದಿದೆ

– ಜಾರ್ಜ್‌ ಅಬ್ರಹಾಂ, ಉಪಾಧ್ಯಕ್ಷ, ಕಾಂಗ್ರೆಸ್‌ ಸಾಗರೋತ್ತರ ಘಟಕ, ಅಮೆರಿಕ

ಒಬಿಸಿ ಸಮದಾಯಕ್ಕೆ ಅಪಮಾನ ಮಾಡಲಾಗಿದೆ ಎಂಬ ಅಸಂಬದ್ಧ ಆರೋಪಗಳ ಮೂಲಕ ಜನರ ಬುದ್ಧಿಮತ್ತೆಯನ್ನು ಅಣಕಿಸಲಾಗಿದೆ

– ಕಪಿಲ್ ಸಿಬಲ್, ರಾಜ್ಯಸಭಾ ಸದಸ್ಯ

ರಾಜಕೀಯ ದ್ವೇಷದಿಂದ ಹಿಂದೆಯೂ ದೇಶಕ್ಕೆ ಲಾಭವಾಗಿಲ್ಲ, ಈಗಲೂ ಆಗುವುದಿಲ್ಲ. ತುರ್ತುಸ್ಥಿತಿಯ ಕಾಲದಲ್ಲಿ ಏನಾಯಿತು ಎಂದು ಕಾಂಗ್ರೆಸ್, ಈಗ ಏನಾಗುತ್ತಿದೆ ಎಂದು ಬಿಜೆಪಿ ಯೋಚಿಸಬೇಕು

– ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ರಾಹುಲ್ ಅವರನ್ನು ಅನರ್ಹಗೊಳಿಸುವುದು ಬಿಜೆಪಿಯ ‘ಹಳೆಯ ಗುರಿ’. ಇದರಿಂದ ಕಾಂಗ್ರೆಸ್‌ಗೆ ಲಾಭವೇ ಆಗಲಿದೆ. ಪ್ರತಿಪಕ್ಷಗಳ ಒಗ್ಗಟ್ಟಿಗೆ ಇದು ಕಾರಣವಾಗಿದೆ

– ಶಶಿ ತರೂರ್, ಕಾಂಗ್ರೆಸ್ ಸಂಸದ

ಎರಡು ವರ್ಷದ ಶಿಕ್ಷೆ ಅಧಿಕವಾಯಿತು. ಸಣ್ಣ ಮನಸ್ಸಿನಿಂದ ಯಾರೂ ದೊಡ್ಡವರಾಗುವುದಿಲ್ಲ ಎಂಬ ವಾಜ‍ಪೇಯಿ ಮಾತನ್ನು ಕೇಂದ್ರದ ನಾಯಕರಿಗೆ ನೆನಪಿಸಲು ಬಯಸುತ್ತೇನೆ

– ಪ್ರಶಾಂತ್ ಕಿಶೋರ್, ಚುನಾವಣಾ ಕಾರ್ಯತಂತ್ರ ನಿಪುಣ

ಬಾಯಿ ತಪ್ಪಿ ಮಾತನಾಡುವುದು ಸಾಮಾನ್ಯ. ನಮಗೂ ಕೆಲವೊಮ್ಮೆ ಹೀಗಾಗಿದೆ. ರಾಹುಲ್ ಅವರು ತಮ್ಮ ಮಾತಿಗೆ ಕ್ಷಮೆ ಕೇಳಿದರೆ ಪ್ರಕರಣ ಮುಗಿದು ಹೋಗುತ್ತದೆ

– ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.